ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯಕ್ಕೆ ಎರಡು ಸಿಂಹಗಳ ಸೇರ್ಪಡೆ

Last Updated 11 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ, ಪ್ರಾಣಿ ಪ್ರಿಯರಿಗೆ 21 ವರ್ಷಗಳ ಬಳಿಕ ಒಂದು ಜೊತೆ ಏಷಿಯಾ ಸಿಂಹಗಳು ಸೋಮವಾರದಿಂದ ವೀಕ್ಷಣೆಗೆ ಮುಕ್ತವಾಗಿವೆ.ಗುಜರಾತ್‌ನಿಂದ ತರಿಸಿಕೊಂಡಿರುವ ಈ ಸಿಂಹಗಳನ್ನು ಖ್ಯಾತ ಕ್ರಿಕೆಟಿಗ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷ ಅನಿಲ್ ಕುಂಬ್ಳೆ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿಸಿದರು. ಅವರು ಸ್ವಹಿತಾಸಕ್ತಿಯಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರಿಂದ 10 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಗುಜರಾತ್ ಸರ್ಕಾರವು ಹೊರರಾಜ್ಯಕ್ಕೆ ಸಿಂಹಗಳನ್ನು ನೀಡಿದೆ.
 

ಈ ಸಂದರ್ಭದಲ್ಲಿ ಮಾತನಾಡಿದ ಅನಿಲ್ ಕುಂಬ್ಳೆ, ‘ಮೈಸೂರು ಮೃಗಾಲಯಕ್ಕೆ ಸಿಂಹಗಳನ್ನು ಪರಿಚಯಿಸಲು ಖುಷಿಯಾಗುತ್ತಿದೆ. ಗಂಡು ಸಿಂಹಕ್ಕೆ ‘ಶಂಕರ’ ಹಾಗೂ ಹೆಣ್ಣು ಸಿಂಹಕ್ಕೆ ‘ಗೌರಿ’ ಎಂದು ಹೆಸರಿಡಲಾಗಿದೆ. 20 ವರ್ಷಗಳ ನಂತರ ಮೃಗಾಲಯದಲ್ಲಿ ಸಿಂಹಗಳನ್ನು ಪರಿಚಯಿಸುತ್ತಿರುವುದರಿಂದ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಲಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ’ ಎಂದು ಹೇಳಿದರು.
 

‘ಈಗಾಗಲೇ ಭಾರತ ಕ್ರಿಕೆಟ್ ತಂಡದ ಆಟಗಾರರಾದ ಜಾವಗಲ್ ಶ್ರೀನಾಥ್, ಜಹೀರ್‌ಖಾನ್ ಮತ್ತು ತಂಡದ  ನಾಯಕ ಮಹೇಂದ್ರಸಿಂಗ್ ದೋನಿ ಅವರು ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ಇನ್ನುಳಿದ ಎಲ್ಲ ಆಟಗಾರರಿಗೂ ಪ್ರಾಣಿಗಳನ್ನು ದತ್ತು ಸ್ವೀಕರಿಸುವಂತೆ ಮನವಿ ಮಾಡುತ್ತೇನೆ’ ಎಂದು ತಿಳಿಸಿದ ಅವರು ಗಂಡು ಸಿಂಹ ‘ಶಂಕರ’ ಹಾಗೂ ಜಿರಾಫೆ ‘ಲಕ್ಷ್ಮಿ’ಯನ್ನು ಒಂದು ವರ್ಷದ ಅವಧಿಗೆ ತಮ್ಮ ಮಕ್ಕಳ ಹೆಸರಿನಲ್ಲಿ ದತ್ತು ಪಡೆದುಕೊಂಡರು.
 

ಸಿಂಹಗಳ ವಿವರ: ಗಂಡು ಮತ್ತು ಹೆಣ್ಣು ಎರಡೂ ಸುಮಾರು 3 ವರ್ಷ ವಯಸ್ಸಿನವುಗಳಾಗಿವೆ. ಅವು ಮುಂದಿನ ಆರು ತಿಂಗಳಿನಲ್ಲಿ ತಮ್ಮ ಸಂತಾನಾಭಿವೃದ್ಧಿ ಪಡಿಸುವ ನಿರೀಕ್ಷೆ ಇದೆ. ಏಷಿಯಾ ಸಿಂಹಗಳು ಅಪಾಯದ ಅಂಚಿನಲ್ಲಿದ್ದು, ವಿಶ್ವಮಟ್ಟದಲ್ಲಿ ಈಗ ಗುಜರಾತ್ ರಾಜ್ಯದ ಗೀರ್ ಅರಣ್ಯ ಪ್ರದೇಶದಲ್ಲಿ ಮಾತ್ರ ಅಂದಾಜು 350 ಸಿಂಹಗಳು ಉಳಿದುಕೊಂಡಿವೆ.
‘ಏಷಿಯಾ ಸಿಂಹಗಳು ಗಾತ್ರದಲ್ಲಿ ಚಿಕ್ಕವು. ಇವು ಎರಡೂವರೆ ವರ್ಷದಿಂದ ಮೂರು ವರ್ಷ ವಯಸ್ಸಿನಲ್ಲಿ ಪರಿಪಕ್ವತೆಗೆ ಬಂದು 2 ರಿಂದ 3 ಮರಿಗಳಿಗೆ ಜನ್ಮ ನೀಡುತ್ತವೆ. ಇವುಗಳ ಗರ್ಭಾವಧಿ 95 ರಿಂದ 105 ದಿನಗಳಾಗಿದ್ದು, ಜೀವಿತಾವಧಿ 15ರಿಂದ 20 ವರ್ಷವಾಗಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಮಾರ್ಕಂಡೇಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT