ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳಕ್ಕೆ ರೂ 1,310 ಬೆಂಬಲ ಬೆಲೆ

ರೈತರು ಆತಂಕ ಪಡುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ ಹೇಳಿಕೆ
Last Updated 4 ಡಿಸೆಂಬರ್ 2013, 6:23 IST
ಅಕ್ಷರ ಗಾತ್ರ

ಚಿತ್ರದುರ್ಗ:  ಮೆಕ್ಕೆಜೋಳ ಖರೀದಿಗಾಗಿ ಸರ್ಕಾರದಿಂದ ರೂ 5 ಕೋಟಿ ಬಂದಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕಫೋರ್ಸ್‌ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ರೂ ೧೩೧೦ ಬೆಂಬಲ ಬೆಲೆ ನಿಗಧಿ ಮಾಡಿದ್ದು, ಸರ್ಕಾರದಿಂದ ಜಿಲ್ಲೆಯಲ್ಲಿ ತೆರೆಯಲಾಗಿರುವ ಮೂರು ಖರೀದಿ ಕೇಂದ್ರಗಳಲ್ಲೇ ಮೆಕ್ಕೆಜೋಳ ಬೆಳೆದ ರೈತರು ಮಾರಾಟ ಮಾಡಬೇಕು ಎಂದು ಹೇಳಿದರು.

ಜಿಲ್ಲೆಯ ಭರಮಸಾಗರ, ಚಿಕ್ಕಜಾಜೂರು ಮತ್ತು ಚಿತ್ರದುರ್ಗದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ಪಹಣಿ ಮತ್ತುಬ್ಯಾಂಕ್ ಖಾತೆ ನಂಬರ್ ನೀಡಿದರೆ ಆನ್‌ಲೈನ್‌ನಲ್ಲಿ ರೈತರಿಗೆ ಹಣ ಪಾವತಿಯಾಗುತ್ತದೆ ಎಂದು ತಿಳಿಸಿದರು.

ಮಧ್ಯವರ್ತಿಗಳ ಕಾಟ ಹಾಗೂ ಮಾರುಕಟ್ಟೆಯಲ್ಲಿ ರೈತರಿಗೆ ಶೋಷಣೆಯಾಗದಂತೆ ಈಗಾಗಲೇ ಎಚ್ಚರ ವಹಿಸಲಾಗಿದೆ. ರೈತರು ಎಷ್ಟು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೋ ಅಷ್ಟು ಮೆಕ್ಕೆಜೋಳ ವನ್ನು ಜಿಲ್ಲಾಡಳಿತ ಖರೀದಿ ಮಾಡಲಿದ್ದು, ಇಂತಿಷ್ಟೇ ಎನ್ನುವ ನಿಯಮವಿಲ್ಲ ಎಂದರು.

ಚಿತ್ರದುರ್ಗ ತಾಲ್ಲೂಕಿನ  ಕಸಬಾ, ತುರುವನೂರು,  ಹಿರೇಗುಂಟನೂರು,  ಭೀಮಸಮುದ್ರ, ಬೊಮ್ಮೆನಹಳ್ಳಿ, ಹುಲ್ಲೂರು, ಐನಹಳ್ಳಿ ಗ್ರಾಮ ಪಂಚಾಯ್ತಿಗಳು, ಚಳ್ಳಕೆರೆ,  ಹಿರಿಯೂರು ಮತ್ತು  ಮೊಳಕಾಲ್ಮೂರು ತಾಲ್ಲೂಕಿನ ವ್ಯಾಪ್ತಿಯ ರೈತರು ಚಿತ್ರದುರ್ಗ ಮಾರುಕಟ್ಟೆ ಪ್ರಾಂಗಣದಲ್ಲಿ ತೆರೆಯಲಾಗಿರುವ ಖರೀದಿ ಕೇಂದ್ರಕ್ಕೆ ಮೆಕ್ಕೆಜೋಳ ತರಬೇಕು. ಭರಮಸಾಗರ, ಹಿರೇಗುಂಟನೂರು ಹೋಬಳಿಯ ಲಕ್ಷ್ಮಿಸಾಗರ, ದೊಡ್ಡಆಲಗಟ್ಟ ಗ್ರಾಮ ಪಂಚಾಯ್ತಿಗಳ ರೈತರು ಭರಮಸಾಗರದ ಖರೀದಿ ಕೇಂದ್ರಕ್ಕೆ ಮೆಕ್ಕೆಜೋಳ ಕೊಂಡೊಯ್ಯಬೇಕು. ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕಿನ ರೈತರು ಚಿಕ್ಕಜಾಜೂರಿನಲ್ಲಿ ತೆರೆದಿರುವ ಖರೀದಿ ಕೇಂದ್ರಕ್ಕೆ ಮೆಕ್ಕೆಜೋಳ ನೀಡಬೇಕು ಎಂದು ಹೇಳಿದರು.

ಈ ಮೊದಲು ೫೦ ಕೆಜಿ ಸಾಮರ್ಥ್ಯದ ಚೀಲದಲ್ಲಿ ಮೆಕ್ಕೆಜೋಳ ತರಲು ರೈತರಿಗೆ ಸೂಚಿಸಲಾಗಿತ್ತು. ಆದರೆ, ಈಗ ರೈತರ ಅನುಕೂಲಕ್ಕಾಗಿ 100 ಕೆಜಿ ಸಾಮರ್ಥ್ಯವುಳ್ಳ ಚೀಲದಲ್ಲಿ ಮೆಕ್ಕೆಜೋಳ ತರಲು ತಿಳಿಸಲಾಗಿದೆ ಎಂದರು.

ಶೇಂಗಾ ಪ್ರತಿ ಕ್ವಿಂಟಲ್ ರೂ 4ಸಾವಿರ ಮತ್ತು ಸೂರ್ಯಕಾಂತಿ ಪ್ರತಿ ಕ್ವಿಂಟಾಲ್‌ಗೆ ರೂ ೩,೭೦೦ ನೀಡುವ ಮೂಲಕ ಖರೀದಿ ಮಾಡಲಾಗುವುದು.

ಹೊಸದುರ್ಗದಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗುತ್ತಿದ್ದು, ಪ್ರತಿ ಕ್ವಿಂಟಲ್‌ಗೆ ರೂ ೧೫೦೦ ಜತೆಗೆ ರೂ ೩೦೦ನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ನಾರಾಯಣಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್, ಕೃಷಿ ಮಾರುಕಟ್ಟೆ ಹಾಗೂ ಖರೀದಿ ಕೇಂದ್ರದ ಅಧಿಕಾರಿಗಳು ಹಾಜರಿದ್ದರು.

ಸಂಪರ್ಕ ಸಂಖ್ಯೆ
ಖರೀದಿ ಕೇಂದ್ರ ಅಧಿಕಾರಿಗಳ ಮೊಬೈಲ್‌ ದೂರವಾಣಿ ಸಂಖ್ಯೆ: ವಿಭಾಗೀಯ ವ್ಯವಸ್ಥಾಪಕ ಕೃಷ್ಣಮೂರ್ತಿ ೯೪೮೩೩ ೮೧೩೪೮, ನೋಡೆಲ್ ಅಧಿಕಾರಿ ಸೋಮಶೇಖರ್ ಗಾಂಧಿ: ೭೭೬೦೯ ೬೬೯೧೦,

ಚಿತ್ರದುರ್ಗ ಖರೀದಿ ಕೇಂದ್ರದ ಸಂಧಿಮನಿ :೭೭೬೦೯ ೬೭೦೪೦, ಭರಮಸಾಗರ ಖರೀದಿ ಕೇಂದ್ರದ ಲಕ್ಷ್ಮಣ್: ೯೮೮೦೭ ೭೯೧೦೩, ಚಿಕ್ಕಜಾಜೂರು ಖರೀದಿ ಕೇಂದ್ರದ ನಂಜುಂಡಸ್ವಾಮಿ :೮೦೯೫೧ ೪೦೭೧೭ ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT