ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ರೈಲು ನಿಲ್ದಾಣದಲ್ಲಿ 15 ಲಗೇಜು ಸ್ಕ್ಯಾನರ್‌ಗಳು

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆರು ಮೆಟ್ರೊ ನಿಲ್ದಾಣಗಳಲ್ಲಿ ಅಳವಡಿಸಿರುವ ಹದಿನೈದು ಲಗೇಜು ಸ್ಕ್ಯಾನರ್‌ಗಳಲ್ಲಿ ಕೇವಲ 5 ಮಾತ್ರ ಕೆಲಸ ಮಾಡುತ್ತಿವೆ.

ನಲವತ್ತು ದಿನಗಳ ಹಿಂದೆ ಈ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ. ಎಂ.ಜಿ.ರಸ್ತೆಯ ನಿಲ್ದಾಣದಲ್ಲಿರುವ ಎರಡು ಮತ್ತು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿರುವ ಮೂರು ಸ್ಕ್ಯಾನರ್‌ಗಳು ಮಾತ್ರ ಕೆಲಸ ಮಾಡುತ್ತಿವೆ. ಈ ಸ್ಕ್ಯಾನರ್‌ಗಳನ್ನು ಪೂರೈಸಿರುವ ಆಸ್ಟ್ರೋಫಿಸಿಕ್ಸ್ ಇಂಕ್ ಸಂಸ್ಥೆ ವಿವಿಧ ನಿಲ್ದಾಣಗಳಲ್ಲಿರುವ ಭದ್ರತಾ ಸಿಬ್ಬಂದಿಗೆ ಈ ಯಂತ್ರಗಳ ಬಳಕೆ ಬಗ್ಗೆ ಎರಡು ದಿನಗಳ ತರಬೇತಿ ನೀಡಿದೆ.

ಪ್ರತಿ ಯಂತ್ರದ ಬೆಲೆ ಸುಮಾರು 60ರಿಂದ 65 ಸಾವಿರ ರೂಪಾಯಿ. ಟ್ರಿನಿಟಿ ವೃತ್ತ, ಹಲಸೂರು, ಇಂದಿರಾನಗರ ನಿಲ್ದಾಣಗಳಲ್ಲಿರುವ ಹತ್ತು ಯಂತ್ರಗಳು ಬಳಕೆಯಾಗದೆ ಉಳಿದಿವೆ. ಸ್ಕ್ಯಾನರ್‌ಗಳನ್ನು ತರುವುದಕ್ಕೆ ಮೊದಲು ಸಿಬ್ಬಂದಿಯೇ ಪ್ರಯಾಣಿಕರ ಲಗೇಜನ್ನು ತಪಾಸಣೆ ಮಾಡುತ್ತಿದ್ದರು. ಆದರೆ ಸ್ಕ್ಯಾನರ್‌ಗಳನ್ನು ಬಳಸಿ ಪ್ರಯಾಣಿಕರ ಲಗೇಜನ್ನು ವಿಸ್ತೃತವಾಗಿ ತಪಾಸಣೆ ಮಾಡಬಹುದು. ಯಂತ್ರಗಳು ಬಳಕೆಯಾಗದ ಕಾರಣ ಈಗಲೂ ಸಿಬ್ಬಂದಿಯೇ ತಪಾಸಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

`ಹಲಸೂರು ಠಾಣೆಯಲ್ಲಿರುವ ಯಂತ್ರಗಳನ್ನು ಇನ್ನೂ ಬಳಸುತ್ತಿಲ್ಲ~ ಎಂದು ಹಲಸೂರು ಉಪ ವಿಭಾಗದ ಎಸಿಪಿ ಎನ್.ನರಸಿಂಹಯ್ಯ `ಪ್ರಜಾವಾಣಿ~ಗೆ ತಿಳಿಸಿದರು.

`ಪ್ರತಿ ನಿಲ್ದಾಣಕ್ಕೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆದರೆ ಭದ್ರತೆಯನ್ನು ಪ್ರಮುಖವಾಗಿ ಬಿಎಂಆರ್‌ಸಿಎಲ್ ಸಿಬ್ಬಂದಿ ನೋಡಿಕೊಳ್ಳಬೇಕು. ಸ್ಕ್ಯಾನರ್‌ಗಳನ್ನು ಆದಷ್ಟು ಬೇಗ ಬಳಕೆ ಮಾಡಲಾರಂಭಿಸಬೇಕು. ಸ್ಕ್ಯಾನರ್ ಬಳಸದ ನಿಲ್ದಾಣಗಳಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಬಿಎಂಆರ್‌ಸಿಎಲ್ ಹೊಣೆ~ ಎಂದು ಅವರು ಹೇಳಿದರು.

`ಸ್ಕ್ಯಾನರ್ ಅಳವಡಿಕೆ ಮತ್ತು ಸಿಬ್ಬಂದಿ ತರಬೇತಿಗೆ ಮೂರು ದಿನ ಬೇಕಾಗುತ್ತದೆ. ಇದು ಮುಗಿದ ತಕ್ಷಣದಿಂದಲೇ ಬಳಕೆ ಆರಂಭಿಸಲಾಗುತ್ತದೆ. ಇದರಿಂದಾಗಿ ಸಿಬ್ಬಂದಿ ಸುಲಭವಾಗಿ ತಪಾಸಣೆ ಮಾಡಬಹುದು ಮತ್ತು ಸಮಯವೂ ಉಳಿಯುತ್ತದೆ~ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಹೇಳಿದರು.

ಸ್ಕ್ಯಾನರ್‌ಗಳು ಏಕೆ ಕೆಲಸ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಭದ್ರತಾ ಸಂಗತಿಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದು ಒಳ್ಳೆಯದಲ್ಲ~ ಎಂದು ತಾಕೀತು ಮಾಡಿದರು. ಇಪ್ಪತ್ತು ಕೆ.ಜಿ ತೂಕದ ಲಗೇಜನ್ನು ಸ್ಕ್ಯಾನ್ ಮಾಡಬಹುದು. ಅದಕ್ಕಿಂತ ಹೆಚ್ಚು ತೂಕದ ಲಗೇಜು ಕೊಂಡೊಯ್ಯಲು ಬಿಎಂಆರ್‌ಸಿಎಲ್ ಅನುಮತಿ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT