ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಸ್ಸಿಗೆ ಸತತ ನಾಲ್ಕನೇ ಬಾರಿ ಗೌರವ

ಫುಟ್‌ಬಾಲ್: ಫಿಫಾ `ವರ್ಷದ ವಿಶ್ವ ಶ್ರೇಷ್ಠ ಆಟಗಾರ' ಪ್ರಶಸ್ತಿ
Last Updated 8 ಜನವರಿ 2013, 19:59 IST
ಅಕ್ಷರ ಗಾತ್ರ

ಜುರಿಕ್ (ಎಪಿ/ಎಎಫ್‌ಪಿ/ಐಎಎನ್‌ಎಸ್): ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಸತತ ನಾಲ್ಕನೇ ಬಾರಿ ಫಿಫಾ `ವರ್ಷದ ವಿಶ್ವ ಶ್ರೇಷ್ಠ ಆಟಗಾರ' ಗೌರವಕ್ಕೆ ಪಾತ್ರರಾಗಿದ್ದಾರೆ.

ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರು ನೀಡಿದ ಸ್ಪರ್ಧೆಯನ್ನು ದಾಟಿ ಈ ಸಾಧನೆಗೆ ಅವರು ಪಾತ್ರರಾಗಿದ್ದಾರೆ. ಬಾರ್ಸಿಲೋನಾ ತಂಡದ ಮೆಸ್ಸಿ 2012ರಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಅವರು ಒಟ್ಟು 91 ಗೋಲು ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ರಿಯಲ್ ಮ್ಯಾಡ್ರಿಡ್‌ನ ರೊನಾಲ್ಡೊ 46 ಗೋಲು ಗಳಿಸಿದ್ದರು.

`ಈ ಪ್ರಶಸ್ತಿ ಮತ್ತೆ ನನಗೆ ಲಭಿಸಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ' ಎಂದು ಪ್ರತಿಷ್ಠಿತ ಬೆಲೊನ್ ಡಿ'ಒರ್ ಪ್ರಶಸ್ತಿಗೆ ಪಾತ್ರರಾದ 25 ವರ್ಷ ವಯಸ್ಸಿನ ಮೆಸ್ಸಿ ಪ್ರತಿಕ್ರಿಯಿಸಿದ್ದಾರೆ.

`ಬಾರ್ಸಿಲೋನಾ ತಂಡದ ನನ್ನ ಸಹ ಆಟಗಾರರನ್ನು ನೆನೆಯಲು ನಾನು ಇಷ್ಟಪಡುತ್ತೇನೆ. ಈ ವರ್ಷ ನಿಮ್ಮ ತಂಡದಲ್ಲಿರಲು ನನಗೆ ಹೆಮ್ಮೆ ಎನಿಸುತ್ತಿದೆ' ಎಂದು ಅವರು ನುಡಿದಿದ್ದಾರೆ.

ಮೆಸ್ಸಿ 41.60ರಷ್ಟು ಮತ ಪಡೆದರೆ, ರೊನಾಲ್ಡೊ 23.68ರಷ್ಟು ಮತ ಗಳಿಸಿದ್ದಾರೆ. ಪತ್ರಕರ್ತರು, ಕೋಚ್‌ಗಳು ಹಾಗೂ ನಾಯಕರು ಮತ ಚಲಾಯಿಸಿದ್ದರು. ವರ್ಷದಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಶ್ರೇಯಕ್ಕೆ ಪಾತ್ರರಾಗಿರುವ ಲಿಯೊನೆಲ್ ಇತ್ತೀಚೆಗಷ್ಟೇ ಗೆರ್ಡ್ ಮುಲ್ಲರ್ ಅವರ 40 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿದ್ದರು.

ಮೆಸ್ಸಿ ಸತತ ನಾಲ್ಕನೇ ಬಾರಿ ಈ ಸಾಧನೆಗೆ ಪಾತ್ರರಾಗುತ್ತಿರುವುದು ವಿಶ್ವದಾಖಲೆ ಕೂಡ.  ಸ್ಪೇನ್‌ನ ವಿಸೆಂಟ್ ಡೆಲ್ ಬಾಸ್ಕ್ `ವರ್ಷದ ಅತ್ಯುತ್ತಮ ಕೋಚ್' ಗೌರವಕ್ಕೆ ಭಾಜನರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸ್ಪೇನ್ 2011ರ ಯೂರೊ ಚಾಂಪಿಯನ್ ಆಗಿತ್ತು.

ಅಪಸ್ವರ: ಆದರೆ ಈ ಗೌರವ ಕ್ರಿಸ್ಟಿಯಾನೊ ರೊನಾಲ್ಡೊಗೆ ಸಲ್ಲಬೇಕಿತ್ತು ಎಂಬ ಅಪಸ್ವರ ಎದ್ದಿದೆ. ಇದಕ್ಕೆ ಕಾರಣ ಮೆಸ್ಸಿ ಶ್ರೇಷ್ಠ ಆಟಗಾರನಾಗಿರಬಹುದು. ಆದರೆ ಅವರು 2012ರಲ್ಲಿ ನಡೆದ ಟೂರ್ನಿಗಳಲ್ಲಿ ಯಾವುದೇ ಪ್ರಶಸ್ತಿ ಜಯಿಸಿಲ್ಲ ಎಂಬುದು. ಆದರೆ ರೊನಾಲ್ಡೊ ಪ್ರತಿನಿಧಿಸುವ ರಿಯಲ್ ಮ್ಯಾಡ್ರಿಡ್ ಸ್ಪೇನ್ ಲೀಗ್‌ನಲ್ಲಿ ಚಾಂಪಿಯನ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT