ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿಕೊಂಡ ಕಡಲತೀರದ ಉದ್ಯಾನ

Last Updated 21 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ಕಾರವಾರ: ರವೀಂದ್ರನಾಥ ಕಡಲತೀರದಲ್ಲಿರುವ ನಗರಸಭೆ ಉದ್ಯಾನ ಮತ್ತೆ ಮೈದುಂಬಿಕೊಂಡಿದೆ. ಜಿಲ್ಲಾಧಿಕಾರಿಯವರ ಪ್ರಯತ್ನದಿಂದಾಗಿ ನಿರ್ಜೀವ ಸ್ಥಿತಿಯಲ್ಲಿದ್ದ ಉದ್ಯಾನಕ್ಕೆ ಜೀವಕಳೆ ಬಂದಿದೆ. ಉದ್ಯಾನಕ್ಕೆ ಈಗ ಭೇಟಿ ನೀಡುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಬಿ.ಎನ್. ಕೃಷ್ಣಯ್ಯ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಕಾರವಾರಕ್ಕೆ ಆಗಮಿಸಿದ್ದ ಕೆಲವೇ ದಿನಗಳಲ್ಲಿ ಪಾಳು ಬಿದ್ದಿರುವ ಟಾಗೋರ ಕಡಲತೀರಕ್ಕೆ ಕಾರ್ಯಕಲ್ಪ ನೀಡುವ ನಿರ್ಧಾರ ಮಾಡಿದರು. ಕಡಲತೀರದಲ್ಲಿ ಬೃಹತ್ ಮಟ್ಟದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡರು. ಸರಕಾರಿ ನೌಕರರು, ಸಂಘ-ಸಂಸ್ಥೆಗಳು ಹಾಗೂ ಪತ್ರಕರ್ತರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಡಲತೀರವನ್ನು ಮತ್ತಷ್ಟು ಸ್ವಚ್ಛಗೊಳಿಸಬೇಕು. ಇಲ್ಲಿಯ ಉದ್ಯಾನ, ಪುಟಾಣಿ ರೈಲು, ಸಂಗೀತ ಕಾರಂಜಿ, ಪ್ಯಾರಾಗೋಲ (ವೀಕ್ಷಣಾ ಗೋಪುರ)ವನ್ನು ದುರಸ್ತಿ ಮಾಡಬೇಕು ಎಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೆಲ್ಲರೂ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು. ಈ ವಿಚಾರ ಅವರ ತಲೆಯಲ್ಲಿ ಆಗಲೇ ಹೊಳೆದಿತ್ತು. ಎಲ್ಲರ ಒತ್ತಾಯದ ನಂತರ ಅದಕ್ಕೊಂದು ರೂಪ ಸಿಕ್ಕಿತು.

ಜಿಲ್ಲಾಧಿಕಾರಿಗಳ ಆದೇಶದಂತೆ ನಗರಸಭೆ ಉದ್ಯಾನವನ್ನು ದುರಸ್ತಿಗೊಳಿಸಿದೆ. ಮೊದಲು ಇಲ್ಲಿ ಉದ್ಯಾನ ಇತ್ತೇ ಎಂದು ಇಲ್ಲಿಗೆ ಭೇಟಿ ನೀಡುವವರು ಈಗ ಪ್ರಶ್ನಿಸುವಂತಾಗಿದೆ. ಗಿಡಗಂಟಿ, ಕಸಕಡ್ಡಿಗಳಿಂದ ಉದ್ಯಾನ ಮುಚ್ಚಿ ಹೋಗಿತ್ತು. ಕುಳಿತು ಕೊಳ್ಳುವ ಆಸನಗಳು ಮುರಿದು ಹೋಗಿದ್ದವು. ಕಾರಂಜಿಯಿಂದ ನೀರು ಚಿಮ್ಮುವುದು ನಿಂತು ಹೋಗಿತ್ತು. ಉದ್ಯಾನ ಪ್ರೇಮಿಗಳ, ಅಪರಿಚಿತರ ತಾಣವಾಗಿತ್ತು.

ಆದರೆ ಈಗ ಎಲ್ಲವೂ ಬದಲಾಗಿದೆ. ಉದ್ಯಾನದ ಪ್ರವೇಶದ್ವಾರದಿಂದ ಹಿಡಿದು ಸಮುದ್ರ ತಡೆಗೋಡೆಯವರೆಗೂ ದುರಸ್ತಿ ಕಾರ್ಯ ಮುಗಿದಿದೆ. ಉದ್ಯಾನದ ಪೂರ್ವದಲ್ಲಿ, ಬೀಳುವ ಸ್ಥಿತಿಯಲ್ಲಿ ಪ್ಯಾರಾಗೋಲಾವನ್ನು ದುರಸ್ತಿ ಮಾಡಲಾಗಿದೆ. ಮೇಲೆ ಹತ್ತಲು ‘ಎಸ್’ ಆಕಾರದ ಏಣಿ ನಿರ್ಮಿಸಿ ಬಣ್ಣ ಹಚ್ಚಲಾಗಿದೆ. ಉದ್ಯಾನಕ್ಕೆ ಬರುವವರೆಗಲ್ಲರೂ ಪ್ಯಾರಾಗೋಲದ ಮೇಲೆ ಕಡಲತೀರದ ಸೊಬಗು ನೋಡಿ ಆನಂದ ಪಡುತ್ತಿದ್ದಾರೆ.

ಉದ್ಯಾನದ ತುಂಬ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹೂಕುಂಡಗಳನ್ನು ವ್ಯವಸ್ಥಿತವಾಗಿಟ್ಟು ಅವು ಗಳಿಗೆ ಬಣ್ಣ ಬಳಿಯಲಾಗಿದೆ. ಮುರಿದು ಬಿದ್ದಿರುವ ಆಸನಗಳನ್ನು ದುರಸ್ತಿ ಮಾಡಲಾ ಗಿದೆ. ಮಕ್ಕಳ ಆಟಿಕೆಗಳಿಗೆ ಬಣ್ಣ ಬಳಿಯಲಾ ಗಿದೆ. ಉದ್ಯಾನದ ನೀರು ಹರಿದು ಹೋಗುವ ಚರಂಡಿಯನ್ನು ಸ್ವಚ್ಛಗೊಳಿಸಲಾಗಿದೆ.

ಉದ್ಯಾನವನ್ನು ಸುತ್ತು ಹಾಕಲು ಇಂಟರ್‌ಲಾಕ್ ಬಳಸಿ ದಾರಿ ಮಾಡಲಾಗಿದೆ. ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನ ಹಾಗೂ ದನಕರುಗಳು ಉದ್ಯಾನ ಪ್ರವೇಶ ಮಾಡಬಾರದು ಎಂದು ಗಾರ್ಡ್ ಸ್ಟೋನ್ ಹಾಗೂ ವೈಯರ್ ಮೆಸ್ ಅಳವಡಿಸಲಾಗಿದೆ. ಉದ್ಯಾನ ದುರಸ್ತಿ ಕಾರ್ಯಕ್ಕೆ ನಗರಸಭೆ ಈಗಾಗಲೇ ರೂ. 10ರಿಂದ 15 ಲಕ್ಷ ವೆಚ್ಚ ಮಾಡಿದೆ.

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತ ಸಂಘದವರು ಸ್ವಚ್ಛಮಾಡಿರುವ ಉದ್ಯಾನದಲ್ಲಿರುವ ಕೆರೆಯ ದುರಸ್ತಿ ಹಾಗೂ ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದು ಅವುಗಳ ದುರಸ್ತಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಜಿಲ್ಲಾಧಿಕಾರಿ ಕೃಷ್ಣಯ್ಯ ಅವರ ದೃಢ ನಿರ್ಧಾರದಿಂದಾಗಿ ಪಾಳು ಬಿದ್ದ ಉದ್ಯಾನ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT