ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಬಂದ್ ಸಂಪೂರ್ಣ ಯಶಸ್ವಿ

Last Updated 7 ಅಕ್ಟೋಬರ್ 2012, 8:15 IST
ಅಕ್ಷರ ಗಾತ್ರ

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಯಬಿಟ್ಟಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಮೈಸೂರಿನಲ್ಲಿ ಸಂಪೂರ್ಣ ಯಶಸ್ವಿಯಾಯಿತು.

ನಗರದ ಹೃದಯ ಭಾಗ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ನ್ಯು ಸಯ್ಯಾಜಿ ರಾವ್ ರಸ್ತೆ. ಸಂತೆಪೇಟೆ, ದೇವರಾಜ ಅರಸು ರಸ್ತೆ ಸೇರಿದಂತೆ ಎಲ್ಲ ಬಡಾವಣೆಗಳಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
 
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಸಂತೆಪೇಟೆ, ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಜನ ಸಂಚಾರ ಇಲ್ಲದೆ ಬಣಗುಡುತ್ತಿದ್ದವು. ವಿಶ್ವವಿಖ್ಯಾತ ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಇತರೆ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಿಕೊ ಎನ್ನುತ್ತಿದ್ದವು.

ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದವು. ನಗರ ಸಾರಿಗೆ ಮತ್ತು ಗ್ರಾಮಾಂತರ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದವು. ಹಾಗಾಗಿ ಬಸ್ ನಿಲ್ದಾಣಗಳು ಬಿಕೊ ಎನ್ನುತ್ತಿದ್ದವು. ಆಟೋ ಚಾಲಕರು ಸಹ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದರಿಂದ ಪ್ರಯಾಣಿಕರು ಪರ ದಾಡಿದರು. ದೂರದ ಊರುಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಬಂದ್‌ನಿಂದಾಗಿ ತೊಂದರೆ ಅನುಭವಿಸಿದರು.

ರೈಲು ಸಂಚಾರದಲ್ಲಿ ವ್ಯತ್ಯಯ: ಬಂದ್‌ನಿಂದಾಗಿ ರೈಲು ಸಂಚಾರ ವ್ಯತ್ಯಯ ಗೊಂಡಿತು. ನಗರ ರೈಲ್ವೆ ನಿಲ್ದಾಣದಿಂದ ನಂಜನಗೂಡು ಮತ್ತು ಅರಸೀಕೆರೆ ಮಾರ್ಗ ವಾಗಿ ರೈಲು ಎಂದಿನಂತೆ ಸಂಚರಿಸಿದವು. ಚಾಮುಂಡಿ ಎಕ್ಸ್‌ಪ್ರೆಸ್ ರೈಲನ್ನು ಮಂಡ್ಯದಲ್ಲಿ ತಡೆದಿದ್ದರಿಂದ ಮೈಸೂರಿಗೆ ವಾಪಸ್ಸಾಯಿತು. ಹಾಗಾಗಿ ಮಧ್ಯಾಹ್ನದ ಶತಾಬ್ದಿ, ತಂಜಾ ವೂರು, ಟುಟಿಕಾರನ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಯಿತು. ರೈಲು ಸಂಚಾರ ರದ್ದು ಮಾಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಪ್ರಯಾಣಿಕರು ವಿಶ್ರಾಂತಿ ಕೊಠಡಿಯಲ್ಲೇ ಕಾಲ ಕಳೆದರು. ಬಹುತೇಕ ಪ್ರಯಾಣಿಕರು ದಿಕ್ಕು ಕಾಣದೆ ನಿದ್ರೆಗೆ ಜಾರಿದರು.ಕೈಗಾರಿಕೆಗಳು, ಸಣ್ಣ ಉದ್ಯಮಗಳು ಸಹ ಮುಚ್ಚಿದ್ದವು. ಚಿತ್ರಮಂದಿರಗಳು, ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಲಾಗಿತ್ತು. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಸ್ತೆಯಲ್ಲಿ ಕಾಣಿಸುಕೊಳ್ಳುತ್ತಿದ್ದ ಜನರು ಬಂದ್‌ನಿಂದಾಗಿ ಮನೆ ಸೇರಿದ್ದರು. ಟಿವಿಯಲ್ಲಿ ಕೇಬಲ್ ಪ್ರಸಾರ ಸಹ ಸ್ಥಗಿತಗೊಳಿಸಲಾಯಿತು.

ಬೈಕ್ ರ‌್ಯಾಲಿ: ಬಂದ್ ಹಿನ್ನೆಲೆಯಲ್ಲಿ ಸಿಪಿಐ, ಸಿಐಟಿಯು ಕಾರ್ಯಕರ್ತರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಜಿಲ್ಲಾ ಕೇಬಲ್ ಆಪರೇಟರ್ಸ್‌ ಸಂಘ, ವಿಕ್ರಾಂತ್, ಜೆ.ಕೆ. ಟೈರ್ಸ್‌ ನೌಕರರು ಬೈಕ್ ರ‌್ಯಾಲಿ ನಡೆಸಿ ಗಮನ ಸೆಳೆದರು. ಮೈಸೂರು ಕನ್ನಡ ವೇದಿಕೆ, ಜಯಚಾಮರಾಜ ಗಾಲ್ಫ್ ಕ್ಲಬ್, ಟೈಟಾನ್ ವಾಲ್ವ್ಸ್ ಮಜ್ದೂರ್ ಸಂಘ, ಮೈಸೂರು ಟ್ರಾವೆಲ್ಸ್ ಏಜೆಂಟ್ಸ್ ಅಸೋಸಿಯೇಷನ್ ಸದಸ್ಯರು ಪ್ರತಿಭಟನಾ ಮೆರವಣಿಗೆ ಮಾಡಿದರು.

ಬಿಜೆಪಿ: ವಿಧಾನ ಪರಿಷತ್ ಸದಸ್ಯರಾದ ಗೋ.ಮಧುಸೂದನ್ ಮತ್ತು ಸಿದ್ದರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮುಡಾ ಅಧ್ಯಕ್ಷ ಎಲ್.ನಾಗೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಚಾಮರಾಜ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಕಾಂಗ್ರೆಸ್: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಬಳಿಕ ಬೈಕ್ ರ‌್ಯಾಲಿ ಹೊರಟು ಮಹಾನಗರಪಾಲಿಕೆಗೆ ಮುತ್ತಿಗೆ ಹಾಕಿದರು. ಕೆಲಸ ಸ್ಥಗಿತಗೊಳಿಸುವಂತೆ ನೌಕರರು, ಅಧಿಕಾರಿಗಳಿಗೆ ಒತ್ತಾಯಿಸಿದರು. ನಂತರ ಗಾಂಧಿಚೌಕದ ಮೈಸೂರು ಕೋ-ಆಪರೇಟಿವ್ ಬ್ಯಾಂಕ್‌ಗೆ ನುಗ್ಗಿ ಕೆಲಸ ಸ್ಥಗಿತಗೊಳಿಸಿದರು.

ಜೆಡಿಎಸ್: ಜೆಡಿಎಸ್ ಕಾರ್ಯಕರ್ತರು ಮುಖಂಡ ಹರೀಶ್‌ಗೌಡ ನೇತೃತ್ವದಲ್ಲಿ ಬೈಕ್ ರ‌್ಯಾಲಿ ನಡೆಸಿ ಗಮನ ಸೆಳೆದರು. ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಕಾವೇರಿ ನಮ್ಮದು. ರಕ್ತ ಕೊಟ್ಟರೂ ನೀರು ಕೊಡೆವು ಎಂಬ ಘೋಷಣೆಗಳು ಎಲ್ಲೆಡೆ ಮೊಳಗಿದವು. ಕೇಂದ್ರ ಸರ್ಕಾರ ಮತ್ತು ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. 

ಗಾಂಧಿಚೌಕದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಸಿಪಿಐ, ಸಿಪಿಐ(ಎಂ), ಸಿಐಟಿಯು ಕಾರ್ಯಕರ್ತರು ಕಾವೇರಿ ನೀರು ಬಿಡಬಾರದು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಮೈಸೂರು ವಾಣಿಜ್ಯ ಕೈಗಾರಿಕಾ ಸಂಸ್ಥೆ: ಮೈಸೂರು ವಾಣಿಜ್ಯ ಕೈಗಾರಿಕೆ ಸಂಸ್ಥೆ ಯಡಿ ಬರುವ ಹೋಟೆಲ್ ಮಾಲೀಕರ ಸಂಘ, ಹೆಬ್ಬಾಳು ಕೈಗಾರಿಕಾ ಎಸ್ಟೇಟ್ ಮ್ಯಾನುಫ್ಯಾಕ್ಚರ್ಸ್‌ ಅಸೋಸಿಯೇಷನ್ ಸೇರಿದಂತೆ ಒಟ್ಟು 29 ಸಂಘಟನೆಗಳು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿದವು. ನಂತರ ಮನವಿ ಪತ್ರ ಸಲ್ಲಿಸಲಾಯಿತು.

ಕನ್ನಡ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ದೇವರಾಜ ಅರಸು ರಸ್ತೆಯಲ್ಲಿ ಪ್ರತಿಭಟನೆ ಮಾಡಿದರು. ಕರ್ನಾಟಕ ರಕ್ಷಣಾ ವೇದಿಕೆ, ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ರಾಜೀವ್‌ಗಾಂಧಿ ಆಟೋ ಚಾಲಕರ ಸಂಘ, ಜಯ ಕರ್ನಾಟಕ ಸಂಘಟನೆ, ರಾಜ್ಯ ಸಿದ್ದರಾಮಯ್ಯ ಅಭಿಮಾನಿಗಳ ಬಳಗ, ಮಂಡಿ ಮೊಹಲ್ಲಾ ಗೆಳೆಯರ ಬಳಗ, ಕನ್ನಡ ಜ್ಯೋತಿ ಆಟೋ ಚಾಲಕರ ಸಂಘ, ಮೈಸೂರು ನಾಗರಿಕರ ವೇದಿಕೆ, ಜಿಲ್ಲಾ ಫೋಟೊಗ್ರಾಫರ್ಸ್‌ ಮತ್ತು ವೀಡಿಯೊಗ್ರಾಫರ್ಸ್‌ ಅಸೋಸಿಯೇಷನ್ ಪ್ರತಿಭಟನೆ ಮಾಡಿದವು.

ರಸ್ತೆ ತಡೆ: ನಗರದ ಹೃದಯ ಭಾಗ ಮತ್ತು ಪ್ರಮುಖ ರಸ್ತೆಗಳಲ್ಲಿ ಮಾತ್ರ ಪ್ರತಿಭಟ ನೆಯ ಕಾವು ಇರಲಿಲ್ಲ. ನಗರದ ವಿವಿಧ ಬಡಾವಣೆಗಳಲ್ಲೂ ಸ್ಥಳೀಯರು ಪ್ರತಿಭಟನೆ ಮಾಡಿ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದರು. ಆರ್‌ಎಂಸಿ ವೃತ್ತದಲ್ಲಿ ತಿಲಕನಗರ ನಿವಾಸಿಗಳು ಪ್ರತಿಭಟನೆ ಮಾಡಿದರು. ಹುಣಸೂರು ರಸ್ತೆಯ ನೀಲಗಿರಿ ಸಿಗ್ನಲ್ ಜಂಕ್ಷನ್ ಬಳಿ ಪಡುವಾರಹಳ್ಳಿ ರಾಮಕೃಷ್ಣ ನೇತೃತ್ವದಲ್ಲಿ ನಿವಾಸಿಗಳು ರಸ್ತೆ ತಡೆ ಮಾಡಿದರು. ದಾಸಪ್ಪ ವೃತ್ತದಲ್ಲಿ ವಿಕ್ರಾಂತ್ ಟೈರ್ಸ್‌, ಟಿಪ್ಪು ವೃತ್ತದಲ್ಲಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಹೃದಯಾಘಾತದಿಂದ  ಆರ್‌ಬಿಐ ಉದ್ಯೋಗಿ ಸಾವು
ಭಾರತೀಯ ರಿಸರ್ವ್ ನೋಟು ಮುದ್ರಣಾಲಯ ಲಿಮಿಟೆಡ್  (ಆರ್‌ಬಿಐ) ನೌಕರರು ಸಹ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಬೈಕ್ ರ‌್ಯಾಲಿ ನಡೆಸಿದರು.

ಈ ವೇಳೆ ಆರ್‌ಬಿಐ ಮುದ್ರಣಾಲಯ ನಂಬರಿಂಗ್ ವಿಭಾಗದ ನೌಕರ ಗೌರಣ್ಣ (45) ತೀವ್ರ ಹೃದಯಾಘಾತಕ್ಕೆ ಒಳಗಾದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದರು. ಇವರು ಮೂಲತಃ ಚಿತ್ರದುರ್ಗದವರು.

ವಿಪ್ರೊ ಕಂಪೆನಿಗೆ ಮುತ್ತಿಗೆ: ಧ್ವಂಸ
ಹೆಬ್ಬಾಳಿನ ವಿಪ್ರೊ ಕಂಪೆನಿಗೆ ಮುತ್ತಿಗೆ ಹಾಕಿದ ಕನ್ನಡಪರ ಸಂಘಟನೆ ಗುಂಪೊಂದು ಕಚೇರಿ ಒಳಗೆ ನುಗ್ಗಿ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಧ್ವಂಸ ಮಾಡಿತು. ಇದರಿಂದ ಕಂಪೆನಿಯ ಅಧಿಕಾರಿ ವರ್ಗ ಮತ್ತು ನೌಕರರು ಗಾಬರಿಗೊಂಡರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.


ಉಚಿತ ತಂಪು ಪಾನೀಯ ವಿತರಣೆ
ಬೆಳಿಗ್ಗೆಯೇ ಬಿಸಿಲಿನ ಪ್ರಖರತೆ ಹೆಚ್ಚಿದ್ದರಿಂದ ಪ್ರತಿಭಟನಾಕಾರರು ಬಸವಳಿದರು. ದೇವರಾಜ ಅರಸು ರಸ್ತೆಯಲ್ಲಿ ಸಾಗುತ್ತಿದ್ದ ಪ್ರತಿಭಟನಾಕಾರರಿಗೆ ಜೈನ್ ಮಿಲನ್ ಸಂಸ್ಥೆಯವರು ತಂಪು ಪಾನೀಯವನ್ನು ಉಚಿತವಾಗಿ ವಿತರಿಸಿದರು. ಪ್ರತಿಭಟನಾಕಾರರು ತಂಪು ಪಾನೀಯಕ್ಕೆ ಮುಗಿ ಬಿದ್ದರು. ತಂಪು ಪಾನೀಯ ಖಾಲಿ ಆದ ನಂತರ ಶುದ್ಧೀಕರಿಸಿದ ನೀರನ್ನು ವಿತರಿಸಲಾಯಿತು. ತಂಪು ಪಾನೀಯ, ನೀರು ಕುಡಿದವರು ಪ್ಲಾಸ್ಟಿಕ್ ಲೋಟಗಳು ಮನಬಂದಂತೆ ಬಿಸಾಡಿದರು. ದೇವರಾಜ ಅರಸು ರಸ್ತೆಯಲ್ಲಿ ಪ್ಲಾಸ್ಟಿಕ್ ಲೋಟಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಟೈರ್‌ಗಳಿಗೆ ಬೆಂಕಿ

ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಅಲ್ಲಲ್ಲಿ ಟೈರ್‌ಗಳಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ರಸ್ತೆ ಮಧ್ಯೆ ಟೈರ್‌ಗಳು ಸುಟ್ಟು ಕರಕಲಾಗಿ ಸಂಚಾರಕ್ಕೆ ಅಡ್ಡಿಯಾಯಿತು.

ರಾರಾಜಿಸದ ಕನ್ನಡ ಬಾವುಟ
ಕಾವೇರಿ ಹೋರಾಟದಲ್ಲಿ ಎಲ್ಲೆಡೆ ಕನ್ನಡ ಬಾವುಟಗಳು ರಾರಾಜಿಸಿದವು. ಬೈಕ್ ರ‌್ಯಾಲಿ, ಆಟೋ ರ‌್ಯಾಲಿ, ಪ್ರತಿಭಟನಾ ಮೆರವಣಿಗೆಯಲ್ಲಿ ಕಾರ್ಯಕರ್ತರು ಕನ್ನಡ ಬಾವುಟಗಳನ್ನು ಹಿಡಿದಿದ್ದರು.

23 ಸಂಘಟನೆಗಳಿಂದ ಪ್ರತಿಭಟನೆ
ಕನ್ನಡಪರ ಸಂಘಟನೆಗಳು, ರಾಜಕೀಯ ಪಕ್ಷಗಳು ಸೇರಿ ಒಟ್ಟು 23 ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ, ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದವು. ಹತ್ತು ನಿಮಿಷಕ್ಕೆ ಒಂದರಂತೆ ಸಂಘಟನೆಗಳು ಡಿಸಿ ಕಚೇರಿಯತ್ತ ಬರುತ್ತಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT