ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಚುನಾವಣೆ: ಕಾಂಗ್ರೆಸ್‌ಗೆ ಮನ್ನಣೆ

1951ರ ಲೋಕಸಭಾ ಚುನಾವಣೆ
Last Updated 23 ಮಾರ್ಚ್ 2014, 10:53 IST
ಅಕ್ಷರ ಗಾತ್ರ

ತುಮಕೂರು: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ನಾಲ್ಕು ವರ್ಷಗಳ ಬಳಿಕ ದೇಶವನ್ನಾಳುವ ಪ್ರಜಾ­ಪ್ರಭುತ್ವದ ಪ್ರತಿನಿಧಿ­ಗಳನ್ನು ಚುನಾವಣೆ ಮೂಲಕ ದೇಶದ ಪ್ರಜೆಗಳೇ ಆಯ್ಕೆ ಮಾಡುವ ಸ್ವಾತಂತ್ರ್ಯ ದೊರೆತ ವರ್ಷ 1951.
ಎಲ್ಲೆಡೆ ಕಾಂಗ್ರೆಸ್‌ ಅಲೆ. ಸಮಾಜ­ವಾದಿಗಳು, ಕಮ್ಯುನಿಸ್ಟರಿಗೂ ಜನ ಮನ್ನಣೆ ನೀಡಿದರೂ; ಬಹು­ಮತ ನೀಡಿದ್ದು ಕಾಂಗ್ರೆಸ್‌ಗೆ.

ತುಮಕೂರು ಲೋಕಸಭಾ ಕ್ಷೇತ್ರ­ದಿಂದ ಘಟಾನು­ಘಟಿಗಳು ಸ್ಪರ್ಧಿಸಿ­ದ್ದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿ.ಆರ್‌.ಬಸಪ್ಪ (ಚೆನ್ನಬಸಪ್ಪ), ಖಾದ್ರಿ ಶಾಮಣ್ಣ ಸೋಷಿಯಲಿಸ್ಟ್‌ ಪಕ್ಷದ ಅಭ್ಯರ್ಥಿ­ಯಾಗಿ, ಕಾರ್ಮಿಕ ಸಂಘಟನೆ ಕಿಸಾನ್‌ ಮಜ್ದೂರ್‌ ಪ್ರಜಾ ಪಕ್ಷದ ಅಭ್ಯರ್ಥಿಯಾಗಿ ಎಂ.ಎಲ್‌.­ಶ್ರೀಕಂಠಯ್ಯ ಹಾಗೂ ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಕೆ.ವಿ.ಸುಬ್ರಮಣ್ಯ­ಸ್ವಾಮಿ ಪ್ರಥಮ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.

ಕಾಂಗ್ರೆಸ್‌ ಅಭ್ಯರ್ಥಿ ಬಸಪ್ಪ ಜಿಲ್ಲೆಯ ಹೆಸ­ರಾಂತ ವರ್ತಕರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂ­ಡಿದ್ದ ಜಿಲ್ಲೆಯ ಪ್ರಮುಖರಲ್ಲಿ ಒಬ್ಬರು. ಸ್ವಾತಂತ್ರ್ಯ ಹೋರಾಟಗಾರ ಯಶೋ­ಧರ ದಾಸಪ್ಪ ಸೇರಿದಂತೆ ಪ್ರಮುಖರ ಪಡೆ ಬಸಪ್ಪ ಬೆಂಬಲಕ್ಕಿತ್ತು. ಆಯಾ ಭಾಗದ ಹೋರಾಟಗಾರರು ಸ್ವತಃ ಪ್ರಚಾರ ನಡೆಸಿ, ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದರು.

ಜಿಲ್ಲೆಯ ಜನರಲ್ಲೂ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವರನ್ನು ಬೆಂಬಲಿಸ­ಬೇಕು ಎಂಬ ಹಪಾಹಪಿ­ಯಿತ್ತು. ಪರಿಣಾಮ ಕಾಂಗ್ರೆಸ್‌ ಅಭ್ಯರ್ಥಿ ಬಸಪ್ಪ 68840 ಮತಗಳ ಅಂತರ­ದಿಂದ ವಿಜಯ­ಶಾಲಿಯಾದರು. ಉಳಿದ ಮೂವರು ಅಭ್ಯರ್ಥಿ­ಗಳು ಪಡೆದ ಮತಗಳನ್ನು ಕೂಡಿದರೂ ಬಸಪ್ಪ ಪಡೆದ ಮತಗಳ ಪ್ರಮಾಣ ಹೆಚ್ಚಿತ್ತು. ಮೂವರು ಅಭ್ಯರ್ಥಿಗಳು ಒಟ್ಟು 106909 ಮತ ಪಡೆದರೆ ಬಸಪ್ಪ 116596 ಮತ ಪಡೆದಿದ್ದರು.

ಸೋಷಿಯಲಿಸ್ಟ್‌ ಪಕ್ಷದಿಂದ ಕಣಕ್ಕಿಳಿದಿದ್ದ ಖಾದ್ರಿ ಶಾಮಣ್ಣ ಜಿಲ್ಲೆಯ ಎಲ್ಲ ಭಾಗದ ಜನರಿಗೆ ಪರಿಚಿತರಾಗಿ­ರಲಿಲ್ಲ. ಪತ್ರಕರ್ತ, ಹೋರಾಟಗಾರ ಎಂಬ ಹೆಸರಿತ್ತು ಅಷ್ಟೇ. ಶಾಮಣ್ಣ ಶಿವಮೊಗ್ಗ ಜಿಲ್ಲೆಯವರು. ಕ್ಷೇತ್ರದಿಂದ ಸ್ಪರ್ಧಿಸಲು ಜಿಲ್ಲೆಯ ಪಕ್ಷದ ಪ್ರಭಾವಿ ನಾಯಕರು ಮುಂದಾಗ­ದಿದ್ದ­ರಿಂದ ಶಾಮಣ್ಣ ಅವರನ್ನು ಕಣಕ್ಕಿಳಿಸಲಾ­ಯಿತು. ಹಣಾಹಣಿಯ ಸ್ಪರ್ಧೆ ನೀಡ­ದಿದ್ದರೂ; 47756 ಮತ ಪಡೆದರು. ವಿಜೇತ ಅಭ್ಯರ್ಥಿಯ ನಂತರ ಹೆಚ್ಚು ಮತ ಪಡೆದವರು ಇವರೇ.

ಸ್ವಾತಂತ್ರ್ಯ ಪೂರ್ವದಿಂದಲೂ ಜಿಲ್ಲೆ­ಯಲ್ಲಿ ಕಾರ್ಮಿಕ ಸಂಘಟನೆಗಳು ಸಕ್ರಿಯ­ವಾಗಿದ್ದವು. ಅದರಲ್ಲೂ ಬೀಡಿ ಕಾರ್ಮಿಕರ ಸಂಘಟನೆ ಹೆಚ್ಚು ಚಟುವಟಿಕೆಯಿಂದ ಕೂಡಿತ್ತು. ಮಂಡಿ, ಮಿಲ್‌ ಕಾರ್ಮಿಕರ ಸಂಘಟನೆಗಳು ಅಸ್ತಿತ್ವದಲ್ಲಿದ್ದವು. ಕಾರ್ಮಿಕರ ಮತ­ಗಳನ್ನೇ ನಂಬಿ ಕಿಸಾನ್‌ ಮಜ್ದೂರ್‌ ಪ್ರಜಾ ಪಕ್ಷ ಜಿಲ್ಲೆಯಲ್ಲಿ ಉತ್ತಮ ಹೆಸರು ಗಳಿಸಿದ್ದ ಎಂ.ಎಲ್‌.ಶ್ರೀಕಂಠಯ್ಯ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ (ಆರ್‌ಎಸ್‌ಎಸ್‌) ಶಾಖೆ­ಗಳ ಮೂಲಕ ಜಿಲ್ಲೆ­ಯಲ್ಲಿ ಬೇರು ಬಿಡುತ್ತಿದ್ದ ಭಾರತೀಯ ಜನಸಂಘ ಸಹ ಕೆ.ವಿ.ಸುಬ್ರಮಣ್ಯಸ್ವಾಮಿ ಅವರನ್ನು ಅಖಾಡಕ್ಕಿಳಿಸಿತ್ತು.

ತುಮಕೂರು ಲೋಕಸಭಾ ಕ್ಷೇತ್ರ­ದಿಂದ ಮೊದಲ ಚುನಾವಣೆ­ಯಲ್ಲಿ ನಾಲ್ವರು ಸ್ಪರ್ಧಾಳು­ಗಳು ಅಖಾಡ­ಕ್ಕಿಳಿದಿದ್ದರು. ದೇಶದ ಎಲ್ಲೆಡೆ ಪ್ರಬಲ­ವಾಗಿದ್ದ ಕಾಂಗ್ರೆಸ್‌ ಅಲೆಯಲ್ಲಿ ಪಕ್ಷದ ಅಭ್ಯರ್ಥಿ ಸಿ.ಆರ್‌.ಬಸಪ್ಪ ಶೇ 52.17 ಮತಗಳಿಸುವ ಮೂಲಕ ಜಿಲ್ಲೆಯ ಪ್ರಥಮ ಸಂಸದರಾಗಿ ಆಯ್ಕೆ­ಯಾದರು.

ಪ್ರಾಮಾಣಿಕತೆ, ಸಜ್ಜನಿಕೆಗೆ ಮಾತ್ರ ಆಗ ಮನ್ನಣೆ ಸಿಗುತ್ತಿತ್ತು. ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪ್ರಾಮಾ­ಣಿಕರು, ಸಜ್ಜನರು ಆಗಿದ್ದರು.

ಸೋಷಿಯಲಿಸ್ಟ್‌ ಪಕ್ಷದ ಖಾದ್ರಿ ಶಾಮಣ್ಣ ಬೇರೆ ಜಿಲ್ಲೆಯವರು ಎಂಬ ಅಭಿಪ್ರಾಯ ಕ್ಷೇತ್ರದ ವಿವಿಧೆಡೆ ಕೇಳಿ ಬಂದರೂ; ಜನ ಮತ ನೀಡಿದ್ದರು.

ಸ್ವಾತಂತ್ರ್ಯ ಹೋರಾಟಗಾರರು, ಊರಿನ ಪ್ರಮುಖರು, ಗೌಡರು, ಶ್ಯಾನುಭೋಗರು ಸೂಚಿಸಿದ ವ್ಯಕ್ತಿಗೆ ಇಡೀ ಗ್ರಾಮವೇ ಓಟು ಚಲಾಯಿಸು­ತ್ತಿದ್ದ ಕಾಲ. ದೇಶದಲ್ಲಿದ್ದ ಕಾಂಗ್ರೆಸ್ ಅಲೆ, ಅಭ್ಯರ್ಥಿ ಬಸಪ್ಪ ಅವರ ಪ್ರಾಮಾಣಿಕತೆ, ಬೆಂಬಲಕ್ಕಿದ್ದ ಸ್ವಾತಂತ್ರ್ಯ ಹೋರಾಟಗಾರರ ತಂಡ, ಸಜ್ಜನಿಕೆ ಎಲ್ಲವೂ ಸೇರಿ ಕಾಂಗ್ರೆಸ್‌ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಜಯಗಳಿಸಿದ್ದರು.

ಪಕ್ಷ                                      ಅಭ್ಯರ್ಥಿ                      ಪಡೆದ ಮತ                        ಶೇ

ಕಾಂಗ್ರೆಸ್                           ಸಿ.ಆರ್.ಬಸಪ್ಪ                   116596                        52.17
ಸೋಷಿಯಲಿಸ್ಟ್ ಪಾರ್ಟಿ           ಖಾದ್ರಿ ಶಾಮಣ್ಣ                  47756                          21.37
ಕಿಸಾನ್‌ ಮಜ್ದೂರ್‌ ಪ್ರಜಾ ಪಕ್ಷ    ಎಂ.ಎಲ್‌.ಶ್ರೀಕಂಠಯ್ಯ         39052                         17.47
ಭಾರತೀಯ ಜನಸಂಘ            ಕೆ.ವಿ.ಸುಬ್ರಮಣ್ಯ ಸ್ವಾಮಿ        20101                         8.99

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT