ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಲೆ ಮೋಸದ ಬಲೆ; ಕಾಂಗ್ರೆಸ್‌ಗೆ ಮಣೆ

Last Updated 9 ಏಪ್ರಿಲ್ 2014, 8:39 IST
ಅಕ್ಷರ ಗಾತ್ರ

ಬಾಗಲಕೋಟೆ: ಎರಡು ಬಾರಿ ಶಾಸಕರಾಗಿ, ಕ್ರೀಡಾ ಸಚಿವರಾಗಿ ಮತ್ತು ಸಂಸದರಾಗಿ ಕಾರ್ಯನಿರ್ವಹಿಸಿರುವ ಹಿರಿಯ ಅನುಭವಿ ರಾಜಕಾರಣಿ ಅಜಯಕುಮಾರ ಸರನಾಯಕ ಪ್ರಸ್ತುತ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದಾರೆ.

ರಾಜ್ಯ ಸರ್ಕಾರದ ಜನಪ್ರಿಯತೆ ಮತ್ತು ವೈಯಕ್ತಿಕ ವರ್ಚಸ್ಸಿನೊಂದಿಗೆ ಮುನ್ನುಗ್ಗುತ್ತಿರುವ ಸರನಾಯಕರಿಗೆ ಪಕ್ಷದೊಳಗಿನ ಭಿನ್ನಾಭಿಪ್ರಾಯ, ಜಾತಿ ಒಳಬೇಗುದಿಯನ್ನು ಪೂರ್ಣ ಪ್ರಮಾಣದಲ್ಲಿ ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲದಿರುವುದು ಒಂದಷ್ಟು ಹಿನ್ನಡೆಯಾಗಿದೆ ಎಂಬ ಅಭಿಪ್ರಾಯ ಪಕ್ಷದ ಮುಖಂಡರಿಂದ ಕೇಳಿಬರುತ್ತಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಕಾರ್ಯಯೋಜನೆ, ರಾಜಕೀಯ ನಿಲುವುಗಳನ್ನು ಹಂಚಿಕೊಂಡಿದ್ದಾರೆ.

* ಜನತೆ ಕಾಂಗ್ರೆಸನ್ನು ಏಕೆ ಬೆಂಬಲಿಸಬೇಕು?
10 ವರ್ಷಗಳ ಯುಪಿಎ ಆಡಳಿತಾವಧಿಯಲ್ಲಿ ಜಾರಿಗೆ ತರ­ಲಾಗಿರುವ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಎನ್‌ಆರ್‌ಇಜಿಯಂತಹ ಕ್ರಾಂತಿಕಾರಕ ಕಾರ್ಯ­ಕ್ರಮಗಳ ಮೂಲಕ ಜನಪರವಾದ ಆಡಳಿತ ನೀಡಲಾಗಿದೆ. 

ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 10 ತಿಂಗಳಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಸೇರಿದಂತೆ ಬಡವರ ಪರ ಆಡಳಿತ ನೀಡಿದ್ದಾರೆ. ಈ ಕಾರ್ಯಕ್ರಮಗಳ ಮುಂದುವರಿಕೆಗಾಗಿ ಜನತೆ ಕಾಂಗ್ರೆಸ್‌ ಬೆಂಬಲಿಸಬೇಕು ಎಂಬುದು ನನ್ನ ಮನವಿಯಾಗಿದೆ.

* ಚುನಾವಣೆಯಲ್ಲಿ ನಿಮ್ಮ ಸಮೀಪ ಸ್ಪರ್ಧಿ ಯಾರು?
ಬಿಜೆಪಿ ಅಭ್ಯರ್ಥಿ ನನಗೆ ಸಮೀಪದ ಸ್ಪರ್ಧಿಯಾಗಿದ್ದಾರೆ. 10 ವರ್ಷ ಸಂಸದರಾಗಿ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ. ಸಂಸದರ ನಿಧಿ ಬಿಟ್ಟು ಬೇರೇನೂ ಕ್ಷೇತ್ರಕ್ಕೆ ತಂದಿಲ್ಲ. ಅದೇ ಅವರ ದೊಡ್ಡ ಸಾಧನೆಯಾಗಿದೆ. ಕ್ಷೇತ್ರದಲ್ಲಿ ಮೋದಿ ಅಲೆ ಕಂಡುಬರುತ್ತಿಲ್ಲ. ಮೊದಿ ಅಲೆ ಎಂಬುದು ಬಿಜೆಪಿಯ ಮೋಸದ ಬಲೆಯಾಗಿದೆ. ಕ್ಷೇತ್ರದ ಮತದಾರ ಈ ಬಾರಿ ಕಾಂಗ್ರೆಸ್‌ಗೆ ಮಣಿ ಹಾಕಲಿದ್ದಾರೆ. ವೈಯಕ್ತಿಕವಾಗಿ ವೋಟ್‌ ಕೇಳುವ ನೈತಿಕತೆ ಬಿಜೆಪಿ ಮುಖಂಡರು ಕಳೆದುಕೊಂಡಿದ್ದ್ದು, ಮೋದಿ ಹೆಸರಲ್ಲಿ ವೋಟ್‌ ಕೇಳುತ್ತಿದ್ದಾರೆ. ಹಿರಿಯ ಮುಖಂಡರು ಬಿಜೆಪಿ ಪಾಲಿಗೆ ಉಪಯೋಗವಿಲ್ಲದ ಸವಕಲು ನಾಣ್ಯದಂತಾಗಿದ್ದಾರೆ.

ಇನ್ನು ಪಕ್ಷೇತರ ಅಭ್ಯರ್ಥಿ ಶಂಕರ ಬಿದರಿ ಈ ಚುನಾ­ವಣೆಯಲ್ಲಿ ನಗಣ್ಯ, ಬಿದರಿ ಅವರಿಗೆ ಜನ ವೋಟ್‌ ಹಾಕಲ್ಲ. ಕ್ಷೇತ್ರದ ಜನತೆಗೆ ನಾನು ಹೊಸಬನಲ್ಲ, ರಾಜಕೀಯವೂ ನನಗೆ ಹೊಸತಲ್ಲ. ಜನತೆಗೆ ನನ್ನ ಮೇಲೆ ವಿಶ್ವಾಸವಿದೆ.

* ಪಕ್ಷದೊಳಗಿನ ಭಿನ್ನಮತ ಶಮನವಾಗಿದೆಯೆ?
ರಾಜಕೀಯ ಪಕ್ಷ ಎಂದ ಮೇಲೆ ಭಿನ್ನಮತ, ಅಸಮಾಧಾನಗಳು ಸಹಜ. ಚುನಾವಣೆ ಮೇಲೆ ಪರಿಣಾಮ ಬೀರುವಂತಹ ಅಂತಹ ಯಾವುದೇ ಭಿನ್ನಮತ, ಅಸಮಾ­ದಾನಗಳು ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಇಲ್ಲ. ಜಿಲ್ಲೆಯ ಏಳು ಜನ ಶಾಸಕರು, ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ ಸೇರಿದಂತೆ ಪಕ್ಷದ ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು ಮತ್ತು ಪಕ್ಷದ ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಭಾರಿ ಗೆಲುವು ನಮ್ಮದೇ. ಕೇಂದ್ರದಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ.

* ಕ್ಷೇತ್ರದಲ್ಲಿ ರಡ್ಡಿ ವಿರೋಧದ ಅಲೆ ನಿಮಗೆ ತೊಡಕಾಗುವುದೆ?
ಜಾತಿ ವಿಷಯದಲ್ಲಿ ನಂಬಿಕೆ ನನಗಿಲ್ಲ, ಹೀಗಿರುವಾಗ ವಿರೋಧದ ಅಲೆ ಎಂಬುದು ವಿರೋಧಿಗಳ ಸೃಷ್ಟಿ. ಈ ವಿಷಯಕ್ಕೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಕಾಂಗ್ರೆಸ್‌ನೊಂದಿಗೆ ಎಲ್ಲ ಸಮಾಜದವರೂ ಇದ್ದಾರೆ. ಕೇವಲ ಜಾತಿ ಮತ­ಗಳಿಂದ ಯಾವೊಬ್ಬ ಅಭ್ಯರ್ಥಿಯ ಸೋಲು, ಗೆಲುವು ನಿರ್ಧಾ­ರ­ವಾಗುವುದಿಲ್ಲ. ವಿಷಯ, ಪಕ್ಷ ಇಲ್ಲವೇ ವ್ಯಕ್ತಿ ಆಧರಿಸಿ ಚುನಾವಣೆ ನಡೆಯುತ್ತದೆ. ಕ್ಷೇತ್ರದಲ್ಲಿ ಇರುವುದು ಕಾಂಗ್ರೆಸ್‌ ಪರ ಅಲೆ.

*  ಕ್ಷೇತ್ರದ ಮತದಾರರಿಗೆ ನೀವು ನೀಡುವ ಭರವಸೆಗಳೇನು?
_ಕೃಷ್ಣಾ ಮೇಲ್ದಂಡೆ ಯೋಜನೆ ಶೀಘ್ರವಾಗಿ ಪೂರ್ಣಗೊಳಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸಲು ಆದ್ಯತೆ ನೀಡಲಾಗುವುದು, ಕುಡಚಿ–ಬಾಗಲಕೋಟೆ ರೈಲು ಮಾರ್ಗ ಶೀಘ್ರ ಪೂರ್ಣಗೊಳಿಸಲು ಕ್ರಮಕೈಗೊಳ್ಳ­ಲಾಗುವುದು, ವಿದೇಶಿ ಪ್ರವಾಸಿಗಳಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.

ತೋಟಗಾರಿಕೆಗೆ ಮತ್ತು ಕಾಯಿಪಲ್ಲೆ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು, ವಿದೇಶಕ್ಕೂ ರಫ್ತು ಮಾಡುಲು ಹೇರಳವಾದ ಅವಕಾಶ ಇರುವುದರಿಂದ ಈ ಬಗ್ಗೆ ಹೊಸ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ಉದ್ದೇಶವಿದೆ.

ಕ್ಷೇತ್ರದಲ್ಲಿ ದೊಡ್ಡಪ್ರಮಾಣದಲ್ಲಿರುವ ಸಕ್ಕರೆ ಉದ್ಯಮಕ್ಕೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ಯುವ ಸಮುದಾಯಕ್ಕೆ ಉದ್ಯೋಗ ಒದಗಿಲಾಗುವುದು.

ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಪ್ರಜ್ಞೆ ಮೂಡಿಸುವ ಜತೆಗೆ ಬಯಲು ಮಲವಿಸರ್ಜನೆಗೆ ಕಡಿವಾಣ ಹಾಕಿ ಪ್ರತಿ ಮನೆಯೂ ಶೌಚಾಲಯ ಹೊಂದುವಂತೆ ಮಾಡಲು ಆದ್ಯತೆ ನೀಡಲಾಗುವುದು. ಕ್ಷೇತ್ರದ ಜನತೆಯೂ ಈ ವಿಷಯದಲ್ಲಿ ಮುಂದೆ ಬಂದಾಗ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿಶೇಷ ಅನುದಾನ ತಂದು ಕ್ಷೇತ್ರದ ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಲಾಗುವುದು.

* ಯುಪಿಎ ಭ್ರಷ್ಟಾಚಾರ ಕಾಂಗ್ರೆಸ್‌ಗೆ ಮುಳುವಾಗುವುದೆ?
ಭ್ರಷ್ಟಾಚಾರ ವಿಷಯ ಕಾಂಗ್ರೆಸ್‌ಗೆ ಅಲ್ಲ ಬಿಜೆಪಿಗೆ ಮುಳುವಾಗಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಗಣಿ ಹಗರಣ
ಮಾಡಿ ಜೈಲಿಗೆ ಹೋದವರು ಬಿಜೆಪಿ ಮುಖಂಡರೆ ಹೊರತು ಕಾಂಗ್ರೆಸ್‌ ಮುಖಂಡರಲ್ಲ. ಕಾಂಗ್ರೆಸ್‌ ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT