ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹ, ದಾಹ ಮೀರಿದ `ಹೆಣ್ಣಿನ ಮಹತಿ'

ಕಾವ್ಯ ಕಾರಣ
Last Updated 31 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಪುರುಷನ ಕಣ್ಣಲ್ಲಿ ಹೆಣ್ಣು ವಿವಿಧ ಕಾಲಘಟ್ಟಗಳಲ್ಲಿ, ವಿವಿಧ ರೂಪಗಳಲ್ಲಿ ಪ್ರತಿಫಲನಗೊಳ್ಳುವ ಮತ್ತು ಅದರ ತತ್ಪರಿಣಾಮವಾಗಿ  ಆಕೆ ಅವನಲ್ಲಿ ಸೃಜಿಸುವ ಪರಿಣಾಮ ಮತ್ತು ಭಾವಾಭಿವೃದ್ಧಿಗಳು ಕುತೂಹಲಕಾರಿ. ತಾಯಿ, ಮಡದಿ, ಮಗಳು ಎಂಬ ತ್ರಿವಿಧ ಪಾತ್ರಗಳ ಪಾತಾಳಿಗಳಲ್ಲಿ ಹೆಣ್ಣು ಗಂಡಿನ ಜಗತ್ತಲ್ಲಿ, ಒಟ್ಟಾರೆ ಅವನ ವ್ಯಕ್ತಿತ್ವದಲ್ಲಿ ಆಗು ಮಾಡುವ ಸ್ಥಿತ್ಯಂತರಗಳು ಮತ್ತು ಪರಿವರ್ತನೆಗಳು ವಿಸ್ಮಯಕಾರಿಯಾದುದು. ಇವುಗಳಿಗೆ ಹಲ ಬಣ್ಣಗಳಿವೆ, ಹಲ ದನಿಗಳಿವೆ. ಇವುಗಳಿಗೊಂದು ಚೌಕಟ್ಟು ಮತ್ತು ಅರ್ಥ ನೀಡಲು ಗಂಡು ಇತಿಹಾಸದುದ್ದಕ್ಕೂ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದಾನೆ. ಕಾವ್ಯ ಪ್ರಕಾರ ಕೂಡ ಅವನ ಈ ಅರ್ಥ ಅರಿವ ಯಾತ್ರೆಯ ಒಂದು ಮಹತ್ವದ ಪ್ರಯಾಣವಾಗಿದೆ. ಹೆಣ್ಣು ಈ ಅರ್ಥದಲ್ಲಿ `ಸರ್ವಋತು ಸಮ್ಮೊಹಿನಿ'.

ಚಿದಾನಂದ ಸಾಲಿಯವರ ಪ್ರಸ್ತುತ ಈ ಚಿಕ್ಕ ಪದ್ಯದಲ್ಲಿ ಮಗಳು ಜನಿಸಿದ ತತಕ್ಷಣ ತಂದೆಯೊಬ್ಬನ ವ್ಯಕ್ತಿತ್ವದಲ್ಲಿ, ಅದರಲ್ಲೂ ಅವನ ಸ್ತ್ರೀ ಕುರಿತ ಸಿದ್ಧ ಮಾದರಿಯ ಗ್ರಹಿಕೆಯಲ್ಲಿ ಉಂಟಾಗುವ ಪಲ್ಲಟಗಳ ಕುತೂಹಲಕಾರಿ ಅವಲೋಕನ ಕಾಣಿಸಿಕೊಂಡಿದೆ. ಇದು ತನಕ ಹೆಣ್ಣನ್ನು ಹೊರನೋಟಗಳಿಂದ ಕಾಣುತ್ತಿದ್ದ  ದೃಷ್ಟಿಕೋನ -ಮಗಳು ಜನಿಸಿದ ಕೂಡಲೆ ಹೊರನೋಟ -ಒಳನೋಟವಾಗಿ ರೂಪಾಂತರಗೊಳ್ಳುತ್ತದೆ. `ಹೆಣ್ಣಿನ ಮಹತಿ'ಯನ್ನು ನಿಜಾರ್ಥದಲ್ಲಿ ಅರ್ಥೈಸಿಕೊಡಬಲ್ಲ ಶಕ್ತಿ ಮಗಳ ಹುಟ್ಟಿನಲ್ಲಿ ಅಡಗಿದೆ ಎಂಬುದು ಈ ಕವನದ ಆಶಯವಾಗಿದೆ. ಹೆಂಡತಿಯ ಬಗೆಗಿನ ಮೋಹ ಕಳೆದು ಭವದ ದಾಹ ಮೆರುಗಿಸುವ ಪರಿವರ್ತನೆಗೆ ಮಗಳು ಕಾರಣವಾಗುವ ಮತ್ತು ಹೆಣ್ಣಿನ ಕುರಿತು ಕಟ್ಟಿಕೊಂಡಿದ್ದ ಎಲ್ಲಾ ಪೊರೆಗಳು ಕಳಚಿಕೊಂಡು ಬೀಳುವ ಕ್ರಿಯೆಗೆ ಚಾಲನೆ ಮಗಳ ಹುಟ್ಟು ಪ್ರೇರಣೆ ಒದಗಿಸುತ್ತದೆ.

ಹೆಂಡತಿ ಮತ್ತು ತಾಯಿ ಕೊಡುವ ಹೆಣ್ತನ ಅನುಭವಗಳಲ್ಲಿ  ಸೂಕ್ಷ್ಮವಾದ ಸ್ವಾರ್ಥ ಮತ್ತು ಮೋಹಗಳ ಸೋಂಕು ಇರಬಹುದಾದರೂ ಮಗಳ ಹೆಣ್ತನ ಈ ಸೊಂಕುಗಳಿಂದ ಮುಕ್ತವಾದದು. ಅದರಲ್ಲೂ ಆಕೆ ಮಗುವಾಗಿದ್ದಾಗ ಅದು  ಇನ್ನಷ್ಟು ನಿಷ್ಕಲಂಕವಾದದು. ಹೆಂಡತಿ ಮತ್ತು ತಾಯಿಗಿಂತ ಭಿನ್ನ ನೆಲೆಯಲ್ಲಿ ಮತ್ತು ಪರ್ಯಾಯ ಪಾತ್ರದಲ್ಲಿ ಅರಳುವ ಮಗಳ ವ್ಯಕ್ತಿತ್ವವನ್ನು ಈ ಪದ್ಯ ಬಹು ಆಪ್ತವಾಗಿ ಕಟ್ಟಿ ಕೊಡಲು ಪ್ರಯತ್ನಿಸಿದೆ. ಇಷ್ಟಲ್ಲದೆ ಪುರುಷಲೋಕ ಹೆಣ್ಣ ಕುರಿತು ಕಟ್ಟಿಕೊಂಡಿರುವ ಪೂರ್ವಗ್ರಹಗಳನ್ನು ಕೂಡ. ಪುರುಷಪ್ರಧಾನ ನಿಲವುಗಳನ್ನು ಈ ಪದ್ಯ ಮಗಳ ಬಗ್ಗೆ ಹೇಳುತ್ತಲೇ ಅವುಗಳನ್ನು ನೇಗೇಟ್ ಮಾಡುವ ಪ್ರಯತ್ನವನ್ನು ಮಾಡುತ್ತದೆ.

ಮಗ ಮತ್ತು ಮಗಳ ನಡುವಣ ಸಾಮ್ಯವನ್ನು ಮೌನವಾಗಿ ಈ ಪದ್ಯ ಎತ್ತುತ್ತದೆ. ಕಳೆದುಹೋದ ಮುಗ್ಧತೆಯನ್ನು ಮತ್ತು ಉರುಳಿ ಹೋದ ಬಾಲ್ಯದ ನೆನಪನ್ನು  ಮಗನಿಗಿಂತ -ಮಗಳು ಮರಳಿ ಸಮೃದ್ಧವಾಗಿ ಸಜೀವಗೊಳಿಸಬಲ್ಲಳು. ಆಕೆಗೆ ಅಂತಹ ಸಮ್ಮೊಹಕ ಶಕ್ತಿಯಿದೆ. ಆಕೆ ತನ್ನ ಮುಗ್ಧತೆಯಲ್ಲಿಯೆ ತಂದೆಯ ಕಣ್ಣಿನ ಗಾಯಗಳಿಗೆ ಕನ್ನಡಿ ಹಿಡಿಯುವ ಪ್ರತಿಫಲನ ಗುಣ ಕೂಡ ಹೊಂದಿದ್ದಾಳೆ. ಪೊರೆವ ಪಾಲಕತ್ವದ  ಪ್ರತೀಕವಾಗಿದ್ದಾಳೆ ಮಗಳು. ಮಗನಿಗೆ ಈ ಗುಣಗಳನ್ನ ಅನ್ವಯಿಸಬಹುದೇ? ಪದ್ಯ ಅದನ್ನು ಪ್ರಸ್ತಾಪಿಸದೇ ತನ್ನ ಮೌನದಲ್ಲಿಯೇ ಅದಕ್ಕೆ ಉತ್ತರ ನೀಡಿದಂತಿದೆ.

ಹೆಣ್ಣು ಒಂದು ಜೀವ ನದಿ. ಅದರ ಹರಿವ-ಅರಳುವ -ವಾಪ್ತಗೊಳ್ಳುವ ಗುಣ ಆಕೆ ಜನಿಸಿದ ಗಳಿಗೆಯಿಂದಲೇ ಪ್ರಕಟಗೊಂಡು ಮುಂದೆ ಅದರ ಸಂಪರ್ಕಕ್ಕೆ ಬಂದವರನ್ನೆಲ್ಲಾ ತನ್ನ ತೆಕ್ಕೆಗೆ ಎತ್ತಿಕೊಂಡು ಸಾಗುತ್ತದೆ. ತನ್ನ ತಂದೆಯನ್ನೆ ಮಗಳು ತಾಯಿಯಂತೆ ಪೊರೆವ ಗುಣ ಹೆಣ್ಣಿಗೆ ಮಾತ್ರ ಸಾಧ್ಯವಿದೆ. ಹೆಣ್ಣಿಗಿರುವ ಈ ಆ‌ರ್ಯೆಕೆ, ಗಂಡಿನ ಬದುಕಿನಲ್ಲಿ ಆಕೆ ತರುವ ಸ್ಥಾನ ಪಲ್ಲಟಗಳನ್ನು ಸ್ಮರಿಸುವ ಧನ್ಯತೆ ಈ ಪದ್ಯದ ಸೊಗಸು.

ಹೆಣ್ಣುಕೂಸೊಂದು ಹುಟ್ಟಿದ ಕೂಡಲೆ ಆಗುವ ಈ ಧನ್ಯಾತ್ಮಕ ಬದಲಾವಣೆಗಳನ್ನು ಮಂಡಿಸುತ್ತಲೇ ಈ ಪದ್ಯ ನಮ್ಮ ಪುರುಷ ಪ್ರಧಾನ ಸಮಾಜ `ಹೆಣ್ಣು ಕೂಸಿನ' ಜನನದ ಕುರಿತು  ಇಟ್ಟುಕೊಂಡಿರುವ ಸೂತಕ ಕಲ್ಪನೆಗಳನ್ನು, ಮೂಢನಂಬಿಕೆಗಳನ್ನು, ಜಡಗ್ರಹಿಕೆಗಳನ್ನು ಭಂಜಿಸುವ ಪ್ರಯತ್ನ ಮಾಡುತ್ತದೆ. `ಗಂಡಸಿನ' ಸರ್ವಋತುಗಳನ್ನು ಸಮ್ಮೊಹಕ ನೆಲೆಗೊಯ್ಯುವ ಶಕ್ತಿ ಹೆಣ್ಣಿಗಿದೆ ಎಂದೂ ಈ ಪದ್ಯ ನಮಗೆ ಮನಗಾಣಿಸುತ್ತದೆ.

ಇಷ್ಟಾಗಿಯೂ ಖ್ಯಾತ ಸ್ತ್ರೀವಾದಿ ಲೇಖಕಿ ಮೇರಿ ಈಗಲ್ಟನ್ ಎನ್ನುವ ಲೇಖಕಿ ಹೇಳುವ ಹಾಗೆ `ಪ್ರತಿಯೊಂದು ಪಠ್ಯವನ್ನು ಕೃತಿಕಾರನ ಲಿಂಗ ನಿರ್ಧರಿಸುತ್ತದೆ' ಎನ್ನುವಂತೆ ಈ ಕವಿತೆಯ ಕವಿ ಹೆಣ್ಣನ್ನು ಪುರುಷ ಪಾರಮ್ಯದ ನೆಲೆಯಲ್ಲಿ ನಿರ್ವಹಿಸುವ ಚೌಕಟ್ಟಿಗೆ ಸಿಲುಕಿಕೊಂಡಿದ್ದಾನೆ ಎಂದೂ ಕೂಡ ಇಡೀ ಪದ್ಯ ಓದಿದ ಮೇಲೆ ಅನ್ನಿಸಲೂ ಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT