ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನ ಶಿಬಿರವೆಂಬ ಅನುಭವ ಮಂಟಪ

Last Updated 17 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

‘ಸಾರ್, ನೀವು ಮೂವತ್ತೈದು ಕೊಟ್ಟು ನನ್ನನ್ನು ಪಾಸು ಮಾಡದಿದ್ದರೆ ನೀವೇ ಫೇಲ್.....’
ತಮ್ಮ ಪಾಲಿನ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕರೊಬ್ಬರು ದಿಢೀರನೆ ಹಾಗೊಂದು ಒಕ್ಕಣೆಯನ್ನು ಓದಿದ್ದರು. ಅವರಿದ್ದ ತಂಡ ಮಾತ್ರವಲ್ಲ ಆರೇಳು ತಂಡಗಳಿದ್ದ ಇಡೀ ಕೊಠಡಿ ನಗೆಗಡಲಿನಲ್ಲಿ ತೇಲಿತ್ತು. ತಾಸಿನೊಳಗೆ ಇಡೀ ಮೌಲ್ಯಮಾಪನ ಶಿಬಿರಕ್ಕೆ ಸುದ್ದಿ ಹರಡಿ ಎಲ್ಲರನ್ನೂ ನಗಿಸಿ ಹಗುರಾಗಿಸಿತ್ತು. ನಾಲ್ಕು-ನಾಲ್ಕೂವರೆ ದಶಕಗಳ ಹಿಂದೆ ನಾನಾ ಪರೀಕ್ಷೆಯ ಉತ್ತರಪತ್ತಿಕೆಗಳನ್ನು ಆಯಾ ವಿಷಯಗಳ ಶಿಕ್ಷಕರಿಗೆ ವಿಶ್ವವಿದ್ಯಾನಿಲಯ, ಶಿಕ್ಷಣ ಇಲಾಖೆ ವಿತರಿಸಿ ಅವರವರ ಮನೆಗಳಲ್ಲೇ ಎಲ್ಲ ಬಗೆಯ ಭದ್ರತೆ, ಗೌಪ್ಯತೆ ಕಾಪಾಡಿಕೊಂಡು ಮೌಲ್ಯಮಾಪನ ಮಾಡಿ ಇಂಥಹ ದಿನಾಂಕದೊಳಗೆ ಹಿಂದಿರುಗಿಸುವಂಥಹ ವ್ಯವಸ್ಥೆಯಿತ್ತು. ಈಗ ಕೇಂದ್ರೀಯ ಮೌಲ್ಯಮಾಪನ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಶಿಕ್ಷಕರು ನಿಗದಿತ ತಾಣಗಳಿಗೆ ಬಂದು ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕು. ಸರಾಸರಿ ಎರಡು ವಾರಗಳ ನಿರಂತರ ಯಜ್ಞ. ದಿನಕ್ಕೆ ಇಪ್ಪತ್ತ್ನಾಲ್ಕು ಉತ್ತರಪತ್ರಿಕೆಗಳಿಗೆ ಹೆಚ್ಚಿಲ್ಲದಂತೆ ಮಾಪನ. ಕಾರಣ, ಉತ್ತರಗಳನ್ನು ಸಾವಧಾನವಾಗಿ ಅವಲೋಕಿಸಿ ತಾನೆ ಅಂಕ ನೀಡಬೇಕು. ಎಸ್.ಎಸ್.ಎಲ್.ಸಿ./ಪಿ.ಯು.ಸಿ. ನಿಟ್ಟಿನಲ್ಲಂತು ಈ ಅಂಶಕ್ಕೆ ವಿಶೇಷ ಪ್ರಾಮುಖ್ಯತೆ.

ಮೌಲ್ಯಮಾಪನದಾಚೆಗೂ ಮೌಲ್ಯಮಾಪನ ಶಿಬಿರಕ್ಕೆ ಅದರದೆ ಆದ ಮಹತ್ವವಿದೆ. ಶಿಕ್ಷಕರೆಲ್ಲ ಹತ್ತು-ಹನ್ನೆರಡು ದಿನಗಳವರೆಗೆ ಅಲ್ಲಿ ಕಲೆಯುವುದರಿಂದ ಅಯಾಚಿತವಾಗಿ ಬಗೆಬಗೆ ಶೈಕ್ಷಣಿಕ ವಿಚಾರಗಳ ಕುರಿತು ಚರ್ಚೆ, ಲೋಕಾಭಿರಾಮ ಸಾಗಿರುತ್ತದೆ. ಉತ್ತರಗಳನ್ನು ಪರಿಶೀಲಿಸುವಾಗ ಅರೆ! ಹೀಗೂ ಪ್ರಶ್ನೆಗೆ ಉತ್ತರಿಸಬಹುದಲ್ಲ ಅಂತ ಒಂದು ಅಭಿಪ್ರಾಯ ಬಂದರೆ ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು ಅದು ಹೇಗೆ ಸಾಧ್ಯ ಪರೀಕ್ಷಾರ್ಥ ಏನು ಸಾಧಿಸಬೇಕೊ ಅದನ್ನೇ ಆಧಾರವಾಗಿಟ್ಟುಕೊಂಡು ಉತ್ತರಿಸಿದ್ದಾನೆ(ಳೆ) ಎನ್ನುವರು, ಒಟ್ಟಾರೆ ಅಲ್ಲೊಂದು ಮಂಥನವೇ ನಡೆದಿರುತ್ತದೆ.
 
ವಾದ ವಾದದಿಂದ ತತ್ತ್ವ ಬೋಧನೆಯಾಗುತ್ತದೆಯಂತೆ. ಪಠ್ಯ, ಬೋಧನಾಶೈಲಿಯ ಸುಧಾರಣೆಯ ಸಾಧ್ಯತೆಗಳು, ಇತ್ತೀಚೆಗೆ ಬಿಡುಗಡೆಯಾದ ಖ್ಯಾತ ಲೇಖಕರ ಆಕರ ಗ್ರಂಥಗಳು, ಪ್ರಶ್ನೆಪತ್ರಿಕೆಯ ಸ್ವರೂಪದಲ್ಲಿ ಮಾರ್ಪಾಡುಗಳು, ವಿದ್ಯಾರ್ಥಿಗಳು ಆಯಾ ಅಧ್ಯಾಯಗಳನ್ನು ಗ್ರಹಿಸುವಲ್ಲಿ ಪಡಬಹುದಾದ ಬವಣೆಗಳು ಹೀಗೆ ಹತ್ತು ಹಲವು ಸಂಗತಿಗಳು ಸಂವಾದ ರಥ ಏರಿರುತ್ತವೆ. ಶಾಲಾ ಕಾಲೇಜುಗಳಲ್ಲಿನ ಪಠ್ಯೇತರ ಚಟುವಟಿಕೆಗಳಿಗೂ ಉಭಯಶಕುಶಲೋಪರಿಯ ಸ್ಪರ್ಶ. ಕ್ರೀಡೆ, ಎನ್.ಸಿ.ಸಿ, ಸ್ಕೌಟ್, ಪ್ರತಿಭಾ ಪ್ರದರ್ಶನ.... ಎಲ್ಲದರ ಬಗ್ಗೆ ಸಹಚಿಂತನೆ.
ಹಿರಿಯ ಅನುಭವಿ ಶಿಕ್ಷಕರು ಕಿರಿಯರಿಗೆ ಆಗಾಗ ನೀಡುವ ಸಲಹೆ, ಮಾರ್ಗದರ್ಶನದಲ್ಲಿ ವಿನೋದ, ಮೊನಚು ಇಣುಕಿಬಿಡುವುದುಂಟು. ತನ್ಮೂಲಕ ಅವರ ಕಿವಿಮಾತುಗಳು ಇನ್ನಷ್ಟು ಪ್ರಖರವಾಗಿ ಕಿರಿಯರಿಗೆ ಸಲ್ಲುತ್ತವೆ. ಉತ್ತರ ಪತ್ರಿಕೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು. ಅಂಕಗಳನ್ನು ನೀಡುವಾಗ ವಿಶೇಷ ಎಚ್ಚರ ಅತ್ಯಗತ್ಯ. ತಿಳಿಹಾಸ್ಯದಲ್ಲಿ ಜಾಣ್ನುಡಿಗಳು ಹೀಗಿದ್ದರೆ ಎಷ್ಟು ಸೊಗಸು ನೋಡಿ ಅಣಕವಾಡುಗಳಾಗಿ;

‘ಅಂಕವ ನೀಡಿದರೆ ರಿವ್ಯೆವರ್ ಮೆಚ್ಚಿ
ಅಹುದಹುದೆನ್ನಬೇಕು’
‘ಉತ್ತರಪತ್ರಿಕೆಯೊಳಗೆ ಅಂಕವ
ನಮೂದಿಸಿ
ಹೊರಗೆ ಮರೆತರೆ
ಮೌಲ್ಯಮಾಪನದೇವ ಎಂಥೊಲಿವನಯ್ಯ’
‘ಸಹನೆಯೆ ಮೌಲ್ಯಮಾಪನದ ಮೂಲವಯ್ಯ’
‘ಮೌಲ್ಯಮಾಪನದಲಿ ತೊಡಗಿ
ಓದಲಾಗದ ಉತ್ತರಕೆ
ಚಿತ್ರವಿಚಿತ್ರ ಮೊರೆತ ಕೊರೆತಕ್ಕೆ
ಬೇಸರಿಸಿದರೆಂಥಯ್ಯ’

ಅಂತು ಇಂತು ವಿದಾಯದ ದಿನ ಬಂದೇ ಬಿಡುತ್ತದೆ. ಗಳಿಗೆ ತಾಳು ಎನ್ನಲಾದೀತೆ ಕಾಲಪುರುಷನಿಗೆ! ಇಷ್ಟು ದಿನ ಎಷ್ಟು ಪಸಂದಿತ್ತು. ಹೊರಡಲೇಬೇಕಲ್ಲ ಇಂದು ಈ ಅನುಭವಮಂಟಪದಿಂದ. ಮತ್ತೆ ಕಾಣೋಣ ಹೀಗೆ ನಮ್ಮ-ನಿಮ್ಮ ವಿದ್ಯಾರ್ಥಿಗಳ ಉತ್ತರಗಳ ಸಮ್ಮುಖದಲ್ಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT