ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ತಂದ ಬಿಕ್ಕಟ್ಟು: ಪರಿಹಾರಕ್ಕೆ ವರಿಷ್ಠರ ಚಿಂತನೆ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ರಾಜಕೀಯ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಠರು ಸದ್ಯದಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತಿತರ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಬಿಕ್ಕಟ್ಟು ಬಗೆಹರಿಸುವ ಸಾಧ್ಯತೆಯಿದೆ.

ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಹಿರಿಯ ಮುಖಂಡರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್‌ಸಿಂಗ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಒಲವು ತೋರಿದ್ದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಮತ್ತಿತರ ನಾಯಕರಿಗೆ ಕರೆ ಕಳುಹಿಸುವ ಸಂಭವವಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಮುಖ್ಯಮಂತ್ರಿ ಗದ್ದುಗೆ ಹಿಡಿಯಲು ಮತ್ತೆ ಪ್ರಯತ್ನ ಆರಂಭಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಬಿಕ್ಕಟ್ಟು ತಲೆದೋರಿದೆ. `ಈ ತಿಂಗಳ 16ರೊಳಗೆ ನಾಯಕತ್ವ ಬದಲಾವಣೆ ಮಾಡದಿದ್ದರೆ ಮುಂದಿನ ದಾರಿ ಹಿಡಿಯಬೇಕಾಗುತ್ತದೆ~ ಎಂದು ಯಡಿಯೂರಪ್ಪ ಗಡುವು ನೀಡಿದ್ದಾರೆ. ಇದರಿಂದಾಗಿ ಹೈಕಮಾಂಡ್‌ಒತ್ತಡಕ್ಕೆ ಸಿಕ್ಕಿದೆ.

ಸಾರಿಗೆ ಸಚಿವ ಆರ್. ಅಶೋಕ್ ಮೂರು ದಿನಗಳಿಂದ ರಾಜಧಾನಿಯಲ್ಲಿ ತಂಗಿದ್ದು, ಗುರುವಾರ ಬಿಜೆಪಿ ವರಿಷ್ಠರು ಹಾಗೂ ಆರ್‌ಎಸ್‌ಎಸ್ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದರು.

`ರಾಜ್ಯದ ವಿದ್ಯಮಾನಗಳು ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಮಾಡುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಂಡರೆ ಆಗುವ ಹಾನಿಯನ್ನು ಸರಿಪಡಿಸುವುದು ಕಷ್ಟ. ಪರಿಸ್ಥಿತಿ  ಕೈಮೀರುವ ಮೊದಲು ಬಿಕ್ಕಟ್ಟು ಪರಿಹರಿಸಿ~ ಎಂದು ಮನವಿ ಮಾಡಿದ್ದಾರೆ. ಸಚಿವರಿಂದ ಎಲ್ಲ ಮಾಹಿತಿ ಪಡೆದಿರುವ ವರಿಷ್ಠರು ತ್ವರಿತವಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

`ರಾಜ್ಯದಲ್ಲಿ ಗುಂಪುಗಾರಿಕೆ ಮುಂದುವರಿಯಲು ಬಿಡಬಾರದು. 16ರ ಒಳಗೆ ಸಮಸ್ಯೆಗೆ ಪರಿಹಾರ ಸೂಚಿಸದಿದ್ದರೆ ರೆಸಾರ್ಟ್ ರಾಜಕಾರಣ ಆರಂಭವಾಗಬಹುದು. ಇದು ಒಳ್ಳೆ ಬೆಳವಣಿಗೆ ಅಲ್ಲ ಎಂದು ಎಚ್ಚರಿಸಿದ್ದಾರೆ. `ನೀವು (ವರಿಷ್ಠರು) ಬೆಂಗಳೂರಿಗೆ ಬಂದರೆ ಬಿಕ್ಕಟ್ಟು ದೊಡ್ಡದಾಗಿ ಬಿಂಬಿತವಾಗುವ ಅಪಾಯವಿದೆ. ಬದಲಿಗೆ ಎಲ್ಲರನ್ನು ದೆಹಲಿಗೇ ಕರೆಸಿಕೊಂಡು ಮಾತುಕತೆ ನಡೆಸಿ ಎಂಬ ಸಲಹೆ ಕೊಟ್ಟಿದ್ದಾರೆ. ಈ ಸಲಹೆಗೆ ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ~ ಎಂದು ಮೂಲಗಳು ಹೇಳಿವೆ.

`ಯಡಿಯೂರಪ್ಪ ಪ್ರಭಾವಿ ನಾಯಕರು. ಅವರಿಗೆ ವೀರಶೈವ ಸಮುದಾಯದ ಬೆಂಬಲವಿದೆ. ಅವರನ್ನು ಪಕ್ಷ ಮತ್ತು ಸರ್ಕಾರದಿಂದ ಹೊರಗಿಟ್ಟರೆ ಅಪಾಯ. ಯಾವುದಾದರೂ ಜವಾಬ್ದಾರಿ ಕೊಡಿ. ಯಾವ ಸ್ಥಾನಮಾನ ನೀಡಬೇಕೆಂದು ನಿಮ್ಮ ತೀರ್ಮಾನಕ್ಕೆ ಬಿಟ್ಟಿದ್ದು~ ಎಂದು ಹೈಕಮಾಂಡ್‌ಗೆ ಹೇಳಿದರೆನ್ನಲಾಗಿದೆ.
 
ಯಡಿಯೂರಪ್ಪ ಅವರನ್ನು ಮೊದಲಿಂದ ವಿರೋಧ ಮಾಡುತ್ತಿರುವ ಪಕ್ಷದ ಅತ್ಯಂತ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿ ಮಾಡುವ ತಂಟೆಗೆ ಅಶೋಕ್ ಹೋಗಿಲ್ಲ.

`ನಾನು ರಾಜ್ಯದ ಪರಿಸ್ಥಿತಿಯನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿದ್ದೇನೆ. ಯಾವುದೇ ಗುಂಪಿನ ಪ್ರತಿನಿಧಿಯಾಗಿ ದೆಹಲಿಗೆ ಬಂದಿಲ್ಲ~ ಎಂದು ಪತ್ರಕರ್ತರಿಗೆ ತಿಳಿಸಿದ ಅಶೋಕ್, ಮಾತುಕತೆ ವಿವರ ಬಹಿರಂಗಪಡಿಸಲು ನಿರಾಕರಿಸಿದರು.

`ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರ ನಾಯಕತ್ವ ಪ್ರಶ್ನಾತೀತ. ರಾಜ್ಯದ ನಾಯಕತ್ವ (ಪಕ್ಷ ಹಾಗೂ ಸರ್ಕಾರ) ಬದಲಾವಣೆ ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು~ ಎಂದು ತಿಳಿಸಿದರು.

`ಪಕ್ಷದ ಆಂತರಿಕ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲಾಗದು. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಇದಕ್ಕೆ ಸಮಯದ ಗಡುವಿಲ್ಲ. ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಹಿರಿಯ ನಾಯಕರ ಸಲಹೆ- ಸಹಕಾರ ಕೇಳಲಾಗಿದೆ~ ಎಂದರು. ಇದಕ್ಕೂ ಮುನ್ನ ಅಶೋಕ್ `ಆಟೋ ಎಕ್ಸ್‌ಪೊ~ದಲ್ಲಿ ಪ್ರದರ್ಶನವಾಗುತ್ತಿರುವ ನವನವೀನ ವಾಹನಗಳನ್ನು ವೀಕ್ಷಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT