ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ವಿರುದ್ಧ ಸಿಬಿಐ ಆರೋಪ ಪಟ್ಟಿ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರೂ. 20 ಕೋಟಿ ದೇಣಿಗೆ

ನವದೆಹಲಿ:
ಪ್ರತಿಷ್ಠಿತ ಉಕ್ಕು ಕಂಪೆನಿಯೊಂದಕ್ಕೆ ಲಾಭ ಮಾಡಿಕೊಡಲು ತಮ್ಮ ಕುಟುಂಬ ಒಡೆತನದ ಟ್ರಸ್ಟ್‌ಗೆ ರೂ. 20 ಕೋಟಿ ದೇಣಿಗೆ ಪಡೆದ ಆರೋಪಕ್ಕೊಳಗಾಗಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಮಂಗಳವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಹತ್ತು ಸಾವಿರ ಪುಟಗಳ ದೋಷಾರೋಪ ಪಟ್ಟಿ, 11 ಸಾಕ್ಷಿಗಳ ಹೇಳಿಕೆ ಹಾಗೂ 501ದಾಖಲೆಗಳನ್ನು ಒಳಗೊಂಡಿದೆ. ಯಡಿಯೂರಪ್ಪ, ಅವರ ಪುತ್ರ ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ.ರಾಘವೇಂದ್ರ, ಮತ್ತೊಬ್ಬ ಪುತ್ರ ಬಿ.ವೈ.ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್ ಕುಮಾರ್, ಪ್ರತಿಷ್ಠಿತ ಜೆಎಸ್‌ಡಬ್ಲ್ಯು ಕಂಪೆನಿಯ ಸಜ್ಜನ್ ಜಿಂದಾಲ್, ಮುಖ್ಯ ಕಾರ್ಯನಿರ್ವಾಹಕ  ವಿನೋದ್ ನೊವಲ್, ಹಿರಿಯ ಉಪಾಧ್ಯಕ್ಷ ವಿಕಾಸ್ ಶರ್ಮ ಮತ್ತಿತರರನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಬೆಂಗಳೂರು ಹೊರವಲಯದಲ್ಲಿ ರಾಘವೇಂದ್ರ, ವಿಜಯೇಂದ್ರ, ಸೋಹನ್ ಕುಮಾರ್ ರಾಜ್ಯ ಸರ್ಕಾರ ಸ್ವಾಧೀನ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದ್ದ ಭೂಮಿಯನ್ನು ಕಾನೂನು ಬಾಹಿರವಾಗಿ 2009-10ರಲ್ಲಿ ರೂ.  40 ಲಕ್ಷಕ್ಕೆ ಖರೀದಿಸಿದರು. ಯಡಿಯೂರಪ್ಪ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಜಮೀನನ್ನು ಸ್ವಾಧೀನ ವ್ಯಾಪ್ತಿಯಿಂದ ಕೈಬಿಟ್ಟರು. ಬಳಿಕ ಅದನ್ನು ರೂ. 20 ಕೋಟಿಗೆ `ಜೆಎಸ್‌ಡಬ್ಲ್ಯು~ ಗುಂಪಿನ `ಸೌತ್‌ವೆಸ್ಟ್ ಕಂಪೆನಿ~ಗೆ ಮಾರಾಟ ಮಾಡಲಾಯಿತು.

ಸ್ವಾಧೀನ ಪ್ರಕ್ರಿಯೆ ವ್ಯಾಪ್ತಿಯಿಂದ ಕೈಬಿಟ್ಟ ಜಮೀನಿನ ಮಾರ್ಗಸೂಚಿ ಬೆಲೆ ಕೇವಲ ರೂ.  1.5 ಕೋಟಿ. ಆದರೆ, ಅದನ್ನು ಮಾರಾಟ ಮಾಡಿದ್ದು ರೂ. 20 ಕೋಟಿಗೆ. ಜಮೀನು ಮಾರಾಟದ ನೆಪದಲ್ಲಿ ಮಾಜಿ ಮುಖ್ಯಮಂತ್ರಿ ಕುಟುಂಬ ಭಾರಿ ಲಂಚ ಪಡೆದಿದೆ ಎಂದು ತನಿಖಾ ದಳ ಆರೋಪಿಸಿದೆ.

ಅನೇಕ ಕಾಯ್ದೆ- ಕಟ್ಟಳೆಗಳನ್ನು ಉಲ್ಲಂಘಿಸಿ ಜಮೀನು ಮಾರಾಟ ವ್ಯವಹಾರ ನಡೆಸಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. `ಜೆಎಸ್‌ಡಬ್ಲ್ಯು~ ಸರ್ಕಾರಿ ಸ್ವಾಮ್ಯದ ಎಂಎಂಎಲ್ ಜತೆಗೂಡಿ ನಡೆಸಿದ ಗಣಿಗಾರಿಕೆ ಜಂಟಿ ವ್ಯವಹಾರದಿಂದ ಬೊಕ್ಕಸಕ್ಕೆ ಆದ ರೂ. 890 ಕೋಟಿ ನಷ್ಟವನ್ನು ತನ್ನಿಂದ ವಸೂಲು ಮಾಡಬಾರದೆಂಬ ಉದ್ದೇಶದಿಂದ ಉಕ್ಕು ಕಂಪೆನಿ ಯಡಿಯೂರಪ್ಪ ಕುಟುಂಬಕ್ಕೆ ರೂ.  20 ಕೋಟಿ ಸಂದಾಯ ಮಾಡಿದೆ.

ಈ ಹಣವನ್ನು ಸೋದರ ಕಂಪೆನಿಗಳಿಂದ ಯಡಿಯೂರಪ್ಪ ಕುಟುಂಬ ನಡೆಸುತ್ತಿರುವ ಪ್ರೇರಣಾ ಶಿಕ್ಷಣ ಟ್ರಸ್ಟ್‌ಗೆ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ. ಐಪಿಸಿ ಕಲಂ 120 (ಬಿ), 109, 420, 468, 471 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 7, 9, 11,12, 13/1, 13/2 ಅಡಿ ಅರೋಪಗಳನ್ನು ಮಾಡಲಾಗಿದೆ. ಸಿಬಿಐ ಎಸ್‌ಪಿ ಸುಬ್ರಮಣ್ಯೇಶ್ವರ ರಾವ್ ಈ ದಾಖಲೆ ಸಲ್ಲಿಸಿದರು.

ಯಡಿಯೂರಪ್ಪ ವಿರುದ್ಧ ಸಿಬಿಐ ದಾಖಲು ಮಾಡಿರುವ `ಎಫ್‌ಐಆರ್~ ರದ್ದು ಮಾಡಲು ಕೋರಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಪರ ವಕೀಲ ರಾಂ ಜೇಠ್ಮಲಾನಿ ನ್ಯಾಯಾಲಯಕ್ಕೆ ಕಳೆದ ವಾರ ಮನವಿ ಮಾಡಿದ್ದರು. ಮುಂದಿನ ತಿಂಗಳು ವಿಷಯ ಪ್ರಸ್ತಾಪಿಸುವಂತೆ ನ್ಯಾಯಾಲಯ ಹೇಳಿದೆ.


 

  
    
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT