ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಥಾಸ್ಥಿತಿಯ ಮುಂದುವರಿಕೆ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಆರ್ಥಿಕ ಸುಧಾರಣೆಯ ಗತಿಯನ್ನು ಮುಂದುವರಿಸಿದ್ದಾರೆ. ಅಭಿವೃದ್ಧಿ ದರ ಎರಡಂಕಿಯನ್ನು ಮುಟ್ಟುವುದಕ್ಕೆ ಸಾಂಸ್ಥಿಕ ಸುಧಾರಣೆಗಳಿಗೆ ಚಾಲನೆ ನೀಡಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಬಲಗೊಳ್ಳುವುದಕ್ಕೆ ಹಣಕಾಸು ಲಭ್ಯತೆಯ ಸಾಧ್ಯತೆಯನ್ನು ಹೆಚ್ಚಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ರಫ್ತು ಮತ್ತು ಆಮದು ಪ್ರಮಾಣದಲ್ಲಿ ಆಗಿರುವ ಹೆಚ್ಚಳದ ಹಿನ್ನೆಲೆಯಲ್ಲಿ ಬೆಳವಣಿಗೆಯ ದರ ಶೇ 9 ಮುಟ್ಟುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಯುಪಿಎ ಅಂಗಪಕ್ಷಗಳ ತಾತ್ವಿಕ ಒತ್ತಡ ಇಲ್ಲದಿದ್ದರೂ ಸರಕು ಮತ್ತು ಸೇವಾ ತೆರಿಗೆಯಂಥ ಏಕರೂಪದ ಕ್ರಮಗಳಿಗೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಆಕ್ಷೇಪದ ಕಾರಣ ಹಿನ್ನಡೆಯಾಗಿದೆ. ಈ ಸಂಬಂಧದ ಸಂವಿಧಾನ ತಿದ್ದುಪಡಿ ಈ ಸಾಲಿನಲ್ಲಿ ಮಂಡನೆಯಾಗಲಿದ್ದು ಆರ್ಥಿಕ ಸುಧಾರಣೆಗೆ ಮೂಲವಾದ ನೇರ ತೆರಿಗೆ ಸಂಹಿತೆ ಹಾಗೂ ಏಕರೂಪದ ಸರಕು ಮತ್ತು ಸೇವಾ ತೆರಿಗೆ ಮುಂದಿನ ಸಾಲಿನಿಂದ ಅನುಷ್ಠಾನಗೊಳ್ಳುವ ನಿರೀಕ್ಷೆ ಮೂಡಿದೆ.

ವೈಯಕ್ತಿಕ ಆದಾಯ ತೆರಿಗೆ ಸ್ವರೂಪದಲ್ಲಿ ನಿರೀಕ್ಷಿಸಿದ ವಿನಾಯಿತಿಗಳು ಸಿಕ್ಕಿಲ್ಲ. ಆದಾಯ ತೆರಿಗೆಗೆ ಒಳಪಡುವ ಕನಿಷ್ಠ ಮಿತಿಯನ್ನು 20 ಸಾವಿರ ರೂಪಾಯಿಯಷ್ಟು ಹೆಚ್ಚಿಸಿರುವುದರಿಂದ ಬಹುಸಂಖ್ಯೆಯ ಸಣ್ಣ ವೇತನದಾರರು ತೆರಿಗೆ ವ್ಯಾಪ್ತಿಯಿಂದ ಮುಕ್ತವಾಗಲಿರುವುದು ಆ ವರ್ಗಕ್ಕೆ ಸಮಾಧಾನ ತರುವ ಅಂಶ.

ಹಿರಿಯ ನಾಗರಿಕರ ಅರ್ಹತಾ ವಯಸ್ಸನ್ನು 60 ವರ್ಷಕ್ಕೆ ಇಳಿಸಿರುವುದು ಮತ್ತು 80 ಮೀರಿದ ಅತ್ಯಂತ ಹಿರಿಯ ನಾಗರಿಕರಿಗೆ ಐದು ಲಕ್ಷದವರೆಗಿನ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿರುವುದೂ ಗಮನಾರ್ಹ ಅಂಶ. ಅಂಗನವಾಡಿ ಕಾರ್ಯಕರ್ತರಿಗೆ ಗೌರವ ಧನ ಹೆಚ್ಚಳ ತಾತ್ಕಾಲಿಕ ಪರಿಹಾರದ ಇನ್ನೊಂದು ಕ್ರಮ. ಬಡತನದ ರೇಖೆಯ ಕೆಳಗಿರುವವರಿಗೆ ಸೀಮೆಎಣ್ಣೆ, ಆಹಾರಧಾನ್ಯಕ್ಕೆ ಈಗ ನೀಡುತ್ತಿರುವ ಸಹಾಯಧನವನ್ನು ನೇರವಾಗಿ ನಗದಿನ ರೂಪದಲ್ಲಿ ನೀಡುವ ಯೋಜನೆ ಮುಂದಿನ ವರ್ಷದಿಂದ ಚಾಲನೆಗೆ ಬರುವ ಪ್ರಸ್ತಾಪ, ನೈಜ ಬಡವರನ್ನು ಗುರುತಿಸುವುದರಲ್ಲಿ ಆಡಳಿತ ವ್ಯವಸ್ಥೆಯ ಲೋಪ ಮತ್ತು ಪಡಿತರ ವ್ಯವಸ್ಥೆಯ ದುರುಪಯೋಗದ ಪರಿಣಾಮ. ಹಣದುಬ್ಬರ ನಿಯಂತ್ರಣಕ್ಕೆ ರಿಜರ್ವ್ ಬ್ಯಾಂಕ್‌ನಿಂದ ಆಡಳಿತಾತ್ಮಕ ಕ್ರಮಗಳನ್ನು ನಿರೀಕ್ಷಿಸಿರುವ ಹಣಕಾಸು ಸಚಿವರು, ಆಹಾರ ಹಣದುಬ್ಬರ ಎರಡಂಕಿಯಿಂದ ಒಂದಂಕಿಗೆ ಇಳಿದಿದ್ದರೂ ಆತಂಕದಿಂದ ಮುಕ್ತವಾಗಿಲ್ಲ. ಆಹಾರ ವಲಯದಲ್ಲಿ ಬೆಲೆ ಸ್ಥಿರತೆಗೆ ಸಗಟು ಧಾರಣೆ ಮತ್ತು ಚಿಲ್ಲರೆ ಬೆಲೆಗಳಲ್ಲಿನ ಅಗಾಧ ಅಂತರ ಕಡಿಮೆ ಮಾಡುವುದಕ್ಕೆ ಅವಶ್ಯಕವಾದ ಪಾರದರ್ಶಕ ವ್ಯವಹಾರವನ್ನು ಪ್ರತಿಪಾದಿಸಿದ್ದಾರೆ. ಇದು ಹೇಳಿದಷ್ಟು ಸುಲಭವಲ್ಲ ಎಂಬುದು ಅನುಭವಸಿದ್ಧವಾದ ಸಂಗತಿ.

ಗ್ರಾಮೀಣ ಆರ್ಥಿಕತೆಯ ಸುಧಾರಣೆಗೆ ಪ್ರಕಟಿಸಿದ ಹಲವು ಯೋಜನೆಗಳು ಆಕರ್ಷಕವಾಗಿವೆ. ಗ್ರಾಮೀಣ ವಸತಿ ನಿರ್ಮಾಣ ನಿಧಿ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಮಳೆಯಾಶ್ರಿತ 60 ಸಾವಿರ ಹಳ್ಳಿಗಳಲ್ಲಿ ಬೇಳೆ ಕಾಳು ಬೆಳೆಯಲು ಉತ್ತೇಜನ, ತರಕಾರಿ ಬೆಳೆಯಲು ಪ್ರೋತ್ಸಾಹ ಮೊದಲಾದವುಗಳಿಗೆ ಪ್ರತ್ಯೇಕ ಹಣ ನಿಗದಿಪಡಿಸಿದ್ದಲ್ಲದೆ, ರೈತರಿಗೆ ಸಾಲ ನೀಡಲು 4.75 ಲಕ್ಷ ಕೋಟಿ ಮೀಸಲಿಟ್ಟಿರುವುದು  ಪ್ರಯೋಜನಕಾರಿ.

ಅವಧಿಯಲ್ಲಿ ತೀರಿಸುವ ಕೃಷಿ ಸಾಲಕ್ಕೆ ಬಡ್ಡಿಯಲ್ಲಿ ರಿಯಾಯಿತಿಯೂ ಇನ್ನೊಂದು ಆಕರ್ಷಕ ಕ್ರಮ. ಉದ್ಯಮ ವಲಯಕ್ಕೆ ಅಗತ್ಯ ಹಣ ಒದಗಿಸಲು ಖಾಸಗಿ ಬ್ಯಾಂಕುಗಳಿಗೆ ಅನುಮತಿ ನೀಡುವ ಪ್ರಸ್ತಾಪ ಕಳೆದ ವರ್ಷವೂ ಇತ್ತು. ಅದು ಈ ಸಲವೂ ಅದು ಮರು ಪ್ರಸ್ತಾಪವಾಗಿದೆ. ಕಪ್ಪುಹಣದ ಪಿಡುಗನ್ನು ಎದುರಿಸಲು ಐದು ಹಂತದ ಕಾರ್ಯತಂತ್ರದ ಅವಶ್ಯಕವೆಂದಿರುವ ಹಣಕಾಸು ಸಚಿವರು ಭ್ರಷ್ಟಾಚಾರದ ಸಮಸ್ಯೆಯನ್ನು ಎದುರಿಸಲು ಸಚಿವರ ತಂಡದ ಸಲಹೆಗಳನ್ನು ನಿರೀಕ್ಷಿಸಿದ್ದಾರೆ.

ಭ್ರಷ್ಟಾಚಾರದ ಸಮಸ್ಯೆಯನ್ನು ಒಟ್ಟಾಗಿ ಎದುರಿಸಬೇಕು ಎಂದು ಹೇಳಿರುವ ಹಣಕಾಸು ಸಚಿವರು ಹೋರಾಟದ ಸ್ವರೂಪದ ಸುಳಿವನ್ನು ನೀಡಿಲ್ಲ. ಸಂಪನ್ಮೂಲ ಸಂಗ್ರಹಕ್ಕೆ ಷೇರು ವಿಕ್ರಯದಿಂದ 40 ಲಕ್ಷ ಕೋಟಿಯ ಗುರಿ, ಸಾರ್ವಜನಿಕ ಉದ್ಯಮಗಳಿಂದ ತೆರಿಗೆ ವಿನಾಯಿತಿಯ ಬಾಂಡ್ ಬಿಡುಗಡೆಯಂಥ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಜನಸಾಮಾನ್ಯರ ನಿತ್ಯದ ಬದುಕಿನಲ್ಲಿ ಎದುರಾಗಿರುವ ಬೆಲೆ ಏರಿಕೆಯ ತಡೆಗೆ ಕಠಿಣಕ್ರಮಗಳನ್ನೇನೂ ಸೂಚಿಸದ ಬಜೆಟ್, ಯಥಾಸ್ಥಿತಿಯ ಮುಂದುವರಿಕೆಗೆ ಒತ್ತು ನೀಡಿದೆ. ಉದ್ಯಮ, ಕೃಷಿ ಮತ್ತು ಸೇವಾ ಕ್ಷೇತ್ರಗಳಿಗೆ ಹೆಚ್ಚಿನ ಹೊರೆಯನ್ನೇನೂ ವಿಧಿಸದೆ ಅಭಿವೃದ್ಧಿಯನ್ನು ನಿರೀಕ್ಷಿಸಿ ಎಲ್ಲ ವರ್ಗವನ್ನು ಸಂತುಷ್ಟಗೊಳಿಸುವ ಪ್ರಯತ್ನ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT