ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಡೋಣಾದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣ

Last Updated 11 ಏಪ್ರಿಲ್ 2011, 9:05 IST
ಅಕ್ಷರ ಗಾತ್ರ

ಲಿಂಗಸುಗೂರ: ತಾಲ್ಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಡೋಣಿ ಗ್ರಾಮದಲ್ಲಿ ಕಳೆದ 6 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಭಿನ್ನಾಭಿಪ್ರಾಯ ಮತ್ತಷ್ಟು ಕುಡಿಯುವ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣ ಎಂಬುದು ಸಾರ್ವಜನಿಕರ ಅಂಬೋಣವಾಗಿದೆ.

ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿತ್ತು. ಕಳೆದ 5ವರ್ಷಗಳ ಹಿಂದೆ ಖಾಸಗಿ ವ್ಯಕ್ತಿಯೋರ್ವರಿಂದ ವರ್ಷಕ್ಕೆ 15-20ಸಾವಿರ ಹಣ ನೀಡಿ ನೀರು ಪಡೆದುಕೊಳ್ಳಲಾಗುತ್ತಿತ್ತು. ಪ್ರತಿ ವರ್ಷ ರೂ. 5ಸಾವಿರ ಹಣ ಹೆಚ್ಚು ಮಾಡಿ ನೀಡುವುದು ಒಡಂಬಡಿಕೆ. ಆ ಒಡಂಬಡಿಕೆ ಪ್ರಕಾರ ಪ್ರಸಕ್ತ ವರ್ಷ 45ಸಾವಿರ ಹಣ ಪಾವತಿಸಬೇಕಿತ್ತು. ಆಡಳಿತ ಮಂಡಳಿ ಕೇವಲ 15 ಸಾವಿರ ಪಾವತಿಸಿರುವುದು ಸಮಸ್ಯೆಗೆ ಮೂಲ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಐದು ಜನ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿರುವ ಈ ಗ್ರಾಮದಲ್ಲಿ 2000ಕ್ಕೂ ಅಧಿಕ ಮನೆಗಳಿವೆ. ನಾಲ್ಕು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿಲ್ಲ. ಏಳು ಗ್ರಾಮಗಳಿಗಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ರಾಜೀವಗಾಂಧಿ ಟೆಕ್ನಾಲಾಜಿ ಯೋಜನೆ ಹಣ ದುರ್ಬಳಕೆಯಾಗಿ ಮಧ್ಯದಲ್ಲಿಯೆ ಸ್ಥಗಿತಗೊಂಡಿದ್ದರಿಂದ ಶುದ್ಧ ಕುಡಿಯುವ ನಿರಿನ ಕನಸು ನನಸಾಗುತ್ತಿಲ್ಲ ಎಂದು ಅಮರಪ್ಪ ದೂರಿದ್ದಾರೆ.

ತೆರೆದ ಭಾವಿಯಿಂದ ವಿದ್ಯುತ್ ಸಂಪರ್ಕ ಇದ್ದಾಗ ಮಾತ್ರ ಅಲ್ಪಸ್ವಲ್ಪ ನೀರು ಪೂರೈಸಲಾಗುತ್ತದೆ. ಜನತಾ ಕಾಲೊನಿಯ ಎರಡು ನಲ್ಲಿ ಹಾಗೂ ಪ್ರಾಥಮಿಕ ಶಾಲೆಯ ಸಿಸ್ಟರ್ನ್‌ದಲ್ಲಿ ಮಾತ್ರ ಆ ಸಂದರ್ಭದಲ್ಲಿ ನೀರು ತುಂಬಿಕೊಳ್ಳಬೇಕು. ವಿದ್ಯುತ್ ಸಂಪರ್ಕ ಇದೆ ಅಂದರೆ ಸಾಕು ಗ್ರಾಮದ ಎರಡು ಸ್ಥಳಗಳಲ್ಲಿ ಅವಾಚ್ಯ ಶಬ್ದಗಳ ಗರ್ಜನೆ, ಕೊಡಗಳ ಕಲರವ, ಕೈಕೈ ಮಿಲಾಯಿಸುವ ಸನ್ನಿವೇಶ ಸಾಮಾನ್ಯ. ಅದೆಷ್ಟೊ ಬಾರಿ ಪೊಲೀಸ್ ಠಾಣೆ ಕಟ್ಟೆ ಹತ್ತಿ ಬಂದಿರುವ ಉದಾಹರಣೆಗಳು ಸಾಕಷ್ಟು.

ಇಡಿ ಗ್ರಾಮದ ನೂರಾರು ಜನತೆ ಪೂರೈಕೆ ಯಾಗುವ ಜನತಾ ಕಾಲೋನಿಯ ಎರಡು ನಲ್ಲಿ, ಪ್ರಾಥಮಿಕ ಶಾಲೆಯ ಸಿಸ್ಟರ್ನ್ ಮುಂದೆ ಹಗಲು ರಾತ್ರಿ ಎನ್ನದೆ ದಿನಗಟ್ಟಲೆ ಖಾಲಿ ಕೊಡಗಳ ಸಮೇತ ಪಾಳಿಗೆ ಕುಳಿತುಕೊಳ್ಳಬೇಕಾಗಿ ಬಂದಿದೆ. ಕಳೆದ 6 ತಿಂಗಳಿಂದ ಸಮಸ್ಯೆ ಉಲ್ಬಣಗೊಳ್ಳುತ್ತ ಬಂದಿದ್ದರೂ  ಯಾವೊಬ್ಬ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಮಾಡಿಲ್ಲ. ಜಿಪಂ ಸದಸ್ಯ ಎಚ್.ಬಿ. ಮುರಾರಿ, ಬಿಜೆಪಿ ಮುಖಂಡರು ನೆಪಮಾತ್ರಕ್ಕೆ ಬಂದು ಹೋಗಿದ್ದಾರೆ ಎಂದು ಜನ  ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT