ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕದ ಪಿ.ಎನ್.ಪ್ರಕಾಶ್‌ಗೆ ಕಂಚು

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕದ ಪಿ.ಎನ್.ಪ್ರಕಾಶ್ ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಪ್ರಕಾಶ್ ಶನಿವಾರ ನಡೆದ 10ಮೀಟರ್ಸ್ ಏರ್ ಪಿಸ್ತೂಲು ಸ್ಪರ್ಧೆಯಲ್ಲಿ 180.2 ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಶ್ವಕೂಟದಲ್ಲಿ ಪದಕ ಗಳಿಸಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾದರು ಎಂದು ಪ್ರಕಾಶ್ ಅವರ ತಂದೆ ಪಾಪಣ್ಣ ಅವರು `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ಜಪಾನ್‌ನ ಟೊಮಯೂಕಿ ಮಟ್ಸುಡಾ 2010ರ ವಿಶ್ವಕಪ್‌ನ ಇದೇ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಈ ಸಲ ಪ್ರಕಾಶ್ ಅವರಿಗೆ ಟೊಮಯೂಕಿ ತೀವ್ರ ಪೈಪೋಟಿ ನೀಡಿದರಾದರೂ ಕೊನೆಗೆ 158.7 ಪಾಯಿಂಟ್ಸ್ ಗಳಿಸಲಷ್ಟೇ ಶಕ್ತರಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಈ ಸ್ಪರ್ಧೆಯಲ್ಲಿ ವಿಯಟ್ನಾಮ್‌ನ ವಿನ್ ಹೊಂಗ್ 200.8 ಪಾಯಿಂಟ್‌ಗಳೊಂದಿಗೆ ಚಿನ್ನದ ಪದಕ ಗೆದ್ದರೆ, ಚೀನಾದ ವಾಂಗ್ ಜೀವಿ 200.1 ಪಾಯಿಂಟ್ಸ್ ಗಳಿಸಿ ರಜತ ಪದಕವನ್ನು ತಮ್ಮದಾಗಿಸಿಕೊಂಡರು. ವಿನ್‌ಹೊಂಗ್ ಕಳೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಸಾಧನೆ ಮಾಡಿದ್ದರೆ, ವಾಂಗ್‌ಜೀವಿ ಕಳೆದ ವರ್ಷ ಲಂಡನ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
37ರ ಹರೆಯದ ಪ್ರಕಾಶ್ 50 ಮೀಟರ್ಸ್ ಪಿಸ್ತೂಲ್ ವಿಭಾಗದ ಅಂತಿಮ ಘಟ್ಟವನ್ನು ತಲುಪಿದ್ದರಾದರೂ, 8ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತಷ್ಟೆ.

ತಂದೆಯೇ ಕೋಚ್: ಪ್ರಕಾಶ್ ಅವರ ತಂದೆ ಪಾಪಣ್ಣ ಅವರು ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯಲ್ಲಿ ಡೆಪ್ಯುಟಿ ಕಮಿಷನರ್ ಹುದ್ದೆಯಲ್ಲಿದ್ದು ಏಳು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಇವರಿಗೆ ಶೂಟಿಂಗ್ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ. ಪಾಪಣ್ಣ ಅವರು ಶೂಟಿಂಗ್ ತರಬೇತಿಗೆ ಸಂಬಂಧಿಸಿದಂತೆ ಫಿನ್ಲೆಂಡ್‌ಗೆ ತೆರಳಿ ಕೋಚಿಂಗ್‌ನಲ್ಲಿ ಕೆಲವು ಶಿಬಿರಗಳಲ್ಲಿ ಪಾಲ್ಗೊಂಡಿದ್ದೇ ಅಲ್ಲದೆ, ಅಂತರರಾಷ್ಟ್ರೀಯ ಶೂಟಿಂಗ್ ಫೆಡರೇಷನ್‌ನಿಂದ ಅರ್ಹತೆ ಪಡೆದ ಕೋಚ್ ಎನಿಸಿಕೊಂಡಿದ್ದಾರೆ. ಇವರೇ ತಮ್ಮ ಮಗ ಪ್ರಕಾಶ್‌ಗೆ ಶೂಟಿಂಗ್ ಬಗ್ಗೆ ಆಸಕ್ತಿ ಮೂಡಿಸಿದ್ದು.

ಪ್ರಕಾಶ್ ಇಲ್ಲಿನ ವಿಜಯ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಕೆನಡಾಕ್ಕೆ ತೆರಳಿ ಎಂಬಿಎ ಪದವಿ ಪಡೆದು ಇಲ್ಲಿಗೆ ಬಂದರು. ಆ ನಂತರ ಕೆಂಗೇರಿಯ ಭಾರತ ಕ್ರೀಡಾ ಪ್ರಾಧಿಕಾರದ ಆವರಣದಲ್ಲಿ ನಿರಂತರವಾಗಿ ಒಂದು ದಶಕದ ಕಾಲ ತಂದೆಯಿಂದಲೇ ತರಬೇತು ಪಡೆದರು. ಈ ನಡುವೆ ಉದ್ಯೋಗದ ನಿಮಿತ್ತ ಎರಡು ವರ್ಷ ಕೆನಡಾದಲ್ಲಿಯೇ ನೆಲೆಸಿದ್ದರಾದರೂ, ಮತ್ತೆ ಇಲ್ಲಿಗೆ ವಾಪಸಾದರು. ಇಲ್ಲಿ ತಮ್ಮ ಸ್ವಂತ ಉದ್ದಿಮೆಯನ್ನು ನಡೆಸುತ್ತಿದ್ದು, ಶೂಟಿಂಗ್ ಕ್ರೀಡೆಯತ್ತ ಮತ್ತೆ ಗಮನ ಕೇಂದ್ರೀಕರಿಸಿದರು.

“ಶೂಟಿಂಗ್‌ಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪ್ರಕಾಶ್ ನೈಪುಣ್ಯತೆ ಗಳಿಸಿದ್ದ. ಆಗ ನಾನು ಆತನಿಗೆ ಯಾವುದಾದರೂ ಎರಡು ಒಲಿಂಪಿಕ್ ಸ್ಪರ್ಧೆಗಳಲ್ಲಿ ಹೆಚ್ಚು ಶ್ರಮ ವಹಿಸಲು ಸಲಹೆ ನೀಡಿದೆ. ಆ ನಂತರ ಆತ ಹಿಂತಿರುಗಿ ನೋಡಿದ್ದೇ ಇಲ್ಲ” ಎಂದು ಪಾಪಣ್ಣ ಅವರು ತಮ್ಮ ಮಗನ ಬಗ್ಗೆ `ಪ್ರಜಾವಾಣಿ'ಗೆ ತಿಳಿಸಿದರು.

ಪ್ರಕಾಶ್ ರಾಷ್ಟ್ರೀಯ ಮಟ್ಟದ ಹತ್ತಾರು ಕೂಟಗಳಲ್ಲಿ ಪದಕ ಗೆದ್ದಿದ್ದಾರೆ. ಕಳೆದ ವರ್ಷ ಮಿಲನ್ ನಗರದಲ್ಲಿ ನಡೆದಿದ್ದ ವಿಶ್ವಕಪ್‌ನ ಪ್ರಧಾನ ಹಂತ ತಲುಪುವುದಕ್ಕಷ್ಟೇ ಯಶಸ್ಸು ಗಳಿಸಿದ್ದರು.

ಜಗದಾಳೆ ಮೆಚ್ಚುಗೆ: ಪ್ರಕಾಶ್ ಅವರ ಈ ಸಾಧನೆ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವಂತಹದ್ದಾಗಿದೆ ಎಂದು ಕರ್ನಾಟಕ ಶೂಟಿಂಗ್ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಜಗದಾಳೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT