ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿನಿ ಯೋಜನೆ: ನೋಂದಣಿಗೆ ಮನವಿ

Last Updated 11 ಜೂನ್ 2011, 6:25 IST
ಅಕ್ಷರ ಗಾತ್ರ

ಮೈಸೂರು: `ಗ್ರಾಮಾಂತರ ಪ್ರದೇಶದ ಸಹಕಾರಿ ರೈತರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಯಶಸ್ವಿನಿ ಯೋಜನೆಗೆ 2011-12 ನೇ ಸಾಲಿಗೆ ಸದಸ್ಯರ ನೋಂದಣಿ  ಪ್ರಾರಂಭ ವಾಗಿದ್ದು,  ಜುಲೈ 31 ಕೊನೆ ದಿನವಾಗಿದೆ~ ಎಂದು ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಸಿ.ಬಸವೇಗೌಡ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಅರ್ಹ ರೈತರು ಗ್ರಾಮಾಂತರ ಭಾಗದ ಯಾವುದಾದರು ಸಹಕಾರ ಸಂಘ, ಬ್ಯಾಂಕಿನ ಸದಸ್ಯರು ಅರ್ಜಿ ನಮೂನೆಯನ್ನು ಪಡೆದು  ಭರ್ತಿ ಮಾಡಿ ಈ ಕೂಡಲೇ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅರ್ಜಿ ಯಲ್ಲಿ ಕೋರಿರುವ ಪೂರ್ಣ ಮಾಹಿತಿಯನ್ನು ಚಾಚೂ ತಪ್ಪದೆ ಭರ್ತಿ ಮಾಡಬೇಕು~ ಎಂದು ಹೇಳಿದರು.

`ವಾರ್ಷಿಕ ರೂ.160 ಗಳನ್ನು ಪಾವತಿಸಿ ಸದಸ್ಯತ್ವ ಪಡೆಯಬಹುದು. ಸ್ವಸಹಾಯ, ಸ್ತ್ರೀ ಶಕ್ತಿ ಸಂಘಗಳು ಗ್ರಾಮೀಣ ಭಾಗದ ಯಾವುದೇ ಸಹಕಾರ ಸಂಘ, ಬ್ಯಾಂಕ್‌ಗಳಲ್ಲಿ ಸದಸ್ಯತ್ವ ಹೊಂದಿ ಖಾತೆ ತೆರೆದು ಕನಿಷ್ಠ ಆರು ತಿಂಗಳುಗಳಿಂದ ವ್ಯವಹರಿಸು ತ್ತಿದ್ದಲ್ಲಿ ಅಂತಹ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದವರು ಈ ಯೋಜನೆಗೆ ನೇರವಾಗಿ ಸದಸ್ಯತ್ವ ಪಡೆಯಬಹುದು.
 
ನಗರ, ಪಟ್ಟಣದ ಜೊತೆಗೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಸುತ್ತಮುತ್ತಲಿನ ಪ್ರದೇಶದಲ್ಲಿನ ಕೃಷಿ ಪತ್ತಿನ ಸಹಕಾರ ಸಂಘಗಳ, ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಪಟ್ಟಣ ಪ್ರದೇಶದಲ್ಲಿ ವಾಸಿಸುತ್ತಿದ್ದು ಅವರ ಸದಸ್ಯತ್ವ ಹೊಂದಿರುವ ಸಂಘಗಳ ವ್ಯಾಪ್ತಿಯಲ್ಲಿ ಕೃಷಿ ಜಮೀನು ಹೊಂದಿರುವವರು ಈಗಾಗಲೇ ಕಳೆದ ಸಾಲಿನಲ್ಲಿ ಯೋಜನೆಯಡಿ ನೋಂದಣಿ, ನವೀಕರಣವಾಗಿದ್ದಲ್ಲಿ 2011-12 ನೇ ಸಾಲಿಗೆ ಅಂತಹ ಸದಸ್ಯರು ಅರ್ಹರಾಗಿರುತ್ತಾರೆ~ ಎಂದು ವಿವರ ನೀಡಿದರು.

ಈ ಸಾಲಿಗೆ: `ಈ ಸಾಲಿಗೆ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ಚಲನಚಿತ್ರ ಕಲಾವಿದರುಗಳು, ರಂಗಭೂಮಿ ಕಲಾವಿದರುಗಳು, ಜಾನಪದ ಕಲಾವಿದರುಗಳು, ಸಾಂಸ್ಕೃತಿಕ ಅಭಿವೃದ್ಧಿ ಸಹಕಾರ ಸಂಘಗಳ ಸದಸ್ಯರಾಗಿದ್ದಲ್ಲಿ ಅರ್ಹರಾಗುತ್ತಾರೆ. ಗ್ರಾಮೀಣ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿದ್ದು, ಕಾಫಿ ಬೆಳೆಯುವ ಜಿಲ್ಲೆಗಳ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಪ್ಲಾಂಟೇಷನ್ ಕಾರ್ಮಿಕರುಗಳು, ಗ್ರಾಮೀಣ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಕೃಷಿ ಕ್ಷೇತ್ರದಿಂದ ಆಯ್ಕೆಯಾಗಿರುವ ರೈತ ಪ್ರತಿನಿಧಿಗಳು, ರಾಜ್ಯ ಪತ್ರಕರ್ತರ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಗ್ರಾಮೀಣ ಪತ್ರಕರ್ತರು, ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ವಿವಿಧೋದ್ದೇಶ ಸಹಕಾರ ಸಂಘಗಳು ಹಾಗೂ ಇತರೆ ವಿವಿಧೋದ್ದೇಶ ಸಹಕಾರ ಸಂಘಗಳು, ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ಲೈಂಗಿಕ ಅಲ್ಪಸಂಖ್ಯಾತರು ಸದಸ್ವತ್ಯ ಪಡೆಯಬಹುದಾಗಿದೆ~ ಎಂದು ತಿಳಿಸಿದರು.

ಆಸ್ಪತ್ರೆಗಳ ಪಟ್ಟಿ: `ಮೈಸೂರಿನ ಕಾವೇರಿ ಆಸ್ಪತ್ರೆ, ಜೆಎಸ್‌ಎಸ್ ಆಸ್ಪತ್ರೆ, ವಿಕ್ರಂ ಆಸ್ಪತ್ರೆ, ರಾಮಕೃಷ್ಣ ಆಸ್ಪತ್ರೆ, ಕಮಲಾರಾಮನ್ ಆಸ್ಪತ್ರೆ, ಮಹಾವೀರ ದರ್ಶನ್ ಕಣ್ಣಿನ ಆಸ್ಪತ್ರೆ, ಭಾರತ್ ಕ್ಯಾನ್ಸರ್ ಆಸ್ಪತ್ರೆ, ಪ್ರಗತಿ ವಿಷನ್ ಹಾಗೂ ಕರುಣಾ ಆಸ್ಪತ್ರೆ, ಸರಗೂರಿನ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಅಲ್ಲದೆ ಸಾಮಾನ್ಯ ಹೆರಿಗೆ, ನವಜಾತ ಶಿಶುವಿನ ಶುಶ್ರೂಷೆ, ಕೃಷಿ ಉಪಕರಣಗಳಿಂದ ಆಗುವ ಅಪಘಾತಗಳು, ನೀರಿನಲ್ಲಿ ಮುಳುಗು ವುದು, ನಾಯಿ ಕಡಿತ, ಜಾನುವಾರು ಇರಿತ, ಹಾವು ಕಡಿತ, ವಿದ್ಯುತ್ ಅಪಘಾತಗಳನ್ನೂ ಸಹ ಸೇರ್ಪಡೆ ಗೊಳಿಸಿದೆ~ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಸಿ.ಯತೀಶ್‌ಕುಮಾರ್, ಸಹಕಾರ ಸಂಘಗಳ ಉಪ ನಿಬಂಧಕ ಪ್ರಕಾಶ್‌ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT