ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಣದ ಕಾಡಿನಲ್ಲಿ ಕಾಟೇಜ್

Last Updated 6 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಬರುವವರಿಗೆ ಯಾಣ ಸಮೀಪದ ಬೆಳ್ಳಂಗಿಯ ಫಾರೆಸ್ಟ್ ಕಾಟೇಜ್‌ನಲ್ಲಿ ರಾತ್ರಿ ಕಳೆಯುವ ವಿಭಿನ್ನ ಅನುಭವಕ್ಕೆ ಸ್ಥಳೀಯ ಅರಣ್ಯ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಪ್ರವಾಸವೆಂದರೆ ಗೋಕರ್ಣ, ಯಾಣ, ಮುರ್ಡೇಶ್ವರವನ್ನಂತೂ ತಪ್ಪಿಸಲು ಸಾಧ್ಯವಿಲ್ಲ. ಈ ಎಲ್ಲ ನಿಸರ್ಗ ತಾಣ ಸವಿದ ನಂತರ ಪ್ರವಾಸಿಗರು ರಾತ್ರಿ ಕಳೆಯಲು ಹೊಟೇಲ್‌ಗಳಲ್ಲಿ ತಂಗುವುದು ಸಾಮಾನ್ಯ.
 
ಆದರೆ ನಿಸರ್ಗ ನಿರ್ಮಿತ ದಟ್ಟ ಕಾಡಿನಲ್ಲಿ ಒಂದು ರಾತ್ರಿ ಕಳೆಯುವ ವಿಭಿನ್ನ ಅವಕಾಶ ಪ್ರವಾಸಿಗರಿಗೆ ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೃಷ್ಣ ಉದಪುಡಿ ಅವರು ಫಾರೆಸ್ಟ್ ಕಾಟೇಜ್ ಯೋಜನೆ ಕೈಗೆತ್ತಿಕೊಂಡರು.
 
ಅದರ ಫಲವಾಗಿ ಕುಮಟಾ ತಾಲ್ಲೂಕಿನ ಯಾಣಕ್ಕೆ ಹೋಗುವ ರಸ್ತೆಯ ಪಕ್ಕದ ಬೆಳ್ಳಂಗಿ ಸಸ್ಯಧಾಮದ ಬಳಿ ವಿಶಾಲ ಪ್ರದೇಶದಲ್ಲಿ ನಾಲ್ಕು ಕಾಟೇಜ್ ತಲೆಯೆತ್ತಿದೆ. ವಿಶೇಷವೆಂದರೆ ಕಾಟೇಜ್ ನಿರ್ಮಾಣಕ್ಕೆ ಬಳಕೆ ಮಾಡಿದವುಗಳಲ್ಲಿ ಅರಣ್ಯದಲ್ಲಿ  ಸಾಮಗ್ರಿಗಳೇ ಹೆಚ್ಚು. ನೆಲದಿಂದ ನಾಲ್ಕು ಅಡಿ ಕಲ್ಲಿನ ಗೋಡೆ ನಿರ್ಮಿಸಿದ ನಂತರ ಮೇಲ್ಭಾಗಕ್ಕೆ  ಸಂಪೂರ್ಣ ಬಿದಿರನ್ನೇ ಕಲಾತ್ಮಕವಾಗಿ ಹೆಣೆದು ಗೋಡೆ ನಿರ್ಮಿಸಲಾಗಿದೆ.

ಛಾವಣಿಗೆ ಸಿಮೆಂಟ್ ತಗಡು ಬಳಸಿದರೂ ಒಳಗೆ ಬಿಸಿಲಿನ ಝಳ ಬರದಂತೆ ಮರದ ಹಲಗೆಯ ಸೀಲಿಂಗ್ ಅಳವಡಿಸಲಾಗಿದೆ. ಒಳಗೆ ಒಂದು ಡಬಲ್ ಬೆಡ್, ಟಿಪಾಯಿ, ಬೆತ್ತದ ಕುರ್ಚಿಗಳು, ಕನ್ನಡಿ, ಸ್ನಾನ ಗೃಹ, ಗೋಡೆ ಹಾಗೂ ಕಿಟಕಿಗೆ  ಸುಂದರ ಪರದೆ, ಶೌಚಾಲಯ ಎಲ್ಲ ಇದೆ. ಇಲ್ಲಿಯ ವ್ಯವಸ್ಥೆ ಯಾವುದೇ ಹೊಟೆಲ್‌ನ ಡಬಲ್ ರೂಮಿಗಿಂತಲೂ ಕಡಿಮೆಯಿಲ್ಲ.

ಕಾಡೆಂದರೆ ರಾತ್ರಿ ಹೊತ್ತು ಹಾವು ಹಾಗೂ ಅಪಾಯಕಾರಿ ಪ್ರಾಣಿಗಳು ಸಾಮಾನ್ಯ. ಅವು ಒಳಗೆ ನುಸುಳದಂತೆ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಕಾಟೇಜ್ ಉಸ್ತುವಾರಿ ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಸಿಬ್ಬಂದಿಯದು.

ಅವರೇ ಪ್ರವಾಸಿಗರಿಗೆ ಊಟ, ತಿಂಡಿಗೆ ವ್ಯವಸ್ಥೆ ಮಾಡುತ್ತಾರೆ. ಕಾಡಿನೊಳಗೆ ಕಾಟೇಜ್ ಎದುರು ಬೃಹತ್ ಮರಗಳ ಕೆಳಗೆ ಸುಂದರ ಪ್ಯಾರಾಗೋಲದೊಳಗೆ ಕೂತು ಊಟ, ತಿಂಡಿ ಸವಿಯುವುದೇ ಒಂದು ಸೊಗಸು. ರಾತ್ರಿ ಮಲಗಿದಲ್ಲೇ ಬಗೆ ಬಗೆಯ ಹಕ್ಕಿ, ಪ್ರಾಣಿಗಳ ಕೂಗನ್ನು ಕೇಳಬಹುದು.

ಅರಣ್ಯ ಸಿಬ್ಬಂದಿ ಜೊತೆ ರಾತ್ರಿ ಕಾಡಿನ ರಸ್ತೆಯಲ್ಲಿ ಒಂದು ರೌಂಡ್ ಹಾಕುವಾಗ ಅದೃಷ್ಟವಿದ್ದರೆ ಕಾಡು ಪ್ರಾಣಿಗಳ ದರ್ಶನವೂ ಆಗಬಹುದು. ಬೆಳಿಗ್ಗೆ ಗೋಕರ್ಣ, ಮುರ್ಡೇಶ್ವರ ಪ್ರವಾಸ ಮುಗಿಸಿ ಬಂದವರು ರಾತ್ರಿ ಇಲ್ಲಿಗೆ ಬಂದು ತಂಗಿ ಮರುದಿನ ಬೆಳಿಗ್ಗೆ ಕೇವಲ ಎಂಟೇ ಕಿ.ಮೀ. ದೂರದಲ್ಲಿರುವ ಯಾಣಕ್ಕೂ ಭೇಟಿ ನೀಡಬಹುದಾಗಿದೆ. ಪ್ರವಾಸಿಗರಿಗೆ ಕುಮಟಾ ಅಥವಾ ಕತಗಾಲ ಅರಣ್ಯಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ.
 

ದುಬಾರಿಯೇನಲ್ಲ

`ಈ ಕಾಟೇಜ್‌ಗಳು ದುಬಾರಿಯೇನಲ್ಲ. ಸಾಮಾನ್ಯರೂ ಬಳಸುವಂತೆ ಊಟ, ತಿಂಡಿ ಎಲ್ಲ ಸೇರಿ ಒಂದು ದಿನಕ್ಕೆ ಒಂದು ಕಾಟೇಜ್‌ಗೆ ಕೇವಲ 400 ರೂ. ನಮ್ಮ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ಬಗ್ಗೆ ಏನೇನೋ ಕಲ್ಪನೆ ಮಾಡಿಕೊಂಡು  ರಾಜ್ಯದ ಬೇರೆ ಬೇರೆ ಭಾಗದಿಂದ ಜಿಲ್ಲೆಯ ಪ್ರವಾಸಕ್ಕೆ ಬರುವ ಸಾಮಾನ್ಯ ಜನರಿಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಒಂದು ರಾತ್ರಿ ಕಾಡಿನಲ್ಲಿ ಕಳೆಯುವ ಅನುಭವಕ್ಕೆ ವ್ಯವಸ್ಥೆ ಮಾಡಿಕೊಡುವುದು ಇಲಾಖೆಯ ಉದ್ದೇಶ. ಇಲಾಖೆ ವತಿಯಿಂದ ಇವನ್ನು ನಿರ್ಮಿಸಿ ನಿರ್ವಹಣೆಯನ್ನು ಗ್ರಾಮ ಅರಣ್ಯ ಸಮಿತಿಗೆ ನೀಡಲಾಗಿದೆ.
 
ಬಂದ ಲಾಭದಲ್ಲಿ ಇಲಾಖೆ ಹಾಗೂ ಸಮಿತಿ ಇಬ್ಬರಿಗೂ ಪಾಲು. ಇದರಿಂದ ಪ್ರವಾಸಿಗರಿಗೆ ಕಾಡಿನ ಮೇಲೆ ಪ್ರೀತಿ ಬೆಳೆಯುವುದರ ಜೊತೆ  ಜಿಲ್ಲೆಯ ಪ್ರವಾಸೋದ್ಯಮ ಕೂಡ ಅಭಿವೃದ್ಧಿಯಾಗಬಹುದು ಎನ್ನುವ ನಿಟ್ಟಿನಲ್ಲಿ  ಇದೊಂದು ಪುಟ್ಟ ಪ್ರಾಯೋಗಿಕ ಯತ್ನ~ ಎಂದು ಹೇಳುತ್ತಾರೆ ಉದಪುಡಿ. ಅವರೀಗ ಭದ್ರಾ ಹುಲಿ  ಯೋಜನೆ ನಿರ್ದೇಶಕರಾಗಿ ವರ್ಗವಾಗಿದ್ದಾರೆ.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT