ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿ

ಯಾದವ ಮಹಾಸಂಸ್ಥಾನದ ಕೃಷ್ಣ ಯಾದವಾನಂದ ಸ್ವಾಮೀಜಿ ಆಗ್ರಹ
Last Updated 1 ಏಪ್ರಿಲ್ 2013, 8:37 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಯಾದವ (ಗೊಲ್ಲ) ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲು ಮೀನಾಮೇಷ ಎಣಿಸುತ್ತಿರುವುದು ನೋವನ್ನುಂಟು ಮಾಡಿದೆ ಎಂದು ಯಾದವ ಮಹಾಸಂಸ್ಥಾನದ ಕೃಷ್ಣ ಯಾದವಾನಂದ ಸ್ವಾಮೀಜಿ ತಿಳಿಸಿದ್ದಾರೆ.

40 ಲಕ್ಷ ಜನಸಂಖ್ಯೆ ಹೊಂದಿರುವ ಯಾದವರಿಗೆ ರಾಜ್ಯದಲ್ಲಿ ಕನಿಷ್ಠ 8 ವಿಧಾನಸಭಾ ಕ್ಷೇತ್ರದಲ್ಲಾದರೂ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಹಿಂದುಳಿದ ಯಾದವ ಸಮುದಾಯವನ್ನು ರಾಜಕೀಯವಾಗಿ ವಂಚಿಸಿದ ಅಪರಾಧಕ್ಕೆ ಕಾಂಗ್ರೆಸ್ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದಶಕಗಳ ಕಾಲ ಯಾದವ ಸಮುದಾಯ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದೆ. ಉದಾಹರಣೆಗೆ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿದ್ದ ಮುತ್ಸದ್ದಿ ಕೆ.ಎಚ್. ರಂಗನಾಥ್ ಅವರ ನಿರಂತರ ಗೆಲುವಿಗೆ ಯಾದವ ಸಮುದಾಯವೇ ಪ್ರಮುಖ ಕಾರಣ. ಇದೊಂದು ಸಣ್ಣ ಉದಾಹರಣೆಯಷ್ಟೇ. ಈ ರೀತಿ ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು, ಹೊಳಲ್ಕೆರೆಯಲ್ಲಿ ಯಾದವರು ನಿರ್ಣಾಯಕ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಕನಿಷ್ಠ ಪಕ್ಷ ಚಿತ್ರದುರ್ಗ ಜಿಲ್ಲೆಯಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಯಾದವ ಸಮುದಾಯಕ್ಕೆ ಸೇರಿದ ಪಕ್ಷದ ವ್ಯಕ್ತಿಗೆ ಟಿಕೆಟ್ ನೀಡಲು ಅವಕಾಶವಿತ್ತು. ಅದು ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿ ಸಮಂಜಸವಾಗಿಯೂ ಇತ್ತು. ಆದರೆ, ಹಣ ಮತ್ತು ಲಾಬಿ ಕಾರಣಕ್ಕೆ ಕಾಂಗ್ರೆಸ್ ಸಂಘಟನೆಗೆ ದುಡಿದ ವ್ಯಕ್ತಿಯನ್ನು ಕಡೆಗಣಿಸಿರುವುದು ಅತ್ಯಂತ ನೋವಿನ ವಿಷಯ ಎಂದು ತಿಳಿಸಿದ್ದಾರೆ.

ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಯಲ್ಲಿ ಯಾದವರು  ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಮತಗಳೇ ನಿರ್ಣಾಯಕ. ಅವರು ಆರಂಭದಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಆದ್ದರಿಂದ ರಾಜಕೀಯ ಸ್ಥಾನಮಾನದಿಂದ ವಂಚಿತಗೊಂಡಿರುವ ಯಾದವ ಸಮುದಾಯಕ್ಕೆ ರಾಜ್ಯದಲ್ಲಿ ಕನಿಷ್ಠ 8 ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಬದ್ಧತೆಯನ್ನು ಕಾಂಗ್ರೆಸ್ ಪಕ್ಷ ಪ್ರದರ್ಶಿಸಬೇಕು.

ಪದೇ ಪದೇ ಸಾಮಾಜಿಕ ನ್ಯಾಯ ಪರಿಕಲ್ಪನೆ ಕುರಿತು ಮಾತನಾಡುವ ಕಾಂಗ್ರೆಸ್  ಯಾದವ ಸಮುದಾಯದವರನ್ನು ಕಡೆಗಣಿಸಿದರೇ ರಾಜಕೀಯವಾಗಿ ಹೆಚ್ಚು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಮಠ ಒಂದರ ಪೀಠಾಧ್ಯಕ್ಷರಾದ ನಾವು ಅಹಿಂದ ಪರಿಕಲ್ಪನೆಯಡಿ ಆರಂಭದಿಂದಲೂ ಚಿಂತನೆ ಮಾಡಿಕೊಂಡು ಬರುತ್ತಿದ್ದೇವೆ. ಈ ಕಾರಣಕ್ಕಾಗಿಯೇ ಬಹಿರಂಗ ಸಭೆಗಳಲ್ಲೂ ಅಹಿಂದ ವರ್ಗದ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದೇವೆ. ಇದು ನಮ್ಮಲ್ಲಿರುವ ಸಾಮಾಜಿಕ ನ್ಯಾಯದ ಸತ್ ಚಿಂತನೆ ಎಂದು ಪ್ರತಿಪಾದಿಸಿದ್ದಾರೆ.

ಈ ನಿಟ್ಟಿನಲ್ಲಿ ಜಾತಿ ಕಾರಣಕ್ಕೆ ಅಥವಾ ಸ್ವಾರ್ಥ ಕಾರಣಕ್ಕೆ ಸಮುದಾಯದ ಇಂತಹದ್ದೇ ವ್ಯಕ್ತಿಗೆ ಟಿಕೆಟ್ ನೀಡಿ ಎಂದು ಹೇಳಲು ಇಚ್ಛಿಸುವುದಿಲ್ಲ. ಆದರೆ, ಯಾದವ ಸಮುದಾಯದಲ್ಲಿ ಅತ್ಯಂತ ಪ್ರಭಾವಿ ರಾಜಕೀಯ ಮುಖಂಡರು ಇದ್ದಾರೆ. ಅವರು ಎಲ್ಲ ಸಮುದಾಯಗಳೊಂದಿಗೆ ಸ್ನೇಹ ಬಾಂಧವ್ಯ ಸಾಧಿಸಿದ್ದು, ಗೆಲ್ಲುವ ಶಕ್ತಿ ಹೊಂದಿದ್ದಾರೆ. ಅಂತಹ ವ್ಯಕ್ತಿಗಳಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡುವ ಮೂಲಕ ಯಾದವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿದ ಕೀರ್ತಿಯನ್ನು ಕಾಂಗ್ರೆಸ್ ಪಡೆದುಕೊಳ್ಳಲಿ ಎಂಬ ಆಶಯ ನಮ್ಮದು ಎಂದು ತಿಳಿಸಿದ್ದಾರೆ.

ಯಾದವ ಸಮುದಾಯಕ್ಕೆ ರಾಜ್ಯದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು. ಈ ಮೂಲಕ ಯಾದವರು ನಾಗರಿಕ ಪ್ರಪಂಚಕ್ಕೆ ತೆರೆದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಜತೆಗೆ, ತನ್ನ ಮಾತಿನಂತೆ ಕಾಂಗ್ರೆಸ್ ಶೋಷಿತರ ಪರ ನಿಲ್ಲಬೇಕು ಎಂದು ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಟಿಕೆಟ್ ಹಂಚಿಕೆಯ ಪ್ರಮುಖರಿಗೆ ಸ್ವಾಮೀಜಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT