ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರದ್ದೋ ಜಮೀನು, ಯಾರಿಗೋ ದುಡ್ಡು!

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ನಡೆಸುವ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಏನು ಬೇಕಾದರೂ ಆಗಬಹುದು. ಯಾರದ್ದೋ ಜಮೀನನ್ನು ಯಾರೋ ಮಾರಾಟ ಮಾಡಬಹುದು. ಗೃಹ ಮಂಡಳಿ ಯಾರಿಗಾದರೂ ಹಣ ಸಂದಾಯ ಮಾಡಬಹುದು. ಇದ­ಕ್ಕೊಂದಿಷ್ಟು ಉದಾಹರಣೆಗಳು ಇಲ್ಲಿವೆ.

ಮೈಸೂರು ತಾಲ್ಲೂಕು ಕಲ್ಲೂರು ನಾಗನಹಳ್ಳಿ ಕಾವಲ್‌ನಲ್ಲಿ ಇಂತಹದೇ ಒಂದು ಪ್ರಸಂಗ ನಡೆದಿದೆ. ಈ ಗ್ರಾಮದ 5.05 ಎಕರೆ ಜಮೀನನ್ನು ಅದೇ ಗ್ರಾಮದ ತಿಪ್ಪಯ್ಯ 1948ರಲ್ಲಿ ಖರೀದಿ ಮಾಡಿದ್ದರು. ಅಲ್ಲಿ ವ್ಯವಸಾಯ ಮಾಡುತ್ತಾ ಬಂದರು.
ಆದರೆ, ಅವರು ಜಮೀನಿನ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಲಿಲ್ಲ. ಅವರ ನಿಧನದ ನಂತರ ಅವರ ಮಗ ಆನಂದ್‌ ಅವರು ಜಮೀನು ನೋಡಿಕೊಳ್ಳುತ್ತಾ ಬಂದರು. ಪಿತ್ರಾರ್ಜಿತ ಆಸ್ತಿ ತಮಗೆ ಬಂದಿದೆ ಎಂದು ಅವರು ತಮ್ಮ ಪಾಡಿಗೆ ವ್ಯವಸಾಯ ಮಾಡುತ್ತಿದ್ದರು. 1948­ರಿಂದ­ 2008ರವರೆಗೂ ಅವರು ಖಾತೆ­ಯನ್ನು ಮಾಡಿಸಿಕೊಳ್ಳಲೇ ಇಲ್ಲ.

1948ರಲ್ಲಿ ಇದನ್ನು ಕೊಳ್ಳುವಾಗ ಈ ಭೂಮಿ ಎಸ್‌.ಎನ್‌.ಸುಬ್ಬರಾವ್‌ ಅವರ ಹೆಸರಿನಲ್ಲಿ ಇತ್ತು. ಸುಬ್ಬರಾವ್‌ ಅವರು 1947ರಲ್ಲಿ ಇದನ್ನು ಪಟೇಲ್‌ ತಿಮ್ಮೇಗೌಡ ಅವರಿಂದ ಖರೀದಿಸಿದ್ದರು. ತಮ್ಮ ಹೆಸರಿಗೆ ಖಾತೆಯನ್ನೂ ಮಾಡಿ­ಕೊಂಡಿದ್ದರು. ಆದರೆ ಆನಂದ್‌ ಅವರು ಜಮೀನಿನ ಪಹಣಿಯನ್ನು (ಆರ್‌ಟಿಸಿ) ತಮ್ಮ ಹೆಸರಿಗೆ ಬದಲಾವಣೆ ಮಾಡಿ­ಕೊಂಡಿರಲಿಲ್ಲ. ಈ ಸ್ವತ್ತಿಗೆ ಸಂಬಂಧಿಸಿದ ‘ಮ್ಯುಟೇಷನ್‌ ರಿಜಿಸ್ಟರ್‌’ ಮತ್ತು ಇತರೆ ದಾಖಲೆಗಳು ಅವರ ಹೆಸರಿನಲ್ಲಿದ್ದವು.

ಕರ್ನಾಟಕ ಗೃಹ ಮಂಡಳಿ ಇಲವಾಲ ಹೋಬಳಿಯ ಕಲ್ಲೂರು ನಾಗನಹಳ್ಳಿ ಕಾವಲ್‌ ಜಮೀನನ್ನು ಸ್ವಾಧೀನಪಡಿ­ಸಿಕೊಂಡು ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧವಾಯಿತು. ಆಗ ಜಾಗೃತರಾಗಿದ್ದ ಮಧ್ಯವರ್ತಿಗಳಿಗೆ ಆನಂದ್‌ ಅವರ ಜಮೀನಿನ ಆರ್‌ಟಿಸಿ ಅವರ ಹೆಸರಿನಲ್ಲಿ ಇಲ್ಲ ಎನ್ನುವುದು ಗೊತ್ತಾಯಿತು. ಆಗ ಮಧ್ಯವರ್ತಿಗಳು ಎಸ್‌.ಎನ್‌. ಸುಬ್ಬರಾವ್‌ ಅವರ ಕುಟುಂಬ­­ದವರು ಎಲ್ಲಿದ್ದಾರೆ ಎಂದು ಹುಡುಕಿದರು. ಅವರ ಪತ್ನಿ ಪದ್ಮಾ­ವತಮ್ಮ ಅವರನ್ನು ಪತ್ತೆ ಮಾಡಿದರು.
ಅವರಿಂದ 5.05 ಎಕರೆ ಜಮೀನನ್ನು ಬೆಂಗಳೂರಿನ ಅರ್ಜುನ್‌ ಕುಮಾರ್‌ ಎಂಬುವವರಿಗೆ ಮಾರಾಟ ಮಾಡಿಸಿ­ದಂತೆ ದಾಖಲೆ ಸಿದ್ಧಪಡಿಸಿ­ದರು. ನಂತರ ಅರ್ಜುನ್‌ ಕುಮಾರ್‌ ಅವರು ಈ ಜಮೀನನ್ನು ಗೃಹ ಮಂಡಳಿಗೆ ಎಕರೆಗೆ ರೂ 36.50 ಲಕ್ಷದಂತೆ ಮಾರಾಟ ಮಾಡಿ­ದರು. ಗೃಹ ಮಂಡಳಿ ರೂ 1.83 ಕೋಟಿ ಹಣವನ್ನು ಅರ್ಜುನ್‌ಕುಮಾರ್‌ ಅವರಿಗೆ ನೀಡಿತು.
ತಮ್ಮ ಜಮೀನನ್ನು ಅರ್ಜುನ್‌ ಕುಮಾರ್‌ ಅವರಿಗೆ ಯಾರೋ ಮಾರಾಟ ಮಾಡಿದ್ದಾಗಲೀ, ಅದನ್ನು ಅವರು ಗೃಹ ಮಂಡಳಿಗೆ ನೀಡಿದ್ದಾಗಲೀ ಆನಂದ್‌ ಅವರಿಗೆ ಗೊತ್ತಾಗಲೇ ಇಲ್ಲ. ಕೆಲವು ದಿನಗಳ ನಂತರ ಅವರು ದಾಖಲೆ­ಗಳನ್ನು ಪರಿಶೀಲಿಸಲು ಹೋದಾಗ ದಾಖಲೆಯಲ್ಲಿ ಗೃಹ ಮಂಡಳಿ ಹೆಸರು ಇರುವುದರಿಂದ ಇಷ್ಟೆಲ್ಲಾ ಆಗಿರುವುದು ಅವರ ಗಮನಕ್ಕೆ ಬಂತು. ಆದರೆ ಅಷ್ಟರಲ್ಲಾಗಲೇ ಪರಿಹಾರದ ಹಣ ಇನ್ಯಾರಿಗೋ ಸಂದಾಯವಾಗಿತ್ತು.

ತಮ್ಮ ಜಮೀನನ್ನು ಗೃಹ ಮಂಡಳಿಗೆ ಅಕ್ರಮವಾಗಿ ಮಾರಾಟ ಮಾಡಿದ್ದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೆಟ್ಟಿಲು ಏರಿದರು. ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿ, ಈ ಪ್ರಕರಣ ಮುಗಿಯುವ ತನಕ ಆ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡ­ದಂತೆ ಗೃಹ ಮಂಡಳಿಗೆ ಆದೇಶಿಸಿತು. ಈಗಲೂ ಆನಂದ್‌ ಅವರೇ ಅಲ್ಲಿ ಕೃಷಿ ಮಾಡುತ್ತಿದ್ದಾರೆ.
ಇದೇ ಗ್ರಾಮದ ವೆಂಕಟರಮಣೇ ಗೌಡ ಎನ್ನುವವರ 2 ಎಕರೆ ಜಮೀನನ್ನು  ಜಿಪಿಎ ಮೂಲಕ ಗೃಹ ಮಂಡಳಿಗೆ ಕೆಲವರು ಮಾರಾಟ ಮಾಡಿದರು. ಆದರೆ, ಈ ಜಮೀನು ಗೃಹ ಮಂಡಳಿ ವಸತಿ ಯೋಜನೆಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲು ಹೊರಡಿಸಿದ ಅಧಿ­ಸೂಚನೆಯ ವ್ಯಾಪ್ತಿಗಿಂತ ಅರ್ಧ ಕಿ.ಮೀ ಹೊರಗಡೆ ಇದೆ. ಈಗ ಈ ಜಮೀನಿನಲ್ಲಿ ಗೃಹ ಮಂಡಳಿ ವಸತಿ ಯೋಜನೆಯನ್ನು ಕೈಗೊಳ್ಳಬೇಕು ಎಂದರೆ ಇದರ ಸುತ್ತಲೂ ಇರುವ ಸುಮಾರು ನೂರು ಎಕರೆ ಜಮೀನನ್ನು ಸ್ವಾಧೀನ ಪಡಿಸಿ­ಕೊಳ್ಳಬೇಕಾಗಿದೆ.

ಹನುಮಂತರಾಯಪ್ಪ ಎಂಬುವವರ ಜಮೀನನ್ನೂ ಗೃಹ ಮಂಡಳಿಗೆ ಮಾರಾಟ ಮಾಡುವಾಗ ಮತ್ತೊಬ್ಬ ಹನುಮಂತರಾಯಪ್ಪನನ್ನು ಕರೆದು ತಂದು ಅವರ ಸಹಿ ಮಾಡಿಸಲಾಗಿದೆ. ಈಗ ಜಮೀನಿನ ನಿಜವಾದ ಮಾಲೀಕ ಹನುಮಂತರಾಯಪ್ಪ ಅವರಿಗೆ ತಮ್ಮ ಜಮೀನನ್ನು ಇನ್ಯಾರೋ ಮಾರಾಟ ಮಾಡಿದ್ದು ಗೊತ್ತಾಗಿದೆ. ಅವರೂ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧರಾಗಿದ್ದಾರೆ.

ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಕಲ್ಲೂರುನಾಗನಹಳ್ಳಿ ಕಾವಲ್‌, ಗುಂಗ್ರಾಲಛತ್ರ, ಯಲಚನ­ಹಳ್ಳಿ ಮುಂತಾದ ಕಡೆ ಗೃಹ ಮಂಡಳಿ ಭೂ ಸ್ವಾಧೀನ ಮಾಡಿಕೊಳ್ಳುವಾಗ ಇಂತಹ ಅಫರಾತಫರಾಗಳು ಸಾಕಷ್ಟು ಆಗಿವೆ. ನಿರ್ದಿಷ್ಟ ಸಂಸ್ಥೆಯಿಂದ ತನಿಖೆ ಮಾಡಿಸಿದರೆ ಎಲ್ಲ ಹಗರಣ ಹೊರಗೆ ಬರುತ್ತವೆ ಎಂದು ಗೃಹ ಮಂಡಳಿ ಅಕ್ರಮಗಳ ವಿರುದ್ಧ ಹೋರಾಡುತ್ತಿರುವ ತೇಜಸ್ವಿ ವಿ.ಎಚ್‌.ಗೌಡ ಹೇಳುತ್ತಾರೆ.

‘ಇತ್ತೀಚೆಗೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಅವರು ತನಿಖೆಗಾಗಿ ಮೈಸೂರು ಜಿಲ್ಲಾ­ಧಿ­ಕಾರಿ ಕಚೇರಿಯಲ್ಲಿ ಸಭೆಯೊಂದನ್ನು ಕರೆದಿದ್ದರು. ಆದರೆ ಅದು ದಿಢೀರ್‌ ರದ್ದಾಯಿತು. ಇಲಾಖೆಯ ಅಧಿಕಾರಿ­ಗಳು ಬಂದು ತನಿಖೆ ನಡೆಸಿದರೆ ಅವರು ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಮಾಡು­ತ್ತಾರೆಯೇ ವಿನಾ ನ್ಯಾಯ ಒದಗಿ­ಸುವುದಿಲ್ಲ. ಆದ್ದರಿಂದ ಲೋಕಾಯುಕ್ತ ಅಥವಾ ಸಿಐಡಿ ಪೊಲೀಸರಿಂದ ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ಈಗೇನಂತೀರಿ ಮುಖ್ಯಮಂತ್ರಿಗಳೇ?
ಮೈಸೂರು ಜಿಲ್ಲೆಯಲ್ಲಿ ಗೃಹ ಮಂಡಳಿ ನಡೆಸಿದ ಅವಾಂತರಗಳ ಬಗ್ಗೆ 2009ರಲ್ಲಿ ಆಗಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಅಲ್ಲದೆ 2009ರ ಜುಲೈ 9ರಂದು ರಾಜ್ಯಪಾಲ­ರನ್ನು ಭೇಟಿ ಮಾಡಿ ಪ್ರಕರಣದ ತನಿಖೆಯನ್ನು  ಸಿಬಿಐ ಅಥವಾ ಲೋಕಾಯುಕ್ತಕ್ಕೆ ನೀಡಬೇಕು ಎಂದು ಆಗ್ರಹಿಸಿದ್ದರು. ಇದೇ ವಿಷಯ ಸದನದಲ್ಲಿ ಪ್ರಸ್ತಾಪವಾಗಿ ಸದನವನ್ನು 5 ಬಾರಿ ಮುಂದೂಡಲಾಗಿತ್ತು.

ಈಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು ಮೈಸೂರಿನಲ್ಲಿ ಜನತಾ ದರ್ಶನದಲ್ಲಿ ಭೇಟಿ ಮಾಡಿದ ಈ ಗ್ರಾಮಗಳ ರೈತರಾದ ಪುಟ್ಟೇಗೌಡ, ಗುಂಗ್ರಾಲ್‌­ಛತ್ರದ ಮೂಗನಾಯಕ, ಸಿದ್ದಮ್ಮ, ಯಲಚನಹಳ್ಳಿಯ ಸಿದ್ದರಾಮೇಗೌಡ, ಜೋಗನಾಯಕ, ರಾಮಕೃಷ್ಣ ನಾಯಕ ಮುಂತಾದ 50ಕ್ಕೂ ಹೆಚ್ಚು ರೈತರು ಸಿದ್ದರಾಮಯ್ಯ ಆಗ ಹೇಳಿದ ಮಾತುಗಳನ್ನು ನೆನಪಿಸಿ ಈಗೇನು ಮಾಡುತ್ತೀರಿ? ತಕ್ಷಣವೇ ಈ ಬಗ್ಗೆ ತನಿಖೆ ನಡೆಸಿ ತಮಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಬಾಯಿ ಬಿಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT