ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎ ಸರ್ಕಾರದ ವಿರುದ್ಧ ಪ್ರತಿಭಟನೆ

Last Updated 13 ಅಕ್ಟೋಬರ್ 2012, 9:40 IST
ಅಕ್ಷರ ಗಾತ್ರ

ಬಾಗಲಕೋಟೆ: ಕೇಂದ್ರ ಯುಪಿಎ ಸರ್ಕಾರದ ಜನವಿರೋಧಿ ಬೆಲೆ ಏರಿಕೆ ನೀತಿ ಮತ್ತು ಗೃಹ ಬಳಕೆಯ ಗ್ಯಾಸ್ ಸಿಲೆಂಡರ್ ಅನ್ನು ವರ್ಷವೊಂದಕ್ಕೆ ಆರಕ್ಕೆ ಮಿತಿಗೊಳಿಸಿರುವ ಕ್ರಮವನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ನಗರದ ಶಿವಾನಂದ ಜಿನ್‌ನಿಂದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಶ್ವಥ ನಾರಾಯಣ, ಹಲವು ಲಕ್ಷ ಕೋಟಿ ಹಗರಣದಲ್ಲಿ ಭಾಗಿಯಾಗಿರುವ ಕೇಂದ್ರ ಯುಪಿಎ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ, ತಕ್ಷಣ ರಾಜೀನಾಮೆ ಕೊಟ್ಟು, ಚುನಾವಣೆ ಎದುರಿಸಬೇಕು ಎಂದು ಆಗ್ರಹಿಸಿದರು.

ಪದೇ ಪದೇ ತೈಲ ಬೆಲೆ ಏರಿಕೆ ಮಾಡಿರುವುದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೇಂದ್ರ ಸರ್ಕಾರ ಹಗಲು ದರೋಡೆಯಲ್ಲಿ ನಿರತವಾಗಿದೆ, ಹಣ ಕೊಟ್ಟರೂ ಸರಿಯಾಗಿ ಸೀಮೆ ಎಣ್ಣೆ, ಅಡುಗೆ ಅನಿಲ ದೊರೆಯದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬಳಕೆಗೆ ಮಿತಿಯಿರಲಿಲ್ಲ, ಸುಲಭವಾಗಿ ಎಲ್ಲೆಂದರಲ್ಲಿ ಗ್ಯಾಸ್ ದೊರೆಯುತ್ತಿತ್ತು. ಪೆಟ್ರೋಲ್ ಲೀಟರ್ ಬೆಲೆ ಕೇವಲ ರೂ. 36 ಇತ್ತು. ಆದರೆ, ಯುಪಿಎ ಅಧಿಕಾರವಧಿಯಲ್ಲಿ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬಳಕೆ 6ಕ್ಕೆ ಸೀಮಿತಗೊಳಿಸಲಾಯಿತು. ಪೆಟ್ರೋಲ್ ಬೆಲೆ ರೂ 76ಕ್ಕೆ ಏರಿಕೆಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ಜನರು ಬೀದಿಪಾಲಾಗುವ ಸಂದರ್ಭ ಎದುರಾಗಲಿದೆ ಎಂದರು.

ಬಹುಕೋಟಿ ಕಲ್ಲಿದ್ದಲು ಹಗರಣದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಭಾಗಿಯಾಗಿದ್ದಾರೆ ಎಂದು ಆಪಾದಿಸಿದ ಅವರು, ಜನತೆ ಯುಪಿಎ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಮನವಿ ಮಾಡಿದರು.

ಪ್ರತಿಕೃತಿ ದಹನ: ಪ್ರತಿಭಟನಾಕಾರರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಿದ ಕಾರಣ ಕೆಲ ಹೊತ್ತು ವಾಹನ ಮತ್ತು ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಯಿತು.

ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಉಜ್ವಲ ಬಡವಾಂಟೆ, ಜಿಲ್ಲಾ ಘಟಕದ ಅಧ್ಯಕ್ಷೆ ಕಲಾವತಿ ರಾಜೂರ, ನಗರ ಘಟಕದ ಅಧ್ಯಕ್ಷೆ ಭಾಗೀರತಿ ಪಾಟೀಲ, ಅನೀತಾ ಸರೋದೆ, ರೇಖಾ ಹುಲಗಬಾಳಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಸದಸ್ಯೆ ಭಾಗ್ಯಶ್ರೀ ಹಂಡಿ, ಸುಮಾ ಇಂಗಳಗಿ, ನೀಲಮ್ಮ ಕಲ್ಗುಡಿ, ಪಾರ್ವತಿ ಜೈನಕೇರಿ, ಸರಸ್ವತಿ ತಳವಾರ, ಸುವರ್ಣ ಪಾಟೀಲ, ಈರಮ್ಮ ಬಿಜ್ಜರಗಿ, ಭಾಗ್ಯ ಉದ್ನೂರು, ರುಕ್ಮಿಣಿ ಕಾಂಬ್ಳೆ, ಉಮಾ ಚಚ್ಚರಕಿ, ಪಿ.ವಿ.ಕ್ಷೃಣ, ಬಿ.ಟಿ.ಶ್ರೀನಿವಾಸ ಮೂರ್ತಿ, ಸದಾನಂದ ನಾರಾ, ರಾಜೂ ಬಳೂಲಮಠ, ಬಸವರಾಜ ಪರ್ವತಿಮಠ, ಶರಣಪ್ಪ ಗುಳೇದ, ಬಸವರಾಜ ಯಂಕಂಚಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಿಲಿಂಡರ್ ಪ್ರದರ್ಶನ
ಬನಹಟ್ಟಿ: ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದ್ದು, ಬಡವರು, ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಜೀವನ ದುಸ್ತರವಾಗಿದೆ ಎಂದು ಆರೋಪಿಸಿ ಬಿಜೆಪಿ ನಗರ ಘಟಕದ ಮಹಿಳಾ ಮೋರ್ಚಾ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪೆಟ್ರೋಲ್, ಡೀಸೆಲ್ ಅಲ್ಲದೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸಿದ್ದಲ್ಲದೆ, ವರ್ಷಕ್ಕೆ ಕೇವಲ 6 ಸಿಲಿಂಡರ್ ಸೀಮಿತ ಗೊಳಿಸಿದೆ. ಇದು ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆಯಾಗಿದೆ. ರಾಷ್ಟ್ರಪತಿಗಳು ಕೇಂದ್ರದ ಯುಪಿಎ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರ‌್ಯಾಲಿಯಲ್ಲಿ ಖಾಲಿ ಸಿಲಿಂಡರ್‌ಗಳನ್ನು ಪ್ರದರ್ಶನ ಮಾಡಲಾಯಿತು.

ಪಕ್ಷದ ಕಾರ್ಯಕರ್ತೆಯರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರಧಾನಿ ಮನಮೋಹನಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ರಬಕವಿ ಬನಹಟ್ಟಿ ನಗರ ಘಟಕದ ಮಹಿಳಾ ಮೋರ್ಚಾದ ಅಧ್ಯಕ್ಷರಾದ ನಗರಸಭಾ ಸದಸ್ಯೆ ಶೈಲಜಾ ಹೊಸಕೋಟಿ, ನಗರಸಭೆಯ ಮಾಜಿ ಅಧ್ಯಕ್ಷೆ, ಬಾಗಲಕೋಟೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅನುರಾಧಾ ಹೊರಟ್ಟಿ ಮಾತನಾಡಿದರು.

ನಗರಸಭೆಯ ಪೌರಾಯುಕ್ತರಾದ ಆರ್.ಎಂ. ಕೊಡುಗೆ ಮತ್ತು ಕಂದಾಯ ಇಲಾಖೆ ಅಧಿಕಾರಿ ಸಿ.ವಿ. ಕಾಂಬಳೆ ಅವರಿಗೆ ಮಹಿಳಾ ಮೋರ್ಚಾದ ಸದಸ್ಯರು ಮನವಿ ಅರ್ಪಿಸಿದರು.

ಮೀನಾಕ್ಷಿ ಸವದಿ ಪ್ರತಿಭಟನಾ ರ‌್ಯಾಲಿಯ ನೇತೃತ್ವ ವಹಿಸಿದ್ದರು. ನಗರಸಭೆಯ ಅಧ್ಯಕ್ಷೆ ಕಲಾವತಿ ಬಾಣಕಾರ, ಮಾಜಿ ಅಧ್ಯಕ್ಷೆ ಸುಲೋಚನಾ ಪಾತ್ರೋಟ್, ಮಹಾದೇವಿ ಸವದಿ, ಸದಸ್ಯರಾದ ಶಾಂತಾ ಗಸ್ತಿ ಮಾತನಾಡಿ, ಸರ್ಕಾರದ ಜನ ವಿರೋಧಿ ಧೋರಣೆಯಿಂದ ಸಾಮಾಜಿಕ ವ್ಯವಸ್ಥೆ ನೆಲ ಕಚ್ಚಿದೆ ಎಂದು ಆರೋಪಿಸಿದರು.

ಸುವರ್ಣಾ ಜುಗಳಿ, ಮಹಾದೇವಿ ಜಡಗಿ, ರಾಜೇಶ್ವರ ಕೈಸಲಗಿ, ಶಿವಲೀಲಾ ಪಾಟೀಲ, ನಗರ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಹೊಸೂರ, ರತ್ನಾ ಕೊಳಕಿ, ಬಸವಣ್ಣಿ ಭೂಯ್ಯಾರ, ಸುವರ್ಣಾ ಕೊಪ್ಪದ, ಕಸ್ತೂರಿ ನಡಗಟ್ಟಿ ಮತ್ತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್, ಸಂಜಯ ತೆಗ್ಗಿ, ಚಿದಾನಂದ ಹೊರಟ್ಟಿ, ಓಂಪ್ರಕಾಶ ಬಾಗೇವಾಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಇಸಾಕ್ ಸವದಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಭು ಪೂಜಾರಿ ಬಸವರಾಜ ತೆಗ್ಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT