ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಸಂಸತ್ ಸ್ಪರ್ಧೆ; ಚಿಣ್ಣರ ಕಲಾಪ- ಚಿಲಿಪಿಲಿ ಆಲಾಪ...

Last Updated 24 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ತೊದಲು ನುಡಿಯ ಖಾದಿಧಾರಿಗಳು... ಚಿಲಿಪಿಲಿಯಂತೆ ಕೇಳುತ್ತಿದ್ದ ಭಾಷಣ... ಅನುಭವಿ ರಾಜಕಾರಣಿಗಳಿಗೂ ಕಡಿಮೆಯಿಲ್ಲದಂತೆ ತೂರಿ ಬರುತ್ತಿದ್ದ ಮಾತು... ಶಾಲಾ ಸಮವಸ್ತ್ರ ತೊಟ್ಟ `ಮಂತ್ರಿ ಮಹೋದಯರು~...

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ನಗರದ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಚಿಣ್ಣರು ನಡೆಸಿದ ಕಲಾಪ ಕಂಡು `ವಾಹ್~ ಎನ್ನದವರೇ ಇರಲಿಲ್ಲ.

ಸಭಾಧ್ಯಕ್ಷರ ಆಗಮನವಾಗುತ್ತಿದ್ದಂತೆ ವಿಧಾನಸಭೆ ಕಲಾಪಕ್ಕೆ ಚಾಲನೆ ದೊರೆಯಿತು. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ಹಿಂದೂಸ್ತಾನಿ ಗಾಯಕ ಭೀಮಸೇನ ಜೋಷಿ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. `ಹೊಸಕೋಟೆಯ ಮಹಿಳಾ ಮುಖ್ಯಮಂತ್ರಿ~ ಸಂತಾಪ ಸೂಚಕ ನಿರ್ಣಯ ಮಂಡಿಸಿ ಗಣ್ಯರ ಗುಣಗಾನ ಮಾಡಿದರು.

`ಪ್ರಶ್ನೆ ನಂ ಒಂದು ಚುಕ್ಕಿ ನಂ ಒಂದು~ ಎಂದು ಸಭಾಪತಿ ಸೂಚಿಸುತ್ತಿದ್ದಂತೆ ವಿರೋಧಪಕ್ಷದ ಪಾಳಯದಿಂದ ಪ್ರಶ್ನೆಗಳ ಸುರಿಮಳೆ ಆರಂಭವಾಯಿತು. ಗರ್ಭಿಣಿಯರಿಗೆ ಯಾವ ಯಾವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬ ಪ್ರಶ್ನೆಗೆ ಪ್ರೌಢಶಾಲೆಯೊಂದರ, ಸೀರೆಯುಟ್ಟ `ಆರೋಗ್ಯ ಸಚಿವೆ~ ಒಟ್ಟು 6.5 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ ಎಂದು ಚುಟುಕಾಗಿ ಉತ್ತರಿಸಿದರು.
 
`ವಿರೋಧಿ~ ಸದಸ್ಯರು ಅಷ್ಟಕ್ಕೇ ಸುಮ್ಮನಾಗದೆ ಶಿಕ್ಷಣ ಸಚಿವರ ಮೇಲೆ `ಬಾಣ~ ಪ್ರಯೋಗಿಸಿದರು. `ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದಕ್ಕೆ ಕಾರಣ ನೀಡಬೇಕು~ ಎಂದು ಒತ್ತಾಯಿಸಿದರು.

`ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿಲ್ಲ. ಬದಲಿಗೆ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಹತ್ತಿರದ ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಬೀದಿಯಿಂದ ಶಾಲೆಗೆ ಕೂಲಿಯಿಂದ ಶಾಲೆಗೆ ಹಾಗೂ ನಲಿ-ಕಲಿಯಂತಹ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸಲಾಗುತ್ತಿದೆ~ ಎಂಬ ಜಾಣ್ಮೆಯ ಉತ್ತರ ಶಿಕ್ಷಣ ಸಚಿವೆಯಿಂದ.  ಸಮಾಜ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ ಸಚಿವರಿಗೂ ಪ್ರಶ್ನೆಗಳನ್ನು ಕೇಳಲಾಯಿತು.

ವಿದ್ಯುತ್ ಇಲ್ಲದೆ ಕತ್ತಲಲ್ಲಿ ಮುಳುಗಿರುವ ರಾಜ್ಯ ಶೂನ್ಯ ವೇಳೆಯನ್ನು ಆವರಿಸಿತು. ಇಂಧನ ಸಚಿವರು ` ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ವಿದ್ಯುತ್ ಘಟಕಗಳ ನವೀಕರಣ ಆಗಬೇಕಿದೆ. ಇದಕ್ಕೆಲ್ಲಾ ಕಾಲಾವಕಾಶ ಹಿಡಿಯುತ್ತದೆ. ಅಲ್ಲಿಯವರೆಗೆ ವಿರೋಧಪಕ್ಷದ ಸದಸ್ಯರು ಇಂತಹ ಪ್ರಶ್ನೆಗಳನ್ನು ಕೇಳಬಾರದು~ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
 
ಕುಡಿಯುವ ನೀರಿನ ಸಮಸ್ಯೆ ಕುರಿತೂ ಸದಸ್ಯರು ಗಂಭೀರ ಚರ್ಚೆ ನಡೆಸಿದರು. ಭ್ರಷ್ಟಾಚಾರ ಕುರಿತು ಮಾತನಾಡಿದ ಮುಖ್ಯಮಂತ್ರಿ `ಭ್ರಷ್ಟರ ನಿಗ್ರಹಕ್ಕೆ ಲೋಕಾಯುಕ್ತ ಸಂಸ್ಥೆ ಸ್ಥಾಪಿಸಲಾಗಿದೆ. ಭ್ರಷ್ಟರನ್ನು ಜೈಲಿಗೆ ಕಳುಹಿಸಲಾಗಿದೆ ಸರ್ಕಾರ ಭ್ರಷ್ಟಾಚಾರ ನಿಗ್ರಹಿಸುವ ಪಣ ತೊಟ್ಟಿದೆ~ ಎಂದರು.

ನಂತರ `ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಮಸೂದೆ~ ಕುರಿತು ಚರ್ಚೆ ನಡೆಯಿತು. `ಆಡಳಿತ ಪಕ್ಷ ಅಧಿಕಾರದಲ್ಲಿ ಉಳಿಯುವ ಆಸೆಯಿಂದ ಮಸೂದೆ ಮಂಡಿಸಲು ಯತ್ನಿಸುತ್ತಿದೆ ಎಂದು ವಿರೋಧಿಪಡೆ ಕೂಗು ಹಾಕಿತು. ಇದಕ್ಕೆ ಜಗ್ಗದ ಮುಖ್ಯಮಂತ್ರಿ `ಪದೇ ಪದೇ ಪಕ್ಷಾಂತರ ಮಾಡುವುದರಿಂದ ಸಾರ್ವಜನಿಕರ ಹಣ ಪೋಲಾಗುತ್ತದೆ. ಜನರ ಹಿತದೃಷ್ಟಿಯಿಂದ ಮಸೂದೆಯನ್ನು ಮಂಡಿಸಲಾಗುತ್ತಿದೆ~ ಎಂದರು.
ಬಳಿಕ ಧ್ವನಿಮತದಿಂದ ಮಸೂದೆಯನ್ನು ಅಂಗೀಕರಿಸಲಾಯಿತು. ಬಿಸಿಯೂಟದಲ್ಲಿ ಹುಳು, ಸೈಕಲ್ ವಿತರಣೆ ವಿಳಂಬ ಮತ್ತಿತರ ವಿಷಯಗಳನ್ನು ಸದಸ್ಯರು ಚರ್ಚಿಸಿದರು.

ಹೊಸಕೋಟೆ ಮತ್ರವಲ್ಲದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ನೆಲಮಂಗಲ ತಾಲ್ಲೂಕುಗಳ 31 ಶಾಲೆಗಳಿಂದ ಆಗಮಿಸಿದ `ವಿಧಾನಸಭಾ ಸದಸ್ಯರು~ ಕಲಾಪದಲ್ಲಿ ಪಾಲ್ಗೊಂಡರು.  ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿ, `ಪ್ರಜಾಪ್ರಭುತ್ವದ ಮೂಲ ಸ್ವರೂಪವನ್ನು ಮಕ್ಕಳಿಗೆ ತಿಳಿಸಿಕೊಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿೊಳ್ಳಲಾಗಿದೆ~ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ವಿ.ವೆಂಕಟೇಶಪ್ಪ ಮಾತನಾಡಿದರು. ಸಂಸದೀಯ ಮತ್ತು ಶಾಸನ ರಚನಾ ಇಲಾಖೆ ಉಪ ಕಾರ್ಯದರ್ಶಿ ಬಿ.ಜಿ.ಶ್ಯಾಮಲಾ ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಿದರು.
 
ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಮುನಿರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಅಶ್ವತ್ಥನಾರಾಯಣ ಕುಮಾರ್ ಮಾತನಾಡಿದರು. ಶಿಕ್ಷಣಾಧಿಕಾರಿ ಕೆ.ಕೆ.ನಾಗರತ್ನ, ವಿಷಯ ಪರಿವೀಕ್ಷಕ ಸಿ. ಚಂದ್ರಪ್ಪ, ಆರ್.ಮಹದೇವ ಉಪಸ್ಥಿತರಿದ್ದರು.

ಸಂಸತ್ ಸ್ಪರ್ಧೆ ವಿಜೇತರು..
* ಪ್ರಥಮ: `ಮುಖ್ಯಮಂತ್ರಿ~-  ದೇವನಹಳ್ಳಿ ತಾಲ್ಲೂಕು ಯಲಿಯೂರಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಆರ್. ವಿನಯ್ ಕುಮಾರ್.

* ದ್ವಿತೀಯ: `ಮುಖ್ಯಮಂತ್ರಿ~- ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಪ್ರೌಢಶಾಲೆ ವಿದ್ಯಾರ್ಥಿನಿ ಬಿ.ಆರ್.ಪ್ರೀತಿ.

* ತೃತೀಯ:  `ಗೃಹಮಂತ್ರಿ~- ಹೊಸಕೋಟೆ ಪ್ರೌಢಶಾಲೆಯ ವಿದ್ಯಾರ್ಥಿ ಮಣಿಕಂಠ

* ನಾಲ್ಕನೇ ಬಹುಮಾನ: `ವಿರೋಧ ಪಕ್ಷದ ನಾಯಕಿ~- ನೆಲಮಂಗಲದ ಎಸ್‌ಬಿಇಎಚ್‌ಎಸ್ ಶಾಲೆಯ ವಿದ್ಯಾರ್ಥಿನಿ ಬಿ.ರಾಕಿ

* ಐದನೇ ಬಹುಮಾನ:  ಯಲಿಯೂರಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ವೈ.ಎಲ್. ಅಶ್ವಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT