ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆಗಳ ಅನುಷ್ಠಾನ ಸುಧಾರಣೆಗೆ ಕ್ರಮ: ಸಚಿವ ಎಸ್.ಎ. ರವೀಂದ್ರನಾಥ್ ಕರೆ

Last Updated 16 ಆಗಸ್ಟ್ 2012, 6:15 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದು, ಪ್ರಮುಖ ಯೋಜನೆಗಳ ಅನುಷ್ಠಾನದಲ್ಲಿ ಸುಧಾರಣೆ ತಂದು ಅವುಗಳ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಈಡೇರಿಸಲು ಎಲ್ಲರೂ ಕೈಜೋಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಕರೆ ನೀಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 66ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಅನೇಕ ಮಹನೀಯರು ಹಾಗೂ ಸೇನಾನಿಗಳು ತ್ಯಾಗ ಬಲಿದಾನದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅಂತಹ ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು. ಅದನ್ನು ಮನಬಂದಂತೆ ಬಳಸದೇ, ಅಗೌರವ ತೋರದೇ ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾಗುವ ರೀತಿಯಲ್ಲಿ ನಡೆದುಕೊಳ್ಳುವಂತೆ ಯುವಜನರಿಗೆ ಸಲಹೆ ನೀಡಿದರು.

ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ವಿಶೇಷವಾಗಿ ಪ್ರಸ್ತಾವ ಮಾಡಿದ ಸಚಿವರು, ಈ ಬಾರಿ ಮುಂಗಾರು ಬಿತ್ತನೆಗೆ ತೊಡಕಾಗಿದ್ದಕ್ಕೆ ಕಳವಳ ವ್ಯಕ್ತಪಡಿಸಿ, ಮಳೆ ವಿಳಂಬವಾದರೂ ಜಿಲ್ಲೆಯಲ್ಲಿ 2.48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುವುದು ಸಮಾಧಾನ ತಂದಿದೆ ಎಂದರು.

ವಿವಿಧ ಯೋಜನೆಗಳ ಅಡಿ 16,288 ಕ್ವಿಂಟಲ್ ಬಿತ್ತನೆಬೀಜವನ್ನು ರೂ. 4.40 ಕೋಟಿ ವೆಚ್ಚದಲ್ಲಿ ಜಿಲ್ಲೆಯ ರೈತರಿಗೆ ವಿತರಿಸಲಾಗಿದೆ. ಸಾಕಷ್ಟು ರಸಗೊಬ್ಬರದ ದಾಸ್ತಾನು ಇದೆ. ಕೃಷಿ ಯಂತ್ರೋಪಕರಣ ಯೋಜನೆ ಅಡಿ 333 ಫಲಾನುಭವಿಗಳಿಗೆ ರೂ. 1.64 ಕೋಟಿ ವೆಚ್ಚದಲ್ಲಿ ಕೃಷಿ ಉಪಕರಣ ವಿತರಿಸಲಾಗಿದೆ. ಕೃಷಿ ಇಲಾಖೆಯ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಕಾಡಜ್ಜಿ ಜಿಲ್ಲಾ ತರಬೇತಿ ಕೇಂದ್ರ, ಮಾಯಕೊಂಡ ಹೋಬಳಿ ಹಾಗೂ ಹರಪನಹಳ್ಳಿ ತಾಲ್ಲೂಕು ರಾಜ್ಯಮಟ್ಟದ ಪ್ರಶಸ್ತಿಗೆ  ಆಯ್ಕೆಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಯ 6 ತಾಲ್ಲೂಕುಗಳನ್ನೂ ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು ರೂ. 14.35 ಕೋಟಿ ಬಿಡುಗಡೆ ಮಾಡಿದೆ. 401 ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದೆ. 5.73 ಲಕ್ಷ ಕುಟುಂಬಗಳಿಗೆ ಪಡಿತರ ಚೀಟಿ ನೀಡಲಾಗಿದೆ ಎಂದರು.

ರೂ. 305 ಕೋಟಿ ವೆಚ್ಚದಲ್ಲಿ ತೋಟಗಾರಿಕೆ ಸಮಗ್ರ ಅಭಿವೃದ್ಧಿಗಾಗಿ ಬೃಹತ್ ಯೋಜನೆ ರೂಪಿಸಲಾಗಿದೆ. ಹಿಂದಿನ ವರ್ಷ ಜಿಲ್ಲೆಯಲ್ಲಿ 1,656 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ವಿಸ್ತಾರಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ರೂ. 4.51 ಕೋಟಿ ಸಹಾಯಧನ ನೀಡುವ ಗುರಿ ಹೊಂದಲಾಗಿದೆ. ಮೀನುಗಾರಿಕೆಗೆ ಉತ್ತೇಜನ ನೀಡಿದ್ದು, ಜಿಲ್ಲೆಯ ವಿವಿಧ ಕೆರೆ-ಕಟ್ಟೆಗಳಲ್ಲಿ 1.29 ಕೋಟಿ ಮೀನುಮರಿ ಬಿತ್ತನೆ ಮಾಡಲಾಗಿದೆ. ರೂ. 1.10 ಕೋಟಿ ವೆಚ್ಚದಲ್ಲಿ ಸೂಳೆಕೆರೆ ಮೀನುಮರಿ ಪಾಲನಾ  ಕೇಂದ್ರ ಅಭಿವೃದ್ಧಿಪಡಿಸಲಾಗುತ್ತಿದೆ. ದಾವಣಗೆರೆ ನಗರದ ಡಾಂಗೆ ಪಾರ್ಕ್ ಹಾಗೂ ಹೊಂಡದ ರಸ್ತೆ ಬಳಿ 2.44 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮೀನುಮಾರುಕಟ್ಟೆ ನಿರ್ಮಿಸಲಾಗುತ್ತಿದೆ ಎಂದು ವಿವರ ನೀಡಿದರು.

ಪ್ರವಾಹಪೀಡಿತ ಗ್ರಾಮಗಳ ಸ್ಥಳಾಂತರಕ್ಕಾಗಿ ಇದುವರೆಗೆ 1,161 ಮನೆ ನಿರ್ಮಿಸಲಾಗಿದ್ದು, 1,136 ಮನೆ ವಿತರಿಸಲಾಗಿದೆ. ಗ್ರಾಮಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿ, ಸ್ವಚ್ಛಗ್ರಾಮಗಳನ್ನು ರೂಪಿಸಲು ಅಧಿಕಾರಿಗಳ ಜತೆ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಕರೆ ನೀಡಿದ ಅವರು, `ಗ್ರಾಮ ರತ್ನ~ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಎಳೆಹೊಳೆ, ಬೇವಿನಹಳ್ಳಿ ಗ್ರಾಮಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗಮನ ಸೆಳೆದ ನೃತ್ಯ ರೂಪಕ

ದೇಶದಲ್ಲಿ ತಾಂಡವಾಡುತ್ತಿರುವ ಧಾರ್ಮಿಕ ಕಲಹ, ಕುರ್ಚಿಗಾಗಿ ನಡೆಯುವ ರಾಜಕೀಯ ಕಾದಾಟ, ದುಶ್ಚಟಗಳಿಗೆ ದಾಸರಾಗುವ ಯುವ ಸಮೂಹ... ಇಂತಹ ನ್ಯೂನತೆಗಳ ವಿರುದ್ಧ ಸಿಡಿದೇಳುವ ದೇಶಭಕ್ತರು. ದೇಶ ಭಕ್ತಿ ಸಾರುವ ಕೆಲ ಮನಸ್ಸುಗಳು...

ಇಂತಹ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ನೃತ್ಯ ರೂಪಕ ಪ್ರದರ್ಶಿಸಿದ್ದು ಶಿರಮಗೊಂಡನಹಳ್ಳಿಯ ಅನ್‌ಮೋಲ್ ಶಾಲೆಯ ಮಕ್ಕಳು.

ನೃತ್ಯ ರೂಪಕದ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ತೋರಿದ ಹಲವು ಕಸರತ್ತುಗಳು ಗಮನ ಸೆಳೆದವು. ಹಾಗೆಯೇ, ಮಾಕನೂರು ಮುದೇಗೌಡ್ರ ಮಲ್ಲೇಶಪ್ಪ ಶಾಲೆಯ ಮಕ್ಕಳು ಪ್ರದರ್ಶಿಸಿದ ನೃತ್ಯರೂಪಕವೂ ಗಮನ ಸೆಳೆಯಿತು.

ಸಿದ್ದಗಂಗಾ ಶಾಲೆಯ ಮಕ್ಕಳು ಪ್ರದರ್ಶಿಸಿದ ವಂದೇಮಾತರಂ ನೃತ್ಯ ರೂಪಕ. ಸ್ವಾತಂತ್ರ್ಯ ಹೋರಾಟದ ಸಂದರ್ಭದ ಹಲವು ಮಗ್ಗಲುಗಳನ್ನು ಪರಿಚಯಿಸುವಲ್ಲಿ ಸಫಲವಾಯಿತು.

ಧ್ವಜಾರೋಹಣ ಸಂದರ್ಭದಲ್ಲಿ ನಡೆದ ಪಥಸಂಚಲನ ಆಕರ್ಷಕವಾಗಿತ್ತು. ಭಾಗವಹಿಸಿದ್ದ 26 ತಂಡಗಳಲ್ಲಿ ಎವಿಕೆ ಕಾಲೇಜು ಮಹಿಳಾ ತಂಡ ಪ್ರಥಮ, ಸೇಂಟ್‌ಜಾನ್ ಶಾಲೆಯ ತಂಡ, ಸೇಂಟ್‌ಪಾಲ್ಸ್ ಶಾಲೆ ಹಾಗೂ ಸಿದ್ದಗಂಗಾ ಶಾಲೆಯ ಮಕ್ಕಳ ತಂಡ ಬಹುಮಾನ ಪಡೆಯಿತು.

ಈ ಸಂದರ್ಭದಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಯೋಧರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಚಕ್ರರಹಿತ ಧ್ವಜ: ದೇಶ ಭಕ್ತಿ ಸಾರುವ ನೃತ್ಯರೂಪಕ ಪ್ರದರ್ಶಿಸಿದ ಒಂದು ತಂಡ ಬಳಸಿದ ರಾಷ್ಟ್ರಧ್ವಜಗಳಲ್ಲಿ ಮಧ್ಯದಲ್ಲಿ ಇರಬೇಕಾದ ಚಕ್ರವೇ ಇರಲಿಲ್ಲ. ಈ ಸಂಬಂಧ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಡಳಿತದ ಗಮನ ಸೆಳೆದರು. ಶಾಲೆಯ ಶಿಕ್ಷಕರ ನಿರ್ಲಕ್ಷ್ಯವನ್ನು ಖಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT