ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಕರ್ಮಿಗಳ ಆತ್ಮವಿಶ್ವಾಸದ ಪ್ರತೀಕ ಸಿಜಿಕೆ

Last Updated 27 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಂಗಭೂಮಿಯ ಸಾವಿರಾರು ಕಲಾವಿದರಿಗೆ ಧೈರ್ಯ ತುಂಬಿದ ಸಿಜಿಕೆ, ರಂಗಕರ್ಮಿಗಳ ಆತ್ಮವಿಶ್ವಾಸದ ಪ್ರತೀಕದಂತಿದ್ದಾರೆ~ ಎಂದು ಕಲಾ ನಿರ್ದೇಶಕ ಶಶಿಧರ ಅಡಪ ಮೆಚ್ಚುಗೆ ವ್ಯಕ್ತಪಡಿಸಿದರು.

ರಂಗ ನಿರಂತರ ಸಂಸ್ಥೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಿಜಿಕೆ ನೆನಪು ಹಾಗೂ `ಚೌಟಾಯನ~ ಡಿ.ಕೆ.ಚೌಟ ಅವರ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ರಂಗಭೂಮಿ ಒಂದು ಕಾಲದಲ್ಲಿ ಕೆಲವೇ ಮಂದಿ ಸಂಭಾವಿತರಿಗೆ ಸೇರಿತ್ತು. ಅದು ಎಲ್ಲರಿಗೂ ದಕ್ಕುವಂತೆ ಸಿಜಿಕೆ ಮಾಡಿದರು. ರಂಗಭೂಮಿಯ ಅನೇಕರ ವ್ಯಕ್ತಿತ್ವವನ್ನು ಅವರು ರೂಪಿಸಿದರು. ಒಂದು ಚೇತನವಾಗಿ ಅವರು ಸದಾ ನಮ್ಮ ಜತೆಗಿದ್ದಾರೆ~ ಎಂದರು.

`ಮಾತನಾಡಿದಂತೆ ಮಾಡು ಎಂಬುದು ಸಿಜಿಕೆ ನಿಲುವಾಗಿತ್ತು. ಸುಮ್ಮನೆ ಕೂರುವುದಕ್ಕಿಂತ ಸರಿಯೋ ತಪ್ಪೋ ಏನಾದರೂ ಮಾಡು ಎಂದು ಅವರು ಪ್ರೇರೇಪಿಸುತ್ತಿದ್ದರು. ಅಂತಹ ಮಹಾನ್ ರಂಗಕರ್ಮಿಯ ಅಂತಃಸತ್ವ ರಂಗಭೂಮಿಯಲ್ಲಿ ಜೀವಂತವಾಗಿ ಉಳಿಯಬೇಕು~ ಎಂದು ಅವರು ತಿಳಿಸಿದರು.

ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ ಮಾತನಾಡಿ, `ಅನೇಕ ಹೊಸ ಹೊಸ ನಾಟಕಕಾರರನ್ನು ಸಿಜಿಕೆ ಹುಟ್ಟುಹಾಕಿದರು. ಬರೆಯುವುದೇ ಇಲ್ಲ ಎಂದು ಹಠ ಹಿಡಿದಂತಿದ್ದ ಕಿ.ರಂ.ನಾಗರಾಜರಂತಹ ವಿದ್ವಾಂಸರಿಂದಲೂ ನಾಟಕಗಳನ್ನು ಬರೆಸಿದರು. ಸಿಜಿಕೆ ಅವರಿಂದಾಗಿ ಸಾಣೆಹಳ್ಳಿಯಲ್ಲಿ ರಂಗ ಚಟುವಟಿಕೆ ಅರಳಿತು. ಸುಚಿತ್ರಾ ಸಂಸ್ಥೆಯ ಅಂಗಳದಲ್ಲಿ ಪೀರ್ ಬಯಲು ರಂಗಭೂಮಿ ಮೈದಳೆಯಿತು~ ಎಂದು ಬಣ್ಣಿಸಿದರು.

`ಕನಸುಗಳನ್ನು ಬಿತ್ತಿದ ಕನಸುಗಾರ ಸಿಜಿಕೆ. ರಂಗಭೂಮಿ ಪರಿಷತ್ತು ಹುಟ್ಟು ಹಾಕಬೇಕು ಎಂಬುದು ಅವರ ಕನಸಾಗಿತ್ತು. ಇದಕ್ಕಾಗಿ ಹಲವು ವರ್ಷಗಳ ಕಾಲ ಶ್ರಮಿಸಿದರು. ಆದರೆ ರಂಗಕರ್ಮಿಗಳ ದೌರ್ಬಲ್ಯಗಳಿಂದಾಗಿ ಅವರು ಕಂಡ ಅನೇಕ ಕನಸುಗಳನ್ನು ನನಸು ಮಾಡಲು ಸಾಧ್ಯವಾಗುತ್ತಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, `ತಮ್ಮ ಜತೆಗೆ ಅನೇಕ ಕಲಾವಿದರನ್ನು ಬೆಳೆಸಿದ ಸಿಜಿಕೆ ನೆನಪು ಅತಿ ಮುಖ್ಯವಾಗುತ್ತದೆ. ಅವರ ನೆನಪು ಚೇತೋಹಾರಿಯಾದುದು. ಸಿಜಿಕೆ ಹಾಗೂ ಡಿ.ಕೆ. ಚೌಟ ಅವರದ್ದು ಅನುರೂಪದ ಹೊಂದಾಣಿಕೆ. ಸಿಜಿಕೆ ನೆನಪಿನಲ್ಲಿ ಚೌಟ ಅವರ ನಾಟಕ ಪ್ರದರ್ಶನ ನಡೆಯುತ್ತಿರುವುದು ಸಂತಸದ ವಿಷಯ~ ಎಂದರು.

ಈ ಸಂದರ್ಭದಲ್ಲಿ ರಂಗಕರ್ಮಿ ಕೆ.ಕೇಶವಲು, ನಿರ್ದೇಶಕ ಬಿ.ಜಿ.ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು.ರಕ್ತದಾನ ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಿಜಿಕೆ ಅವರ ಪತ್ನಿ ಜಯಲಕ್ಷ್ಮಿ, ರಂಗಕರ್ಮಿ ರಶ್ಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT