ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಿಗೆ ‘ಕಿಕ್’

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಟ ಉಪೇಂದ್ರ ಪೊಲೀಸ್ ವೇಷ ತೊಟ್ಟಿದ್ದರು. ಆದರೆ ಪೊಲೀಸ್ ಅಧಿಕಾರಿಯ ಮೊಗದಲ್ಲಿ ಇರಬೇಕಿದ್ದ ಗಾಂಭೀರ್ಯ ಮಾತ್ರ ಅವರ ದೇಹಭಾಷೆಯಲ್ಲಿ ಇರಲಿಲ್ಲ. ಯಾವುದೋ ಲಹರಿಯಲ್ಲಿ ಅವರು ಪೊಲೀಸ್ ಲಾಠಿಯನ್ನು ಹೂಕೋಲಿನಂತೆ ತಿರುಗಿಸುತ್ತಿದ್ದರು.

ಕ್ಯಾಮೆರಾಗೆ ದೃಷ್ಟಿ ತಾಗಿಸಿದ್ದ ಸಾಧುಕೋಕಿಲ ನಟನೆಯ ರ್‍ಯಾಂಪ್‌ಗೆ ಉಪೇಂದ್ರರನ್ನು ಪದೇ ಪದೇ ಆಹ್ವಾನಿಸಿ, ಪೊಲೀಸ್ ನಡಿಗೆಯ ಭಂಗಿಗಳನ್ನು ವಿಭಿನ್ನ ಕೋನಗಳಲ್ಲಿ ಚಿತ್ರೀಕರಿಸುತ್ತಿದ್ದರು. ಅಂದಹಾಗೆ, ಅದು ‘ಸೂಪರೋ ರಂಗ’ ಚಿತ್ರದ ಮುಹೂರ್ತ. ಸಾಧು ಕೋಕಿಲ ಚಿತ್ರದ ನಿರ್ದೇಶಕರು.

‘ಸೂಪರೋ ರಂಗ’ ತೆಲುಗಿನ ‘ಕಿಕ್’ ಚಿತ್ರದ ರೀಮೇಕ್. ‘ನಾನು ಈ ಚಿತ್ರ ನಿರ್ದೇಶಿಸಬೇಕು ಎಂದಾದರೆ ಸೂಕ್ತ ಕಲಾವಿದರನ್ನೇ ನೀಡಬೇಕು’ ಎಂದು ಚಿತ್ರದ ನಿರ್ಮಾಪಕ ಕೆ. ಮಂಜು ಅವರಲ್ಲಿ ಸಾಧು ಪಟ್ಟು ಹಿಡಿದಿದ್ದರಂತೆ. ಅವರ ಕೋರಿಕೆಗೆ ನಿರ್ಮಾಪಕರು ಅಸ್ತು ಎಂದಿದ್ದಾರೆ. ಉಪೇಂದ್ರ ನಟನೆಯ ಮೂರನೇ ಸಿನಿಮಾ ನಿರ್ದೇಶಿಸುತ್ತಿರುವ ಖುಷಿ ಅವರದ್ದು.

‘ಬಾಲ್ಯದ ಗೆಳೆಯ ಸಾಧುಕೋಕಿಲ ಜೊತೆ ಒಂದು ಸಿನಿಮಾ ಮಾಡುವ ಆಸೆ ಈಗ ಕಾರ್ಯರೂಪಕ್ಕೆ ಬಂದಿದೆ. ಹಲವು ದಿನಗಳಿಂದಲೇ ‘ಸೂಪರೋ ರಂಗ’ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದೆ. ಸಿದ್ಧತೆ ಪೂರ್ಣಗೊಂಡರೂ ಚಿತ್ರದ ದಂಡನಾಯಕನ ಆಯ್ಕೆ ಕಗ್ಗಂಟಾಗಿತ್ತು.

ಕೊನೆಗೆ ಸಿಕ್ಕಿದ್ದು ಬಾಲ್ಯದ ಗೆಳೆಯ. ಯಾವುದೇ ಕುಂದು ಕೊರತೆಗಳು ಉಂಟಾಗದಂತೆ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಿಸುವೆ’ ಎಂದು ಚಿತ್ರಕ್ಕೆ ಮಾಡಿಕೊಂಡಿರುವ ತಯಾರಿಯ ಬಗ್ಗೆ ಮಂಜು ಹೇಳಿದರು.

ರಂಗನ ಪಾತ್ರದ ಉಪೇಂದ್ರ ಮಾತ್ರ ಹೆಚ್ಚು ಮಾತನಾಡಲಿಲ್ಲ. ಚಿತ್ರ ಸೂಪರ್ ಆಗಿ ಬರಲಿದೆ ಎಂದಷ್ಟೇ ಹೇಳಿ, ಚಿತ್ರೀಕರಣದತ್ತ ಮುಖ ಮಾಡಿದರು. ಚಿತ್ರದ ನಾಯಕಿ ಕೃತಿ ಕರಬಂಧ ಅವರಿಗೆ ಮೊದಲ ಬಾರಿಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಚಿತ್ರ ಅವಕಾಶ ನೀಡಿದೆಯಂತೆ.

ಚಿತ್ರೀಕರಣದ ವೇಳೆ ನಿರ್ದೇಶಕರು ಮುಖ ಗಂಟಿಕ್ಕಿಕೊಳ್ಳುವುದು ಸಹಜ. ಆದರೆ ಸಾಧುಕೋಕಿಲ ಇದಕ್ಕೆ ಅಪವಾದ. ಎಲ್ಲರನ್ನೂ ಹಾಸ್ಯ ಧಾಟಿಯಲ್ಲೇ ಕರೆದೊಯ್ಯುವ ಜಾಣ್ಮೆ ಅವರಿಗಿದೆ ಎಂದಿತು ಚಿತ್ರತಂಡ. ರಂಗನನ್ನು ಡಿಸೆಂಬರ್‌ನಲ್ಲಿ ತೆರೆ ಕಾಣಿಸುವುದು ಚಿತ್ರತಂಡದ ಉದ್ದೇಶ. ರಂಗಾಯಣ ರಘು, ಮಿಮಿಕ್ರಿ ದಯಾನಂದ್, ದೊಡ್ಡಣ್ಣ, ರಘು ಮುಖರ್ಜಿ, ಬುಲ್ಲೆಟ್ ಪ್ರಕಾಶ್, ಶ್ರೀಧರ್ ಮತ್ತಿತರ ಪ್ರಮುಖ ಕಲಾವಿದರ ದಂಡು ಚಿತ್ರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT