ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಗೆ ಶುದ್ಧಾಂಗ ಆಧುನಿಕತೆ ಸ್ಪರ್ಶ ಅಗತ್ಯ

Last Updated 21 ಅಕ್ಟೋಬರ್ 2011, 6:05 IST
ಅಕ್ಷರ ಗಾತ್ರ

ಹರಪನಹಳ್ಳಿ: ಜಾನಪದ ಪರಂಪರೆಯ ಮೂಲ ತಾಯಿ ಬೇರಿನೊಂದಿಗೆ ಬೆಳೆದು ಬಂದಿರುವ ರಂಗಭೂಮಿಗೆ ಕಾಲಮಾನಕ್ಕೆ ಅನುಗುಣವಾಗಿ ಶುದ್ಧಾಂಗ ಆಧುನಿಕತೆಯ ಸ್ಪರ್ಶ ನೀಡಬೇಕಿದೆ ಎಂದು ನವದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಪ್ರಾದೇಶಿಕ ಸಂಪನ್ಮೂಲ ಕೇಂದ್ರದ ದೇಸಿ ಪ್ರಸಿದ್ಧಿಯ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಅಭಿಪ್ರಾಯಪಟ್ಟರು.

ಗುರುವಾರ ತಾಲ್ಲೂಕು ಕ್ರೀಡಾಂಗಣದಲ್ಲಿ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ಬೆಂಗಳೂರು ಹಾಗೂ ಸ್ಥಳೀಯ ಆದರ್ಶ ಮಹಿಳಾ ಮಂಡಳಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜಪ್ಪ ದಳವಾಯಿ ಅವರ `ಒಂದು ಬೊಗಸೆ ನೀರು~ ನಾಟಕದ ಪ್ರಯೋಗದಾಟದ ಉದ್ಘಾಟನಾ ಸಮಾರಂಭದಲ್ಲಿ  ಅವರು ಮಾತನಾಡಿದರು.

ಜಾನಪದ ಸೊಗಡಿನ ಮುಕ್ತ ಆಗಮನ ಹಾಗೂ ನಿರ್ಗಮನದ ಮೂಲ ಬೇರುಗಳಿಂದ ಉಗಮವಾದ ನಾಟಕಗಳು, ಕಾಲಾಂತರದಲ್ಲಿ ಸಂಪ್ರದಾಯ, ಗ್ರಾಮೀಣ ಬದುಕಿನ ನೈಜಘಟನೆಗಳು, ಆಚಾರ-ವಿಚಾರ, ಸಂಸ್ಕೃತಿ ಸೇರಿದಂತೆ ವಿವಿಧ ಆಯಾಮ ಗಳಿಗೆ ರಂಗಭೂಮಿ ಮೈತೆರೆದು ಕೊಂಡಿತು. ಇವೆರಡು ಆಯಾಮದ ಆಗಮನದಿಂದಲೂ ಭವ್ಯ ಸಾಂಸ್ಕೃತಿಕ ಶ್ರೀಮಂತಿಕೆ ಮೆರೆದ ರಂಗಭೂಮಿ ಜನಸಾಮಾನ್ಯರ ನೋವು- ನಲಿವು  ಅಭಿವ್ಯಕ್ತಪಡಿಸುವ ಪ್ರಬಲ ಮಾಧ್ಯಮವಾಗಿ ರೂಪಾಂತರ ಗೊಂಡಿತು. ಆದರೆ, ಯಾವಾಗ ಅಭಿಜಾತ ಪರಂಪರೆ ಎಂಬ  ಶಿಷ್ಟ ಸಂಸ್ಕೃತಿಯ ಸ್ಪರ್ಶ ರಂಗಭೂಮಿಯನ್ನು ಆವರಿಸಿತೊ, ಆಗ ರಂಗಭೂಮಿಯತ್ತ ಜನಸಾಮಾನ್ಯರ ದೃಷ್ಟಿ ವಿಮುಖ ಆಯಿತು ಎಂದು ವಿಷಾದಿಸಿದರು.

ಅಭಿಜಾತ ಪರಂಪರೆಯ ಶಿಷ್ಟ ಸಂಸ್ಕೃತಿಯಿಂದ ಹೊರಬರುವ ಮೂಲಕ, ಮೂಲ ಜನಪದ ಸಂಸ್ಕೃತಿ, ಸಂಪ್ರದಾಯದ ಗಟ್ಟಿತನವನ್ನು ನಾಟಕಗಳಲ್ಲಿ ಅವಳಡಿಸಿಕೊಂಡು, ಪ್ರೇಕ್ಷಕರ ಅಭಿರುಚಿಗೆ ತಕ್ಕುದಾದ ಸಂಭಾಷಣೆ, ತಾಂತ್ರಿಕತೆಯ ವಿನ್ಯಾಸ ಸೇರಿದಂತೆ ಶುದ್ಧಾಂಗ ಆಧುನಿಕತೆ ಯನ್ನು ನಾಟಕದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಮೌಲ್ಯಗಳ ನೀತಿ ಸಂದೇಶ ಸಾರಲು ಪ್ರಯತ್ನಿಸಿದಾಗ ರಂಗಭೂಮಿಯಲ್ಲಿ ಮತ್ತೆ ಗತವೈಭವ ಕಾಣಲು ಸಾಧ್ಯ ಎಂದರು.

ಕಲಾವಿದ ಬಸವರಾಜ್ ಸಂಗಪ್ಪನವರ್ ಮಾತನಾಡಿ, ನಾಟಕಗಳು ಜನಪದ ಹಾಗೂ ಜನಪರವಾದ ಧೋರಣೆಗಳನ್ನು ಗರ್ಭೀಕರಿಸಿಕೊಳ್ಳುವ ಮೂಲಕ ಪ್ರಗತಿಪರವಾದ ಚಿಂತನೆಗಳ ಸಾರವನ್ನು ಪ್ರೇಕ್ಷಕರಿಗೆ ನೀಡಬೇಕಿದೆ. ಮಾನವೀಯ ಮೌಲ್ಯ, ಕೌಟುಂಬಿಕ ಸಂಬಂಧಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಇದು ಹೆಚ್ಚು ಪ್ರಸ್ತುತ ಎಂದರು.

ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಮಂಡಳಿಯ ಅಧ್ಯಕ್ಷೆ ದೇವಿರಮ್ಮ ಅಧ್ಯಕ್ಷತೆ ವಹಿಸಿದ್ದರು. ನಾಟಕ ಅಕಾಡೆಮಿ ಪುರಸ್ಕೃತ ರಂಗಕರ್ಮಿ ಬಿ. ಪರಶುರಾಮ್,  ಸಹನಿರ್ದೇಕ ಬಿ.ಟಿ. ಅರುಣ್, ಕಲಾವಿದರಾದ ಮಾಲತೇಶ್ ಮರೇಗೌಡರ್, ಕೆ. ಷಣ್ಮುಖಪ್ಪ, ಎಂ. ಮಾರುತಿ, ಬಿ.ಕೆ.ಎಂ. ಶೋಭಾ, ಎ. ಮಿರ್ಜಾ, ಗಂಗಾಧರ, ಟಿ. ಉಮಾಕಾಂತ್, ಹೇಮಂತ್ ಮೋರಗೇರಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT