ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್: ಬಂದೋಬಸ್ತ್‌ಗೆ ಹೆಚ್ಚುವರಿ ಪೊಲೀಸ್

Last Updated 3 ಆಗಸ್ಟ್ 2013, 7:50 IST
ಅಕ್ಷರ ಗಾತ್ರ

ದಾವಣಗೆರೆ: `ಹಬ್ಬಗಳನ್ನು ಸಂತೋಷ ಹಾಗೂ ನೆಮ್ಮದಿಯಿಂದ ಆಚರಿಸಬೇಕು. ಯಾವುದೇ ಕಾರಣಕ್ಕೂ ಕಿಡಿಗೇಡಿಗಳ ಅಟ್ಟಹಾಸ ಮೆರೆಯಬಾರದು. ಶಾಂತಿಯಿಂದ ಹಬ್ಬ ಆಚರಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್ ಭರವಸೆ ನೀಡಿದರು.

ನಗರದ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ರಂಜಾನ್ ಹಿನ್ನೆಲೆಯಲ್ಲಿ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.

ತೊಂದರೆ ಆಗದಂತೆ ಪಾಲಿಕೆಯವರು ಕ್ರಮಕೈಗೊಳ್ಳಬೇಕು. ಬೀದಿದೀಪ ಇಲ್ಲದ ಕಡೆಗಳಲ್ಲಿ ದೀಪ ಅಳವಡಿಸಬೇಕು. `ರಂಜಾನ್' ಪವಿತ್ರ ಹಬ್ಬ. ಯಾವುದೇ ಕಾರಣಕ್ಕೂ ಕಿಡಿಗೇಡಿಗಳು ತೊಂದರೆ ಉಂಟು ಮಾಡಬಾರದು. ಬಂದೋಬಸ್ತ್‌ಗೆ ಅಗತ್ಯಬಿದ್ದರೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ಇದನ್ನು ಶಾಂತಿ ಸಭೆ ಎಂದು ಕರೆದರೆ ಗೊಂದಲ ಉಂಟಾಗಬಹುದು. ಆದ್ದರಿಂದ, `ನಾಗರಿಕರ ಸಲಹಾ ಸಮಿತಿ ಸಭೆ' ಎಂದು ಕರೆಯುವುದು ಸೂಕ್ತ. ಪ್ರತಿ ತಿಂಗಳು ಸಭೆ ಕರೆದು, ನಾಗರಿಕರ ಸಮಸ್ಯೆ ಆಲಿಸುವಂತೆ ಸರ್ಕಾರ ಹೊಸ ಆದೇಶ ನೀಡಿದೆ ಎಂದು ಮಾಹಿತಿ ನೀಡಿದರು. 

ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, `ಜಿಲ್ಲೆಯಲ್ಲಿ ಶಾಂತಿಭಂಗ ಉಂಟಾಗುವ ಸನ್ನಿವೇಶ ಈಗಿಲ್ಲ. ಹಬ್ಬದಂದು ರಾತ್ರಿ ಜನರು ಸಂಚರಿಸುವ ರಸ್ತೆಗಳಲ್ಲಿ ಕತ್ತಲು ಇರಬಾರದು. ಪಾಲಿಕೆಯವರು ಅಗತ್ಯ ಕ್ರಮಕೈಗೊಳ್ಳಬೇಕು. ಪ್ರಾರ್ಥನೆ ಮುಗಿದ ಬಳಿಕವೇ ವಾಹನ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಲಾಗುವುದು' ಎಂದು ಭರವಸೆ ನೀಡಿದರು.

ಸಮಾಜದ ಮುಖಂಡ ಸೈಯದ್ ಸೈಫುಲ್ಲಾ ಮಾತನಾಡಿ, `ಸಮಾಜ ಬಾಂಧವರು 30 ದಿನಗಳ ಕಾಲ ಉಪವಾಸವಿದ್ದು ಕೊನೆ ದಿವಸ `ರಂಜಾನ್' ಆಚರಿಸುತ್ತಾರೆ. ಆಗಸ್ಟ್ 5ರಂದು ಜಾಗರಣೆ ನಡೆಯಲಿದೆ. ಅಂದು ಎಲ್ಲಾ ಮಸೀದಿಗಳಲ್ಲೂ ಪ್ರಾರ್ಥನೆ ನಡೆಯಲಿದೆ.  ಈ ಬಾರಿಯೂ ಇಫ್ತಾರ್ ಕೂಟ ಆಯೋಜಿಸಲಾಗುವುದು' ಎಂದು ಹೇಳಿದರು.

ಮುಖಂಡ ಮಲ್ಲೇಶ್ ಮಾತನಾಡಿ, ಶಾಂತಿಸಭೆ ಎಂದು ಕರೆಯುವ ಬಲದು ಇದನ್ನು `ಅಭಿವೃದ್ಧಿ' ಸಭೆ ಎಂದು ಕರೆಯುವುದು ಸೂಕ್ತ ಎಂದರು.

ಸೋಮ್ಲಾಪುರದ ಹನುಮಂತಪ್ಪ ಮಾತನಾಡಿ, ಎಲ್ಲಾ ಸಮುದಾಯದಲ್ಲೂ ಕಿಡಿಗೇಡಿಗಳಿದ್ದಾರೆ. ಅವರನ್ನು ಮಟ್ಟಹಾಕಬೇಕು. ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಅನೇಕ ಬಾರಿ ಮನವಿ ಮಾಡಿದ್ದರೂ ಬೇಡಿಕೆ ಈಡೇರಿಲ್ಲ. ಈ ಭಾಗದಲ್ಲಿ ಜನಸಂಖ್ಯೆ ಹಾಗೂ ವಿಸ್ತೀರ್ಣಕ್ಕೆ ಅನುಗುಣವಾಗಿ ಪೊಲೀಸರನ್ನು ನೇಮಿಸಬೇಕು ಎಂದರು. ಆಗ ಎಸ್ಪಿ ಪ್ರಕಾಶ್ ಪ್ರತಿಕ್ರಿಯಿಸಿ, ಬೆಂಗಳೂರು ಠಾಣೆಗಳ ಮಾದರಿಯಲ್ಲಿ ಸಿಬ್ಬಂದಿ ನಿಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಡೆನ್ಸಿಲ್ ಮಾತನಾಡಿ, ಕ್ರೈಸ್ತ ಬಾಂಧವರು ತಿಂಗಳಿಗೊಮ್ಮೆ `ಪೂರ್ಣರಾತ್ರಿ'ಯ ಪ್ರಾರ್ಥನೆ ಸಲ್ಲಿಸುತ್ತಾರೆ. ಅವರಿಗೂ ಪೊಲೀಸರು ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು. ಮುಖಂಡರಾದ ನೀಲಗಿರಿಯಪ್ಪ, ಅಮಾನುಲ್ಲಾ ಖಾನ್ ಮಾತನಾಡಿದರು.

ಪಾಲಿಕೆ ಸಮಸ್ಯೆ ಅನಾವರಣ...
ದಾವಣಗೆರೆ:
`ರಂಜಾನ್' ಹಿನ್ನೆಲೆಯಲ್ಲಿ ನಡೆದ ಶಾಂತಿಸಭೆಯಲ್ಲಿ ಪಾಲಿಕೆ ಸಮಸ್ಯೆಗಳು ಅನಾವರಣಗೊಂಡವು.
ಸಭೆಯಲ್ಲಿ ಸೇರಿದ್ದ ನಾಗರಿಕರು ಪಾಲಿಕೆಯ ಕಾರ್ಯ ವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಬಿಡಾಡಿ ದನಗಳ ಹಾವಳಿ, ಹಂದಿ- ನಾಯಿಗಳ ಕಾಟ, ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳಿಂದ ಆಗುತ್ತಿರುವ ತೊಂದರೆ, ಚರಂಡಿ ನೀರು ಮನೆಗೆ ನುಗ್ಗಿ ಆಗುತ್ತಿರುವ ಹಾನಿಯಂತಹ ಸಮಸ್ಯೆಗಳನ್ನು ನಾಗರಿಕರು ಬಿಚ್ಚಿಟ್ಟರು. ಪಾಲಿಕೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ಪಾಲಿಕೆ ಆಯುಕ್ತ ಸಂಜಯ್ ಶೆಟ್ಟನವರ್ ಅವರ ಎದುರು ಮನವಿ ಮಾಡಿದರು.

ಎಸ್ಪಿ ಡಿ.ಪ್ರಕಾಶ್ ಮಾತನಾಡಿ, ನಗರದ ರಸ್ತೆಗಳೆಲ್ಲಾ ಗುಂಡಿಗಳಿಂದ ಕೂಡಿವೆ. ತಾತ್ಕಾಲಿಕವಾಗಿ ರಸ್ತೆಗಳ ಗುಂಡಿ ಮುಚ್ಚಿಸುವ ಕೆಲಸ ನಡೆಯಬೇಕು ಎಂದು ಸಲಹೆ ನೀಡಿದರು.

ಬಳಿಕ ಮಾತನಾಡಿದ ಪಾಲಿಕೆ ಆಯುಕ್ತ ಸಂಜಯ್ ಶೆಟ್ಟನವರ್, `ನಾನು ಆಯಕ್ತನಾಗಿ ಬಂದ ಮೇಲೆ ದೂರುಗಳ ಸುರಿಮಳೆಯೇ ಆಗುತ್ತಿದೆ. ಮಳೆಗಾಲ ಆರಂಭವಾದ ಬಳಿಕ ರಸ್ತೆಗಳ ಸಮಸ್ಯೆ ಉಲ್ಬಣಿಸಿದೆ. ನಾಗರಿಕರು ಚರಂಡಿಗಳಿಗೆ ಚಾಪೆ, ಪ್ಲಾಸ್ಟಿಕ್ ಚೀಲ ಹಾಕುತ್ತಿರುವ ಪರಿಣಾಮ ಚರಂಡಿ ಸ್ಥಗಿತಗೊಳ್ಳುತ್ತಿದೆ. ನಗರದ ವಿವಿಧೆಡೆ ಅಡ್ಡಾಡಿ ನನಗೂ ಆರೋಗ್ಯ ಕೆಟ್ಟಿದೆ ಎಂದರು. ಆಗ ನಾಗರಿಕರು `ಅಲ್ಲೇ ವಾಸಿಸುವ ನಮ್ಮ ಗತಿಯೇನು' ಎಂದು ಪ್ರಶ್ನಿಸಿದರು.

`ಪಾಲಿಕೆಯ ಆದಾಯ ಕಡಿಮೆಯಿದೆ. ನಾನು ಬಂದ ಮೇಲೆ ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಿದ್ದೇನೆ. ಪಾಲಿಕೆ ಆದಾಯದ ಶೇ 90ರಷ್ಟು ಸಂಬಳಕ್ಕೆ ಬೇಕು. ಉಳಿಕೆಯ ಶೇ 10ರಷ್ಟು ಆದಾಯದಲ್ಲಿ ಸಣ್ಣಪುಟ್ಟ ಕೆಲಸಗಳು ನಡೆಯುತ್ತಿವೆ. ಬಿಡಾಡಿ ದನಗಳ ವಿಲೇವಾರಿಗೆ ಗೋಶಾಲೆಯವರು ನಿರಾಕರಿಸಿದ್ದಾರೆ. ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿದೆ' ಎಂದು ಸಮಸ್ಯೆ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT