ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್ ಸಾಬ್ ಪ್ರಶಸ್ತಿ ಪ್ರದಾನ: ಉರ್ದು ಇಸ್ಲಾಂ ಧರ್ಮದ ಭಾಷೆಯಲ್ಲ:ಸಾಹಿತಿ ಬರಗೂರು ರಾಮಚಂದ್ರಪ್ಪ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಿತ್ತಳೆ ಹಣ್ಣುಗಳನ್ನು ಬೀದಿ ಬೀದಿಯಲ್ಲಿ ಮಾರಿ ಶಾಲೆ ಸ್ಥಾಪಿಸಿ ಅಕ್ಷರ ದಾಸೋಹವನ್ನು ನಡೆಸುತ್ತಿರುವ ಅಕ್ಷರ ಸಂತ ಹರೇಕಳ ಹಾಜಬ್ಬ~ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಏರ್ಪಡಿಸಿದ್ದ ರಂಜಾನ್ ಸಾಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಹರೇಕಳ ಹಾಜಬ್ಬ ತನ್ನೂರಿನಲ್ಲಿ ಶಾಲೆಯನ್ನು ಆರಂಭಿಸಬೇಕೆನ್ನುವ ಮಹದಾಸೆಯಿಂದ ಅತ್ಯಂತ ಶ್ರಮವಹಿಸಿದ್ದಾರೆ. ತಮ್ಮ ಕನಸಿನ ಶಾಲೆಯನ್ನು ಕಟ್ಟಿ ಬೆಳೆಸಿದ್ದಾರೆ~ ಎಂದರು.`ಉರ್ದು ಇಸ್ಲಾಂ ಧರ್ಮದ ಭಾಷೆಯಲ್ಲ. ಈ ವೇದಿಕೆಯು ಇಸ್ಲಾಂ ಧರ್ಮದಲ್ಲಿಯೂ ಕನ್ನಡವಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಕನ್ನಡವೊಂದು ಜಾತ್ಯತೀತ ಭಾಷೆಯಾಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.

`ಕನ್ನಡವನ್ನು ಮಹಮ್ಮದೀಯರು, ಕ್ರೈಸ್ತರು, ಹಿಂದುಗಳು ಮತ್ತು ಅಲೆಮಾರಿಗಳು ಕಟ್ಟಿ ಬೆಳೆಸಿದ್ದಾರೆ. ಭಾಷೆಯನ್ನು ರಾಜಕೀಯವಾಗಿ ಒಡೆಯುವುದು ಸರಿಯಲ್ಲ. ಕಾವೇರಿ ನದಿ ನೀರಿನ ವಿಚಾರವಾಗಿ ನಮ್ಮಲ್ಲಿ ನೀರಿನ ಕೊರತೆಯ ಜತೆಗೆ ರಾಜಕೀಯ ಮುತ್ಸದ್ದಿತನದ ಕೊರತೆಯೂ ಎದ್ದು ಕಾಣುತ್ತಿದೆ. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಕೂಡ ತಮ್ಮ ಪಕ್ಷ ಭೇದವನ್ನು ಮರೆತು ಕಾವೇರಿ ನದಿ ನೀರಿನ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ, ಇಂದು ರಾಜ್ಯಕ್ಕೆ ಅನ್ಯಾಯವಾಗುತ್ತಿರಲಿಲ್ಲ~ ಎಂದು ಅವರು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, `ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟ ಆರಂಭಿಸಿ 24 ದಿನಗಳಾದವು. ಇಲ್ಲಿಯವರೆಗೂ ಶಾಂತಿಯುತ ಹೋರಾಟವನ್ನು ನಡೆಸಿಕೊಂಡು ಬಂದಿದ್ದೇವೆ. ಇನ್ನು ಮುಂದೆ ಹೋರಾಟದ ಸ್ವರೂಪವು ಬದಲಾಗಲಿದೆ. ಉಗ್ರ ಹೋರಾಟಕ್ಕೆ ಕನ್ನಡಿಗರು ಮುಂದಾಗಬೇಕು. ಇದಕ್ಕಾಗಿ ಕನ್ನಡ ಪರ ಸಂಘಟನೆಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು~ ಎಂದರು.

`ಒಗ್ಗಟ್ಟು ಅನಿವಾರ್ಯ~
`ಕನ್ನಡಪರ ಸಂಘಟನೆಗಳೆಲ್ಲ ಒಂದಾಗಿ ಕನ್ನಡಕ್ಕೆ ಹತ್ತು ಅಂಶಗಳ ಕಾರ್ಯಸೂಚಿ ರೂಪಿಸಿ ಅವುಗಳ ಜಾರಿಗಾಗಿ ಹೋರಾಟ ನಡೆಸಬೇಕು. ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾವೇರಿ ನೀರಿಗಾಗಿ ಹೋರಾಟ ನಡೆಸುವುದು ಅವಶ್ಯಕವಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಸಾಹಿತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT