ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಫೈನಲ್: ರಾಜಸ್ತಾನ ಮತ್ತೆ ಚಾಂಪಿಯನ್

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈ:  ಯೋಜನಾಬದ್ಧ ಪ್ರದರ್ಶನ ತೋರಿದ ರಾಜಸ್ತಾನ ತಂಡದವರು ಸತತ ಎರಡನೇ ಬಾರಿ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಹೆಸರಾಂತ ಆಟಗಾರರು ಇಲ್ಲದಿದ್ದರೂ ಅತ್ಯುತ್ತಮ ತಂಡಗಳಿಗೆ ಪೆಟ್ಟು ನೀಡಿದ ಈ ತಂಡದ್ದು ಅದ್ಭುತ ಸಾಧನೆ.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ಕೊನೆಗೊಂಡ ರಣಜಿ ಟ್ರೋಫಿ  ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ರಾಜಸ್ತಾನ 2011-12ರ ಋತುವಿನ ಟ್ರೋಫಿ ಎತ್ತಿ ಹಿಡಿಯಿತು. ಜೊತೆಗೆ ಎರಡು ಕೋಟಿ ರೂಪಾಯಿ ಬಹುಮಾನ ಈ ತಂಡದ ಜೇಬು ಸೇರಿತು.

ಪಂದ್ಯದ ಅಂತಿಮ ದಿನ ಹೃಷಿಕೇಶ್ ಕಾನಿಟ್ಕರ್ ಪಡೆ ನೀಡಿದ 531 ರನ್‌ಗಳ ಗುರಿಗೆ ಉತ್ತರವಾಗಿ ತಮಿಳುನಾಡು ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 13 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಕೇವಲ 8 ರನ್ ಗಳಿಸಿತು. ಪರಿಣಾಮ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು.

ಪಂದ್ಯದ ನಾಲ್ಕನೇ ದಿನವೇ ರಾಜಸ್ತಾನ ಪ್ರಶಸ್ತಿ ಜಯಿಸುವುದು ಖಚಿತವಾಗಿತ್ತು. 326 ರನ್‌ಗಳ ಮುನ್ನಡೆಯೊಂದಿಗೆ ಎರಡನೇ    ಇನಿಂಗ್ಸ್ ಆರಂಭಿಸಿದ್ದ ರಾಜಸ್ತಾನ 77 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಐದನೇ ತಂಡ ಎಂಬ ಗೌರವಕ್ಕೆ ರಾಜಸ್ತಾನ ಪಾತ್ರವಾಯಿತು. 257 ರನ್ ಗಳಿಸಿದ್ದ ವಿನೀತ್ ಸಕ್ಸೇನಾ `ಪಂದ್ಯ ಶ್ರೇಷ್ಠ~ ಗೌರವ ಪಡೆದರು. 2010-11ರ ಋತುವಿನ್ಲ್ಲಲೂ ಈ ತಂಡ ಚಾಂಪಿಯನ್ ಆಗಿತ್ತು.

ಬಹುಮಾನ ಪ್ರಕಟಿಸಿದ ಆರ್‌ಸಿಎ: ನೂತನ ರಣಜಿ ಚಾಂಪಿಯನ್ ರಾಜಸ್ತಾನ ತಂಡಕ್ಕೆ 1.3 ಕೋಟಿ ರೂಪಾಯಿ ನೀಡುವುದಾಗಿ   ರಾಜಸ್ತಾನ ಕ್ರಿಕೆಟ್ ಸಂಸ್ಥೆ (ಆರ್‌ಸಿಎ) ಪ್ರಕಟಿಸಿದೆ.

ಆಯ್ಕೆದಾರರೇ ಇತ್ತ ಗಮನ ಹರಿಸಿ: ರಾಜಸ್ತಾನ ತಂಡದ ಆಟಗಾರರು ಕಳೆದ ಎರಡು ವರ್ಷಗಳಿಂದ ತೋರುತ್ತಿರುವ ಪ್ರದರ್ಶನದತ್ತ ರಾಷ್ಟ್ರೀಯಆಯ್ಕೆದಾರರು ಗಮನ ಹರಿಸಬೇಕು ಎಂದು ರಾಜಸ್ತಾನ ತಂಡದ ನಾಯಕ ಹೃಷಿಕೇಶ್          ಕಾನಿಟ್ಕರ್ ನುಡಿದಿದ್ದಾರೆ. ವೇಗಿ ಪಂಕಜ್ ಸಿಂಗ್,     ಬ್ಯಾಟ್ಸ್‌ಮನ್‌ಗಳಾದ ರಾಬಿನ್ ಬಿಸ್ತ್ ಹಾಗೂ ವಿನೀತ್ ಸಕ್ಸೇನಾ ಅವರ ಹೆಸರನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಈ ತಂಡದ ರಾಬಿನ್ ಬಿಸ್ತ್ (1034) ಈ ರಣಜಿ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದರು. ಪಂಕಜ್ ಸಿಂಗ್ (34) ಅವರು ಹೆಚ್ಚು ವಿಕೆಟ್ ಪಡೆದವರು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮಧ್ಯಪ್ರದೇಶದ ವೇಗಿ ಟಿ.ಪಿ.ಸುಧೀಂದ್ರ (40) ಮೊದಲ ಸ್ಥಾನ ಹೊಂದಿದ್ದಾರೆ.
ಸ್ಕೋರ್ ವಿವರ:

ರಾಜಸ್ತಾನ ಮೊದಲ ಇನಿಂಗ್ಸ್ 245 ಓವರ್‌ಗಳಲ್ಲಿ 621
ತಮಿಳುನಾಡು ಮೊದಲ ಇನಿಂಗ್ಸ್ 102.4 ಓವರ್‌ಗಳಲ್ಲಿ 295
ರಾಜಸ್ತಾನ ಎರಡನೇ ಇನಿಂಗ್ಸ್ 77 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 204 ಡಿಕ್ಲೇರ್ಡ್
(ಭಾನುವಾರದ ಆಟದ ಅಂತ್ಯಕ್ಕೆ 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 21)
ಆಕಾಶ್ ಚೋಪ್ರಾ ಸಿ ಅಂಡ್ ಬಿ ಕೌಶಿಕ್  18
ವಿನೀತ್ ಸಕ್ಸೇನಾ ಬಿ ಪ್ರಸನ್ನ 13
ಬಿಸ್ತ್ ಸಿ ಮುಕುಂದ್ ಬಿ ಪ್ರಸನ್ನ  92
ಕಾನಿಟ್ಕರ್ ಎಲ್‌ಬಿಡಬ್ಲ್ಯು ಬಿ ವಿಜಯ್  12
ರಶ್ಮಿ ಪರೀದಾ ಔಟಾಗದೆ  43
ಪುನೀತ್ ಯಾದವ್ ಬಿ ಪ್ರಸನ್ನ  00
ದಿಶಾಂತ್ ಯಾಗ್ನಿಕ್ ಔಟಾಗದೆ  09
ಇತರೆ (ಬೈ-15, ನೋಬಾಲ್-2)  17
ವಿಕೆಟ್ ಪತನ: 1-29 (ಆಕಾಶ್; 8.4); 2-52 (ಸಕ್ಸೇನಾ; 20.5); 3-93 (ಕಾನಿಟ್ಕರ್; 37.4); 4-174 (ಬಿಸ್ತ್; 63.3); 5-180 (ಪುನೀತ್ ಯಾದವ್; 67.3). 
ಬೌಲಿಂಗ್: ಜಗನಾಥನ್ ಕೌಶಿಕ್ 11-3-38-1 (ನೋಬಾಲ್-1), ಯೋ ಮಹೇಶ್ 7-3-20-0, ಆಶಿಕ್ ಶ್ರೀನಿವಾಸ್ 28-10-61-1, ರಾಮಸ್ವಾಮಿ ಪ್ರಸನ್ನ 21-9-31-3 (ನೋಬಾಲ್-1), ಮುರಳಿ ವಿಜಯ್ 9-0-38-1, ಅಭಿನವ್ ಮುಕುಂದ್ 1-0-1-0.
ತಮಿಳುನಾಡು ಎರಡನೇ ಇನಿಂಗ್ಸ್ 13 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 8
ಮಹೇಶ್ ಎಲ್‌ಬಿಡಬ್ಲ್ಯು ಬಿ ಗಜೇಂದ್ರ  00
ಮುಕುಂದ್ ಎಲ್‌ಬಿಡಬ್ಲ್ಯು ಬಿ ಗಜೇಂದ್ರ  01
ಕೆ.ವಾಸುದೇವದಾಸ್ ಔಟಾಗದೆ  07 
ಎಸ್.ಬದರೀನಾಥ್ ಔಟಾಗದೆ  00
ವಿಕೆಟ್ ಪತನ: 1-0 (ಮಹೇಶ್; 0.1); 2-7 (ಮುಕುಂದ್; 2.6)
ಬೌಲಿಂಗ್: ಗಜೇಂದ್ರ ಸಿಂಗ್ 6-5-5-2, ರಾಬಿನ್ ಬಿಸ್ತ್ 6-4-3-0, ಪುನೀತ್ ಯಾದವ್ 1-1-0-0
ಫಲಿತಾಂಶ: ಪಂದ್ಯ ಡ್ರಾ ಹಾಗೂ ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ರಾಜಸ್ತಾನ ಚಾಂಪಿಯನ್. ಪಂದ್ಯ ಶ್ರೇಷ್ಠ: ವಿನೀತ್ ಸಕ್ಸೇನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT