ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಫೈನಲ್: ಟ್ರೋಫಿ ಖಚಿತಪಡಿಸಿಕೊಂಡ ರಾಜಸ್ತಾನ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈ: ರಾಜಸ್ತಾನ ತಂಡ ರಣಜಿ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ವೇದಿಕೆ ಸಿದ್ಧಗೊಂಡಿದೆ. ತಮಿಳುನಾಡು ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಭಾರಿ ಮುನ್ನಡೆ ಪಡೆದಿರುವ ರಾಜಸ್ತಾನ ಹೆಚ್ಚುಕಡಿಮೆ ಚಾಂಪಿಯನ್‌ಪಟ್ಟವನ್ನು ಖಚಿತಪಡಿಸಿಕೊಂಡಿದೆ.

ಎಂ.ಎ. ಚಿದಂಬರಂ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ ನಾಲ್ಕನೇ ದಿನ ತಮಿಳುನಾಡು ಮೊದಲ ಇನಿಂಗ್ಸ್‌ನಲ್ಲಿ 295 ರನ್‌ಗಳಿಗೆ ಆಲೌಟಾಯಿತು. ಮಾತ್ರವಲ್ಲ ಪ್ರವಾಸಿ ತಂಡಕ್ಕೆ 326 ರನ್‌ಗಳ ಭಾರಿ ಮುನ್ನಡೆ ಬಿಟ್ಟುಕೊಟ್ಟಿತು.

ಎದುರಾಳಿಗಳಿಗೆ ಫಾಲೋಆನ್ ನೀಡದೆ ತನ್ನ ಎರಡನೇ ಇನಿಂಗ್ಸ್ ಆರಂಭಿಸಿರುವ ರಾಜಸ್ತಾನ ಭಾನುವಾರದ ಆಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ಈ ಮೂಲಕ ಒಟ್ಟಾರೆ ಮುನ್ನಡೆಯನ್ನು 347 ರನ್‌ಗಳಿಗೆ ಹೆಚ್ಚಿಸಿಕೊಂಡಿದೆ.

ಈ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವ ಸಾಧ್ಯತೆ ಅಧಿಕವಾಗಿರುವ ಕಾರಣ ಅಂತಿಮ ದಿನದಾಟ ತನ್ನ ಮಹತ್ವ ಕಳೆದುಕೊಂಡಿದೆ. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ರಾಜಸ್ತಾನ ಟ್ರೋಫಿ ತನ್ನದಾಗಿಸಿಕೊಳ್ಳಲಿದೆ.   `ಸ್ಟಾರ್~ ಆಟಗಾರರಿಲ್ಲದ ಈ ತಂಡ ಕಳೆದ ವರ್ಷ ಚಾಂಪಿಯನ್ ಆಗಿ ಅಚ್ಚರಿ ಉಂಟುಮಾಡಿತ್ತು. ಇದೀಗ ಮತ್ತೊಮ್ಮೆ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿ ಟ್ರೋಫಿಯೆಡೆಗೆ ಹೆಜ್ಜೆಯಿಟ್ಟಿದೆ.

ಮೂರು ವಿಕೆಟ್ ನಷ್ಟಕ್ಕೆ 66 ರನ್‌ಗಳಿಂದ ಭಾನುವಾರ ಆಟ ಆರಂಭಿಸಿದ ತಮಿಳುನಾಡು ಆಗಿಂದಾಗ್ಗೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ದಿನೇಶ್ ಕಾರ್ತಿಕ್ ಅವರ ಆಕರ್ಷಕ 150 ರನ್‌ಗಳ ಹೊರತಾಗಿಯೂ ತಂಡದ ಮೊತ್ತ 300ರ ಗಡಿ ದಾಟಲಿಲ್ಲ. ರಿತುರಾಜ್ ಸಿಂಗ್ (76ಕ್ಕೆ 4) ರಾಜಸ್ತಾನ ಪರ ಯಶಸ್ವಿ ಬೌಲರ್ ಎನಿಸಿದರೆ, ಪಂಕಜ್ ಸಿಂಗ್ ಮತ್ತು ಸುಮಿತ್ ಮಾಥುರ್ ತಲಾ ಎರಡು ವಿಕೆಟ್ ತಮ್ಮದಾಗಿಸಿಕೊಂಡರು.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಾರ್ತಿಕ್ ಮಾತ್ರ ಏಕಾಂಗಿ ಹೋರಾಟ ನಡೆಸಿದರು. 280 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸರ್ ಹಾಗೂ 21 ಬೌಂಡರಿ ಸಿಡಿಸಿದರು. ಅದರೆ ಅವರಿಗೆ ಇತರ ಬ್ಯಾಟ್ಸ್‌ಮನ್‌ಗಳಿಂದ ತಕ್ಕ ನೆರವು ಸಿಗಲಿಲ್ಲ. ಆರ್. ಪ್ರಸನ್ನ 44 ರನ್ ಗಳಿಸಿ ಔಟಾದರು.

ಲಕ್ಷ್ಮೀಪತಿ ಬಾಲಾಜಿ ತಂಡ ತನ್ನದೇ ನೆಲದಲ್ಲಿ ರಣಜಿ ಟ್ರೋಫಿ ಗೆಲ್ಲುವ ಕನಸು ಕಂಡಿತ್ತು. ಅದು ಹೆಚ್ಚುಕಡಿಮೆ ಅಸ್ತಮಿಸಿದೆ. ಅಂತಿಮ ದಿನ ಯಾವುದೇ ಪವಾಡ ನಡೆಯದಿದ್ದರೆ ರಾಜಸ್ತಾನ ಟ್ರೋಫಿ ಎತ್ತಿಹಿಡಿಯಲಿದೆ.

ಸ್ಕೋರ್ ವಿವರ ;
ರಾಜಸ್ತಾನ: ಮೊದಲ ಇನಿಂಗ್ಸ್ 245 ಓವರುಗಳಲ್ಲಿ 621
ತಮಿಳುನಾಡು: ಮೊದಲ ಇನಿಂಗ್ಸ್ 102.4 ಓವರ್‌ಗಳಲ್ಲಿ 295
(ಶನಿವಾರ 25 ಓವರುಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 66)
ದಿನೇಶ್ ಕಾರ್ತಿಕ್ ಬಿ ಸುಮಿತ್ ಮಾಥುರ್  150
ಕೆ.ವಾಸುದೇವ್‌ದಾಸ್ ಸಿ ಗಜೇಂದ್ರ ಬಿ ರಿತುರಾಜ್ ಸಿಂಗ್  25
ಆರ್. ಪ್ರಸನ್ನ ರನೌಟ್  44
ಸನ್ನಿ ಗುಪ್ತಾ ಸ್ಟಂಪ್ ಯಾಗ್ನಿಕ್ ಬಿ ಗಜೇಂದ್ರ ಸಿಂಗ್  06
ಯೋಮಹೇಶ್ ಎಲ್‌ಬಿಡಬ್ಲ್ಯು ಬಿ ಪಂಕಜ್ ಸಿಂಗ್  00
ಲಕ್ಷ್ಮೀಪತಿ ಬಾಲಾಜಿ ಎಲ್‌ಬಿಡಬ್ಲ್ಯು ಬಿ ರಿತುರಾಜ್ ಸಿಂಗ್  29
ಜಗನ್ನಾಥನ್ ಕೌಶಿಕ್ ಸಿ ಪಂಕಜ್ ಸಿಂಗ್ ಬಿ ಸುಮಿತ್ ಮಾಥುರ್      06
ಔಶಿಕ್ ಶ್ರೀನಿವಾಸ್ ಔಟಾಗದೆ  02
ಇತರೆ: (ಬೈ-3, ಲೆಗ್‌ಬೈ-8, ವೈಡ್-1)  12
ವಿಕೆಟ್ ಪತನ: 1-1 (ಅಭಿನವ್ ಮುಕುಂದ್; 1.6), 2-12 (ಎಸ್.ಬದರೀನಾಥ್; 6.6), 3-24 (ಮುರಳಿ ವಿಜಯ್; 9.5), 4-71 (ವಾಸುದೇವದಾಸ್; 27.4), 5-147 (ಪ್ರಸನ್ನ; 52.5), 6-164 (ಗುಪ್ತಾ; 61.6), 7-167 (ಮಹೇಶ್; 66.2), 8-227 (ಬಾಲಾಜಿ; 80.5), 9-292 (ಕಾರ್ತಿಕ್; 100.5), 10-295 (ಕೌಶಿಕ್; 102.4)
ಬೌಲಿಂಗ್: ಪಂಕಜ್ ಸಿಂಗ್ 25-7-58-2, ರಿತುರಾಜ್ ಸಿಂಗ್ 26-5-76-4, ಸುಮಿತ್ ಮಾಥುರ್ 25.4-8-53-2,  ಗಜೇಂದ್ರ ಸಿಂಗ್ 26-5-97-1  
ರಾಜಸ್ತಾನ: ಎರಡನೇ ಇನಿಂಗ್ಸ್ 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21
ಆಕಾಶ್ ಚೋಪ್ರಾ ಬ್ಯಾಟಿಂಗ್  10
ವಿನೀತ್ ಸಕ್ಸೇನಾ  ಬ್ಯಾಟಿಂಗ್   10
ಇತರೆ: (ನೋಬಾಲ್-1)   01
ಬೌಲಿಂಗ್: ಜಗನ್ನಾಥ್ ಕೌಶಿಕ್ 3-1-12-0, ಯೋಮಹೇಶ್ 3-1-8-0, ಔಶಿಕ್ ಶ್ರೀನಿವಾಸ್ 1-0-1-0
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT