ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥ ಯಾತ್ರೆ ಹಿಂದಿನ ರಾಜಕಾರಣ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬಿಜೆಪಿಯ ಹಿರಿಯ ಮುಖಂಡ ಲಾಲ್‌ಕೃಷ್ಣ ಅಡ್ವಾಣಿ ಮತ್ತೆ  `ರಥ~ ಹತ್ತಿದ್ದಾರೆ. ಯುಪಿಎ ಸರ್ಕಾರದ ಮೊದಲ ಐದು ವರ್ಷಗಳ ಅವಧಿಯಲ್ಲಿ ನಡೆದ ಹಲವು ಹಗರಣಗಳು ಈ ಹಿರಿಯ ರಾಜಕಾರಣಿಯ `ದೇಶ ಸಂಚಾರ~ಕ್ಕೆ ದಾರಿ ತೋರಿಸಿವೆ. ಅವರಿಗೀಗ 84 ವರ್ಷ. ಇದು ಅವರ ಆರನೇ ಯಾತ್ರೆ. ಇಳಿ ವಯಸ್ಸಿನ ಕಾರಣಕ್ಕೆ ಇದು ಕಡೆಯದೆಂಬ ಲೆಕ್ಕಾಚಾರ ಯಾರಿಗಾದರೂ ಇರಬಹುದು. ಅವರಿಗಂತೂ ಇದ್ದಂತಿಲ್ಲ.

ಅಡ್ವಾಣಿ ರಥಯಾತ್ರೆಗೆ ಕಾರಣವೇನು? ಇದರಿಂದ ಯಾರಿಗೆ ಲಾಭ? ಈ ಯಾತ್ರೆ ನಿಜವಾಗಿಯೂ ಬಿಜೆಪಿಗೆ ಶಕ್ತಿ ತುಂಬಲಿದೆಯೇ? ಅಡ್ವಾಣಿ ಅವರನ್ನು  ಪ್ರಧಾನಿ ಕುರ್ಚಿ ಮೇಲೆ ಕೂರಿಸುವುದೇ? ಎಂಬ ಚರ್ಚೆ ರಾಜಕೀಯ ವಲಯಗಳಲ್ಲಿ ಆರಂಭವಾಗಿದೆ. ಕುರ್ಚಿ ಮೋಹ ಯಾರನ್ನು ಬಿಟ್ಟಿದೆ? ಈ ಮೋಹಕ್ಕೆ ಅಡ್ವಾಣಿ ಅವರೂ ಹೊರತಲ್ಲ. ಇದೇ ಕಾರಣಕ್ಕೆ ಇಷ್ಟೆಲ್ಲ ಕಸರತ್ತು. ರಥಯಾತ್ರೆ ಹೆಸರಿನಲ್ಲಿ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಅವರು ಮುಂದಾಗಿದ್ದಾರೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಬಿಜೆಪಿ  ಅಡ್ವಾಣಿ ಅವರಿಗೆ `ಗೌರವದ ಬೀಳ್ಕೊಡುಗೆ~ ಕೊಡಬೇಕೆಂಬ ಆಲೋಚನೆಯಲ್ಲಿದ್ದಾಗಲೇ ಅವರು ರಥಯಾತ್ರೆಯಲ್ಲಿ  ಹೊರಟಿದ್ದಾರೆ. `ಪಕ್ಷ  ಸಂಘಟನೆಗೆ ನಾನು ಅನಿವಾರ್ಯ. ನನ್ನನ್ನು ಕಡೆಗಣಿಸಲು ಸಾಧ್ಯವಿಲ್ಲ~ ಎಂದು ನಿರೂಪಿಸುವ ಪ್ರಯತ್ನದಲ್ಲಿದ್ದಾರೆ. ಈ ಯಾತ್ರೆ ಆರ್‌ಎಸ್‌ಎಸ್ ಹಾಗೂ ಕೆಲ ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. `ಯಾರೊಂದಿಗೂ ಚರ್ಚಿಸದೆ ಅಡ್ವಾಣಿ ಯಾತ್ರೆ ತೀರ್ಮಾನ ಮಾಡಿದ್ದು ಸರಿಯೇ?~ ಎಂಬ ಪ್ರಶ್ನೆ ಪಕ್ಷದಲ್ಲಿ ಕೇಳಿ ಬಂದಿದೆ.

`ಯಾತ್ರೆಯಿಂದ ಯಾರಿಗೂ ಬೇಸರವಾಗಿಲ್ಲ. ಆರ್‌ಎಸ್‌ಎಸ್ ಮುಖಂಡರು ಸಿಟ್ಟಾಗಿದ್ದಾರೆ ಎಂಬ ಸುದ್ದಿ ಬಂದ ತಕ್ಷಣವೇ ಖುದ್ದು ನಾಗಪುರಕ್ಕೆ ಹೋಗಿದ್ದೆ. ಮೋಹನ್ ಭಾಗವತರನ್ನು ಕಂಡಿದ್ದೆ. ಎಲ್ಲ ಬೆಳವಣಿಗೆಯನ್ನು ಅವರಿಗೆ ವಿವರಿಸಿದ್ದೇನೆ. ಯಾತ್ರೆ ನಿರ್ಧಾರ ಸರಿ ಎಂಬ ಅಭಿಪ್ರಾಯವನ್ನು ಅವರು ಹೊಂದಿದ್ದಾರೆ~ ಎಂದು ಅಡ್ವಾಣಿ ಅವರೇ ಹೇಳಿಕೊಂಡಿದ್ದಾರೆ.

`ಪ್ರಧಾನಿ ಅಭ್ಯರ್ಥಿ~ ಸ್ಪರ್ಧೆಯಿಂದ ಹಿಂದೆ ಸರಿದರೆ ಯಾತ್ರೆಯನ್ನು ಬೆಂಬಲಿಸುವುದಾಗಿ ಆರ್‌ಎಸ್‌ಎಸ್ ಮುಖಂಡರು ಷರತ್ತು ಹಾಕಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದೆ.

ಬಿಜೆಪಿಯಲ್ಲಿ ಅಡ್ವಾಣಿ ಅವರಿಗೀಗ ಮೊದಲಿದ್ದಷ್ಟು  ಪ್ರಾಮುಖ್ಯತೆ ಇಲ್ಲ. ಯಾರೂ ಅವರ ಮಾತಿಗೆ ಸೊಪ್ಪು ಹಾಕುವುದಿಲ್ಲ. ಹಾಗೆಂದು ಅಡ್ವಾಣಿ ತಮಗೆ ಅನ್ನಿಸಿದ್ದನ್ನು ಹೇಳದೆ ಬಿಡುವುದಿಲ್ಲ. ಪಾಕಿಸ್ತಾನದ ನೇತಾರ ಮಹಮದ್‌ಅಲಿ ಜಿನ್ನಾ ಅವರನ್ನು ಹೊಗಳಿದ್ದಕ್ಕೆ ಅವರು `ಭಾರೀ~ ಬೆಲೆ ತೆತ್ತಿದ್ದಾರೆ. ಅವರ ಸ್ಥಿತಿ ಬೇರೆ ಯಾರಿಗಾದರೂ ಬಂದಿದ್ದರೆ ರಾಜಕಾರಣವನ್ನೇ ಬಿಟ್ಟು ಮನೆಯೊಳಗೆ ಕುಳಿತುಬಿಡುತ್ತಿದ್ದರೇನೋ? ಅಡ್ವಾಣಿ ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ. ಇವೆಲ್ಲವೂ ಪ್ರಧಾನಿ ಕುರ್ಚಿ ಮೇಲಿನ ಆಸೆಯಿಂದ!

ಹದಿನಾಲ್ಕನೇ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕರಾದ ಅಡ್ವಾಣಿ ಬಿಜೆಪಿಯ ಅತ್ಯಂತ ಹಿರಿಯ ನಾಯಕರು. ಪಕ್ಷವನ್ನು ಕಟ್ಟಿ- ಬೆಳೆಸಲು ಸಾಕಷ್ಟು ಬೆವರು ಸುರಿಸಿದ್ದಾರೆ. ಅವರೊಬ್ಬ `ಕಟು~ ಹಿಂದುತ್ವವಾದಿ ಎಂಬುದು ಅವರ ಪ್ರತಿ ಹೆಜ್ಜೆಯಲ್ಲೂ ಎದ್ದು ಕಾಣುತ್ತದೆ.
 
ಈಗಿನದು `ಮಾಡರೇಟ್ ಪೋಸ್~. ರಾಮ ಮಂದಿರ ನಿರ್ಮಾಣಕ್ಕೆ ಹಿಂದುಗಳನ್ನು ಒಗ್ಗೂಡಿಸಲು ಮಾಡಿದ ರಥಯಾತ್ರೆಯ ಕಳಂಕ ತೊಳೆಯಲು ಅವರು ಇನ್ನಿಲ್ಲದ ಕಸರತ್ತು ಮಾಡಿದ್ದಾರೆ. ಜಿನ್ನಾ ಅವರನ್ನು ಹೊಗಳಿ ಉದಾರವಾದಿ ಎಂಬ ಮುಖವಾಡ ಧರಿಸಿದ್ದಾರೆ.

ಹಲವು ದಶಕಗಳಿಂದ ಅಡ್ವಾಣಿ ಅವರನ್ನು ನೋಡಿರುವ ಜನ ಅವರ ಹೊಸ ವರಸೆಯನ್ನು ಅನುಮಾನದಿಂದಲೇ ನೋಡುತ್ತಿದ್ದಾರೆ. ಅಡ್ವಾಣಿ ಅವರ ಬಗೆಗೆ ಮತದಾರ ಯಾವ ಮನೋಭಾವನೆ ಹೊಂದಿದ್ದಾನೆ ಎಂಬುದು ಹಿಂದಿನ ಲೋಕಸಭಾ ಚುನಾವಣೆಯಲ್ಲಿ ರುಜುವಾತಾಗಿದೆ. ಅಡ್ವಾಣಿ ಅವರನ್ನು ಎನ್‌ಡಿಎ `ಪ್ರಧಾನಿ ಅಭ್ಯರ್ಥಿ~ ಎಂದೇ ಬಿಂಬಿಸಿತ್ತು.
 
ಮತದಾರ ಅವರನ್ನು ಒಪ್ಪಿಕೊಳ್ಳಲಿಲ್ಲ. 2004ರ ಚುನಾವಣೆಯ ನಂತರ ಸಂಸತ್ತಿನಲ್ಲಿ ಪಕ್ಷದ ಸದಸ್ಯ ಬಲ 116ಕ್ಕೆ ಇಳಿಯಿತು (ಅದಕ್ಕೆ ಮೊದಲು ಇದ್ದ ಬಲ 138).

ಎರಡನೇ ಅವಧಿಗೆ ಚುನಾಯಿತವಾದ ಮನಮೋಹನ್‌ಸಿಂಗ್ ಸರ್ಕಾರ, ಮೊದಲ ಅವಧಿಯ ಹಗರಣಗಳ ಸುಳಿಗೆ ಸಿಕ್ಕಿಕೊಂಡು ಅದರಿಂದ ಹೊರಬರುವ ಮಾರ್ಗಗಳು ತಿಳಿಯದೆ ಒದ್ದಾಡುತ್ತಿದೆ. ಒಂದರ ಹಿಂದೆ ಮತ್ತೊಂದರಂತೆ ಬಹಿರಂಗವಾಗುತ್ತಿರುವ  ಹಗರಣಗಳಿಗೆ ಸಚಿವರು ಕೊರಳು ಕೊಡುತ್ತಿದ್ದಾರೆ. 2-ಜಿ ತರಂಗಾಂತರ ರಾಜಾ, ಮಾರನ್ ಬಳಿಕ ಚಿದಂಬರಂ `ತಲೆದಂಡ~ಕ್ಕೆ ಹೊಂಚು ಹಾಕಿ ಕುಳಿತಿದೆ. ಗೃಹ ಸಚಿವರ ಬಳಿಕ ಈ ಉರುಳು ಪ್ರಧಾನಿ ಕೊರಳಿಗೆ ಸುತ್ತಿಕೊಳ್ಳಬಹುದೇನೋ ಎಂಬ ಆತಂಕವಿದೆ.

ಒಂದು ವರ್ಷದ ಬೆಳವಣಿಗೆ ಸರ್ಕಾರದ ಉಳಿವಿನ ಬಗೆಗೂ ಅನುಮಾನ ಹುಟ್ಟಿಸಿದೆ. ಸ್ವಲ್ಪ ಹೆಚ್ಚುಕಡಿಮೆ ಆದರೂ ಸರ್ಕಾರವೇ ಹೋಗಿಬಿಡಬಹುದು.

ಬಹುಶಃ ಅಡ್ವಾಣಿ ಅವರಿಗೆ ಅವಧಿಗೆ ಮುನ್ನ ಲೋಕಸಭೆ ಚುನಾವಣೆ ನಡೆಯಬಹುದೆಂಬ ನಿರೀಕ್ಷೆ ಇದ್ದಂತಿದೆ. ಹೀಗಾಗಿ ತರಾತುರಿಯಲ್ಲಿ ಯಾತ್ರೆ  ಕೈಗೊಂಡಿದ್ದಾರೆ. ಜಯಪ್ರಕಾಶ್ ನಾರಾಯಣ್ ಹುಟ್ಟೂರಿನಿಂದ ಆರಂಭವಾದ ಯಾತ್ರೆಗೆ ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ನಿತೀಶ್ ಕುಮಾರ್  `ಹಸಿರು ನಿಶಾನೆ~ ತೋರಿದ್ದಾರೆ. ಇದು ಅಡ್ವಾಣಿಯವರ ಜಾಣ್ಮೆಯ ಲೆಕ್ಕಾಚಾರ. ಅಕಸ್ಮಾತ್ ಸಂಘ- ಪರಿವಾರದವರು ಕೈ ಕೊಟ್ಟರೂ, ಮಿತ್ರರು ನೆರವಿಗೆ ನಿಲ್ಲಬಹುದು ಎಂಬ ಅಚಲ ನಂಬಿಕೆ ಅವರದು.

ರಾಮಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ನಡೆಸಿದ್ದ ಅಡ್ವಾಣಿ ಈ ಸಲ ಉದ್ದೇಶ ಪೂರ್ವಕವಾಗಿ ಅಯೋಧ್ಯೆ ಕೈಬಿಟ್ಟಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಮರನ್ನು ಒಳಗೊಂಡು ಎಲ್ಲ ಜಾತಿ- ಧರ್ಮಗಳ ಜನರ ಬೆಂಬಲ ಪಡೆಯುವುದಕ್ಕಾಗಿ ಈ ತಂತ್ರ. ಸ್ಥಳೀಯ ನಾಯಕರು ಮಾತ್ರ ಅಯೋಧ್ಯೆಗೆ ಭೇಟಿ ಕೊಡುವ ಕಾರ್ಯಕ್ರಮವಿದೆ.

ಶಿಸ್ತು- ಮೌಲ್ಯಗಳ ಪಕ್ಷವೆಂಬ `ಹಣೆಪಟ್ಟಿ~ ಕಟ್ಟಿಕೊಂಡಿದ್ದ ಬಿಜೆಪಿ ಉಳಿದ ಪಕ್ಷಗಳಿಗಿಂತ ಭಿನ್ನವಾಗಿಲ್ಲ. ಬಿಜೆಪಿಯಲ್ಲಿ ಹಲವು ಗುಂಪುಗಳಿವೆ. ಒಬ್ಬೊಬ್ಬ ನಾಯಕರದು ಒಂದೊಂದು ಗುಂಪು. ಅವಕಾಶ ಸಿಕ್ಕಾಗಲೆಲ್ಲ ಪರಸ್ಪರರ ಕಾಲೆಳೆಯುವುದೇ ಈ ಗುಂಪುಗಳ ಕೆಲಸ.

`ಪ್ರಧಾನಿ ಅಭ್ಯರ್ಥಿ~ ಎಂದು ಬಿಂಬಿತವಾಗಲು ನಾಯಕರ ನಡುವೆ ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ನರೇಂದ್ರ ಮೋದಿ, ಮುರುಳಿಮನೋಹರ ಜೋಷಿ, ರಾಜನಾಥ್ ಸಿಂಗ್, ಯಶವಂತ ಸಿನ್ಹ, ಎರಡನೇ ತಲೆಮಾರಿನ ಸುಷ್ಮಾ ಮತ್ತು  ಅರುಣ್ ಜೇಟ್ಲಿ ತೀವ್ರ ಸ್ಪರ್ಧೆಯೊಡ್ಡುತ್ತಿದ್ದಾರೆ. ಮೋಹನ್ ಭಾಗವತ್ ಅವರ `ನೆಚ್ಚಿನ ಹುಡುಗ~ ನಿತಿನ್ ಗಡ್ಕರಿ ಅವರೂ `ಲಾಬಿ~ಯಲ್ಲಿ ಹಿಂದೆ ಬಿದ್ದಿಲ್ಲ. ಯಾರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಬಿಂಬಿಸುವುದೋ!

ನಾಯಕರ ಹಿಂಡಿನಲ್ಲಿ ಪ್ರಧಾನಿ ಅಭ್ಯರ್ಥಿಗೆ ಪ್ರಬಲವಾಗಿ ಕೇಳಿ ಬರುತ್ತಿರುವುದು ಅಡ್ವಾಣಿ ಮತ್ತು ಮೋದಿ ಹೆಸರು. ಇವರಿಬ್ಬರಲ್ಲಿ ಆಯ್ಕೆ ಪ್ರಶ್ನೆ ಬಂದಾಗ ತಕ್ಕಡಿ ಅಡ್ವಾಣಿ ಕಡೆ ವಾಲಬಹುದು. ಅಡ್ವಾಣಿಗಿಂತ ಮೋದಿ `ಹಾರ್ಡ್‌ಕೋರ್ ನಾಯಕ~. ಬಿಜೆಪಿಯೊಳಗೂ ಅವರನ್ನು ಇಷ್ಟಪಡುವವರ ಸಂಖ್ಯೆ ಕಡಿಮೆ. ಮಿತ್ರ ಪಕ್ಷಗಳಂತೂ ಅವರನ್ನು ಒಪ್ಪಲಾರವು.
 
ಸುಷ್ಮಾ, ಜೇಟ್ಲಿ ಅಡ್ವಾಣಿ ಯಾತ್ರೆ ಬೆಂಬಲಿಸಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಮರಳಿ ಬಿಜೆಪಿಗೆ ಬಂದಿರುವ ಉಮಾ ಭಾರತಿ ಅಡ್ವಾಣಿ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.

ಆರ್‌ಎಸ್‌ಎಸ್ ಜತೆ ಮೋದಿ ಸಂಬಂಧವೂ ಹಳಸಿದೆ. ಆರೆಸ್ಸೆಸ್ ಗಡ್ಕರಿ ಅವರನ್ನು `ಪುಷ್~ ಮಾಡುವ ಚಿಂತನೆ ಹೊಂದಿದೆ. ಪಕ್ಷದ ಅಧ್ಯಕ್ಷರಾಗಿರುವ ಗಡ್ಕರಿ ಅವಧಿ ಮುಂದಿನ ವರ್ಷ ಅಂತ್ಯಗೊಳ್ಳಲಿದೆ. ಮತ್ತೊಂದು ಅವಧಿಗೆ ಅವರನ್ನೇ ಮುಂದುವರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜೋಷಿ ಮತ್ತು ರಾಜನಾಥ್ ಸಿಂಗ್ ಅವರ ಹೆಸರೂ ಪರಿಶೀಲನೆಯಲ್ಲಿವೆ. 
 
ಈ ಎಲ್ಲಾ ಬೆಳವಣಿಗೆಗಳ ಹಿಂದಿನ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡೇ ಆಡ್ವಾಣಿ ಯಾತ್ರೆ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ತಂಡದ ಸದಸ್ಯರು ನಡೆಸಿದ ಚಳವಳಿಯಿಂದ ಪ್ರೇರಣೆ ಪಡೆದಿರುವ ಬಿಜೆಪಿ ನಾಯಕ ಇಂತಹದೇ ಯಶಸ್ಸು ಸಿಗಬಹುದೆಂಬ ಅಂದಾಜಿನಿಂದ ಹೆಜ್ಜೆ ಹಾಕಿದ್ದಾರೆ. ಅಶುದ್ಧ ರಾಜಕಾರಣವನ್ನು ಜನರ ಮುಂದೆ ಬಿಚ್ಚಿಡುವ ಕೆಲಸ ಮಾಡುವುದಾಗಿ ಹೇಳಿದ್ದಾರೆ.
 
ಈ ಯಾತ್ರೆಯನ್ನು ಭ್ರಷ್ಟಾಚಾರ ವಿರುದ್ಧದ ಹೋರಾಟ ಎಂದು  ಅಡ್ವಾಣಿ ಕರೆದಿದ್ದರೂ, ಶೀಘ್ರ ನಡೆಯಲಿರುವ ಉತ್ತರ ಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ ಮೊದಲಾದ ರಾಜ್ಯಗಳ ವಿಧಾನಸಭೆ ಹಾಗೂ ಯಾವಾಗಲಾದರೂ ಎದುರಾಗಬಹುದಾದ ಲೋಕಸಭಾ ಚುನಾವಣೆಯ ಅನಧಿಕೃತ ಪ್ರಚಾರ ಎಂದು ರಾಜಕೀಯ ವಲಯದಲ್ಲಿ ಭಾವಿಸಲಾಗಿದೆ. ಯಾತ್ರೆ ಯಶಸ್ವಿಯಾದರೆ ಅಡ್ವಾಣಿ ಅವರನ್ನೇ `ಪ್ರಧಾನಿ ಅಭ್ಯರ್ಥಿ~ ಎಂದು ಒಪ್ಪಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಬಹುದು.

ಕಾಂಗ್ರೆಸ್, ಎಡಪಕ್ಷ, ಆರ್‌ಜೆಡಿ ಮೊದಲಾದ ವಿರೋಧ ಪಕ್ಷಗಳು ರಥ ಯಾತ್ರೆಯನ್ನು ಹಿಗ್ಗಾಮುಗ್ಗ ಟೀಕಿಸುತ್ತಿವೆ. ಯುಪಿಎ ಸರ್ಕಾರದ ಭ್ರಷ್ಟಾಚಾರ ಕುರಿತು ಬೊಬ್ಬೆ ಹಾಕುತ್ತಿರುವ ಅಡ್ವಾಣಿ ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಕರ್ನಾಟಕ, ಮಧ್ಯ ಪ್ರದೇಶ, ಗುಜರಾತ್ ರಾಜ್ಯಗಳ ಭ್ರಷ್ಟಾಚಾರ ಕುರಿತು ಏಕೆ ಮೌನವಾಗಿದ್ದಾರೆಂದು ಕುಟುಕುತ್ತಿವೆ. ಕರ್ನಾಟಕದ `ಅಕ್ರಮ ಗಣಿಗಾರಿಕೆ~ 2-ಜಿ ತರಂಗಾಂತರದಷ್ಟೇ ದೊಡ್ಡ ಹಗರಣ. ಅವರ ಪಕ್ಷದ ಮುಖಂಡರೇ ಇದರಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಮೊದಲು ಕ್ರಮಕೈಗೊಳ್ಳಲಿ ಎಂದು ಸವಾಲು ಹಾಕುತ್ತಿದ್ದಾರೆ.

ವಿರೋಧ ಪಕ್ಷಗಳ ಟೀಕೆಗಳಲ್ಲೂ ಸತ್ಯಾಂಶವಿದೆ. ಕರ್ನಾಟಕದ  ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರ ಆರೋಪ ಬಂದ ಬಳಿಕವೂ ಅಡ್ವಾಣಿ ಮೌನವಾಗ್ದ್ದಿದರು ಎಂಬುದು ನಿಜ. ಹಿಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿ ಕೊಟ್ಟನಂತರವೂ ಅಡ್ವಾಣಿ ಸುಮ್ಮನಿದ್ದರು.

ಯಡಿಯೂರಪ್ಪ ರಾಜೀನಾಮೆ ಒತ್ತಡ ಹೆಚ್ಚಿದಾಗ ಅಧಿಕಾರ ಬಿಡುವಂತೆ ಒತ್ತಾಯಿಸುವ ನಿಲುವಿಗೆ ಅಡ್ವಾಣಿ ಬಂದರು. ಕರ್ನಾಟಕ ಮತ್ತಿತರ ಬಿಜೆಪಿ ಅಡಳಿತ ಇರುವ ರಾಜ್ಯಗಳಲ್ಲಿನ ಭ್ರಷ್ಟಾಚಾರದ ವಿಷಯದಲ್ಲಿ ಅಡ್ವಾಣಿ ನಿಷ್ಠುರವಾಗಿ ನಡೆದುಕೊಂಡಿದ್ದರೆ ಅವರ ಯಾತ್ರೆಗೆ ಹೆಚ್ಚು ಅರ್ಥ ಬರುತಿತ್ತು. ವಿರೋಧಿಗಳ ಬಾಯಿ ಬಂದ್ ಆಗುತಿತ್ತು. ಅದೇನೇ ಇರಲಿ ರಥಯಾತ್ರೆ ಅಡ್ವಾಣಿ ರಾಜಕೀಯ ಹಣೆಬರಹ ಬರೆಯುವುದಂತೂ ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT