ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೆಲ್‌ ನಡಾಲ್‌, ಸೆರೆನಾ ಚಾಂಪಿಯನ್‌

ಅಮೆರಿಕ ಓಪನ್‌ ಟೆನಿಸ್‌: ಫೈನಲ್‌ನಲ್ಲಿ ಎಡವಿದ ನೊವಾಕ್‌ ಜೊಕೊವಿಚ್‌, ಅಜರೆಂಕಾ
Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಎಫ್‌ಪಿ): ಶಕ್ತಿ ಹಾಗೂ ಯುಕ್ತಿಯನ್ನು ಸೊಗಸಾದ ರೀತಿಯಲ್ಲಿ ಮೈಗೂಡಿಸಿಕೊಂಡು ಆಡಿದ ರಫೆಲ್‌ ನಡಾಲ್‌ ಮತ್ತು ಸೆರೆನಾ ವಿಲಿಯಮ್ಸ್‌ ಅಮೆರಿಕ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್‌ನಲ್ಲಿ ನಡಾಲ್‌ 6–2, 3–6, 6–4, 6–1 ರಲ್ಲಿ ವಿಶ್ವದ ಅಗ್ರ ರಿ್ಯಾಂಕ್‌ನ ಆಟಗಾರ ಸರ್ಬಿಯದ ನೊವಾಕ್‌ ಜೊಕೊವಿಚ್‌ ಅವರನ್ನು ಮಣಿಸಿದರು.

ನಡಾಲ್‌ಗೆ ದೊರೆತ 13ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಇದು. ಈ ಮೂಲಕ ರೋಜರ್‌ ಫೆಡರರ್‌ (17 ಪ್ರಶಸ್ತಿ) ಅವರನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟರು. ಸ್ಪೇನ್‌ನ ಆಟಗಾರ ಇಲ್ಲಿ ತಮ್ಮ ಎರಡನೇ ಕಿರೀಟ ಮುಡಿಗೇರಿಸಿಕೊಂಡರು. 27ರ ಹರೆಯದ ನಡಾಲ್‌ 2010 ರಲ್ಲಿ ಮೊದಲ ಪ್ರಶಸ್ತಿ ಜಯಿಸಿದ್ದರು.

‘ಇದು ಅತ್ಯಂತ ಭಾವುಕ ಕ್ಷಣ. ಈ ಪ್ರಶಸ್ತಿ ಎಷ್ಟೊಂದು ಮಹತ್ವದ್ದು ಎಂಬುದು ನನ್ನ ತಂಡದ (ಕೋಚ್‌, ಸಹಾಯಕ ಸಿಬ್ಬಂದಿ) ಎಲ್ಲರಿಗೂ ತಿಳಿದಿದೆ’ ಎಂದು ನಡಾಲ್‌ ಪ್ರತಿಕ್ರಿಯಿಸಿದ್ದಾರೆ. ಗಾಯದ ಕಾರಣ ಏಳು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದ ನಡಾಲ್‌ ಫೆಬ್ರುವರಿ ತಿಂಗಳಲ್ಲಿ ಕಣಕ್ಕೆ ಮರಳಿದ್ದರು. ಆ ಬಳಿಕ ಅವರು ಅದ್ಭುತ ಫಾರ್ಮ್‌ನಲ್ಲಿ ಆಡುತ್ತಿದ್ದಾರೆ.

ಪ್ರಬಲ ಪೈಪೋಟಿ ಕಂಡುಬಂದ ಫೈನಲ್‌ ಪಂದ್ಯ ಮೂರು ಗಂಟೆ 21 ನಿಮಿಷಗಳ ಕಾಲ ನಡೆಯಿತು. ಮೊದಲ ಸೆಟ್‌ ನಡಾಲ್‌ ಸುಲಭದಲ್ಲಿ ಗೆದ್ದುಕೊಂಡರೂ, ಜೊಕೊವಿಚ್‌ ಮುಂದಿನ ಸೆಟ್‌ನಲ್ಲಿ ತಿರುಗೇಟು ನೀಡಿದರು. ಆದರೆ ಮೂರು ಮತ್ತು ನಾಲ್ಕನೇ ಸೆಟ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಸ್ಪೇನ್‌ ಆಟಗಾರ ಪಂದ್ಯ ತಮ್ಮದಾಗಿಸಿಕೊಂಡರು.

ಇಬ್ಬರು ಆಟಗಾರರೂ ಅಂಗಳದಲ್ಲಿ ಚುರುಕಿನ ಓಟ, ಸುಂದರ ಶೈಲಿಯ ಆಟ, ದೀರ್ಘ  ರಿ್ಯಾಲಿಗಳು ಮತ್ತು ವೇಗದ ಸರ್ವ್‌ಗಳ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಒಂದು ರಿ್ಯಾಲಿಯಲ್ಲಿ ಚೆಂಡು ಒಟ್ಟು 54 ಸಲ ಕೋರ್ಟ್‌ನಲ್ಲಿ ಅತ್ತಿತ್ತ ಚಲಿಸಿತು. ಕೊನೆಯ 13 ಗೇಮ್‌ಗಳಲ್ಲಿ 11ನ್ನೂ ಕಳೆದುಕೊಂಡ ಜೊಕೊವಿಚ್‌ ಸೋಲಿನ ಹಾದಿ ಹಿಡಿದರು. 53 ಅನಗತ್ಯ ತಪ್ಪುಗಳನ್ನೆಸಗಿದ್ದು ಅವರಿಗೆ ಮುಳುವಾಗಿ ಪರಿಣಮಿಸಿತು.

ಇಲ್ಲಿ ಸತತ ನಾಲ್ಕನೇ ಫೈನಲ್‌ ಆಡಿದ ನೊವಾಕ್‌ ಪ್ರಸಕ್ತ ಋತುವಿನಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಪಡೆದಿಲ್ಲ. ವರ್ಷದ ಮೊದಲ ಗ್ರ್ಯಾಂಡ್‌ ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಅವರು ಫ್ರೆಂಚ್‌ ಓಪನ್‌ನ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದರು. ವಿಂಬಲ್ಡನ್‌ ಟೂರ್ನಿಯ ಫೈನಲ್‌ನಲ್ಲಿ ಆ್ಯಂಡಿ ಮರ್ರೆ ಕೈಯಲ್ಲಿ ಪರಾಭವಗೊಂಡಿದ್ದರು.

‘ಇಲ್ಲಿ ಗೆಲ್ಲಬೇಕೆಂಬ ಕನಸು ಕಂಡಿದ್ದೆ. ಆದರೆ ಮಹತ್ವದ ಸಂದರ್ಭಗಳಲ್ಲಿ ನಡಾಲ್‌ ಶ್ರೇಷ್ಠ ಪ್ರದರ್ಶನ ತೋರಿದ. ಆದ್ದರಿಂದ ಆತ ಪ್ರಶಸ್ತಿ ಗೆಲ್ಲಲು ಅರ್ಹ. ಆತನಿಗೆ ಅಭಿನಂದನೆಗಳು. ನಾನು ಭವಿಷ್ಯದ ಬಗ್ಗೆ ಗಮನ ಹರಿಸುತ್ತೇನೆ’ ಎಂದು ಸರ್ಬಿಯದ ಆಟಗಾರ ಹೇಳಿದ್ದಾರೆ.

ಸೆರೆನಾಗೆ ಪ್ರಶಸ್ತಿ: ಅಮೆರಿಕದ ಸೆರೆನಾ ವಿಲಿಯಮ್ಸ್‌ ನಿರೀಕ್ಷೆಯಂತೆಯೇ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕಿರೀಟ ಮುಡಿಗೇರಿಸಿಕೊಂಡರು.
ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ವಿಶ್ವದ ಅಗ್ರ ರಿ್ಯಾಂಕ್‌ನ ಆಟಗಾರ್ತಿ 7–5, 6–7, 6–1 ರಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಮಣಿಸಿದರು. ಈ ಪಂದ್ಯ ಎರಡು ಗಂಟೆ 45 ನಿಮಿಷಗಳ ಕಾಲ ನಡೆಯಿತು.

ಸೆರೆನಾಗೆ ಒಲಿದ 17ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಇದು. ಅದೇ ರೀತಿ ಅಮೆರಿಕ ಓಪನ್‌ನಲ್ಲಿ ಐದನೇ ಬಾರಿ ಚಾಂಪಿಯನ್‌ ಆದರು. ಸೆರೆನಾ 14 ವರ್ಷಗಳ ಹಿಂದೆ ಇಲ್ಲಿ ತಮ್ಮ ಮೊದಲ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಫೈನಲ್‌ ಪಂದ್ಯದಲ್ಲಿ ತುರುಸಿನ ಪೈಪೋಟಿ ಕಂಡುಬಂತು. ಮೊದಲ ಸೆಟ್‌ ಜಯಿಸಿದ ಸೆರೆನಾ ಎರಡನೇ ಸೆಟ್‌ನಲ್ಲಿ 4–1 ರಲ್ಲಿ ಮುನ್ನಡೆ ಪಡೆದಿದ್ದರು. ಈ ಹಂತದಲ್ಲಿ ಮರುಹೋರಾಟ ನಡೆಸಿದ ಅಜರೆಂಕಾ ಟೈ ಬ್ರೇಕರ್‌ನಲ್ಲಿ ಸೆಟ್‌ ತಮ್ಮದಾಗಿಸಿಕೊಂಡು ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಲಯ ಕಂಡುಕೊಂಡ ಸೆರೆನಾ ಚಾಂಪಿಯನ್‌ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT