ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಜಾನ್ ವ್ರತ ಮತ್ತು ಖರ್ಜೂರ

Last Updated 14 ಜುಲೈ 2013, 7:16 IST
ಅಕ್ಷರ ಗಾತ್ರ

ರಮ್ಜಾನ್ ಉಪವಾಸ ವ್ರತಾಚರಣೆಯನ್ನು ಕಟ್ಟುನಿಟ್ಟಾಗಿ ಸಂಪ್ರದಾಯವಾಗಿ ಆಚರಿಸುವ ಭಟ್ಕಳದ ಮುಸ್ಲಿಮ್ ಬಾಂಧವರು ವ್ರತಾಚರಣೆಯಲ್ಲಿ ಖರ್ಜೂರಕ್ಕೆ ನೀಡುವ ಮಹತ್ವ ವಿಶೇಷವಾಗಿದೆ.

ನಸುಕಿನ ವೇಳೆಯಲ್ಲೆ ಪ್ರಾರ್ಥನೆ ಸಲ್ಲಿಸಿ ಉಪವಾಸ ವ್ರತಾಚರಣೆ ಆರಂಭಿಸುವ ಮುಸ್ಲಿಮರು ಸಂಜೆ ಉಪವಾಸ ವ್ರತ ಅಂತ್ಯದ ವೇಳೆಯವರೆಗೂ ತಮ್ಮ ದಿನನಿತ್ಯದ ಚಟುವಟಿಕೆಯನ್ನು ಯಾವುದೇ ಅಡೆತಡೆ ಇಲ್ಲದೇ ನಡೆಸುತ್ತಿರುತ್ತಾರೆ. ಇದಕ್ಕೆ ಅವರು ಕೊಡುವ ಪ್ರಮುಖ ಕಾರಣವೇನೆಂದರೆ ಖರ್ಜೂರದ ಹಣ್ಣಿನ ಸೇವನೆ. ಈಗ ವ್ರತಾಚರಣೆ ಹಿಡಿಯುವ ಸಮಯ ಬೆಳಗ್ಗೆ 4.40. ಅಂತ್ಯಗೊಳ್ಳುವ ಸಮಯ ಸಂಜೆ 7.06ಕ್ಕೆ. ಅಂದರೆ ಸುಮಾರು 14 ತಾಸುಗಳ ದೀರ್ಘ ಅವಧಿಯವರೆಗೆ ಉಪವಾಸ ವ್ರತಾಚರಣೆ ಮಾಡುವುದೆಂದರೆ ಸುಲಭದ ಮಾತಲ್ಲ. ಆದರೆ ಅದಕ್ಕೆ ಪರಿಹಾರವೆಂದರೆ ವ್ರತ ಆಚರಣೆಗೂ ಮೊದಲು ಹಾಗೂ ವ್ರತ ಅಂತ್ಯವಾಗುವ ವೇಳೆ ನಾವು ತಿನ್ನುವ ಖರ್ಜೂರದ ಹಣ್ಣು ನಮ್ಮನ್ನು ವ್ರತಾಚರಣೆಯ ಅವಧಿಯಲ್ಲಿ ಚೈತನ್ಯವನ್ನು ನೀಡುತ್ತದೆ ಎನ್ನುತ್ತಾರೆ ಇಲ್ಲಿನ ಅಂಜುಮನ್ ಕಾಲೇಜಿನ ಪ್ರೊ.ಅಬ್ದುಲ್ ರವೂಫ್ ಸವಣೂರ್.

`ಖರ್ಜೂರದ ಸೇವನೆಯಿಂದ ಮನುಷ್ಯನ ಆರೋಗ್ಯಕ್ಕೆ, ಅದರಲ್ಲೂ ಉಪವಾಸ ವ್ರತಾಚರಣೆ ನಡೆಸುವರಿಗೆ ಅಪಾರ ಪ್ರಯೋಜನಗಳಿವೆ.
ವಾಸ್ತವವಾಗಿ ಇದೊಂದು ರುಚಿಯಲ್ಲಿ ಅತ್ಯಂತ ಸಿಹಿಯಾಗಿರುವ, ಖನಿಜಾಂಶಗಳು ಹಾಗೂ ವಿಟಾಮಿನ್‌ಗಳು ಸಮೃದ್ಧವಾಗಿರುವ ಒಣ ಹಣ್ಣಾಗಿದೆ. ಇದು ನಮ್ಮ ದೇಹಕ್ಕೆ ಸದಾ ಚೈತನ್ಯ ನೀಡುವುದರ ಜತೆಗೆ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಖರ್ಜೂರ ನೆರವಾಗುತ್ತದೆ' ಎನ್ನುತ್ತಾರೆ.

ಖರ್ಜೂರದ ಇನ್ನಷ್ಟು ಉಪಯೋಗಗಳು:
ಖರ್ಜೂರದ ಹಣ್ಣು ಆಮಿನೊ ಆ್ಯಸಿಡ್‌ಗಳನ್ನು ಹೊಂದಿರುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮ ಗೊಳಿಸುತ್ತದೆ. ಖರ್ಜೂರವು ಗ್ಲುಕೋಸ್, ಸುಕ್ರೋಸ್ ಹಾಗೂ ಫ್ರಕ್ಟೋಸ್‌ಗಳಂತಹ ನೈಸರ್ಗಿಕ ಶರ್ಕರ ಅಂಶಗಳನ್ನು ಹೊಂದಿರುವುದರಿಂದ ಉಪವಾಸ ವ್ರತಾಚರಣೆಯಲ್ಲಿರುವರ ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ. `ಪಾರ್ಶ್ವವಾಯು, ದಂತಕ್ಷಯ, ರಕ್ತಹೀನತೆ, ಮಲಬದ್ಧತೆಯನ್ನು ತಡೆಯುವಲ್ಲಿ ಖರ್ಜೂರವನ್ನು ಬಳಕೆ ಮಾಡಬಹುದು. ತೂಕವನ್ನು ಹೆಚ್ಚಿಸುವುದಕ್ಕೂ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹ ಖರ್ಜೂರ ಸಹಕಾರಿ ಎನ್ನುತ್ತಾರೆ' ಇಲ್ಲಿನ ವೆಲ್‌ಫೇರ್ ಆಸ್ಪತ್ರೆಯ ಡಾ.ಶಕೀಲ್ ಅಹ್ಮದ್.

`ದಣಿದ ದೇಹಕ್ಕೆ, ಉಪವಾಸ ವ್ರತ ಕೈಗೊಂಡವರಿಗೆ ಚೈತನ್ಯ ನೀಡುವ ಖರ್ಜೂರವನ್ನು ದಿನನಿತ್ಯದ ಆಹಾರದಲ್ಲಿ ಯಾವುದೇ ರೀತಿಯಲ್ಲಿ ಸೇವಿಸಬಹುದಾಗಿದೆ. ಖರ್ಜೂರವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದಲ್ಲಿ ಅದರಿಂದ ಆರೋಗ್ಯಕ್ಕೆ ಮತ್ತಷ್ಟು ಪ್ರಯೋಜನವಾಗಲಿದೆ. ರಮ್ಜಾನ್ ಉಪವಾಸ ವ್ರತಾಚರಣೆಯ ಒಂದು ತಿಂಗಳಿನ ಅವಧಿಯಲ್ಲಿ ಕೇವಲ ಭಟ್ಕಳದಲ್ಲೆ ಸುಮಾರು 5ಸಾವಿರಕ್ಕೂ ಹೆಚ್ಚು ಕೆ.ಜಿ ಖರ್ಜೂರದ ಹಣ್ಣು ಮಾರಾಟವಾಗುತ್ತದೆ. ಕಡಿಮೆ ಎಂದರೆ ಕೆ.ಜಿ.ಗೆ ನೂರರಿಂದ ಇನ್ನೂರು ರೂಪಾಯಿಗೆ ಸಾಮಾನ್ಯ ದರ್ಜೆಯ ಖರ್ಜೂರ ದೊರಕಿದರೆ ,ಉತ್ತಮ ಗುಣಮಟ್ಟದ, ಸಂಸ್ಕರಿಸಿ ಪ್ಯಾಕ್ ಮಾಡಿದ ಖರ್ಜೂರಕ್ಕೆ 1ರಿಂದ ಎರಡು ಸಾವಿರದ ತನಕ ಬೆಲೆಯಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT