ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ, ರೈಲು ತಡೆಗೆ ಬ್ರೇಕ್: ಮುಂದುವರೆದ ಧರಣಿ

Last Updated 10 ಅಕ್ಟೋಬರ್ 2012, 7:40 IST
ಅಕ್ಷರ ಗಾತ್ರ

ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಿಂದ ನೀರಿನ ಹೊರ ಹರಿವನ್ನು ಸ್ಥಗಿತಗೊಳಿಸಿರುವುದರಿಂದ ಜಿಲ್ಲೆಯಾದ್ಯಂತ ನಡೆಯುತ್ತಿದ್ದ ರಸ್ತೆ ಹಾಗೂ ರೈಲು ತಡೆ ಚಳವಳಿಗೆ `ಬ್ರೇಕ್~ ಬಿದ್ದಿದ್ದು, ಕರ್ನಾಟಕ ರಸ್ತೆ ಸಾರಿಗೆ ಸಂಚಾರ ನಿಗಮ (ಕೆಎಸ್‌ಆರ್‌ಟಿಸಿ) ಬಸ್‌ಗಳ ಸಂಚಾರ ಮಂಗಳವಾರದಿಂದ ಪುನಾರಂಭಗೊಂಡಿದೆ.

ಜನಜೀವನವೂ ಸಹ ಮೊದಲ ಸ್ಥಿತಿಗೆ ಮರಳುತ್ತಿದೆ. ಗ್ರಾಮೀಣ ಪ್ರದೇಶಗಳತ್ತ ಸರ್ಕಾರಿ ಬಸ್ಸುಗಳು ಓಡಾಡಲು ಆರಂಭಿಸಿವೆ. ನಗರದ ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಿತ್ತು. ಭಣಗುಡುತ್ತಿದ್ದ ರಸ್ತೆಗಳಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟ ಕಂಡುಬಂತು.

`ಪ್ರತಿಭಟನೆಗಳ ಅಬ್ಬರ~ ಸಂಪೂರ್ಣ ತಗ್ಗಿತ್ತು. ಪ್ರತಿಕೃತಿ ದಹನ ನಡೆಯಲಿಲ್ಲ. ಆದರೆ, ಎಂದಿನಂತೆ ಧರಣಿ, ಸರದಿ ಉಪವಾಸ ಸತ್ಯಾಗ್ರಹ ಮುಂದುವರೆಯಿತು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕಾವೇರಿ ವನ ಎದುರು ನಡೆಯುತ್ತಿರುವ ನಿರಂತರ ಪ್ರತಿಭಟನಾ ಧರಣಿ 26ನೇ ದಿನವು, ಸರದಿ ಉಪವಾಸ ಸತ್ಯಾಗ್ರಹ 6ನೇ ದಿನವೂ ಮುಂದುವರೆಯಿತು.

ಸರದಿ ಉಪವಾಸ ಸತ್ಯಾಗ್ರಹದಲ್ಲಿ ಹನಕೆರೆ ಶಶಿಕುಮಾರ್, ಬೇಲೂರು ಗುರುಸಿದ್ದಯ್ಯ, ಎಂ.ಸಿ.ಲಂಕೇಶ್, ಬದರಿ, ಡಿ.ಕೆ.ಶಿವಕುಮಾರ್ ಹಾಗೂ ಜೀತೇಂದ್ರ ಪಾಲ್ಗೊಂಡಿದ್ದರು.

ಎತ್ತಿನಗಾಡಿಗಳ ಮೆರವಣಿಗೆ:
ಕನ್ನಲಿ, ಕಾಗೇಹಳ್ಳದದೊಡ್ಡಿ, ಜವನೇಗೌಡನದೊಡ್ಡಿ ಮತ್ತು ಉಚ್ಚಲಗೆರೆ ಗ್ರಾಮದ ನೂರಾರು ರೈತರು ಎತ್ತಿನಗಾಡಿಗಳಲ್ಲಿ ನಗರಕ್ಕೆ ಆಗಮಿಸಿ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕನ್ನಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಕೆ.ರಾಮಚಂದ್ರು, ಕೆ.ಹನುಮಂತು, ಕೆ.ಎಂ.ರಾಮಕೃಷ್ಣ, ಜೆ.ಎನ್.ಪ್ರಕಾಶ್, ಕೆ.ಎನ್.ಯೋಗಾನಂದ, ಕೆ.ಬಿ.ಉಮೇಶ್, ಈರಯ್ಯ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

ಕಾಂಗ್ರೆಸ್ ಒತ್ತಡ ಹೇರಲಿ
ಮಂಡ್ಯ: ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಬೆಂಬಲಿಸಿರುವ ಬಿಜೆಪಿ ಜಿಲ್ಲಾ ಘಟಕ, ಪ್ರಧಾನಿ ಅವರ ಮೇಲೆ ಒತ್ತಡದ ತಂದು ಪ್ರಾಧಿಕಾರದ ತೀರ್ಪನ್ನು ವಾಪಸ್ ಪಡೆಯುವಂತೆ ಕಾಂಗ್ರೆಸ್ ಮುಖಂಡರು ಒತ್ತಡ ತರಬೇಕು ಎಂದು ಆಗ್ರಹಿಸಿದೆ.

ನೀರು ನಿಲ್ಲಿಸಿರುವುದರಿಂದ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಕಾಂಗ್ರೆಸ್ ಮುಖಂಡರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ. ಮಹೇಶ್ ಒತ್ತಾಯಿಸಿದ್ದಾರೆ.

ಸರದಿ ಉಪವಾಸ ಸತ್ಯಾಗ್ರಹ ಮುಂದುವರಿಕೆ
ಮಂಡ್ಯ: ಕಾವೇರಿ ನದಿ ಪ್ರಾಧಿಕಾರದ ಸಭೆ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ಬಾಕಿ ಇರುವುದರಿಂದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಲಾಗುವುದು ಎಂದು ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ತಿಳಿಸಿದರು.

ನೀರು ಹರಿಸುವುದನ್ನು ನಿಲ್ಲಿಸಿರುವುದರಿಂದ ರಸ್ತೆ ಹಾಗೂ ರೈಲು ತಡೆಯನ್ನು ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.

ಮಂಡ್ಯದಲ್ಲಿ ಧರಣಿ ಮುಂದುವರೆಯಲಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮುಂದಿನ ನಡೆ ನೋಡಿಕೊಂಡು, ಹೋರಾಟದ ಬಗೆಗೆ ನಿರ್ಧರಿಸಲಾಗುವುದು ಎಂದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT