ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಹಸ್ಯವಾಗಿ ನಡೆದ ಗಡಾಫಿ ಅಂತ್ಯಸಂಸ್ಕಾರ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಿಸ್ರತ್(ಎಎಫ್‌ಪಿ): ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಮೃತದೇಹವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ ನಂತರ ಮಂಗಳವಾರ ರಾತ್ರಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ರಹಸ್ಯವಾಗಿ ಸಮಾಧಿ ಮಾಡಲಾಯಿತು. ಗಡಾಫಿ ದೇಹದ ಜತೆ ಆತನ ಪುತ್ರ ಮುಟಾಸಿಂ ಮತ್ತು ರಕ್ಷಣಾ ಇಲಾಖೆ ಮಾಜಿ ಸಚಿವ ಅಬುಬಕರ್ ಯುನಿಸ್ ಜಬೆರ್ ದೇಹವನ್ನೂ ಸಮಾಧಿ ಮಾಡಲಾಯಿತು.

ಗಡಾಫಿ  ದೇಹವನ್ನು ಮಿಸ್ರತ್ ಹೊರ ವಲಯದ ಮಾರುಕಟ್ಟೆಯಲ್ಲಿರುವ ಶೈತ್ಯಾಗಾರದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ಸಾವಿರಾರು ನಾಗರಿಕರು ಮೃತದೇಹ ವೀಕ್ಷಿಸಿ, ಛಾಯಾಚಿತ್ರಗಳನ್ನು ತೆಗೆದುಕೊಂಡರು. ಈ ಮಧ್ಯೆ ಗಡಾಫಿ ಪುತ್ರ ಸೈಫ್ ಅಲ್ ಇಸ್ಲಾಂ ಮತ್ತು ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಅಬ್ದುಲ್ಲಾ ಅಲ್-ಸೆನುಸ್ಸಿ ಅವರು ನೈಗರ್ ಗಡಿಯೊಳಗೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ.

ಸಿರ್ದಾದಲ್ಲಿ ಸ್ಫೋಟ: 100 ಬಲಿ
ಟ್ರಿಪೋಲಿ (ಎಎಫ್‌ಪಿ):
ಮುಅಮ್ಮರ್ ಗಡಾಫಿ  ತವರು ಸಿರ್ದಾದಲ್ಲಿ ಇಂಧನ ಟ್ಯಾಂಕರ್ ಸ್ಫೋಟಿಸಿ, 100ಕ್ಕೂ ಹೆಚ್ಚು ಮಂದಿ ನಾಗರಿಕರು ಮೃತಟ್ಟಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. 

 ಹೃದಯ ವಿದ್ರಾವಕವೆನ್ನುವಂತೆ ಈ ಭಾರಿ ಸ್ಫೋಟ ನಡೆದ ಸ್ಥಳದಲ್ಲಿ 12ಕ್ಕೂ ಹೆಚ್ಚು ದೇಹಗಳು ಸುಟ್ಟು ಕರಕಲಾಗಿವೆ ಎಂದು ರಾಷ್ಟ್ರೀಯ ಪರಿವರ್ತನಾ ಮಂಡಳಿಯ ಕಮಾಂಡರ್ ಲಿಥಿ ಮಹಮ್ಮದ್ ತಿಳಿಸಿದ್ದಾರೆ. ಅಪಾರ ಪ್ರಮಾಣದಲ್ಲಿ ನಾಗರಿಕರು ತಮ್ಮ ಕಾರುಗಳಿಗೆ ಇಂಧನ ತುಂಬಿಸಿಕೊಳ್ಳಲು ಕಾಯುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಗಡಾಫಿ ನಿಷ್ಠರನ್ನು ಹೊಡೆದುರುಳಿಸಿದ ನಂತರ ನಾಗರಿಕರು ಸುರಕ್ಷಿತ ನೆಲೆ ಹುಡುಕಿಕೊಂಡು ನಗರದಲ್ಲಿ ವಾಸಿಸಲು ಬರುತ್ತಿದ್ದರು ಎಂದು ಮಹಮ್ಮದ್ ತಿಳಿಸಿದ್ದಾರೆ.

`ನ್ಯಾಟೊ ಕಾರ್ಯಚರಣೆ ನಿಲ್ಲದು~
ವಾಷಿಂಗ್ಟನ್(ಐಎಎನ್‌ಎಸ್):
ತಮ್ಮ ಪೂರ್ವ ನಿಗದಿತ ಗುರಿ ಸಾಧನೆಯಾಗುವವರೆಗೂ ಲಿಬಿಯಾದಲ್ಲಿ ನ್ಯಾಟೊ ಪಡೆಗಳು ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ವಿಶ್ವ ಸಂಸ್ಥೆ ರಕ್ಷಣಾ ಕಾರ್ಯದರ್ಶಿ ಲಿಯಾನ್ ಪನೆಟ್ ತಿಳಿಸಿದ್ದಾರೆ.

ಲಿಬಿಯಾದಲ್ಲಿ ಆಡಳಿತ ನಡೆಸುತ್ತಿರುವ ರಾಷ್ಟ್ರೀಯ ಪರಿವರ್ತನಾ ಮಂಡಳಿಯು ನ್ಯಾಟೊ ಕಾರ್ಯಾಚರಣೆಯನ್ನು ವಿಸ್ತರಿಸುವಂತೆ ಕೋರಿದೆ ಎಂದು ಪನೆಟ್ ಹೇಳಿದ್ದಾರೆ. ಆದರೆ ನ್ಯಾಟೊ ಪಡೆಗಳ ಮುಖ್ಯಸ್ಥ ಆ್ಯಂಡರ್ಸ್  ಫಾಗ್ ರಸ್‌ಮುಸನ್, ನ್ಯಾಟೊ ಮಿತ್ರ ಪಡೆಗಳು ಅಕ್ಟೋಬರ್ 31ಕ್ಕೆ ಕಾರ್ಯಾಚರಣೆ ನಿಲ್ಲಿಸಲು ನಿರ್ಧರಿಸಿವೆ. ಈ ಪೂರ್ವ ನಿರ್ಧಾರಕ್ಕೆ ಶುಕ್ರವಾರ ನಡೆಯಲಿರುವ ನ್ಯಾಟೊ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ದೂರು ದಾಖಲಿಗೆ ನಿರ್ಧಾರ
ಪ್ಯಾರಿಸ್ (ಎಎಫ್‌ಪಿ):
ಗಡಾಫಿ  ಕುಟುಂಬವು ನ್ಯಾಟೊ ವಿರುದ್ಧ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದಲ್ಲಿ (ಐಸಿಸಿ) ಯುದ್ಧ ಅಪರಾಧ ದೂರು ದಾಖಲಿಸಲು ನಿರ್ಧರಿಸಿದೆ. ಗಡಾಫಿ ಹತ್ಯೆಯಲ್ಲಿ ನ್ಯಾಟೊ ಸಂಚು ಇದೆ ಎಂದು ಗಡಾಫಿ ಕುಟುಂಬದ ವಕೀಲರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT