ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘು ಎಂಬ ರಂಗೋತ್ಪನ್ನ

Last Updated 17 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಶಿವಮೊಗ್ಗದ ಹುಡುಗ ರಾಘವೇಂದ್ರ. ರಾಘು ಎಂದು ಜನ ತಮ್ಮನ್ನು ಕರೆಯುವುದೇ ಅವರಿಗೆ ಪ್ರಿಯ. ಪಿಯೂಸಿ ಮುಗಿಸಿ ನೀನಾಸಂ ಸೇರಿದ ರಾಘು ರಂಗಭೂಮಿಯ ‘ಉತ್ಪನ್ನ’. ಅಪ್ಪ ಅಮ್ಮನ ಒಪ್ಪಿಗೆ ಪಡೆದು ನೀನಾಸಂ ಕದ ತಟ್ಟಿದ ಅವರು ಕೋರ್ಸ್ ಮುಗಿಸಿ ತಿರುಗಾಟ, ರೆಪರ್ಟರಿಗಳ ಮೂಲಕ ನಟನೆಯ ಅಖಾಡಕ್ಕೆ ಇಳಿದರು.

‘ಜಿ.ಕೆ.ಮಾಸ್ತರರ ಪ್ರಣಯ ಪ್ರಸಂಗ’ ಅವರು ನಟಿಸಿದ ಮೊದಲ ನಾಟಕ. ‘ರೋಮಿಯೊ ಜೂಲಿಯಟ್’, ‘ಕೇಶಪಾಶ ಪ್ರಪಂಚ’, ‘ಪಾತರಗಿತ್ತಿ ಪಕ್ಕ’, ‘ಲೀಲಾಂತ’ ಮುಂತಾದ ನಾಟಕಗಳಲ್ಲದೆ ‘ಸೈಕಲಿಸ್ಟ್’, ‘ಫೋರ್ ಚಾಪ್ಟರ್’ ಇಂಗ್ಲಿಷ್ ನಾಟಕಗಳಿಗೂ ಬಣ್ಣ ಹಚ್ಚಿದರು.

ಮೂವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿರುವ ಅವರಿಗೆ ಕುವೆಂಪು ಅವರ ‘ಮಹಾರಾತ್ರಿ’ ನಾಟಕದ ಸಿದ್ಧಾರ್ಥನ ಪಾತ್ರ, ಕೆ.ವಿ.ಅಕ್ಷರ ಅವರ ‘ಸ್ವಯಂವರ ಲೋಕ’ ನಾಟಕದ ಕಿಟ್ಟು ಪಾತ್ರ, ‘ಆತಂಕವಾದಿಯ ಆಕಸ್ಮಿಕ ಸಾವು’ ನಾಟಕದ (ಮೂಲ ಇಟಲಿ ನಾಟಕ. ರೂಪಾಂತರ ಮಾಡಿದವರು ಸುರೇಂದ್ರನಾಥ) ಹೆಸರಿಲ್ಲದ ಪಾತ್ರ  ಇಷ್ಟವಾಗಿದೆ.

‘ನಾಟಕ ಮಾಡ್ತೀನಿ ಮಾಡಿಸ್ತೀನಿ’ ಎನ್ನುವ ರಾಘು ನಟನೆಯೊಂದಿಗೆ ನಿರ್ದೇಶನವನ್ನೂ ಮಾಡುತ್ತಿರುವ ಪ್ರತಿಭಾವಂತ. ವಸುಧೇಂದ್ರ ಅನುವಾದಿಸಿರುವ ‘ಮಿಥುನ’ ಮತ್ತು ‘ಬಂಗಾರದ ಕಡಗ’ ಕತೆಗಳನ್ನಾಧರಿಸಿದ ನಾಟಕ, ‘ಯಶೋಧರಾ’, ‘ಹೋಂ ರೂಲ್’, ‘ಮಹಿಮಾಪುರ’ ಮುಂತಾದ ನಾಟಕಗಳನ್ನು ಅವರು ನಿರ್ದೇಶಿಸಿದ್ದಾರೆ. ಹತ್ತು ಹನ್ನೆರಡು ಮಕ್ಕಳ ನಾಟಕ ಮಾಡಿಸಿರುವ ಅವರಿಗೆ ನಟನೆ ಮತ್ತು ನಿರ್ದೇಶನ ಎರಡೂ ಖುಷಿ ಕೊಡುವ ಸಂಗತಿಗಳು.

‘ಆ ಕ್ಷಣಕ್ಕೆ ಯಾವ ಕೆಲಸ ಮಾಡುತ್ತಿರುತ್ತೇನೋ ಅದನ್ನು ನಿಯತ್ತಿನಿಂದ ಮಾಡುತ್ತೇನೆ’ ಎನ್ನುವ ರಾಘು, ‘ನಾನು ಮಾಡಿದ್ದೇ ನಟನೆ ಎಂದುಕೊಳ್ಳದೆ ಕಲಾವಿದ ನಿರ್ದೇಶಕರ ಕಲ್ಪನೆಗೆ ಮತ್ತು ನಿರೀಕ್ಷೆಗೆ ತಕ್ಕಂತೆ ನಟಿಸಬೇಕು’ ಎನ್ನುತ್ತಾ ನಿರ್ದೇಶಕರ ಚೌಕಟ್ಟಿಗೆ ಪಕ್ಕಾಗಬೇಕೆಂಬ ಬಯಕೆ ವ್ಯಕ್ತಪಡಿಸುತ್ತಾರೆ.

ದೂರಶಿಕ್ಷಣದ ಮೂಲಕ ಬಿಎ ಮುಗಿಸಿರುವ ಅವರು ನಾಟಕ ಮತ್ತು ಕಾರ್ಯಕ್ರಮಗಳಿಗೆ ಬೆಳಕಿನ ವಿನ್ಯಾಸ ಮಾಡುವುದರಲ್ಲೂ ಮುಂದು.
‘ಸ್ವಯಂವರ ಲೋಕ’ ನಾಟಕ ನೋಡಲು ಬಂದಿದ್ದ ಕೆ.ಎಂ.ಚೈತನ್ಯ ಅವರ ‘ಮುಗಿಲು’ ಧಾರಾವಾಹಿಯಲ್ಲಿ ರಾಘು ಅವರಿಗೆ ಅವಕಾಶ ನೀಡಿದರು. ಅದಕ್ಕಿಂತ ಮೊದಲು ರಾಘು ನಟಿಸಿದ್ದ ‘ನೂರೆಂಟು ಸುಳ್ಳು’ ಧಾರಾವಾಹಿ ಪ್ರಸಾರವಾಗಿರಲಿಲ್ಲ.

ನಾಟಕದಲ್ಲಿ ಹಾಸ್ಯ ಗಂಭೀರ, ಖಳ, ಪೌರಾಣಿಕ, ಹುಚ್ಚ ಸೇರಿದಂತೆ ಭಿನ್ನ ಭಿನ್ನ ರೀತಿಯ ಪಾತ್ರ ಮಾಡಿರುವ ಅವರು ಧಾರಾವಾಹಿಯಲ್ಲಿ ಹೆಚ್ಚಾಗಿ ಖಳನ ಪಾತ್ರಗಳನ್ನೇ ಮಾಡಿದ್ದಾರೆ.

‘ಮುಕ್ತ ಮುಕ್ತ’ ಮತ್ತು ‘ಮಂಜು ಮುಸುಕಿದ ಹಾದಿ’ಯಲ್ಲಿ ಸಕಾರಾತ್ಮಕ ಆಯಾಮ ಇರುವ ಪಾತ್ರ ಮಾಡಿದ್ದ ಅವರು, ‘ಅರಸಿ’ಯಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

‘ಮುಂಬೆಳಕು’, ‘ಅಬೀಬಾ’ ಮುಂತಾದ ಧಾರಾವಾಹಿಯಲ್ಲಿ ನಟಿಸಿರುವ ಅವರು ನಟಿಸಿರುವ ಮೊದಲ ಸಿನಿಮಾ ಬಿ.ಸುರೇಶರ ‘ಪುಟ್ಟಕ್ಕನ ಹೈವೇ’.

ರಾಜ್‌ಕುಮಾರ್ ಮತ್ತು ಸುದೀಪ್ ಅವರ ನಟನೆಯನ್ನು ಇಷ್ಟಪಡುವ ರಾಘು, ‘ಸಿನಿಮಾಗಳನ್ನು ಪ್ರೇಕ್ಷಕನಾಗಿ ಎಂಜಾಯ್ ಮಾಡುತ್ತೇನೆಯೇ ಹೊರತು ನಟರಿಂದ ಎಂದೂ ಪ್ರಭಾವಿತನಾಗಿಲ್ಲ’ ಎನ್ನುತ್ತಾರೆ.

ಮಕ್ಕಳ ರಂಗಭೂಮಿ ಕುರಿತು 22 ನಿಮಿಷದ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದ ರಾಘು,  ಸದ್ಯ ವೈ.ಕಂ.ಬಶೀರ್ (ಅನುವಾದ- ಗಂಗಾಧರಯ್ಯ) ಕತೆ ಆಧರಿಸಿ ‘ನಿರೀಕ್ಷೆ’ ಎಂಬ ಕಿರುಚಿತ್ರ ತಯಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT