ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಅಭಿವೃದ್ಧಿ: ಸರ್ವೇಗೆ ಚಾಲನೆ

ಕೆಎಂಆರ್‌ಪಿ ಯೋಜನೆಯ ಉಳಿಕೆ ₨ 10 ಕೋಟಿ ವಿನಿಯೋಗ
Last Updated 14 ಡಿಸೆಂಬರ್ 2013, 7:47 IST
ಅಕ್ಷರ ಗಾತ್ರ

ಕೋಲಾರ:ಪ್ರತಿ ಮಳೆಗಾಲದಲ್ಲೂ ಸಮಸ್ಯೆ ಸೃಷ್ಟಿಸುವ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಪಕ್ಕದಿಂದ ಸುಮಾರು ನಾಲ್ಕು ಕಿಮೀ ವ್ಯಾಪ್ತಿಯ ರಾಜಕಾಲುವೆಯ ಸರ್ವೇ ಕಾರ್ಯ ಶುಕ್ರವಾರದಿಂದ ಶುರುವಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕಾಲು­ವೆಯ ಎರಡೂ ಬದಿ ತಡೆಗೋಡೆಗಳನ್ನು ನಿರ್ಮಿ­ಸು­ವುದೂ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯ ಚಾಲನೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಕೆಎಂಆರ್‌ಪಿ ಯೋಜನೆಯಲ್ಲಿ ನಗರಸಭೆ ಬಳಸದೆ ಉಳಿದಿರುವ ₨10 ಕೋಟಿಯನ್ನು ಈ ಕಾಲುವೆ ಅಭಿವೃದ್ಧಿಗೆ ಬಳಸಲು ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಿ.ಕೆ.­ರವಿ ನಿರ್ಧರಿಸಿದ್ದಾರೆ. ಅವರ ಸೂಚನೆ ಮೇರೆಗೆ, ಕಾಲುವೆ ಅಭಿವೃದ್ಧಿಗೆ ಆಗಲಿರುವ ವೆಚ್ಚವನ್ನು ಅಂದಾಜು ಮಾಡುವ ಸಲುವಾಗಿ ಸರ್ವೆ ಕಾರ್ಯವನ್ನು ಶುರು ಮಾಡಲಾಗಿದೆ.

ಸಣ್ಣ ನೀರಾವರಿ ಇಲಾಖೆ ಈಗಾಗಲೇ ಕಾಲುವೆ ಒತ್ತುವರಿ ಗುರುತಿಸಿದೆ. ಆದರೆ ಅಭಿ­ವೃದ್ಧಿ ಕಾಮಗಾರಿ ಕೆಎಂಆರ್‌ಪಿ ನೇತೃತ್ವದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಕಾಲುವೆಯನ್ನು ಎಷ್ಟು ದೂರದವರೆಗೆ ಅಭಿವೃದ್ಧಿಪಡಿಸಲು ಸಾಧ್ಯ ಎಂಬ ಪ್ರಶ್ನೆಗೆ ಖಚಿತ ಉತ್ತರವನ್ನು ಪಡೆದು­ಕೊಳ್ಳುವ ಸಲುವಾಗಿ ಸರ್ವೆ ಕಾರ್ಯ ನಡೆಸ­ಲಾಗುತ್ತಿದೆ ಎಂದು ಕೆಎಂಆರ್‌ಪಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಲ್ಲೂಕು ಪಂಚಾಯಿತಿ ಪಕ್ಕದಿಂದ ಚಿಕ್ಕಬಳ್ಳಾಪುರ ರಸ್ತೆಯ ರೈಲ್ವೆ ಕೆಳಸೇತುವೆ­ವರೆಗೂ ರಾಜಕಾಲುವೆಯ ಸರ್ವೆಯನ್ನು ಒಂದೆರಡು ದಿನದಲ್ಲಿ ನಡೆಸಲಾಗುವುದು. ಕಾಲುವೆಯಲ್ಲಿ ಎಷ್ಟು ಪ್ರಮಾಣದಲ್ಲಿ ಹೂಳು ತೆಗೆಯಬೇಕಾಗುತ್ತದೆ? ಕಾಲುವೆಯ ಆಳ ಎಷ್ಟಿದೆ? ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸಲು ಕಾಲುವೆಯ ಮಣ್ಣು ಆಧಾರವಾಗಿ ಒದಗಿಬರುತ್ತದೆಯೇ? ಮೊದಲಾದವುಗಳ ಕುರಿತು ಸರ್ವೆಯಲ್ಲಿ ಗಮನಿಸಲಾಗುವುದು.

ಅದರ ವರದಿಯನ್ನು ಕೇಂದ್ರ ಸರ್ಕಾರದ ನ್ಯಾಪ್ ಕೋಸ್ ಏಜೆನ್ಸಿಗೆ ನೀಡಲಾಗುವುದು. ಆ ಏಜೆನ್ಸಿಯು ಕಾಲುವೆ ಅಭಿವೃದ್ಧಿಯ ಸಮಗ್ರ ಯೋಜನಾ ವರದಿಯನ್ನು ತಯಾರಿಸಲಿದೆ. ಆ ನಂತರ ಕಾಮಗಾರಿ ನಡೆಸಲು ರಾಷ್ಟ್ರಮಟ್ಟದಲ್ಲಿ ಟೆಂಡರ್ ಕರೆಯಲಾಗುವುದು ಎನ್ನುತ್ತವೆ ಮೂಲಗಳು.

ನಿಗಮಕ್ಕೆ ಪತ್ರ: ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ವಿಶ್ವಬ್ಯಾಂಕ್ ನೀಡುವ ಹಣವನ್ನು ರಾಜ್ಯ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲಕವೇ ಕೆಎಂಆರ್‌ಪಿ ಯೋಜನೆಗೆ ಬಿಡುಗಡೆ ಮಾಡಲಾಗುತ್ತದೆ. ಈಗ ಉಳಿದಿರುವ ಹಣವನ್ನು ರಾಜಕಾಲುವೆ ಅಭಿವೃದ್ಧಿಗೆ ಬಳಸಲು ಅನುಮೋದನೆ ನೀಡಬೇಕು ಎಂದು ಕೋರಿ ಪತ್ರ ಬರೆಯಲಾಗಿದೆ. ಅಲ್ಲಿಂದ ಅನುಮೋದನೆ ಬಂದ ಬಳಿಕವಷ್ಟೇ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ದೊರಕಲಿದೆ ಎನ್ನುತ್ತಾರೆ ಅಧಿಕಾರಿಗಳು.

ಮಾಹಿತಿ ಕೊರತೆ: ಸಣ್ಣ ನೀರಾವರಿ ಇಲಾಖೆಗೆ ಸೇರಿರುವ ಈ ರಾಜಕಾಲುವೆಯಲ್ಲಿ ಆಗಿರುವ ಒತ್ತುವರಿಯ ಕುರಿತು ಇಲಾಖೆಯು ಈಗಾಗಲೇ ಸರ್ವೇ ನಡೆಸಿದೆ. ಆದರೆ ಆ ಬಗ್ಗೆ ತಮ್ಮ ಬಳಿ ಮಾಹಿತಿ ಇಲ್ಲ. ತಡೆಗೋಡೆ ನಿರ್ಮಾಣಕ್ಕೆಂದು ಸರ್ವೇ ನಡೆಸ­ಲಾಗುತ್ತಿದೆ ಎನ್ನುತ್ತಾರೆ ಕೆಎಂಆರ್‌ಪಿ ಸಿಬ್ಬಂದಿ.

ಹಣಕಾಸು ಏಜೆನ್ಸಿಯಾಗಿರುವ ನಗರ ಮೂಲ­ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಅನುಮೋದನೆ ನೀಡಿದರಷ್ಟೇ ಕೆಎಂಆರ್‌ಪಿ ಮೂಲಕ ಯೋಜನೆ ಅನುಷ್ಠಾನ­ಗೊಳಿಸ­ಬ­ಹುದು. ರಾಜಕಾಲುವೆಯೂ ನಗರಸಭೆ ವ್ಯಾಪ್ತಿಯ ಪ್ರದೇಶದಲ್ಲೇ ಇರುವುದರಿಂದ ಯಾವುದೇ ತೊಂದರೆ ಆಗಲಾರದು ಎಂಬುದು ಅಧಿಕಾರಿಗಳ ಅಭಿಪ್ರಾಯ.

ಸಣ್ಣ ನೀರಾವರಿ ಇಲಾಖೆ ಅನುದಾನ ಬಳಸಲಿ
ನಗರದ ಅಭಿವೃದ್ಧಿಗೆಂದು ನಗರಸಭೆಗೆ ದೊರಕಿರುವ ಅನುದಾನವನ್ನು ರಾಜಕಾಲುವೆ ಅಭಿವೃದ್ಧಿಗೆ ಬಳಸುವ ನಿರ್ಧಾರದ ಕುರಿತು ನಗರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸಣ್ಣನೀರಾವರಿ ಇಲಾಖೆಯಲ್ಲಿ ಇರುವ ಅನುದಾನವನ್ನು ರಾಜಕಾಲುವೆ ಅಭಿವೃದ್ಧಿಗೆ ಬಳಸುವುದು ಸಮಂಜಸ. ಆದರೆ ನಗರಸಭೆ ಅನುದಾನವನ್ನು ಬಳಸುವುದು ಸರಿಯಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಆ ಅನುದಾನ ಬಳಸಬೇಕು ಎನ್ನುತ್ತಾರೆ ನಗರಸಭೆ ಸದಸ್ಯ ವಿ.ರವೀಂದ್ರ.

‘10 ಕೋಟಿ ಉಳಿಕೆ: ನಗರಸಭೆ ನಿರ್ಲಕ್ಷ್ಯ’
ನಗರಕ್ಕೆ ಮೂಲಸೌಕರ್ಯ ಕಲ್ಪಿಸುವ ಸಲುವಾಗಿಯೇ ವಿಶ್ವಬ್ಯಾಂಕ್ ಮೂಲಕ ನಗರಸಭೆಗೆ ಕೆಲ ವರ್ಷಗಳ ಹಿಂದೆ ಕೆಎಂಆರ್‌ಪಿ ಅಡಿಯಲ್ಲಿ ದೊರಕಿದ್ದ ₨12.20 ಕೋಟಿ ಅನುದಾನವನ್ನು ಬಳಸಲೆಂದೇ ಆರು ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗಳನ್ನು ನಡೆಸಲು ಸಮಗ್ರ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗಿತ್ತು.

ಅದಕ್ಕಾಗಿ ₨4.80 ಕೋಟಿ ನೀಡಲಾಗಿತ್ತು. ಆದರೆ ಎಲ್ಲವೂ ಯೋಜನೆಯಂತೆ ನಡೆಯದಿರುವುದರಿಂದ 10 ಕೋಟಿ ಉಳಿದಿದೆ. ನಗರಸಭೆ ಸಹಕರಿಸಿದ್ದರೆ ಹಣವೆಲ್ಲವೂ ಬಳಕೆಯಾಗುತ್ತಿತ್ತು. ಕಾಲಾವಧಿ ಮೀರಿರುವುದರಿಂದ ಹಣ ವಾಪಸು ಹೋಗುವ ಸಾಧ್ಯತೆ ಇದೆ. ಅದನ್ನು ತಡೆಯಲೆಂದೇ ರಾಜಕಾಲುವೆ ಅಭಿವೃದ್ಧಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂಬುದು ಕೆಎಂಆರ್‌ಪಿ ಮೂಲಗಳ ನುಡಿ.

ಕೆಇಬಿ ಸಮುದಾಯ ಭವನದಿಂದ ಕ್ಲಾಕ್ ಟವರ್‌ವರೆಗೆ ಮಳೆ ನೀರು ಚರಂಡಿ ನಿರ್ಮಿಸಬೇಕಾಗಿತ್ತು. ಆದರೆ ಅದು ಕಠಾರಿ ಗಂಗಮ್ಮ ದೇವಾಲಯದವರೆಗೂ ನಡೆದು ಸ್ಥಗಿತಗೊಂಡಿತು. ಅಲ್ಲಿಂದ ಮುಂದಕ್ಕೆ ರಸ್ತೆ ಒತ್ತುವರಿ ತೆರವು ಮಾಡಿಸಿಕೊಡುವಲ್ಲಿ ನಗರಸಭೆ ಆಸಕ್ತಿ ವಹಿಸದ ಪರಿಣಾಮ ಕಾಮಗಾರಿ ಪೂರ್ಣಗೊಳಿಸಲು ಆಗಲೇ ಇಲ್ಲ. ನಗರಸಭೆ ಸಹಕಾರ, ಸಹಯೋಗ ನೀಡದಿದ್ದರೆ ಕೆಎಂಆರ್‌ಪಿ ಅನುದಾನವನ್ನು ಸಮಪರ್ಕವಾಗಿ ಬಳಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ಹೇಳುತ್ತವೆ.

ನಗರಸಭೆ ತಪ್ಪು: ಜಿಲ್ಲಾಧಿಕಾರಿ
ಉಳಿಕೆಯಾಗಿರುವ 10 ಕೋಟಿ ಕೆಎಂಆರ್‌ಪಿ ಅನುದಾನವನ್ನು 2014ರ ಮಾರ್ಚ್‌ ಒಳಗೆ ಬಳಸದಿದ್ದರೆ ಸರ್ಕಾರಕ್ಕೆ ವಾಪಸಾಗುತ್ತದೆ.  ಅನುದಾನವನ್ನು ಇದುವರೆಗೂ ಬಳಸದೇ ಇರುವುದು ನಗರಸಭೆಯ ತಪ್ಪು. ಅನುದಾನ ವಾಪಸು ಹೋದರೆ ನಷ್ಟವಾಗುವುದು ಕೋಲಾರ ನಗರಕ್ಕೇ ತಾನೇ? ರಾಜಕಾಲುವೆಯ ಸಮಗ್ರ ಅಭಿವೃದ್ಧಿಗಾಗಿ ಹೆಚ್ಚುವರಿ ಅನುದಾನಕ್ಕೂ ಕೋರಿಕೆ ಸಲ್ಲಿಸಲಾಗಿದೆ.
–ಡಿ.ಕೆ.ರವಿ. ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT