ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆಗೆ ಒಳಚರಂಡಿ ನೀರು

Last Updated 10 ಏಪ್ರಿಲ್ 2013, 6:46 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಮಣಿಘಟ್ಟ ರಸ್ತೆಯಲ್ಲಿರುವ ಒಳಚರಂಡಿ ಸಂಸ್ಕರಣ ಘಟಕಕ್ಕೆ ಹರಿಯಬೇಕಿದ್ದ ನಗರದ ಒಳಚರಂಡಿ ನೀರನ್ನು ತಾಲ್ಲೂಕು ಪಂಚಾಯಿತಿ ಕಚೇರಿ ಎದುರಿನ ರಾಜಕಾಲುವೆಗೆ ಹರಿಸಲಾಗುತ್ತಿದೆ. ಪರಿಣಾಮವಾಗಿ ಸುತ್ತಮುತ್ತ ದುರ್ನಾತ ಹಬ್ಬುತ್ತಿದೆ. ಅಷ್ಟೇ ಅಲ್ಲದೆ, ಅದೇ ನೀರನ್ನು ಜಾನುವಾರುಗಳು ಕುಡಿಯುತ್ತಿರುವುದರಿಂದ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗುವ ಆತಂಕ ಸೃಷ್ಟಿಯಾಗಿದೆ ಎಂದು ಸುತ್ತಮುತ್ತಲಿನ ನಿವಾಸಿಗಳು ದೂರಿದ್ದಾರೆ.

ಕೆಲ ದಿನಗಳ ಹಿಂದೆ ನಗರದ ಉಪವಿಭಾಗಾಧಿಕಾರಿ ಕಚೇರಿ ಸಮೀಪದಲ್ಲಿರುವ ಒಳಚರಂಡಿ ಮ್ಯಾನ್‌ಹೋಲ್ ಕಟ್ಟಿಕೊಂಡು ರಸ್ತೆಗೆ ಹರಿದಿತ್ತು. ಆ ಸಂದರ್ಭ ರಿಪೇರಿ ಮಾಡಿದ ನಗರಸಭೆ ಸಿಬ್ಬಂದಿ ನೀರು ಹರಿಯಲು ಇದ್ದ ಸಮಸ್ಯೆ ಬಗೆಹರಿಸಲಿಲ್ಲ. ಬದಲಿಗೆ ಸಂಸ್ಕರಣ ಘಟಕಕ್ಕೆ ನೀಡಿದ್ದ ಸಂಪರ್ಕ ಪೈಪ್ ಅನ್ನು ಕತ್ತರಿಸಿದ್ದಾರೆ. ಪರಿಣಾಮ ಒಳಚರಂಡಿ ನೀರೆಲ್ಲವೂ ರಾಜಕಾಲುವೆಗೆ ಹರಿಯುತ್ತಿದೆ ಎಂದು ಆರೋಪಿಸಿದ್ದಾರೆ.

ನೀರಿಲ್ಲದೆ ಕುಂಟೆಗಳು ಒಣಗುತ್ತಿರುವ ವೇಳೆ ರಾಜಕಾಲುವೆ ತುಂಬಿಕೊಳ್ಳುತ್ತಿರುವ ನೀರಿನ ಕಡೆಗೆ ಜಾನುವಾರು ಬರುವುದು ಸಹಜ. ಆದರೆ ಆ ನೀರನ್ನು ಕುಡಿಯುವುದರಿಂದ ಜಾನುವಾರುಗಳಿಗೆ ಮಾರಕ ಕಾಯಿಲೆಗಳು ಬರುವ ಮತ್ತು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಒಳಚರಂಡಿ ನೀರು ಸಂಸ್ಕರಣಕ್ಕೆಂದೇ ಬೃಹತ್ ಘಟಕವೊಂದು ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲೇ, ಮ್ಯಾನ್‌ಹೋಲ್ ಸಮಸ್ಯೆ ಪರಿಹರಿಸುವ ಬದಲು ನೀರನ್ನು ರಾಜಕಾಲುವೆಗೆ ಹರಿಸುತ್ತಿರುವುದು ನಗರಸಭೆ ನಿರ್ಲಕ್ಷ್ಯಕ್ಕೆ ನಿದರ್ಶನವಾಗಿದೆ. ಇನ್ನಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳಾದ ವೆಂಕಟರಮಣಪ್ಪ, ಮುನಿಯಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT