ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಬೇಡ; ಉಪನ್ಯಾಸಕರಿಗೆ ಸಚಿವರ ಸಲಹೆ

Last Updated 6 ಅಕ್ಟೋಬರ್ 2012, 9:45 IST
ಅಕ್ಷರ ಗಾತ್ರ

ಮಡಿಕೇರಿ: ಸಮಾಜದಲ್ಲಿ ಉಪನ್ಯಾಸಕರ ಹುದ್ದೆಯು ಅತ್ಯಂತ ಗೌರವದ ಹುದ್ದೆಯಾಗಿದೆ. ಈ ಹುದ್ದೆಯಲ್ಲಿ ಸಿಗುವ ಆತ್ಮತೃಪ್ತಿ ಬೇರಾವ ಹುದ್ದೆಯಲ್ಲೂ ಸಿಗುವುದಿಲ್ಲ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 

 ಉಪನ್ಯಾಸಕರು ಯಾವುದೇ ಒಂದು ನಿರ್ದಿಷ್ಟ ಬಣಕ್ಕೆ ಅಂಟಿಕೊಳ್ಳದೇ ಹಾಗೂ ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸಬೇಕು. ಇದಕ್ಕೆ ತಾವೇ ಉತ್ತಮ ಉದಾಹರಣೆ ಎಂದು ಹೇಳಿದ ಅವರು, ನಾನು ಬಿಜೆಪಿಯಿಂದ ಆರಿಸಿ ಬಂದಿದ್ದರೂ ವಿರೋಧ ಪಕ್ಷದವರೊಂದಿಗೆ ಅನ್ಯೋನ್ಯವಾಗಿದ್ದೇನೆ ಎಂದು ಹೇಳಿದರು.

ಉಪನ್ಯಾಸಕರಲ್ಲಿ ಇರುವಂತೆ ಭಿನ್ನಾಭಿಪ್ರಾಯಗಳು ನಮ್ಮ ಪಕ್ಷದಲ್ಲೂ ಇವೆ. ಅಂತಹ ಸಂದರ್ಭದಲ್ಲಿ ತಾಳ್ಮೆಯಿಂದ ಇರಬೇಕು. ನಂತರ ಅದಕ್ಕೆ ತಕ್ಕುದಾದ ಪ್ರತಿಫಲ ದೊರೆಯುತ್ತದೆ. ಕಳೆದ 30 ವರ್ಷಗಳಿಂದಲೂ ರಾಜಕೀಯದಲ್ಲಿದ್ದೂ, 14 ವರ್ಷಗಳಿಂದ ಶಾಸಕನಾಗಿದ್ದರೂ ಈಗಷ್ಟೇ ನನಗೆ ಮಂತ್ರಿ ಪದವಿ ಸಿಕ್ಕಿದೆ. ಈ ರೀತಿಯಲ್ಲಿ ನೀವು ಕೂಡ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸದಂತೆ ನನ್ನ ಮೇಲೆ ವಿವಿಧ ರೀತಿಯ ಒತ್ತಡಗಳು ಬಂದಿದ್ದವು. ಅವುಗಳನ್ನು ನಿರ್ಲಕ್ಷಿಸಿ, ಇಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದರು.

ಯಾವುದೇ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಲಾರದೆ ಉಪನ್ಯಾಸಕರು ಎಲ್ಲ ಪಕ್ಷಗಳೊಂದಿಗೆ ಹಾಗೂ ಮುಖಂಡರೊಂದಿಗೆ ಸಾಮ್ಯತೆಯಿಂದ ಇರಬೇಕು. ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ತಿಮ್ಮಯ್ಯ ಪುರ್ಲೆ, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ.ಸ್ವಾಮಿ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಂ.ಎನ್. ಗಂಗಯ್ಯ ಇದ್ದರು.

ಸಮ್ಮೇಳನ ವಿಫಲ- ಮಹದೇವಸ್ವಾಮಿ

ನಾಪೋಕ್ಲು: ಮಡಿಕೇರಿಯಲ್ಲಿ ಶುಕ್ರವಾರ ನಡೆದ ಶೈಕ್ಷಣಿಕ ಸಮ್ಮೇಳನದಲ್ಲಿ ಸಭಾಂಗಣ ತುಂಬಿಸುವ ಉದ್ದೇಶದಿಂದ ಉಪನ್ಯಾಸಕರಲ್ಲದವರನ್ನು ಕರೆತಂದು ಸಮ್ಮೇಳನ ನಡೆಸಿದ್ದಾರೆ ಎಂದು ಸಮ್ಮೇಳನಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ನೌಕರರ ಸಂಘದ ಅಧ್ಯಕ್ಷ ಪಿ. ಮಹದೇವಸ್ವಾಮಿ ದೂರಿದ್ದಾರೆ.

ಉಪನ್ಯಾಸಕರ ಸಂಘಗಳ ಒಮ್ಮತವಿಲ್ಲದೇ ನಡೆದ ಈ ಸಮ್ಮೇಳನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಅವರನ್ನು ಹೊರತುಪಡಿಸಿದರೆ ಬಹುಪಾಲು ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿಲ್ಲ. ಜಿಲ್ಲೆಯ ಅನೇಕ ಕಾಲೇಜುಗಳಲ್ಲಿ ತರಗತಿಗಳು ಎಂದಿನಂತೆ ನಡೆದಿದ್ದು, ಅನೇಕ ಉಪನ್ಯಾಸಕರುಗಳು ಸಮ್ಮೇಳನಕ್ಕೆ ಹಾಜರಾಗದೆ ಸಂಪೂರ್ಣ ವಿಫಲವಾಗಿದೆ. ಶೈಕ್ಷಣಿಕ ಸಮ್ಮೇಳನದಲ್ಲಿ ಶೈಕ್ಷಣಿಕ ಗೋಷ್ಠಿಗಳು, ಅಧಿವೇಶನಗಳು ಸಮರ್ಥವಾಗಿ ನಡೆದಿಲ್ಲ. ಈ ಮೂಲಕ ಸಮ್ಮೇಳನದ ಉದ್ದೇಶ ಈಡೇರಿದಂತಾಗಿಲ್ಲ ಎಂದು ಪ್ರತಿಕಾ ಹೇಳಿಕೆ ನೀಡಿದ್ದಾರೆ.
 

`ಸಮ್ಮೇಳನ ಸಫಲ~

ಮಡಿಕೇರಿ: ಸಮ್ಮೇಳನ ಆಯೋಜಿಸಿದ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ    ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎನ್. ವಿಶ್ವನಾಥ್ ಸುದ್ದಿಗಾರರ ಜೊತೆ ಮಾತನಾಡಿ, ಜಿಲ್ಲೆಯ    ಎಲ್ಲ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಭಾಗವಹಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದಾರೆ. ಇಡೀ  ಸಭಾಂಗಣ ತುಂಬಿಕೊಂಡಿದ್ದು ನೋಡಿದರೆ ಸಮ್ಮೇಳನ ಯಶಸ್ವಿಯಾಗಿದೆ ಎನ್ನುವುದು ಖಾತರಿಯಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

ಇಲ್ಲಿ ಭಾಗವಹಿಸಿದ ಎಲ್ಲರಿಗೂ ಅನ್ಯಕಾರ್ಯ ನಿಮಿತ್ತ ರಜೆ ದೊರೆಯಲಿದೆ. ಇದರ ಬಗ್ಗೆ ಆತಂಕ ಬೇಡ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT