ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಪ್ರಜ್ಞೆಯೂ ಕವಲುದಾರಿಯೂ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

`ಕಾರಂಜಿ~ ಬಿಡುಗಡೆ ತಡವಾದದ್ದೇಕೆ ಎಂದದ್ದಕ್ಕೆ ವಿಜಯ ರಾಘವೇಂದ್ರ ಬೇಸರದಿಂದ ಭಾವುಕರಾಗಿದ್ದರು. ಯಾಕೆ ಅಷ್ಟು ಜಾಳುಜಾಳಾದ ಸಿನಿಮಾ ಒಪ್ಪಿಕೊಂಡಿರಿ ಎಂಬ ಪ್ರಶ್ನೆಗೆ ಪ್ರಜ್ವಲ್ ದೇವರಾಜ್, `ಕಥೆ ಹೇಳುವಾಗ ಸಿನಿಮಾ ಹೇಗೋ ಆಗುತ್ತದೆ ಅನ್ನಿಸಿತ್ತು; ತೆರೆಗೆ ಬಂದಮೇಲೆ ಹೀಗಾಯಿತು~ ಎಂದು ಮುಖ ಸಣ್ಣಗೆ ಮಾಡಿದ್ದರು.

ಯೋಗೀಶ್ ಮೇಲೆತ್ತಲು ಅವರ ತಂದೆಯ ಬ್ಯಾನರ್‌ಗೇ ಆಗಲಿಲ್ಲ. ಅಭಿನಯ ಪ್ರತಿಭೆಯಿದ್ದರೂ ಯಶ್ ಈಗಲೂ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ದಿಗಂತ್ ಕಥೆಯೂ ಮೋಡದಂಚಿನ ಮಿಂಚಿನಂತೆ. ಆಗೀಗ ಫಾರ್ಮ್ ಕಂಡುಕೊಳ್ಳುವ ವಿಜಯ್ ಮುಂದಿನ ವರ್ಷ ತಮ್ಮದೇ ಬ್ಯಾನರ್ ಕಟ್ಟುವ ಮನಸ್ಸು ಮಾಡಿದ್ದಾರೆ.

ಎಲ್ಲಾ ಯುವ ನಾಯಕನಟರೂ ಅಸ್ಥಿರತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಅವರೇ ಸೃಷ್ಟಿಸಿಕೊಂಡ ಸಮಸ್ಯೆ. ಒಂದು ಸಿನಿಮಾ ಯಶ ಕಂಡಮೇಲೆ ಎದುರಲ್ಲಿ ಮುಂಗಡ ಹಣದ ಥೈಲಿ ಹಿಡಿದು ನಿಲ್ಲುವ ನಿರ್ಮಾಪಕರೆಲ್ಲಾ ಅವರಿಗೆ ಬೆರಗಾಗಿ ಕಂಡಿರಲಿಕ್ಕೆ ಸಾಕು. `ಹುಚ್ಚನ ಮದುವೆಯಲಿ ಉಂಡೋನೆ ಜಾಣ~ ಎಂಬಂತೆ ಶುರುವಾಗುವ ಸಿನಿಮಾ ಒಪ್ಪಿಕೊಳ್ಳುವ ಭರಾಟೆ ಆಮೇಲೆ ಹೀಗೆ ಫಾರ್ಮ್ ಕಳೆದುಕೊಂಡ ಆಟಗಾರನ ಸ್ಥಿತಿಗೆ ಬಂದು ಮುಟ್ಟುತ್ತದೆ. ಕೆಲವೇ ದಶಕಗಳ ಹಿಂದೆ ನಾಯಕನಟರಿಗೆ ಹೀಗೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿಯುವ ಪ್ರಸಂಗಗಳು ಬರುತ್ತಿದ್ದುದೇ ವಿರಳ. ಈಗ ಕಾಲ ಈ ವಿಷಯದಲ್ಲಿ ಬದಲಾಗಿದೆ. ಗೆಲ್ಲುವ ಕುದುರೆ ಮೇಲೆ ಹಣ ಕಟ್ಟುವ ಶೋಕೀಲಾಲರಂಥ ನಿರ್ಮಾಪಕರ ಸಂಖ್ಯೆ ವರ್ಧಿಸಿದೆ.

ನಡುನಡುವೆ ತಮ್ಮ ಮಗನಿಗೋ, ತಮ್ಮನಿಗೋ ನಾಯಕನ ಮೇಕಪ್ ಹಾಕಿಸಿ ಖುಷಿಪಡುವವರೂ ಇದ್ದಾರೆನ್ನಿ. ಗೆಲ್ಲುವ ನಾಯಕನ ಹಿಂದೆ ಕ್ಯೂ ನಿಲ್ಲುವವರಲ್ಲಿ ಎಸ್.ನಾರಾಯಣ್ ತರಹದ ಅನುಭವಿಗಳಿಂದ ಹಿಡಿದು ಮೊನ್ನೆಮೊನ್ನೆ ಕ್ಲಾಪ್ ಬೋರ್ಡ್ ಹಿಡಿದವರವರೆಗೆ ಅನೇಕರು ಇದ್ದಾರೆ.

ಸಿನಿಮಾ ನೇಯುವ ಜಾತ್ರೆಯ ಏರ್ಪಾಡಿಗೆ ಕಾರಣವಾಗುವ ಈ ಬೆಳವಣಿಗೆ ಒಬ್ಬ ನಾಯಕನ ಅಭಿನಯಶ್ರದ್ಧೆಯನ್ನು ಒರೆಗೆ ಹಚ್ಚುವ ಪ್ರಕ್ರಿಯೆಯನ್ನೇ ಇಲ್ಲವಾಗಿಸುತ್ತದೆ. ಮೊನ್ನೆಮೊನ್ನೆ ವಿಜಯ್ ಕೂಡ ಇದನ್ನೇ ಹೇಳಿದ್ದು. ಪಡೆದ ಡೇಟ್ಸ್ ಒಳಗೆ ಸಿನಿಮಾ ಮುಗಿಸುವ ತುರ್ತು, ನಿರ್ಮಾಪಕರನ್ನು ಓಲೈಸುವ ದರ್ದು, ನಿರ್ದೇಶಕರ ಸ್ವಾರ್ಥ ಸಾಧನೆ ಇವೆಲ್ಲವುಗಳ ನಡುವೆ ಪ್ರತಿಭಾವಂತ ನಾಯಕರ ಜೊತೆಗೆ ಬರುವ ಸಿನಿಮಾಗಳೂ ಸೊರಗುತ್ತವೆ.

ಹರಾಜು ಕೂಗುವವರಂತೆ ನಿರ್ಮಾಪಕರು ಸಂಭಾವನೆಯ ಮೊತ್ತವನ್ನೂ ಸದ್ದೇ ಮಾಡದಂತೆ ಹೂಡತೊಡಗುವುದರಿಂದ ಯುವ ನಾಯಕರ `ಬೆಲೆ~ಯೂ ಏರುತ್ತದೆ. ಮುಕ್ಕಾಲು ಕೋಟಿ, ಒಂದು ಕೋಟಿ ಮುಟ್ಟಿದ ಮೇಲೆ ಅದರಿಂದ ಕೆಳಗಿಳಿಯದಷ್ಟು `ಎತ್ತರ~ವನ್ನು ತಾವು ತಲುಪಿದ್ದೇವೆ ಎಂಬ ಭ್ರಮೆಗೆ ನಾಯಕರು ಈಡಾಗುತ್ತಾರೆ. 

ಒಂದು ಸಲ ಮಾರುಕಟ್ಟೆ ಕುಸಿಯಿತೆಂದರೆ, ಥೈಲಿ ಹಿಡಿದು ಒಮ್ಮೆ ಬಂದವರೆಲ್ಲಾ ಹಿಂದಡಿ ಇಡುತ್ತಾರೆ. ಚೌಕಾಸಿ ಮಾಡತೊಡಗುತ್ತಾರೆ. ಆದರೆ, ಅದಾಗಲೇ ತಾನು ಅರಮನೆಯ ರಾಜ ಎಂದು ಭಾವಿಸಿರುವ ನಟ ಅಷ್ಟು ಕಡಿಮೆ ಮೊತ್ತಕ್ಕೆ ಬಾಗುವುದೇ ಇಲ್ಲ. ಏನಾದರೇನಂತೆ, ತನಗೇ ಒಂದು ಬ್ಯಾನರ್ ಕಟ್ಟುವ ಶಕ್ತಿ ಇಲ್ಲವೇ ಎನ್ನಿಸಲು ಶುರುವಾಗುತ್ತದೆ. ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಣ ಸಂಸ್ಥೆಯ ಹುಟ್ಟಿನ ಹಿಂದೆ ಇರುವುದು ಇದೇ `ರಾಜಪ್ರಜ್ಞೆ~. ಅವರ ಆತ್ಮವಿಶ್ವಾಸ ಎಷ್ಟರಮಟ್ಟಿಗೆ ಇದೆ ಎಂದರೆ, ಸ್ವಲ್ಪ ಕೊಸರಾಡುವ ನಿರ್ದೇಶಕರನ್ನು ಕುರ್ಚಿಯಿಂದ ಹೊರದಬ್ಬಿ ಅದರ ಮೇಲೆ ತಾವೇ ಪ್ರತಿಷ್ಠಾಪಿಸುವಷ್ಟು. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಡರೆನ್ ಸ್ಯಾಮಿ ಪರದಾಡುತ್ತಿದ್ದ ಬ್ಯಾಟಿಂಗ್ ಕಂಡು ತಾವೇ ಬಡ್ತಿ ಪಡೆದುಕೊಂಡು ಬಂದು ಆಡಿದಷ್ಟೇ ಹುಂಬತನದ ನಿರ್ಧಾರವಿದು.

ಹೆತ್ತವರಿಗೆ ಹೆಗ್ಗಣ ಮುದ್ದು. ಎಸ್.ನಾರಾಯಣ್‌ಗೆ ಪುತ್ರ ಮುದ್ದು. ಅದಕ್ಕೇ ಅವರು `ದುಷ್ಟ~ ಚಿತ್ರಕ್ಕೆ ಹೊಸಬರನ್ನು ಆಯ್ಕೆ ಮಾಡುವ ದೊಡ್ಡ ಪ್ರಕ್ರಿಯೆ ಪ್ರಾರಂಭಿಸಿ, ಆಮೇಲೆ ತಮ್ಮ ಮಗನಿಗೇ ನಾಯಕನ ಪಟ್ಟಾಭಿಷೇಕ ಮಾಡಿದ್ದು. ಯಾರ‌್ಯಾರೋ ಹೊಸಬರು ಗೆಲ್ಲುತ್ತಿರುವಾಗ ತಮ್ಮ ಮಗನೂ ಯಾಕೆ ಗೆಲ್ಲಬಾರದೆಂಬ ಅವರ ಬಯಕೆ, ನಿರೀಕ್ಷೆ ಈ ಸಂದರ್ಭದ ಮಟ್ಟಿಗೆ ಸಹಜವೇ ಹೌದು. ಇಂಥ `ಫಾಸ್ಟ್‌ಫುಡ್~ ಮನಸ್ಥಿತಿಯ ಚಿತ್ರಮಂದಿಯ ನಡುವೆ ಯುವನಾಯಕ ನಟರ ಲಯತಪ್ಪಿದ ನರ್ತನ ಮುಂದುವರಿದಿದೆ. ಸಂಭಾವನೆ ಮಾತ್ರ ಶಿವಗಂಗೆ ಬೆಟ್ಟದಷ್ಟು ಏರಿದೆ. ವಿಜಯ ರಾಘವೇಂದ್ರ ಮುಖದಲ್ಲಿ ಬೇಸರದ ಗೆರೆ. ಶ್ರೀಮುರಳಿ ಶುಭಕಾಲ ಎಂದು ಬರುತೈತೆ ಎಂದು ಬೆರಳೆಣಿಸುತ್ತಲೇ ಇದ್ದಾರೆ. ಪ್ರಜ್ವಲ್ ಪ್ರತಿ ಚಿತ್ರವನ್ನೂ ಡಿಫರೆಂಟ್ ಎಂದು ಖುಷಿ ಪಡಲು ಯತ್ನಿಸುತ್ತಿದ್ದರೆ, ಪಂಕಜ್‌ಗೆ ಅಪ್ಪನ ಬುದ್ಧಿಬಲದ ಮೇಲೆ ಅತಿನಂಬಿಕೆ. `ಹುಡುಗರು~ ನಂತರ ಸಂತೋಷಕ್ಕಿಷ್ಟು ಕಾರಣ ಸಿಕ್ಕಿರುವುದರಿಂದ ಯೋಗೀಶ್ ಕೂಡ ಬೀಗುತ್ತಿದ್ದಾರೆ. ಆದರೆ, ಯಾರಲ್ಲೂ ಸ್ಟಾರ್ ಹೊಳಪು ಮಾತ್ರ ಕಾಣುತ್ತಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT