ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾ-ಅಂಬಾನಿ ಜೊತೆ ಸಿಬಿಐ ಮಾತಿನ ಚಕಮಕಿ

Last Updated 17 ಫೆಬ್ರುವರಿ 2011, 17:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಿಲಯನ್ಸ್ ಟೆಲಿಕಾಂಗೆ ದ್ವಿತಂತ್ರಜ್ಞಾನದ ಪರವಾನಗಿ ಮತ್ತು ಸ್ವಾನ್ ಟೆಲಿಕಾಂ ಜೊತೆ ಅದರ ಸಂಬಂಧ ಕುರಿತು ಇಲ್ಲಿನ ಸಿಬಿಐ ಪ್ರಧಾನ ಕಚೇರಿಯಲ್ಲಿ ಬುಧವಾರ ಸಂಜೆ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಅಂಬಾನಿ ಗುಂಪಿನ ಮುಖ್ಯಸ್ಥ ಅನಿಲ್ ಅಂಬಾನಿ ಅವರೊಂದಿಗೆ ತನಿಖಾಧಿಕಾರಿಗಳು ಮಾತಿನ ಚಕಮಕಿ ಎದುರಿಸಬೇಕಾಯಿತು.

ವಿವಾದಿತ ಸ್ವಾನ್ ಟೆಲಿಕಾಂನ ಷೇರಿನ ಬಗ್ಗೆ ಸಿಬಿಐ ಇವರಿಬ್ಬರನ್ನೂ ಸುಮಾರು ಒಂದು ತಾಸಿಗೂ ಹೆಚ್ಚು ಸಮಯ ಮತ್ತೆ ಮತ್ತೆ ಪ್ರಶ್ನಿಸಿದರೂ, ಪ್ರಯೋಜನವಾಗಲಿಲ್ಲ. ಇಬ್ಬರೂ ತಮ್ಮ ನಿಲುವಿಗೆ ಅಂಟಿಕೊಂಡು, ಅಸಹಕಾರ ತೋರಿದ ಕಾರಣ ತನಿಖಾಧಿಕಾರಿಗಳು ಅಗತ್ಯವಾದ ಮಾಹಿತಿ ಪಡೆಯಲು ಹೆಣಗಾಡಿದರು.

ರಿಲಯನ್ಸ್ ಕಮ್ಯುನಿಕೇಷನ್ಸ್ ನೇರವಾಗಿ ಅಥವಾ ತನ್ನ ಅಂಗಸಂಸ್ಥೆಗಳ ಮೂಲಕ ಶೇ 10ಕ್ಕೂ ಹೆಚ್ಚು ಈಕ್ವಿಟಿ ಷೇರು ಪಡೆದಿದೆಯೇ ಎಂಬುದು ತನಿಖಾಧಿಕಾರಿಗಳ ಪ್ರಶ್ನೆಯಾಗಿತ್ತು. ಒಂದೇ ವಲಯದಲ್ಲಿ ಇಬ್ಬರು ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಂಪರ್ಕವಿರುವ ಆರೋಪ ಇದರಲ್ಲಿದೆ.

ಸ್ವಾನ್ ಟೆಲಿಕಾಂನಲ್ಲಿ ಟೈಗರ್ ಟ್ರೇಡರ್ಸ್‌ ಪ್ರೈವೇಟ್ ಲಿಮಿಟೆಡ್ ಶೇ 90.13ರಷ್ಟು ಮತ್ತು ರಿಲಯನ್ಸ್ ಟೆಲಿಕಾಂ ಲಿಮಿಟೆಡ್ ಶೇ 9.87ರಷ್ಟು ಈಕ್ವಿಟಿ ಷೇರು ಬಂಡವಾಳ ಹೂಡಿದ್ದು, ಈ ಹಣವನ್ನು ಡಿಎಂಕೆ ಮಾಲೀಕತ್ವದ ಕಲೈಞ್ಞರ್ ಟೆಲಿವಿಷನ್‌ಗೆ ಪರಿವರ್ತನೆ ಮಾಡಿರುವ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ.

2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಅನಿಲ್ ಅಂಬಾನಿ ಅವರನ್ನು ಸಿಬಿಐ ಪ್ರಧಾನ ಕಚೇರಿಗೆ ಕರೆಸಿಕೊಂಡು ಪ್ರಶ್ನಿಸಿದ್ದು, ಸ್ವಾನ್ ಟೆಲಿಕಾಮ್‌ನ್ನು ಅಭಿವೃದ್ಧಿಪಡಿಸಿರುವ ಡಿಬಿ ರಿಯಾಲ್ಟಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಶಾಹೀದ್ ಉಸ್ಮಾನ್ ಬಲ್ವಾ ಈಗಾಗಲೇ ಸಿಬಿಐ ವಶದಲ್ಲಿದ್ದಾರೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಸೇರಿದಂತೆ ನಾಲ್ಕು ಟೆಲಿಕಾಂ ಸೇವಾ ಕಂಪೆನಿಗಳ ವಿರುದ್ಧ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾದ ಆರೋಪ ಹೊರಿಸಿ ಸಿಎಜಿ (ಮಹಾಲೇಖಪಾಲರು) ಸರ್ಕಾರಕ್ಕೆ ವರದಿ ಸಲ್ಲಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT