ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್: ಜಿಲ್ಲೆ ಜನರಲ್ಲಿ ಸಮಾಧಾನ

ಎತ್ತಿನಹೊಳೆಗೆ 1000 ಕೋಟಿ, ಡಿಪಿಆರ್‌ಗೆ 50 ಕೋಟಿ ರೂಪಾಯಿ
Last Updated 13 ಜುಲೈ 2013, 10:22 IST
ಅಕ್ಷರ ಗಾತ್ರ

ಕೋಲಾರ: ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ 1000 ಕೋಟಿ ರೂಪಾಯಿ ಮತ್ತು ನೀರಾವರಿ ತಜ್ಞ ಪರಮಶಿವಯ್ಯನವರ ವರದಿ ಅನುಷ್ಠಾನದ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು 50 ಕೋಟಿ ಮೀಸಲಿಟ್ಟಿರುವ ರಾಜ್ಯ ಬಜೆಟ್ ಜಿಲ್ಲೆಯ ಜನರಿಗೆ ಸಮಾಧಾನ ತಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಬಯಲು ಸೀಮೆಯ ಜಿಲ್ಲೆಗಳನ್ನು ಸಮಾಧಾನಗೊಳಿಸುವ ಪ್ರಯತ್ನವನ್ನು ಮಾಡಿರುವುದು ಎದ್ದುಕಾಣುತ್ತದೆ. ಶಾಶ್ವತ ನೀರಾವರಿ ಸಂಬಂಧ ಬಜೆಟ್‌ನಲ್ಲಿ ಕಾಳಜಿಯನ್ನು ವ್ಯಕ್ತಪಡಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲು ಸಜ್ಜಾಗಿದ್ದ ಜನ ಈಗ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಎತ್ತಿನಹೊಳೆ ಯೋಜನೆಯಿಂದ ಬಯಲು ಸೀಮೆಯ ಜಿಲ್ಲೆಗಳ ನೀರಿನ ದಾಹ ತಣಿಯಲು ಸಾಧ್ಯವಿಲ್ಲ. ಹೀಗಾಗಿ ಪರಮಶಿವಯ್ಯನವರ ವರದಿ ಜಾರಿಗೆ ಸರ್ಕಾರ ಬದ್ಧತೆ ಪ್ರದರ್ಶಿಸಬೇಕು ಎಂಬ ಅವರ ಆಗ್ರಹಕ್ಕೆ ಸರ್ಕಾರ ಸ್ಪಂದಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಹಲವರು ರಾಜ್ಯ ಬಜೆಟ್ ಅನ್ನು ಹರ್ಷದಿಂದ ಸ್ವಾಗತಿಸಿದ್ದಾರೆ.

ರೈತರ ನಿರೀಕ್ಷೆಗೆ ತಕ್ಕಂತೆ: ಜಿಲ್ಲೆಯ ರೈತರ ನಿರೀಕ್ಷೆಗೆ ತಕ್ಕಂತೆ ಸಿದ್ದರಾಮಯ್ಯ ಬಜೆಟ್ ಮಂಡಿಸಿರುವುದು ಸ್ವಾಗತಾರ್ಹ ಎಂಬುದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್ ಅವರ ಅಭಿಪ್ರಾಯ.

ಶಾಶ್ವತ ನೀರಾವರಿ ಸೌಕರ್ಯಕ್ಕಾಗಿ ಎದ್ದಿರುವ ಕೂಗಿಗೆ ಸರ್ಕಾರ ಸಮರ್ಪಕ ರೀತಿಯಲ್ಲಿ ಸ್ಪಂದಿಸಿದೆ. ಈಗಾಗಲೇ ಶುರುವಾಗಿರುವ ಎತ್ತಿನಹೊಳೆ ಯೋಜನೆಗೆ 1000 ಕೋಟಿ ಮೀಸಲಿಟ್ಟಿರುವುದು, ಮತ್ತು ಪರಮಶಿವಯ್ಯ ವರದಿ ಜಾರಿಗೆಂದು ವರದಿ ತಯಾರಿಸಲು 50 ಕೋಟಿ ಮೀಸಲಿಟ್ಟಿರುವುದು ಜಿಲ್ಲೆಯ ಮಟ್ಟಿಗೆ ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.

ಕಾರ್ಯಗತಗೊಳ್ಳಲಿ: ಬಜೆಟ್‌ನಲ್ಲಿ ಘೋಷಣೆಯಾಗಿರುವ ಎರಡೂ ಅಂಶಗಳು ಶೀಘ್ರ ಕಾರ್ಯಗತಗೊಳ್ಳಬೇಕು ಎಂದು ಶಾಸಕ ಆರ್.ವರ್ತೂರು ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಅಹಿಂದ ವರ್ಗಗಳ ಹಿತ ಕಾಯುವ ಪ್ರಯತ್ನವೂ ಬಜೆಟ್‌ನಲ್ಲಿ ನಡೆದಿದೆ. ಗ್ರಾಮೀಣಾಭಿವೃದ್ಧಿಗೆ, ಶಿಕ್ಷಣಕ್ಕೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೆಚ್‌ಐವಿ ಮತ್ತು ಕುಷ್ಠರೋಗ ಪೀಡಿತ ಮಕ್ಕಳ ಶಿಕ್ಷಣಕ್ಕೂ ವಿಶೇಷ ಒತ್ತನ್ನು ನೀಡುವ ಹೊಸ ಯೋಜನೆಯನ್ನು ಘೋಷಿಸಿರುವುದು ವಿಶೇಷ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಪಂದನೆ: ಬಜೆಟ್ ಮಂಡಿಸುವ ಮುನ್ನ ರೈತರ ಸಭೆ ಕರೆದು ಚರ್ಚಿಸಿದ್ದ ಮುಖ್ಯಮಂತ್ರಿಗಳು ಬರಪೀಡಿತ ಜಿಲ್ಲೆಗಳ ಹಿತಕಾಯುವ ರೀತಿಯಲ್ಲಿ ನಿರ್ಧಾರ ಪ್ರಕಟಿಸಿರುವುದು ಸರಿಯಷ್ಟೆ. ಇವೆರಡೂ ಯೋಜನೆಗಳೂ ಒಂದೇ ಪ್ರಧಾನ ಯೋಜನೆಯ ಭಾಗವಾಗಿರುವುದರಿಂದ ಸಮಗ್ರವಾಗಿ ಯೋಜನೆ ಜಾರಿಗೆ ಸರ್ಕಾರ ಪ್ರಯತ್ನಿಸಬೇಕು ಎಂಬುದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಮುಖರಾದ ಜಿ.ಸಿ.ಬೈಯಾರೆಡ್ಡಿ ಅಭಿಪ್ರಾಯ.

ಕೃಷಿ ಉತ್ಪನ್ನಗಳ ಬೆಲೆ ನಿಗದಿ ಮಾಡಲು ಆಯೋಗ ರಚನೆ ಮಾಡುವುದಕ್ಕೆ ಸ್ವಾಗತವಿದೆ. ಆದರೆ ಇದೆ ವೇಳೆ, ಡಾ.ಎಂ.ಎಸ್.ಸ್ವಾಮಿನಾಥನ್ ಅವರ ಶಿಫಾರಸನ್ನು ಪರಿಗಣಿಸಬೇಕು. ರೈತ ಸಂಘಗಳಿಗೆ ಪ್ರಾತಿನಿಧ್ಯ ನೀಡಬೇಕು ಎನ್ನುತ್ತಾರೆ ಅವರು.

ರೈತರ ಸಂಘ-ಸಂಸ್ಥೆಗಳ ಮನವಿಗೆ ಸ್ಪಂದಿಸಿ  ಹಣವನ್ನು ಮೀಸಲಿಟ್ಟಿರುವುದು ಬಯಲುಸೀಮೆಯ ಅದರಲ್ಲೂ ಕೋಲಾರ ಜಿಲ್ಲೆಯ ರೈತರಿಗೆ ಸಂತಸ ತರುವ ಬೆಳವಣಿಗೆ. ಮುಂದಿನ ದಿನಗಳಲ್ಲಿ ಯೋಜನಾ ವೆಚ್ಚವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಇಚ್ಛಾಶಕ್ತಿ ತೋರಬೇಕು ಎಂದು ರೈತ ಸಂಘದ ಎ.ಅಶ್ವಥರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರ `ವಿಶ್ವಕರ್ಮ ಅಭಿವೃದ್ಧಿ ನಿಗಮ' ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷ ಕಲಾವಿದ ವಿಷ್ಣು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಶ್ವಕರ್ಮರ ಬಹುದಿನಗಳ ಹೋರಾಟಕ್ಕೆ ಪ್ರತಿಫಲ ಎನ್ನುವಂತೆ ನಿಗಮ ಸ್ಥಾಪನೆಗೆ ಐದು ಕೋಟಿ ರೂಪಾಯಿ ಮೀಸಲಿಟ್ಟಿರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ.

ನಿರಾಶಾದಾಯಕ: ಅನೇಕ ಜನಪರ ಕಾರ್ಯಕ್ರಮಗಳಿದ್ದರೂ, ಅವುಗಳ ಜಾರಿಗೆ ಅಗತ್ಯ ಅನುದಾನ ನೀಡಿಲ್ಲದಿರುವುದರಿಂದ ಇದು ನಿರಾಶಾದಾಯಕ ಬಜೆಟ್ ಎಂದು ಜೆಡಿಎಸ್ ಮುಖಂಡ ಗೋವಿಂದಗೌಡ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಗೆ ನೀರು ಬರುವ ಭರವಸೆಯೇ ಇಲ್ಲದ ಎತ್ತಿನ ಹೊಳೆ ಯೋಜನೆಗೆ ಆದ್ಯತೆ ನೀಡಲಾಗಿದೆ, ಪರಮಶಿವಯ್ಯ ವರದಿಯನ್ನು ಕಡೆಗಣಿಸಲಾಗಿದೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT