ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಟ್ಯಾಂಕರ್ ನೀರು ಪೂರೈಕೆ ಸ್ಥಗಿತಕ್ಕೆ ನಿರ್ದೇಶನ

Last Updated 2 ಜುಲೈ 2013, 6:05 IST
ಅಕ್ಷರ ಗಾತ್ರ

ರಾಮನಗರ:  ಜಿಲ್ಲೆಯ ಹಲವೆಡೆ ಮಳೆಯಾಗಿರುವುದರಿಂದ ಹಾಗೂ ಕೊಳವೆ ಬಾವಿಗಳಲ್ಲಿ ನೀರಿರುವುದರಿಂದ ಕೂಡಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಸವರಾಜ್ ಅವರು ಜಿಲ್ಲಾಧಿಕಾರಿ, ಜಿ.ಪಂ ಸಿಇಒ, ತಹಶೀಲ್ದಾರ್, ತಾ.ಪಂ ಇಒ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಬರಗಾಲ ಹಾಗೂ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದ ಸಂದರ್ಭದಲ್ಲಿ ತುರ್ತಾಗಿ ಸಮಸ್ಯೆ ಪರಿಹರಿಸಲು ಸರ್ಕಾರ ಪ್ರಕೃತಿ ವಿಕೋಪ ನಿಧಿಯಿಂದ ಹಣ ಬಿಡುಗಡೆ ಮಾಡಿದೆ. ಅದನ್ನು ಮೂರು- ನಾಲ್ಕು ತಿಂಗಳು ಮಾತ್ರ ಬಳಸಿ ಸಮಸ್ಯೆ ಪರಿಹರಿಸಬೇಕು. ಇತರ ಯೋಜನೆ ಮತ್ತು ಅನುದಾನದಿಂದ ಶಾಶ್ವತ ಕುಡಿಯುವ ನೀರನ್ನು ಕಲ್ಪಿಸುವ ಕಾರ್ಯ ಮಾಡಬೇಕು. ಅದನ್ನು ಬಿಟ್ಟು ಮಳೆ ಬಂದ ನಂತರವೂ ಪ್ರಕೃತಿ ವಿಕೋಪ ನಿಧಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಕುಡಿಯುವ ನೀರು ತಾನಾಗಿಯೇ ಮನೆಯ ಮುಂದೆ ಬಂದರೆ ಯಾವ ಜನ ತಾನೆ ಬೇಡ ಎಂದು ಹೇಳುತ್ತಾರೆ ಎಂದ ಅವರು, ಪ್ರಕೃತಿ ವಿಕೋಪ ನಿಧಿಯ ಹಣ ಈ ರೀತಿಯ ಟ್ಯಾಂಕರ್ ನೀರಿನ ನೆಪದಲ್ಲಿ ದುರ್ಬಳಕೆ ಆಗುತ್ತಿದೆ. ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದ್ದು, ಅದಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದು, ಶಾಶ್ವತ ನೀರಿನ ಸೌಕರ್ಯ ಕಲ್ಪಿಸುವುದಕ್ಕೆ ಒತ್ತು ನೀಡಬೇಕು. ಇದಕ್ಕಾಗಿ ಪಂಚಾಯತ್ ರಾಜ್ ಇಲಾಖೆಯಡಿ ಕೇಂದ್ರ ಸರ್ಕಾರ ನೀಡುವ ಹಣಕಾಸಿನ ನೆರವನ್ನು ಪಡೆಯಬಹುದು ಎಂದು ಅವರು ಸೂಚಿಸಿದರು.

ಟ್ಯಾಂಕರ್ ನೀರು ನಿಯಂತ್ರಿಸಲು ತಾ.ಪಂ ಇಒಗಳಿಂದ ಆಗುವುದಿಲ್ಲ ಎಂದರೆ, ಆ ಜವಾಬ್ದಾರಿಯನ್ನು ತಹಶೀಲ್ದಾರರಿಗೆ ವರ್ಗಾಯಿಸಲಾಗುವುದು ಎಂದು ಅವರು ಹೇಳಿದರು.

ಶೇ 10ರಷ್ಟು ಪುಸ್ತಕ ಕೊರತೆ:ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪ್ರಹ್ಲಾದ್ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಶೇ 100ರಷ್ಟು ಸಮವಸ್ತ್ರ ವಿತರಣೆ ಆಗಿದ್ದು, ಶೇ 90ರಷ್ಟು ಪಠ್ಯ ಪುಸ್ತಕಗಳ ವಿತರಣೆಯಾಗಿದೆ ಎಂದರು ಮಾಹಿತಿ ನೀಡಿದರು.

1, 2ನೇ ತರಗತಿ ಇಂಗ್ಲಿಷ್ ಪುಸ್ತಕಗಳು ಹಾಗೂ ಆರು, 9ನೇ ತರಗತಿ ಪಠ್ಯ ಪರಿಷ್ಕೃತವಾದ ಕಾರಣ ಕೆಲ ಪುಸ್ತಕಗಳು ಸರಬರಾಜು ಆಗಿಲ್ಲ. ಜಿಲ್ಲೆಯಲ್ಲಿ 1423 ವಿದ್ಯಾರ್ಥಿಗಳು ಶಿಕ್ಷಣ ಹಕ್ಕು ಕಾಯ್ದೆಯಡಿ ವಿವಿಧ ಶಾಲೆಗಳಲ್ಲಿ ದಾಖಲಾಗಿದ್ದಾರೆ. ವ್ಯಾಸಂಗದ ಮಧ್ಯ ಶಾಲೆ ಬಿಡುವವರ ಸಂಖ್ಯೆಯ ಶೇ 1.5ರಷ್ಟಿದೆ. ಒಟ್ಟು 104 ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದರು. ಅವರಲ್ಲಿ 50 ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ತರಲಾಗಿದೆ. ಉಳಿದವರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಪಠ್ಯಪುಸ್ತಕ ದೊರೆಯುವಂತೆ ವ್ಯವಸ್ಥೆ ಮಾಡಿ ಹಾಗೂ ಶಾಲೆ ಬಿಡುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಎಂದು ಉಸ್ತುವಾರಿ ಕಾರ್ಯದರ್ಶಿ ಬಸವರಾಜ್ ಹೇಳಿದರು.

60 ಸಾವಿರ ಬಿಪಿಎಲ್ ಕಾರ್ಡ್ ತಿರಸ್ಕೃತ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಅಜೀಜುದ್ದೀನ್ ಹಫೀಜ್ ಮಾತನಾಡಿ, ಜಿಲ್ಲೆಯಲ್ಲಿ 2.87 ಲಕ್ಷ ಪಡಿತರ ಚೀಟಿ ಹೊಂದಿದವರಿದ್ದು, ಅದರಲ್ಲಿ 2.34 ಲಕ್ಷ ಜನರು (ಶೇ 81) ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಎಲ್ಲ ಪಡಿತರ ಚೀಟಿಗಳನ್ನು ಬಯೋಮೆಟ್ರಿಕ್ ವ್ಯವಸ್ಥೆಗೆ ಪರಿವರ್ತನೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ 60 ಸಾವಿರ ಬಿಪಿಎಲ್ ಕಾರ್ಡ್‌ಗಳು ತಿರಸ್ಕೃತವಾಗಿವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 1.33 ಲಕ್ಷ ತಾತ್ಕಾಲಿಕ ಪಡಿತರ ಚೀಟಿ ಹೊಂದಿದವರಿದ್ದು, ಇದರಲ್ಲಿ 99 ಸಾವಿರ ಬಯೋಮೆಟ್ರಿಕ್‌ಗೊಳಿಸಲಾಗಿದೆ. ಬಯೋಮೆಟ್ರಿಕ್‌ಗೊಳಿಸುವ ಕಾರ್ಯವನ್ನು ಜುಲೈ 31ರೊಳಗೆ ಮಾಡಲಾಗುವುದು ಎಂದು ಅವರು ವಿವರಿಸಿದರು.

ಪಡಿತರ ಚೀಟಿಯಲ್ಲಿ ಮತ್ತು ಆಹಾರ ವಿತರಣೆಯಲ್ಲಿ ಗೊಂದಲಗಳು ಎದುರಾಗದಂತೆ ಎಚ್ಚರವಹಿಸುವಂತೆ ಕಾರ್ಯದರ್ಶಿಯವರು ಸೂಚಿಸಿದರು.

ಕಪ್ಪುಪಟ್ಟಿ :ಜಿಲ್ಲಾ ಸಂಕೀರ್ಣ ಕಟ್ಟಡ ಕಾಮಗಾರಿ ಐದಾರು ವರ್ಷದಿಂದ ಮಂದಗತಿಯಲ್ಲಿ ಸಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಚಿಂತಿಸಲಾಗಿದೆ ಎಂದು ಪಿಡಬ್ಲ್ಯುಡಿ ಅಧಿಕಾರಿಗಳು ತಿಳಿಸಿದರು.

ಈ ಸಂಬಂಧ ಈಗಾಗಲೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಅವರು ಒಂದೂವರೆ ತಿಂಗಳು ಕಾಲಾವಕಾಶ ಕೋರಿದ್ದಾರೆ. ಆದರೆ ಮೂರು ತಿಂಗಳಾದರೂ ಮುಗಿಯದಷ್ಟು ಕೆಲಸ ಬಾಕಿ ಇದೆ ಎಂದು ಅವರು ಸಭೆಯಲ್ಲಿ ಹೇಳಿದರು. ಈ ಕಾರಣದಿಂದಾಗಿ ಆ ಗುತ್ತಿಗೆದಾರರಿಗೆ ಇಲಾಖೆಯ ಯಾವುದೇ ಹೊಸ ಕಾಮಗಾರಿಯ ಗುತ್ತಿಗೆ ನೀಡಿಲ್ಲ. ನೀಡಲಾಗಿದ್ದ 18 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯನ್ನು ಹಿಂಪಡೆಯಲಾಗಿದೆ ಎಂದರು. ಆಗ ಪ್ರತಿಕ್ರಿಯಿಸಿದ ಕಾರ್ಯದರ್ಶಿ ಬಸವರಾಜ್ ಅವರು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದರು.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ ಸಿಂಗ್ ರಣಾವತ್ ಮಾತನಾಡಿ, ಜಿಲ್ಲೆಯಲ್ಲಿ 84ಸಾವಿರ ಹೆಕ್ಟರ್ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶವಿದ್ದು, ಇದು ಜಿಲ್ಲೆಯ ಭೌಗೋಳಿಕ ವಿಸ್ತೀರ್ಣದ ಶೇ 21ರಷ್ಟು ಪ್ರದೇಶವನ್ನು ಆವರಿಸಿದೆ. ಜಿಲ್ಲೆಯಲ್ಲಿ ಆನೆಗಳ ಹಾವಳಿ ಹೆಚ್ಚಿದ್ದು 10 ಜನ ಮೃತಪಟ್ಟಿದ್ದಾರೆ. ಕಳೆದ ವರ್ಷ 1 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. 30 ಕಿ.ಮೀ ಅರಣ್ಯ ವ್ಯಾಪ್ತಿಯಲ್ಲಿ ಸೌರ ತಂತಿ ಬೇಲಿ ನಿರ್ಮಿಸಲಾಗಿದೆ ಎಂದರು.

ಕೆಲವೆಡೆ ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವೆ ಭೂಮಿಯ ವಿಷಯದಲ್ಲಿ ಗೊಂದಲ ಇದೆ ಎಂದು ಡಿಎಫ್‌ಒ ಹೇಳಿದಾಗ ಈ ವಿಚಾರವನ್ನು ಅರಣ್ಯ ಮತ್ತು ಕಂದಾಯಾಧಿಕಾರಿಗಳು ಕುಳಿತು ಚರ್ಚಿಸಿ, ಸಮಸ್ಯೆ ಪರಿಹರಿಸಿಕೊಳ್ಳುವಂತೆ ಉಸ್ತುವಾರಿ ಕಾರ್ಯದರ್ಶಿ ಬಸವರಾಜ್ ಹೇಳಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆಯಾಗಿರುವ ಕಾರಣ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳಿ ಎಂದು ಉಸ್ತುವಾರಿ ಕಾರ್ಯದರ್ಶಿ ಅವರು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ಬಿತ್ತನೆ ಬೀಜ ಶೇಖರಣೆಗೆ ಜಿಲ್ಲೆಯಲ್ಲಿ ಗೋದಾಮು ಸ್ಥಾಪಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಅವರು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿ.ಪಂ ಸಿಇಒ ಡಾ. ಎಂ.ವಿ.ವೆಂಕಟೇಶ್, ಉಪ ಕಾರ್ಯದಶಿ ಡಾ.ಎಸ್.ಸಿದ್ದರಾಮಯ್ಯ, ಉಪ ವಿಭಾಗಾಧಿಕಾರಿ ಡಾ. ರಾಜೇಂದ್ರ ಪ್ರಸಾದ್, ಎಲ್ಲ ತಾಲ್ಲೂಕುಗಳ ತಹಶೀಲ್ದಾರ್‌ಗಳು, ತಾ.ಪಂ ಇಒಗಳು, ನಗರ ಸ್ಥಳೀಯ ಸಂಸ್ಥೆಯ ಆಯುಕ್ತರು, ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT