ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ಸ್‌ಗೆ ಮತ್ತೊಂದು ಜಯದ ನಿರೀಕ್ಷೆ

ಚಾಂಪಿಯನ್ಸ್‌ ಲೀಗ್‌: ಇಂದು ಹೈವೆಲ್ಡ್‌ ಲಯನ್ಸ್‌ ಎದುರು ಪೈಪೋಟಿ
Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಮುಂಬೈ ಇಂಡಿಯನ್ಸ್‌ ಎದುರು ಗೆದ್ದ ಖುಷಿ ಯಲ್ಲಿರುವ ರಾಜಸ್ತಾನ ರಾಯಲ್ಸ್‌ ತಂಡದವರು ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-–20 ಕ್ರಿಕೆಟ್‌ ಟೂರ್ನಿಯಲ್ಲಿ ತಮ್ಮ ಗೆಲುವಿನ ಅಭಿಯಾನ ಮುಂದುವರಿಸುವ ತವಕದಲ್ಲಿದ್ದಾರೆ.

ಬುಧವಾರ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ತಮ್ಮ ಎರಡನೇ ಪಂದ್ಯದಲ್ಲಿ ರಾಹುಲ್‌ ದ್ರಾವಿಡ್‌ ಸಾರಥ್ಯದ ರಾಯಲ್ಸ್‌ ಬಳಗದವರು ಹೈವೆಲ್ಡ್‌ ಲಯನ್ಸ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ಈ ಕ್ರೀಡಾಂಗಣ ರಾಯಲ್ಸ್ ಪಾಲಿಗೆ ಅದೃಷ್ಟದ ತಾಣ. ಐಪಿಎಲ್ ಆರನೇ ಅವತ­ರಣಿಕೆ­ಯಲ್ಲಿ ಆಡಿದ ಆರೂ ಪಂದ್ಯಗಳಲ್ಲಿ ಈ ತಂಡದವರು ಗೆದ್ದಿದ್ದರು. ಅದು ಚಾಂಪಿ­ಯನ್ಸ್ ಲೀಗ್‌ನಲ್ಲೂ ಮುಂದುವರಿದಿದೆ.

‘ಇಲ್ಲಿನ ಪಿಚ್ ಸ್ವರೂಪಕ್ಕೆ ನಮ್ಮ ಆಟ­ಗಾ­ರರು ಹೊಂದಿಕೊಂಡಿದ್ದಾರೆ. ಉತ್ತಮ ಹೊಡೆತಗಳನ್ನು ಬಾರಿಸುವ ಬ್ಯಾಟ್ಸ್‌­ಮನ್‌­ಗಳು ನಮ್ಮಲ್ಲಿದ್ದಾರೆ. ಬೌಲರ್‌ಗಳು ಕೂಡ ಇಲ್ಲಿನ ಪಿಚ್‌ ಅರ್ಥ ಮಾಡಿಕೊಂಡಿದ್ದಾರೆ’ ಎಂದು ನಾಯಕ ದ್ರಾವಿಡ್‌ ನುಡಿದಿದ್ದಾರೆ.

ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಿಂದ ಚೇತರಿಸಿ­ಕೊಂಡಿ­ರುವ ಈ ತಂಡದವರು ಈಗ ವಿಶ್ವಾಸದ ಖನಿ. ಈಗಾಗಲೇ ನಾಲ್ಕು ಪಾಯಿಂಟ್‌ ಪಡೆದಿದ್ದಾರೆ.

ಯುವ ಹಾಗೂ ಹಿರಿಯ ಆಟಗಾರರ ಸಮ್ಮಿಶ್ರಣದಿಂದ ಕೂಡಿರುವ ರಾಯಲ್ಸ್‌ ಸ್ಥಿರ ಪ್ರದರ್ಶನ ತೋರುತ್ತಿದೆ. ಸಂಜು ಥಾಮ್ಸನ್‌, ಅಜಿಂಕ್ಯ ರಹಾನೆ, ಸ್ಟುವರ್ಟ್‌ ಬಿನ್ನಿ ಅವರಂಥ ಪ್ರತಿಭಾವಂತರಿದ್ದಾರೆ. ಶೇನ್‌ ವಾಟ್ಸನ್‌ ಅವರಂಥ ಅನುಭವಿಗಳು ಇದ್ದಾರೆ. ಪ್ರಮುಖ­ವಾಗಿ ದ್ರಾವಿಡ್‌ ಅವರ ಮಾರ್ಗದರ್ಶನ ಈ ತಂಡಕ್ಕೆ ಲಭಿಸಿರುವ ಬೋನಸ್‌.

ದಕ್ಷಿಣ ಆಫ್ರಿಕಾದ ಹೈವೆಲ್ಡ್‌ ಲಯನ್ಸ್‌ ತಂಡದ ಮೊದಲ ಪಂದ್ಯ ಮಳೆಯ ಕಾರಣ ರದ್ದಾಗಿತ್ತು. ಈ ತಂಡದವರು ಅಹಮದಾ­ಬಾದ್‌ನಲ್ಲಿ ಪರ್ತ್‌ ಸ್ಕಾಚರ್ಸ್‌ ಎದುರು ಆಡಬೇಕಿತ್ತು. ಹಾಗಾಗಿ ರಾಯಲ್ಸ್‌ ಎದುರಿನ ಪಂದ್ಯ ಹೈವೆಲ್ಡ್‌ ಬಳಗಕ್ಕೆ ಮಹತ್ವದ್ದಾಗಿದೆ.

ಇಂದಿನ ಪಂದ್ಯಗಳು
ಒಟಾಗೊ ವೋಲ್ಟ್ಸ್‌–ಪರ್ತ್‌ ಸ್ಕಾಚರ್ಸ್‌
ಸಂಜೆ: 4ಕ್ಕೆ

ಹೈವೆಲ್ಡ್‌ ಲಯನ್ಸ್‌–ರಾಜಸ್ತಾನ ರಾಯಲ್ಸ್‌
ಸ್ಥಳ; ಜೈಪುರ, ರಾತ್ರಿ 8ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT