ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಸ್ವಾಗತಕ್ಕೆ ಸಜ್ಜು

Last Updated 11 ಅಕ್ಟೋಬರ್ 2012, 9:50 IST
ಅಕ್ಷರ ಗಾತ್ರ

ಬೆಳಗಾವಿ: ಸುವರ್ಣಸೌಧ ಉದ್ಘಾಟನೆಗೆ ಅ. 11 ರಂದು ಆಗಮಿಸುತ್ತಿರುವ ರಾಷ್ಟ್ರಪತಿಗಳಿಗೆ ಅದ್ದೂರಿ ಸ್ವಾಗತ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಷ್ಟ್ರಪತಿ ಭವನದಿಂದ ಬಂದಿರುವ ಟಿಪ್ಪಣಿಯಂತೆ ಹಾಗೂ ಶಿಷ್ಟಾಚಾರದಂತೆ ಎಲ್ಲ ಕಾರ್ಯಕ್ರಮಗಳನ್ನು ನಿಗದಿ ಪಡಿಸಲಾಗಿದೆ.

ರಾಷ್ಟ್ರಪತಿಗಳು ಮಧ್ಯಾಹ್ನ 12.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ನೇರವಾಗಿ ಸುವರ್ಣಸೌಧಕ್ಕೆ ಆಗಮಿಸುವರು. ರಾಷ್ಟ್ರಗೀತೆ, ನಾಡಗೀತೆ ನಂತರ ವಿಧಾನಸಭೆ ಅಧ್ಯಕ್ಷ ಕೆ.ಜಿ.ಬೋಪಯ್ಯ ಸ್ವಾಗತ ಭಾಷಣ ಮಾಡುವರು. 12.42ಕ್ಕೆ ಸುವರ್ಣಸೌಧ ಲೋಕಾರ್ಪಣೆ ನಡೆಯುವುದು. 12.45ಕ್ಕೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಂದ ಪರಿಚಯ ಭಾಷಣ ನಡೆಯಲಿದೆ.

12.52ಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ 1.02ಕ್ಕೆ ರಾಜ್ಯಪಾಲ ಡಾ. ಹಂಸರಾಜ್ ಭಾರದ್ವಾಜ್ ಭಾಷಣ ಮಾಡುವರು. ನಂತರ 1.12ಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಸನ್ಮಾನ, 1.17ಕ್ಕೆ ಉದ್ಘಾಟನಾ ಭಾಷಣ ನಡೆಯಲಿದೆ. 1.32ಕ್ಕೆ ಸಚಿವ ಉಮೇಶ ಕತ್ತಿ ಅವರಿಂದ ವಂದನಾರ್ಪಣೆ ನಡೆಯಲಿದೆ.

ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ, ಕೇಂದ್ರದ ಸಚಿವರಾದ ಎಸ್.ಎಂ.ಕೃಷ್ಣ, ಎಂ.ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ, ಕೇಂದ್ರದ ರೈಲ್ವೆ ಇಲಾಖೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದಗೌಡ, ಎನ್.ಧರ್ಮಸಿಂಗ್, ಸಚಿವರಾದ ಎಸ್.ಸುರೇಶಕುಮಾರ, ಸಿ.ಎಂ.ಉದಾಸಿ, ಬಾಲಚಂದ್ರ ಜಾರಕಿಹೊಳಿ, ಪ್ರತಿಪಕ್ಷದ ನಾಯಕರಾದ ಸಿದ್ಧರಾಮಯ್ಯ, ಎಸ್.ಆರ್.ಪಾಟೀಲ, ಶಾಸಕ ಸಂಜಯ ಪಾಟೀಲ, ಸಂಸದರಾದ ಸುರೇಶ ಅಂಗಡಿ, ರಮೇಶ ಕತ್ತಿ, ಅನಂತಕುಮಾರ ಹೆಗಡೆ, ಡಾ. ಪ್ರಭಾಕರ ಕೋರೆ ವೇದಿಕೆಯಲ್ಲಿರಲಿದ್ದಾರೆ.

ಸಾರ್ವಜನಿಕ ಸಮಾರಂಭ ನಂತರ ರಾಷ್ಟ್ರಪತಿಗಳನ್ನು ಅಶ್ವದಳದಿಂದ ಗೌರವ ಸಲ್ಲಿಸುವ ಮೂಲಕ ಶಿಷ್ಟಾಚಾರದಂತೆ ಸುವರ್ಣಸೌಧಕ್ಕೆ ಬರಮಾಡಿಕೊಳ್ಳಲಾಗುವುದು. ಪೂರ್ಣಕುಂಭ ಹೊತ್ತ ಮಹಿಳೆಯರು, ಕರಡಿ ಮಜಲು ವಾದ್ಯದ ಮೂಲಕ ಅದ್ದೂರಿ ಸ್ವಾಗತ ನೀಡಲಾಗುವುದು.

ಮಧ್ಯಾಹ್ನ 1.45ಕ್ಕೆ ಸುವರ್ಣಸೌಧ ಪ್ರವೇಶಿಸುವ ರಾಷ್ಟ್ರಪತಿಗಳು 1.55ಕ್ಕೆ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ  ಭಾಷಣ ಮಾಡಲಿದ್ದಾರೆ.

ರಾಷ್ಟ್ರಪತಿಗಳ ಭಾಷಣಕ್ಕಾಗಿ ವಿಧಾನಸಭೆ ಅಧಿವೇಶನದ ಸಭಾಂಗಣ ಸಿದ್ಧಪಡಿಸಲಾಗಿದ್ದು, ಮುಖ್ಯಮಂತ್ರಿ, ಸಭಾನಾಯಕ, ಮಾಜಿ ಪ್ರಧಾನಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಹೀಗೆ ಆಸನಗಳನ್ನು ನಿಗದಿಪಡಿಸಲಾಗಿದೆ.
ನಂತರ ಉತ್ತರ ಕರ್ನಾಟಕದ ಶೇಂಗಾ ಹೋಳಿಗೆ, ಗೋದಿ ಹುಗ್ಗಿಯ ರುಚಿಯನ್ನು ರಾಷ್ಟ್ರಪತಿಗಳು ಸವಿಯಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT