ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಮುಂದುವರಿದ ಕರ್ನಾಟಕದ ಗೆಲುವಿನ ಓಟ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವಿಜಾಪುರ: ‘ಬಿಳಿ ಜೋಳದ ರೊಟ್ಟಿ’ ತಿಂದು ಗಟ್ಟಿಯಾಗಿರುವ ಆತಿಥೇಯ ಕರ್ನಾಟಕದ ಬಾಲಕ, ಬಾಲಕಿಯರ ತಂಡಗಳು ಇಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಟೂರ್ನಿಯಲ್ಲಿ ಶನಿವಾರವೂ ತಮ್ಮ ಗೆಲುವಿನ ಓಟ ಮುಂದುವರಿಸಿದವು. ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಮತ್ತು ವಿಜಾಪುರ ಜಿಲ್ಲಾ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಲೀಗ್ ಹಂತದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಬಾಲಕ ಮತ್ತು ಬಾಲಕಿಯರ ತಂಡಗಳು ಜಯಭೇರಿ ಬಾರಿಸಿದವು.

ಬೆಳಿಗ್ಗೆ ನಡೆದ ಬಾಲಕರ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು 25-12, 25-15, 25-12ರಿಂದ ಜಮ್ಮು ಮತ್ತು ಕಾಶ್ಮೀರದ ಹುಡುಗರನ್ನು ಸೊಲಿಸಿತು. ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಕರ್ನಾಟಕದ ನಿಖಿಲ್ ಗೌಡ ಬಳಗವು ಬಿರುಸಿನ ಆಟ ಪ್ರದರ್ಶಿಸಿತು. ಮೂರು ಸೆಟ್‌ಗಳಲ್ಲಿಯೂ ಬಿ. ಮನೋಜ್, ಚಂದನಕುಮಾರ ಮತ್ತು ನಿಖಿಲ್ ಉತ್ತಮ ಬ್ಲಾಕ್, ಪಾಸ್ ಮತ್ತು ಸ್ಮ್ಯಾಷ್‌ಗಳನ್ನು ಪ್ರದರ್ಶಿಸಿದರು. ಅದರೆ, ಕರ್ನಾಟಕದ ಹುಡುಗರು ಸರ್ವಿಸ್‌ಗಳಲ್ಲಿ ಎಡವಿದರು. ನಿಖರವಾದ ಸರ್ವಿಸ್ ಮಾಡಲು ಸಾಧ್ಯವಾಗದೇ ಹಲವು ಪಾಯಿಂಟ್‌ಗಳು ಜಮ್ಮು-ಕಾಶ್ಮೀರದ ಪಾಲಾದವು. ಜಮ್ಮು ತಂಡದ ನಾಯಕ ದೀಪಕ್ ಶರ್ಮಾ, ದುಶ್ಯಂತ್ ಬಬೋರಿಯಾ ಕೂಡ ಉತ್ತಮ ಆಟ ಪ್ರದರ್ಶಿಸಿದರು. ಟೂರ್ನಿಯ ಮೊದಲ ಪಂದ್ಯವನ್ನೂ ಕರ್ನಾಟಕ ಗೆದ್ದುಕೊಂಡಿತ್ತು.

ಅಭಿಲಾಷಾ ಮಿಂಚು: ನಿಖರವಾದ ಸರ್ವಿಸ್‌ಗಳ ಮೂಲಕ ಗಮನ ಸೆಳೆದ ಟಿ.ಬಿ. ಅಭಿಲಾಷಾ ಬಾಲಕಿಯರ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಬೆಳಿಗ್ಗೆ ಪ್ರೇಕ್ಷಕರ ಭರಪೂರ ಪ್ರೋತ್ಸಾಹ, ಡ್ರಮ್ ಬೀಟ್‌ಗಳ ಸದ್ದಿನಲ್ಲಿ ಆಟಕ್ಕಿಳಿದ ಕರ್ನಾಟಕದ ಬಾಲಕಿಯರು 25-12, 25-8, 25-18ರಿಂದ ರಾಜಸ್ತಾನ ತಂಡವನ್ನು ಪರಾಭವಗೊಳಿಸಿದರು.
ಪಂದ್ಯದ ಎರಡನೇ ಸೆಟ್‌ನಲ್ಲಿ ಸತತ ಆರು ಪಾಯಿಂಟ್ ಗಳಿಸಲು ಅಭಿಲಾಷಾ (ನಂ.1) ಮಾಡಿದ ಸರ್ವೀಸ್‌ಗಳು ಕಾರಣವಾದವು. ಇದಕ್ಕೆ ತಕ್ಕಂತೆ ನಾಯಕಿ ಕೆ.ವಿ. ಮೇಘಾ (8) ಮತ್ತು ಎಸ್.ಪಿ. ಗಾನವಿ (9) ಮತ್ತು ಎಂ.ಎಸ್. ವರ್ಷಿತಾ (7) ಅವರ ಬ್ಲಾಕ್‌ಗಳು ಮತ್ತು ಮಿಂಚಿನ ಸ್ಮ್ಯಾಷ್‌ಗಳು ಪಾಯಿಂಟ್ ಸೇರಿಸಲು ನೆರವಾದವು. ಬಾಲಕಿಯರ ತಂಡಕ್ಕೆ ಟೂರ್ನಿಯಲ್ಲಿ ಇದು ಎರಡನೇ ಗೆಲುವು.

ಫಲಿತಾಂಶಗಳು: ಬಾಲಕರು: ಅಸ್ಸಾಂ ತಂಡವು 25-13, 25-13, 25-19ರಿಂದ ಜಾರ್ಖಂಡ್ ತಂಡವನ್ನು, ತಮಿಳುನಾಡು 25-11, 25-12, 25-16ರಿಂದ ಮಹಾರಾಷ್ಟ್ರದ ವಿರುದ್ಧ; ರಾಜಸ್ತಾನ 25-18, 25-19, 27-25ರಿಂದ ಚಂಡೀಘಡದ ವಿರುದ್ಧ; ಉತ್ತರಾಖಂಡ 25-13, 25-15, 25-13ರಿಂದ ದೆಹಲಿ ವಿರುದ್ಧ; ಪಾಂಡಿಚೇರಿ 25-18, 25-22, 25-21ರಿಂದ ಒಡಿಶಾ ವಿರುದ್ಧ; ಪಂಜಾಬ್ 25-15, 19-25, 25-20, 28-26ರಿಂದ ಆಂಧ್ರಪ್ರದೇಶ ವಿರುದ್ಧ ಜಯ ಗಳಿಸಿದವು.

ಬಾಲಕಿಯರು:
ಅಸ್ಸಾಂ 22-25, 25-12, 25-15, 25-17ರಿಂದ ಜಾರ್ಖಂಡ್ ವಿರುದ್ಧ; ಹರಿಯಾಣ 25-13, 25-18, 25-14ರಿಂದ ಮಧ್ಯಪ್ರದೇಶ ವಿರುದ್ಧ; ತಮಿಳುನಾಡು 25-11, 25-5, 25-10ರಿಂದ ಗೋವಾ ವಿರುದ್ಧ; ಆಂಧ್ರಪ್ರದೇಶ 25-7, 25-21, 25-9ರಿಂದ ಛತ್ತೀಸಘಡ ವಿರುದ್ಧ; ಗುಜರಾತ್ 25-18, 25-18, 25-21ರಿಂದ ಬಿಹಾರ ವಿರುದ್ಧ; ಪಾಂಡಿಚೇರಿ 25-22, 25-14, 25-14ರಿಂದ ಉತ್ತರಾಖಂಡದ ವಿರುದ್ಧ; ದೆಹಲಿ 25-17, 25-8, 25-17ರಿಂದ ಚಂಡೀಘಡದ ವಿರುದ್ಧ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT