ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಈಗ ನಂ 2

ಶತಮಾನದಷ್ಟು ಹಳೆಯ ಕಾಂಗ್ರೆಸ್‌ಗೆ 42ರ ನಾಯಕ
Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

ಜೈಪುರ (ಪಿಟಿಐ/ಐಎಎನ್‌ಎಸ್): ಕಾಂಗ್ರೆಸ್ ಯುವರಾಜ ಎಂದೇ ಬಿಂಬಿತರಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಶನಿವಾರ ಇಲ್ಲಿ ಪಕ್ಷದ ಉಪಾಧ್ಯಕ್ಷ ಹುದ್ದೆಗೆ ಅಧಿಕೃತವಾಗಿ ನೇಮಕ ಮಾಡಲಾಯಿತು.

ಇದರೊಂದಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಬಡ್ತಿ ಪಡೆದ 42ರ ಹರೆಯದ ರಾಹುಲ್, ದೇಶದ ಅತ್ಯಂತ ಹಳೆಯ ಹಾಗೂ ಬಲಿಷ್ಠ ಪಕ್ಷದ ನಂ.2 ಸ್ಥಾನವನ್ನು ಅಲಂಕರಿಸಿದಂತಾಗಿದೆ.

ಕಾಂಗ್ರೆಸ್‌ನ ಇತಿಹಾಸದಲ್ಲಿ ಉಪಾಧ್ಯಕ್ಷ ಹುದ್ದೆಯನ್ನು ಸೃಷ್ಟಿಸಿರುವುದು ಇದು ಮೂರನೇ ಸಲ. ಹಿಂದೆ ಅರ್ಜುನ್ ಸಿಂಗ್ ಮತ್ತು ಜಿತೇಂಧ್ರ ಪ್ರಸಾದ್ ಅವರು ಈ ಹುದ್ದೆ ಅಲಂಕರಿಸಿದ್ದರು.

ಉಪಾಧ್ಯಕ್ಷ ಹುದ್ದೆಗೆ ಹೆಸರಿಸುವ ಮೊದಲು, ಇಡೀ ಪಕ್ಷದ ಸಾರಥ್ಯವನ್ನು ರಾಹುಲ್ ಅವರಿಗೆ ವಹಿಸಿಕೊಡಲು ವೇದಿಕೆ ಸಿದ್ಧವಾಗಿತ್ತು. ಪಕ್ಷದ ಹಿರಿಯ, ಕಿರಿಯ ನಾಯಕರು ರಾಹುಲ್‌ಗೆ ಪಕ್ಷದ ಜವಾಬ್ದಾರಿ ವಹಿಸುವಂತೆ ಚಿಂತನಾ ಶಿಬಿರದಲ್ಲಿ ಧ್ವನಿ ಎತ್ತಿದ್ದರು.

`ಪಕ್ಷದ ನೀತಿ- ನಿರೂಪಣೆಯ ಹೊಣೆ ಹೊತ್ತ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ಶನಿವಾರ ಸಂಜೆ ಆರಂಭವಾದಾಗ, ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ರಾಹುಲ್ ಹೆಸರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸೂಚಿಸಿದರು. ಇದನ್ನು ಸಭೆ ಅವಿರೋಧವಾಗಿ ಅಂಗೀಕರಿಸಿತು' ಎಂದು ಪಕ್ಷದ ಮುಖ್ಯ ವಕ್ತಾರ ಜನಾರ್ದನ ದ್ವಿವೇದಿ ನಂತರ ಸುದ್ದಿಗಾರರಿಗೆ ತಿಳಿಸಿದರು.

ಮುಂಬರುವ 2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಪಾತ್ರ ಏನು ಎಂಬ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳದ ಅವರು, `ನಂತರದಲ್ಲಿ ಆ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ. ದೇಶದ ಯುವ ಜನತೆಯನ್ನು ಪ್ರತಿನಿಧಿಸುವ ರಾಹುಲ್ ಪಕ್ಷದ ಅಧ್ಯಕ್ಷರ ಕೈ ಬಲಪಡಿಸಲ್ದ್ದಿದಾರೆ' ಎಂದಷ್ಟೇ ಹೇಳಿದರು.

ರಾಜಕೀಯ ಪ್ರವೇಶಿಸಿದ ಮೂರು ವರ್ಷಗಳ ತರುವಾಯ 2007ರ ಸೆಪ್ಟೆಂಬರ್ 24ರಂದು ರಾಹುಲ್ ಗಾಂಧಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.   

ವಿಜಯೋತ್ಸವ: ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಗಳಿಗೆಗೆ 3 ದಿನಗಳ ಕಾಂಗ್ರೆಸ್ ಚಿಂತನಾ ಶಿಬಿರದ ಕೊನೆಯಲ್ಲಿ ಮುಹೂರ್ತ ಕೂಡಿಬಂತು. ಈ ನಿರ್ಣಯ ಹೊರ ಬೀಳುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಾಮಾಜಿಕ ಜಾಲತಾಣಗಳತ್ತ ಚಿತ್ತ: ಮುಂಬರುವ ಚುನಾವಣೆಯಲ್ಲಿ ಜನರನ್ನು ತಲುಪಲು ಸಾಮಾಜಿಕ ಸಂಪರ್ಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಚಿಂತನಾ ಶಿಬಿರ ತೀರ್ಮಾನಿಸಿತು.

ಪ್ರತಿಧ್ವನಿಸಿದ ಅತ್ಯಾಚಾರ: ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ದೆಹಲಿಯ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣ ಶನಿವಾರ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲೂ ಪ್ರತಿಧ್ವನಿಸಿತು.

ಅನಿರೀಕ್ಷಿತವೇನಲ್ಲ- ಬಿಜೆಪಿ (ನವದೆಹಲಿ ವರದಿ): ರಾಹುಲ್‌ಗೆ ನಂ.2 ಸ್ಥಾನಕ್ಕೆ ಬಡ್ತಿ ನೀಡಿರುವುದು ಬಿಜೆಪಿ  ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ. ಇದು ನಿರೀಕ್ಷಿತ ಬೆಳವಣಿಗೆ. ಇದರಿಂದ ಯಾವುದೇ ಸವಾಲು ಉದ್ಭವವಾಗಿಲ್ಲ ಎಂದು ಪಕ್ಷದ ವಕ್ತಾರ ಶಹಾನವಾಜ್ ಹುಸೇನ್ ಸ್ಪಷ್ಟಪಡಿಸಿದ್ದಾರೆ.

ಅಧಿಕೃತ ಸ್ಥಾನಮಾನ- ಎಸ್‌ಪಿ: `ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ದಿಸೆಯಲ್ಲಿ ಕಾಂಗ್ರೆಸ್ ಪಕ್ಷ ರಾಹುಲ್ ಗಾಂದಿ ಅವರಿಗೆ ಅಧಿಕೃತ ಸ್ಥಾನಮಾನ ನೀಡಿದೆ. ಇದು ಆ ಪಕ್ಷದ ಆಂತರಿಕ ವಿಚಾರ. ಉಪಾಧ್ಯಕ್ಷ ಹುದ್ದೆಗೆ ಬಡ್ತಿ ನೀಡಿರುವುದು ಔಪಚಾರಿಕ ಪ್ರಕ್ರಿಯೆ ಮಾತ್ರ. ಇದಕ್ಕೂ ಮೊದಲು ಪಕ್ಷದ ಬಹುತೇಕ ನಿರ್ಣಾಯಕ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿದ್ದರು. ಇದೀಗ ಕಾಂಗ್ರೆಸ್ ಅದಕ್ಕೆ ಅಧಿಕೃತ ಮುದ್ರೆ ಒತ್ತಿದೆ ಅಷ್ಟೇ' ಎಂದು ಸಮಾಜವಾದಿ ಪಕ್ಷ ಪ್ರತಿಕ್ರಿಯಿಸಿದೆ.  

ರಾಹುಲ್‌ಗೆ ಲಾಲೂ ಬೆಂಬಲ  (ಪಟ್ನಾ ವರದಿ): ರಾಹುಲ್‌ಗೆ ಬಡ್ತಿ ನೀಡಿರುವ ಕಾಂಗ್ರೆಸ್ ನಿರ್ಧಾರವನ್ನು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಬೆಂಬಲಿಸಿದ್ದಾರೆ. ರಾಹುಲ್‌ಗೆ ಜವಾಬ್ದಾರಿ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಇದೊಂದು ಉತ್ತಮ ಬೆಳವಣಿಗೆ ಎಂದು ಅವರು ಬಣ್ಣಿಸಿದ್ದಾರೆ.

ಕಾರಟ್ ತಟಸ್ಥ ನಿಲುವು (ಕೋಲ್ಕತ್ತ ವರದಿ): ಮುಂಬರುವ ಚುನಾವಣೆಗೆ ತನ್ನ ನಾಯಕನನ್ನು ಆಯ್ಕೆ ಮಾಡುವ ವಿಶೇಷ ಅಧಿಕಾರ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT