ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿವರ್ ರಾಫ್ಟಿಂಗ್'

ಮುಂಗಾರಿನ ಮೋಜು
Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆ ಮಳೆಗಾಲದ ಸಾಹಸಕ್ರೀಡೆಗಳಿಗೆ ಸುವರ್ಣಕಾಲ. ಜಾರುವ ಬಂಡೆಯೇರುವುದು, ಹರಿಯುವ ನದಿಯಲ್ಲಿ ಬೋಟಿಂಗ್ ಮಾಡುವುದು, ಈಜುವುದು, ಡೈವಿಂಗ್, ಜಲಪಾತಗಳಲ್ಲಿ ಮೋಜು ಮಾಡುವುದು ಹೀಗೆ ಹತ್ತಾರು ಬಗೆಯ ಕ್ರೀಡೆಗಳಿಗೆ ತಂಡಗಳು ಹೊರಡುತ್ತವೆ. ಹದವಾಗಿ ಹರಿಯುವ ಹೊಳೆಗಳು ಕೆಲವರಿಗೆ ಇಷ್ಟವಾದರೆ, ಇನ್ನು ಕೆಲವರಿಗೆ ಅದೇ ನದಿ ಸಣ್ಣ ಜಲಪಾತದ ರೂಪವನ್ನು ಎಲ್ಲಿ ತಾಳುತ್ತದೆ ಎಂದು ನದಿಜಾಡನ್ನು ಪತ್ತೆ ಹಚ್ಚುವ ಹುಚ್ಚು. ಹೀಗೆ ಜಲಕ್ರೀಡೆ ಆಡುವವರಿಗೆ `ರಿವರ್ ರಾಫ್ಟಿಂಗ್'ನಷ್ಟು ಅಚ್ಚುಮೆಚ್ಚು ಮತ್ತೊಂದಿಲ್ಲ.

ತುದಿ ಮತ್ತು ಬುಡ ಕತ್ತರಿಸಿದ ಬಾಳೆಗಿಡಗಳನ್ನು ಸಮನಾಗಿ ಜೋಡಿಸಿ ಹಗ್ಗದಿಂದ ಬಿಗಿದು ಹಳ್ಳಿ ಹೈಕಳು ಹಳ್ಳದಲ್ಲಿ ಮೋಜು ಮಾಡಲು ತಯಾರಿಸುತ್ತಿದ್ದ ತೆಪ್ಪದ ಮಾದರಿಯ ರಬ್ಬರ್ ಟ್ಯೂಬ್‌ಗಳಿಂದ ತಯಾರಿಸಿದ `ಆಧುನಿಕ ತೆಪ್ಪ' ರಿವರ್ ರಾಫ್ಟಿಂಗ್‌ನಲ್ಲಿ ಬಳಕೆಯಾಗುವ `ರಾಫ್ಟ್'. ಎಷ್ಟು ಸದಸ್ಯರಿರುತ್ತಾರೆ ಎಂಬುದರ ಮೇಲೆ ಸಣ್ಣ ಅಥವಾ ದೊಡ್ಡ ರಾಫ್ಟ್ ಬಳಸಲಾಗುತ್ತದೆ. ನೀರಿನಲ್ಲಿ ಸರಾಗವಾಗಿ ಸಾಗಲು ಎರಡಕ್ಕಿಂತ ಹೆಚ್ಚು ಹುಟ್ಟು. ಮಾರ್ಗದರ್ಶಕ (ಗೈಡ್)ನೆಂಬ ಅಂಬಿಗ. ಅನುಭವಸ್ಥರಿಗೆ `ಅಂಬಿಗ' ಬೇಕಿಲ್ಲವೆನ್ನಿ.

ಬೆಟ್ಟಗುಡ್ಡಗಳಿಗೆ ಟ್ರೆಕ್ಕಿಂಗ್, ವಾರಾಂತ್ಯ ವಿಹಾರ, ಪ್ರವಾಸ ಮೊದಲಾದ ಸಾಹಸ ಮನೋಭಾವ ಇರುವ ಬೆಂಗಳೂರಿಗರಲ್ಲಿ ಅನೇಕರು ಮುಂಗಾರು ಮತ್ತು ಮಳೆಗಾಲದ ನಂತರದ ಕೆಲವು ತಿಂಗಳು ಜಲಕ್ರೀಡೆಗೇ ಜೈ ಅನ್ನುತ್ತಾರೆ. ಜುಲೈನಿಂದ ಡಿಸೆಂಬರ್‌ವರೆಗೆ ಅತ್ಯಧಿಕ ಪ್ರಮಾಣದಲ್ಲಿ ರಾಫ್ಟಿಂಗ್ ಹೋಗುವುದು ಸಾಮಾನ್ಯ.

ರಕ್ಷಣಾ ಸೂತ್ರಗಳು
*ಸೀರೆ/ಚೂಡಿದಾರ್/ ಜೀನ್ಸ್ ಪ್ಯಾಂಟ್ ಹೊರತುಪಡಿಸಿ ಬರ್ಮುಡಾ/ಶಾರ್ಟ್ಸ್/ ತ್ರಿ ಫೋರ್ತ್ ಪ್ಯಾಂಟ್, ಟಿ-ಶರ್ಟ್, ಜಾಕೆಟ್ ಮುಂತಾದ ಆರಾಮದಾಯಕ ಉಡುಪು ಧರಿಸಿರಬೇಕು. ರಾಫ್ಟಿಂಗ್ ಹೆಲ್ಮೆಟ್/ ಲೈಫ್ ಜಾಕೆಟ್ ಕಡ್ಡಾಯ.
*ಕ್ಯಾಮೆರಾ, ಮೊಬೈಲ್, ಚಿನ್ನಾಭರಣ ಧರಿಸಬಾರದು, ಒಯ್ಯಬಾರದು.
*ವೃತ್ತಿಪರ ಸಾಹಸಕ್ರೀಡಾ ಸಂಸ್ಥೆಗಳ ಮೂಲಕ ರಾಫ್ಟಿಂಗ್ ಹೋಗುವುದಾದರೆ ಅದು ಪರವಾನಗಿ ಪಡೆದ ಸಂಸ್ಥೆಯಾಗಿರಬೇಕು ಮತ್ತು ಭಾರತ ಸರ್ಕಾರದಿಂದ ರಾಫ್ಟಿಂಗ್‌ಗೆ ಅಂಗೀಕೃತವಾದ ಸಂಸ್ಥೆಯಾಗಿರಬೇಕು.
*ಮದ್ಯಪಾನ ನಿಷಿದ್ಧ.
*ರಾಫ್ಟಿಂಗ್ ಹೋಗಬಯಸುವ ತಾಣದಲ್ಲಿನ ನೀರಿನ ಆಳ, ಹರಿವಿನ ವೇಗ, ಹಳ್ಳ, ಎಲ್ಲಿ ಎಷ್ಟು ಆಳಕ್ಕೆ ಧುಮುಕುತ್ತದೆ ಇತ್ಯಾದಿ ಮೊದಲೇ ತಿಳಿದುಕೊಳ್ಳಿ.
** ಮತ್ತು ನಂತರದ ಗ್ರೇಡ್‌ಗೆ ಹೋಗುವ ಮುನ್ನ ಈಜುವುದರಲ್ಲಿ ಪಳಗಿ.
*ಆಸ್ತಮಾ, ಹೃದ್ರೋಗ ಇರುವವರಿಗೆ, ಗರ್ಭಿಣಿಯರಿಗೆ ರಾಫ್ಟಿಂಗ್ ನಿಷಿದ್ಧ.

ಬೆಂಗಳೂರಿನಲ್ಲಿ ಹೊಳೆ ಎಲ್ಲಿದೆ ಎಂದು ಕೇಳುತ್ತೀರಾ? ನಗರದೊಳಗಿಲ್ಲ ನಿಜ. ಆದರೆ ಕೇವಲ 150 ಕಿ.ಮೀ. ಸಾಗಿದರೆ ಭೀಮೇಶ್ವರಿಯಲ್ಲಿ ಕಾವೇರಿ ಸಿಗುತ್ತಾಳೆ. ಕೊಡಗಿನ ಮಾರ್ಗದುದ್ದಕ್ಕೂ ಇನ್ನೊಂದಷ್ಟು ರಾಫ್ಟಿಂಗ್ ಪಾಯಿಂಟ್‌ಗಳಿವೆ. ಕೊಡಗಿನ ಭರಹೊಳೆ (250 ಕಿ.ಮೀ.) ಹಾಗೂ ಉತ್ತರ ಕನ್ನಡದ ದಾಂಡೇಲಿ (500 ಕಿ.ಮೀ.) ರಾಫ್ಟರ್‌ಗಳ ಮೆಚ್ಚಿನ ತಾಣಗಳು.

ವಾರಾಂತ್ಯದಲ್ಲೋ, ಬಿಡುವಿನ ವೇಳೆಯಲ್ಲೋ ಮೋಜಿನ ಪ್ರವಾಸಕ್ಕೆ ಹೇಳಿಮಾಡಿಸಿದಂತಿದೆ ಭೀಮೇಶ್ವರಿ. ಕಾವೇರಿ ಇಲ್ಲಿ ತಣ್ಣಗೆ ಹರಿಯುವ ಸೌಮ್ಯವಾದಿ. ರಾಫ್ಟಿಂಗ್ ಕಲಿಯುವವರು, ಮೊದಲ ಬಾರಿಗೆ ರಾಫ್ಟ್ ಮಾಡುವವರು, ಮಹಿಳೆಯರು ಮತ್ತು ಹದಿಹರೆಯದ ಹುಡುಗರೂ ಭೀಮೇಶ್ವರಿಯನ್ನು ಆಯ್ಕೆ ಮಾಡಿಕೊಳ್ಳುವುದು ಇದೇ ಕಾರಣಕ್ಕೆ.

ರಾಫ್ಟಿಂಗ್ ಭಾಷೆಯಲ್ಲೇ ಹೇಳುವುದಾದರೆ ಗ್ರೇಡ್ ಒಂದರಿಂದ ಮೂರರವರೆಗಿನ ರಾಫ್ಟರ್‌ಗಳಿಗೆ ಇದು ಉತ್ತಮ ಆಯ್ಕೆ. ಆದರೆ ಕೆಲವು ಕಿ.ಮೀ. ಸಾಗಿದರೆ ಪುಟ್ಟದೊಂದು ಜಲಪಾತವೂ ಸಿಗುತ್ತದೆ. ಇದು ಸ್ವಲ್ಪ ಅನುಭವವಿರುವ ರಾಫ್ಟರ್‌ಗಳಿಗೆ ಸಾಹಸ/ರೋಮಾಂಚಕ ಪ್ರಯತ್ನಗಳಿಗೆ ಮುಂದಾಗುವವರಿಗೆ ಸೂಕ್ತವಾದ ಸ್ಥಳ. ಇಂತಹ ನದಿಯಲ್ಲಿ ಮಾಡುವ ಜಲಕ್ರೀಡೆಯನ್ನು `ವೈಟ್ ರಿವರ್ ರಾಫ್ಟಿಂಗ್' ಎನ್ನುತ್ತಾರೆ.

ಒಂದಿಷ್ಟು ವಿವರ
ರಾಫ್ಟಿಂಗ್‌ನಲ್ಲಿ ಒಟ್ಟು ಆರು ಗ್ರೇಡ್‌ಗಳಿವೆ. ಒಂದು ಮತ್ತು ಎರಡನೇ ಗ್ರೇಡ್‌ವರೆಗಿನ ರಾಫ್ಟಿಂಗ್ ಕೇವಲ ಥ್ರಿಲ್ಲಿಂಗ್ ಅನುಭವ ಪಡೆಯಲು ಇಚ್ಛಿಸುವ, ರಾಫ್ಟಿಂಗ್‌ನ ಮಜಾ ಅನುಭವಿಸಲು ಬಯಸುವ ಮಂದಿಗೆ ಮೀಸಲು. ಮೂರನೇ ಗ್ರೇಡ್‌ನಲ್ಲಿ ಸಣ್ಣ ಜಲಪಾತ, ಧುಮುಕಿ ಹರಿಯುವ ನೀರಿನಲ್ಲಿ ರಾಫ್ಟ್ ಮಾಡಬಹುದು. ಗ್ರೇಡ್ ನಾಲ್ಕರಿಂದ ಆರು ಅಪ್ಪಟ ಸಾಹಸ ಕ್ರೀಡೆ. ತುಂಬಿ ಹರಿಯುವ ಹೊಳೆ, ಕಲ್ಲು ಬಂಡೆಗಳು, ಧುತ್ತನೆ ಎದುರಾಗುವ ಹಳ್ಳಗಳು ಮುಂತಾಗಿ ಹೆಚ್ಚಿನ ಪ್ರಮಾಣದ ರಾಪಿಡ್‌ಗಳನ್ನು ಎದುರಿಸಲು ಸಿದ್ಧರಿರಬೇಕು. 5 ಮತ್ತು 6ನೇ ಗ್ರೇಡ್‌ನ ರಾಫ್ಟಿಂಗ್ ಇದಕ್ಕಿಂತಲೂ ಒಂದು ತೂಕ ಹೆಚ್ಚು ಸವಾಲಿನದ್ದು. ರಾಪಿಡ್‌ಗಳಲ್ಲಿ ರಾಫ್ಟ್ ಮಾಡುತ್ತಾ ಹೋದಂತೆ ಈ ಹಂತವನ್ನು ಸಲೀಸಾಗಿ ಎದುರಿಸಲು ಗುಂಡಿಗೆ ಸಜ್ಜಾಗುತ್ತದೆ ಎಂಬುದು ಅನುಭವಸ್ಥರ ಮಾತು. (ಈ ಹಂತಗಳನ್ನು ವೈಟ್ ರಿವರ್ ಎಕ್ಸ್‌ಪೀರಿಯೆನ್ಸ್ ಮತ್ತು ಅಡ್ವಾನ್ಸ್ಡ್ ವೈಟ್‌ರಿವರ್ ಎಕ್ಸ್‌ಪೀರಿಯೆನ್ಸ್ ಅಂತಾರೆ).

ಸಾಹಸ ಕ್ರೀಡೆಗಳ ಆಯೋಜಕ ವೃತ್ತಿಪರ ಸಂಸ್ಥೆಗಳು ಜುಲೈನಿಂದಲೇ ತಂಡಗಳೊಂದಿಗೆ ರಾಫ್ಟಿಂಗ್ ತಾಣಗಳಲ್ಲಿ ಬೀಡುಬಿಡಲಾರಂಭಿಸಿವೆ. ಕ್ರಮಿಸಿದ ದೂರವೇ ವಿಧಿಸುವ ದರಗಳಿಗೆ ಮಾನದಂಡ. ಉದಾಹರಣೆಗೆ ಭೀಮೇಶ್ವರಿಯಲ್ಲಿ ಒಂಬತ್ತು ಕಿ.ಮೀ.ವರೆಗೂ ರಾಫ್ಟಿಂಗ್ ಹೋಗಲು ಅವಕಾಶವಿದೆ.

ರಾಫ್ಟಿಂಗ್ ಹೋಗುವ ಮುನ್ನ...
`ನೀರಿನಲ್ಲಿ ಮೋಜಿನ ವಿಹಾರಕ್ಕೆ ಹೋಗುವುದು ಕೆಲವರಿಗೆ ಅಚ್ಚುಮೆಚ್ಚಿನ ಹವ್ಯಾಸ. 13 ವರ್ಷ ಮೇಲ್ಪಟ್ಟ ಹುಡುಗರಷ್ಟೇ ಅಲ್ಲ ಹುಡುಗಿಯರೂ ರಾಫ್ಟಿಂಗ್ ಹೋಗಬಹುದು. ಈ ಹಂತದಲ್ಲಿ ಒಂದರಿಂದ ಮೂರನೇ ಗ್ರೇಡ್‌ವರೆಗಿನ ರಾಫ್ಟಿಂಗ್‌ಗೆ ಯಾವುದೇ ತರಬೇತಿ ಅಥವಾ ಅನುಭವದ ಅಗತ್ಯವಿರುವುದಿಲ್ಲ. ಧೈರ್ಯ, ಆತ್ಮವಿಶ್ವಾಸವಿದ್ದರೆ ಸಾಕು.

ನಾಲ್ಕರಿಂದ ಆರನೇ ಗ್ರೇಡ್‌ವರೆಗಿನದಕ್ಕೆ ಅನುಭವವೂ ಬೇಕು, ತರಬೇತಿಯೂ ಬೇಕು, ಜತೆಗೊಬ್ಬರು ಗೈಡ್ ಇರಲೇಬೇಕು. ಮಾತ್ರವಲ್ಲ, ರಕ್ಷಣಾ ಕ್ರಮಗಳನ್ನೂ ಕೈಗೊಂಡಿರಬೇಕು (ಬಾಕ್ಸ್ ನೋಡಿ) ಎನ್ನುತ್ತಾರೆ ಜೆ.ಪಿ. ನಗರ ನಿವಾಸಿ, ಹವ್ಯಾಸಿ ರಾಫ್ಟರ್ ಉಡುಪಿಯ ಶಶಿರೇಖಾ.

ಆಂಧ್ರಪ್ರದೇಶ ಮೂಲದ ಕೃಷ್ಣ ಶ್ರೀವತ್ಸ ನಿಮ್ಮರಾಜು ಭಾರತದ ಉದ್ದಗಲಕ್ಕಿರುವ ಬಹುತೇಕ ಎಲ್ಲಾ ಸಾಹಸಕ್ರೀಡಾ ತಾಣಗಳನ್ನು ಕಂಡವರು. ಭೀಮೇಶ್ವರಿಯಲ್ಲಿಯೂ ಬೇಸಿಕ್ ರಾಫ್ಟಿಂಗ್ ಮಾಡಿದ್ದಾರಂತೆ. `ನಾಲ್ಕು ವರ್ಷಗಳಿಂದ ನಿರಂತರವಾಗಿ ರಾಫ್ಟಿಂಗ್, ಟ್ರೆಕಿಂಗ್, ಪ್ಯಾರಾಸೈಲಿಂಗ್, ಸ್ಕೂಬಾ ಡೈವಿಂಗ್, ಸರ್ಫಿಂಗ್ ಮುಂತಾದ ಬಹುತೇಕ ರೋಮಾಂಚಕಾರಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಋಷಿಕೇಶದಲ್ಲಿ ಗಂಗೆಯ ಮಡಿಲಲ್ಲಿ ನಡೆಸಿದ ರಾಫ್ಟಿಂಗ್ ಅವಿಸ್ಮರಣೀಯ.

ಯಾವುದೇ ಸಾಹಸಿ ಕ್ರೀಡೆಗಳ ಅನುಭವ ಪಡೆಯಲು ಬಯಸುವವರು ಮುನ್ನೆಚ್ಚರಿಕಾ ಕ್ರಮಗಳನ್ನು, ಸಂಸ್ಥೆಗಳಾಗಲಿ ಮಾರ್ಗದರ್ಶಕರಾಗಲಿ ಹೇಳುವ ರಕ್ಷಣಾ ಸೂತ್ರಗಳನ್ನು ಕಡೆಗಣಿಸಬಾರದು. ರಾಪಿಡ್ ರಾಫ್ಟಿಂಗ್‌ನಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಇರುವುದು ಸಾಮಾನ್ಯ. ಆದರೆ ತಂಡದ ಪ್ರತಿಯೊಬ್ಬರೂ ತುರ್ತು ಸಂದರ್ಭದಲ್ಲಿ ಸ್ವಯಂರಕ್ಷಣೆ ಮತ್ತು ತಂಡದ ರಕ್ಷಣೆಯ ಸೂತ್ರಗಳನ್ನು ತಿಳಿದುಕೊಂಡಿರಬೇಕು. ಒಂದು ವೇಳೆ ತಾವು ನೀರಿಗೆ ಬಿದ್ದರೂ ಅಪಾಯದಿಂದ ಪಾರಾಗುವುದು, ಇನ್ಯಾರೋ ಬಿದ್ದರೂ ರಕ್ಷಿಸಲು ತಿಳಿದಿರಬೇಕು' ಎಂದು ಸಲಹೆ ನೀಡುತ್ತಾರೆ ಶ್ರೀವತ್ಸ.

ರಾಫ್ಟಿಂಗ್ ಮಾಹಿತಿ ಕೊಡುವ ಕೆಲವು ಜಾಲ ತಾಣಗಳು:http://www.careindia.in/wwr_rafting.html http://www.thrillophilia.com/Adventure-Sports-Bheemeshwari_1*7.htmt
http://bheemeshwariecotourism.blogspot.com

ಒಬ್ಬರೇ ಹೋಗಬೇಡಿ
ಯಾವುದೇ ಗ್ರೇಡ್ ರಾಫ್ಟಿಂಗ್ ಇರಲಿ ಒಂಟಿಯಾಗಿ ಹೋಗುವುದು ಸಲ್ಲದು ಎಂಬುದು ಈ ಸಾಹಸಕ್ರೀಡೆಯನ್ನು ವ್ಯವಸ್ಥಿತವಾಗಿ ಸಂಘಟಿಸುತ್ತಾ ಬಂದಿರುವ ಥ್ರಿಲ್ಲೋಫೀಲಿಯ ಡಾಟ್‌ಕಾಮ್ ಜಾಲತಾಣದ ಸ್ಥಾಪಕರಾದ ಅಭಿಷೇಕ್ ಢಾಗಾ ಅವರ ಎಚ್ಚರಿಕೆಯ ನುಡಿ.
`ವೈಟ್ ರಿವರ್ ರಾಫ್ಟಿಂಗ್'ನಲ್ಲಿ ಅಷ್ಟೊಂದು ಅಪಾಯವಿರುವುದಿಲ್ಲ. ಆದರೆ ಗ್ರೇಡ್ *ರಿಂದ 6ರವರೆಗಿನ ಹಂತದಲ್ಲಿ ಮೈಯೆಲ್ಲ ಎಚ್ಚರವಾಗಿರಬೇಕು.

ಧೈರ್ಯವಿದ್ದರೆ ಪುಟ್ಟ ಮಕ್ಕಳನ್ನೂ ಗ್ರೇಡ್ 3ವರೆಗಿನ ರಾಫ್ಟಿಂಗ್‌ಗೆ ಕರೆದೊಯ್ಯಬಹುದು. ನಂತರದ ಹಂತಕ್ಕೆ ಸೂಕ್ತ ತರಬೇತಿ ಮತ್ತು ಅನುಭವವಿಲ್ಲದಿದ್ದರೆ ನೀರಿಗಿಳಿಯಲೇಬೇಡಿ. ಬೆಂಗಳೂರಿನ ಸುತ್ತಮುತ್ತ ಭೀಮೇಶ್ವರಿ, ಭರಪೊಳೆ, ದುಬಾರೆ, ಮತ್ತು ದಾಂಡೇಲಿಗೆ ನಮ್ಮ ಕಂಪೆನಿ ಮೂಲಕ ಪ್ರತಿವರ್ಷ ಮಳೆಗಾಲದ ಆರಂಭದಿಂದ ವರ್ಷಾಂತ್ಯದವರೆಗೂ ಸಾವಿರಾರು ಮಂದಿ ರಾಫ್ಟಿಂಗ್ ಹೋಗುತ್ತಾರೆ. ಅಗತ್ಯವಿರುವವರಿಗೆ ತರಬೇತಿಯನ್ನೂ ನೀಡುತ್ತೇವೆ. ಥ್ರಿಲ್ಲೋಫೀಲಿಯ ಕಂಪೆನಿಯು ನನ್ನ ಪತ್ನಿ ಚಿತ್ರಾ ಗುರ್ನಾನಿ ಹಾಗೂ ನನ್ನ ಕನಸು.

2009ರಲ್ಲಿ ಎಚ್.ಎಸ್.ಆರ್. ಲೇಔಟ್‌ನಲ್ಲಿ ಶುರು ಮಾಡಿದೆವು. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರೂ ರಾಫ್ಟಿಂಗ್ ಹೋಗುತ್ತಿದ್ದಾರೆ. ಆದರೆ ಎಚ್ಚರ ಅಗತ್ಯ. ಕುಳಿತುಕೊಳ್ಳುವಾಗ ರಾಫ್ಟ್‌ನ ಎಲ್ಲಾ ಭಾಗಗಳಿಗೂ ಭಾರ ಸಮಾನವಾಗಿ ಹಂಚಿಕೆಯಾಗಿರಬೇಕು. ಕಿರಿಯರನ್ನು ನಿಮ್ಮ ಬಳಿ ಸುರಕ್ಷಿತವಾಗಿ ಕೂರಿಸಬೇಕು. ರಾಫ್ಟ್‌ನ ಗಾತ್ರಕ್ಕೆ ತಕ್ಕಷ್ಟು ಜನ ಮಾತ್ರ ಕೂರಬೇಕು. ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ' ಎಂದು ಅವರು ಮಾಹಿತಿ ನೀಡುತ್ತಾರೆ.
ಥ್ರಿಲ್ಲೋಫೀಲಿಯಾದ ಸಂಪರ್ಕಕ್ಕೆ: 96860 20000/ 9686120000 ಅಥವಾ thrillophilia.com ಸಂಪರ್ಕಿಸಬಹು

ಮಶೀರ್ ಮೀನಿನ ಕಣಜ, ನೀರಾಟದ ಮಜ

ಒಂದು ದಿನದ ವಿಹಾರಕ್ಕೆ ಪ್ರಶಾಂತವಾದ, ಆಹ್ಲಾದಕರವಾದ ತಾಣಕ್ಕೆ ಭೇಟಿ ಕೊಡಬೇಕು ಎಂದು ಯೋಚಿಸುವವರಿಗೆ ಭೀಮೇಶ್ವರಿ ಅತ್ಯುತ್ತಮ ಆಯ್ಕೆ. ಬೆಂಗಳೂರಿನಿಂದ ಕೇವಲ 100 ಕಿ. ಮೀ. ದೂರದಲ್ಲಿರುವ ಭೀಮೇಶ್ವರಿ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಶಿವನಸಮುದ್ರ ಮತ್ತು ಮೇಕೆದಾಟು ಫಾಲ್ಸ್ ನಡುವೆ ಸಿಗುವ ಸಣ್ಣ ಪಟ್ಟಣವಿದು.

ಇಕೋ ಟೂರಿಸಂ ತಾಣವಾಗಿ ಜನಪ್ರಿಯವಾಗಿರುವ ಭೀಮೇಶ್ವರಿಗೆ ಹೋದ ಮಾಂಸಾಹಾರಿಗಳು ಮತ್ತು ಹವ್ಯಾಸಿ ಮೀನುಗಾರರು ಇಲ್ಲಿನ ಕಾವೇರಿ ಮಡಿಲಲ್ಲಿ ಹೇರಳವಾಗಿರುವ ಮಶೀರ್ ಮೀನುಗಳಿಗೆ ಗಾಳ ಹಾಕಿ ಕೂರುವುದು ಸಾಮಾನ್ಯ. ದಟ್ಟವಾದ ಕಾಡಿನಿಂದ ಸುತ್ತುವರಿದಿರುವ ಭೀಮೇಶ್ವರಿಗೆ ಹೋದವರು ಆನೆ, ಚಿರತೆ, ಕಾಡುಹಂದಿ, ನರಿ ಮುಂತಾದ ಕಾಡುಪ್ರಾಣಿಗಳ ತಾಣವೂ ಹೌದು. ಮಶೀರ್ ಆಸೆಯಿಂದ ನೀರಿಗಿಳಿಯುವವರು ಮೊಸಳೆಗಳ ಬಗ್ಗೆ ಎಚ್ಚರ ವಹಿಸಬೇಕು. ತಮ್ಮ ಪರಿಸರಕ್ಕೆ ಬಂದವರ ಕುಶಲ ವಿಚಾರಿಸುತ್ತಾ ಹಾರಾಡುವ ಹತ್ತಾರು ಬಗೆಯ ಪಕ್ಷಿಗಳನ್ನೂ ಕಾಣಬಹುದು. ಇಲ್ಲಿ ಆಗಸ್ಟ್‌ನಿಂದ ಫೆಬ್ರುವರಿವರೆಗೂ ಪ್ರವಾಸಿಗರ ದಟ್ಟಣೆ ಇರುತ್ತದೆ.

ಅಶನವಸನಾದಿಗೆ...
ಭೀಮೇಶ್ವರಿಯಲ್ಲಿ ಊಟ, ವಸತಿ ಸೌಲಭ್ಯವನ್ನು ಜಂಗಲ್ ಲಾಡ್ಜಸ್ ಒದಗಿಸುತ್ತದೆ. ನೆಲದ ಮೇಲೆ ಹಾಕುವ ಟೆಂಟ್, ಮರದ ಮೇಲಿನ ಬಿದಿರಿನ ಗುಡಿಸಲು, ಕಾಟೇಜ್, ಲಾಗ್‌ಹಟ್‌ಗಳಲ್ಲಿ ಪ್ರವಾಸಿಗರು ಯಾವುದನ್ನು ಬೇಕಾದರೂ ತಂಗಲು ಆಯ್ಕೆ ಮಾಡಿಕೊಳ್ಳಬಹುದು. ಈ ಶುಲ್ಕದಲ್ಲಿ ವಸತಿ, ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ, ನೇಚರ್ ವಾಕ್ ಸೇರಿದೆ. ರಾಫ್ಟಿಂಗ್ ಮತ್ತಿತರ ಯಾವುದೇ ಸಾಹಸ ಕ್ರೀಡೆಯಲ್ಲಿ ತೊಡಗಲು ಪ್ರತ್ಯೇಕ ಶುಲ್ಕ ಕೊಡಬೇಕು. ಹೆಚ್ಚಿನ ಮಾಹಿತಿ ಮತ್ತು ಮುಂಗಡ ಕಾಯ್ದಿರಿಸಲು ಸಂಪರ್ಕಿಸಿ:
www.junglelodges.com/080 4055 4055.080 4055 4055.

ತಲುಪುವ ಬಗೆ
ಕನಕಪುರ- ಕೊಳ್ಳೇಗಾಲ ಹೆದ್ದಾರಿಯಲ್ಲಿ ಹಲಗೂರು-ಮುತ್ತತ್ತಿ ರಸ್ತೆಯಲ್ಲಿ ಭೀಮೇಶ್ವರಿಗೆ ತಿರುವು ಪಡೆದುಕೊಳ್ಳಬೇಕು. ಮುತ್ತತ್ತಿಯಿಂದ ಕಾವೇರಿ ಫಿಶಿಂಗ್ ಕ್ಯಾಂಪ್ ರಸ್ತೆಯಲ್ಲಿ ಸಾಗಿದರೆ ಭೀಮೇಶ್ವರಿ ತಲುಪಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT