ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಷಭವಿಲ್ಲದ ಕಲ್ಯಾಣ

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ಕುಮಾರಗಂಧರ್ವರು ಹನ್ನೊಂದು ವರ್ಷದವರಿರುವಾಗಲೇ ಅವರನ್ನು `ಜೀನಿಯಸ್~ ಎಂದು ಇಂಗ್ಲಿಷ್ ಪತ್ರಿಕೆಯೊಂದು ಬಣ್ಣಿಸಿತ್ತು. ಅಂಥ ಅದ್ಭುತ ಪ್ರತಿಭಾವಂತ ಗಾಯಕ ಅವರಾಗಿದ್ದರು. ಅವರು ಪಂ.ಬಿ.ಆರ್.ದೇವಧರರಲ್ಲಿ ಶಾಸ್ತ್ರಬದ್ಧವಾಗಿ ಸಂಗೀತವನ್ನು ಕಲಿತ ನಂತರವೂ ತಮ್ಮ ಅಸಾಧಾರಣ ಮೇಧಾವಿತನವನ್ನು ಅಲ್ಲಲ್ಲಿ ಸಾಬೀತು ಪಡಿಸುತ್ತಲೇ ಇದ್ದರು.

ಸಂಗೀತ ಶಾಸ್ತ್ರದ ಕುರಿತು ಆಳ ಜ್ಞಾನ ಹೊಂದಿದ್ದ, ಸಂಗೀತದ ಶಾಸ್ತ್ರಾಂಶಗಳನ್ನಿಟ್ಟುಕೊಂಡೇ ಅವರು ಆಗಾಗ ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದರು. ಇದಕ್ಕಾಗಿ ಟೀಕೆ ಮತ್ತು ಪ್ರಶಂಸೆ ಎರಡನ್ನೂ ಪಡೆಯುತ್ತಿದ್ದರು.

ಅವೆರಡರ ಕುರಿತು ಕುಮಾರರ ಪ್ರತಿಸ್ಪಂದನೆ ಸಮನಾಗಿರುತ್ತಿತ್ತು. ತಮ್ಮ ಪ್ರಯೋಗ ಯಾವ ರೀತಿ ಜನರನ್ನು ಮತ್ತು ವಿದ್ವಾಂಸರನ್ನು ತಲುಪುತ್ತದೆ ಎಂದವರು ನಿರೀಕ್ಷಿಸುತ್ತಿದ್ದರು. ಅನೇಕ ಸಲ ಪ್ರಖರವಾದ ಟೀಕೆಗಳ ನಡುವೆಯೂ ಅವರು ಸಂಗೀತದಲ್ಲಿ ಹೊಸ ಪ್ರಯೋಗ ಮಾಡುತ್ತಲೇ ಇದ್ದರು.

ಕೆಲವು ಸಲ ಅವರ ಪ್ರಯೋಗಗಳು ಸಂಗೀತದ ವಿದ್ವಾಂಸರನ್ನೇ ಗೊಂದಲಕ್ಕೀಡು ಮಾಡುತ್ತಿದ್ದುವು. ಅವರೇನು ಹಾಡುತ್ತಿದ್ದಾರೆ ಎಂಬುದು ಹಾಡು ಮುಗಿದಮೇಲೆ ಅರ್ಥವಾಗುತ್ತಿತ್ತು! ಅಂಥ ಒಂದು ರಸನಿಮಿಷ ಇಲ್ಲಿದೆ.

ಅಂದು ಕುಮಾರರು ಕಲ್ಯಾಣ ರಾಗವನ್ನು ಹಾಡುತ್ತಿದ್ದರು. ವಿದ್ವಾಂಸರನೇಕರು ಕುಮಾರರ ಹಾಡು ಕೇಳಲು ನೆರೆದಿದ್ದರು. ನೆರೆದ ಕೇಳುಗರನ್ನೆಲ್ಲ ಅವರು ತಮ್ಮ ಹಾಡಿನ ಮೋಡಿಯಿಂದ ಗಂಧರ್ವ ಲೋಕಕ್ಕೆ ಕರೆದ್ದೊಯ್ದಿದ್ದಾರೆ.

ಕೇಳುಗರೆಲ್ಲ ತನ್ಮಯರಾಗಿರುವಾಗಲೇ ಅವರೊಂದು ಪ್ರಯೋಗ ಮಾಡಿದರು. ಅದೆಂದರೆ, ಹಾಡುತ್ತ ಹಾಡುತ್ತ ಕುಮಾರರು ಕಲ್ಯಾಣ ರಾಗದೊಳಗಿನ ರಿಷಭ ಸ್ವರವನ್ನು ಬಿಟ್ಟು ಹಾಡತೊಡಗಿದರು.

ಈ ಪ್ರಯೋಗ ಥಟ್ಟನೆ ವಿದ್ವಾಂಸರ ಗಮನಕ್ಕೆ ಬರಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಏನೋ ವ್ಯತ್ಯಾಸವಾಗಿದೆ ಎಂದು ಎಲ್ಲರಿಗೂ ಅನ್ನಿಸಿತು. ಆದರೆ ವ್ಯತ್ಯಾಸವೇನು ಎಂಬುದು ಯಾರಿಗೂ ಗೊತ್ತಾಗಲಿಲ್ಲ.

ರಿಷಭವಿಲ್ಲದೆಯೂ ಕಲ್ಯಾಣ ರಾಗದ ಎಲ್ಲ ಗುಣಲಕ್ಷಣಗಳನ್ನು- ಶಾಸ್ತ್ರದಲ್ಲಿ ವಿವರಿಸಿದಂತೆ- ಕಾಪಾಡಿಕೊಂಡೇ ಕುಮಾರರು ಹಾಡುತ್ತಿದ್ದುದರಿಂದ ವಿದ್ವಾಂಸರು ಗೊಂದಲಕ್ಕೊಳಗಾದರು. ಸಂಗೀತ ವಿಮರ್ಶಕ ಚಿನ್ನಪ್ಪನವರು ತಮ್ಮ ಪಕ್ಕದಲ್ಲಿ ಕುಳಿತ ಇನ್ನೋರ್ವ ಸಂಗೀತ ವಿದ್ವಾಂಸ ಕೆ.ಜಿ.ಗಿಂಡೆಯವರನ್ನು ಕೇಳಿದರು-

`ಸ್ವಾಮಿ, ಯಾವ ರಾಗವಿದು? ಕುಮಾರರು ಪ್ರಾರಂಭದಲ್ಲಿ ಕಲ್ಯಾಣವನ್ನು ಸರಿಯಾಗಿಯೇ ಹಾಡುತ್ತಿದ್ದರು. ಈಗ ಯಾವ ರಾಗಕ್ಕೆ ಜಿಗಿದಿದ್ದಾರೆ?~.
`ಅವರು ಯಾವ ರಾಗಕ್ಕೂ ಜಿಗಿದಿಲ್ಲ. ಅವರು ಹಾಡುತ್ತಿರುವುದು ಕಲ್ಯಾಣವೇ~ ಎಂದು ಗಿಂಡೆಯವರು ಉತ್ತರಿಸಿದರು. 
`ಏನೋ ವ್ಯತ್ಯಾಸವಾಗಿದೆಯಲ್ಲ!~

`ಹೌದು! ಕಲ್ಯಾಣದೊಳಗಿನ ರಿಷಭ ಮಾಯವಾಗಿದೆ. ಅವರು ಕಲ್ಯಾಣರಾಗದಲ್ಲಿನ ಉಳಿದೆಲ್ಲ ಸ್ವರಗಳನ್ನು ಮಾತ್ರ ಹಾಡುತ್ತಿದ್ದಾರೆ. ರಿಷಭ ಮಾತ್ರ ಇಲ್ಲ~.


ಚಿನ್ನಪ್ಪನವರ ಬಾಯಿಂದ ತಕ್ಷಣ ಉದ್ಗಾರ ಹೊರಟಿತು- `ಓಹ್! ಕುಮಾರರಂಥ ಜೀನಿಯಸ್ ಗಾಯಕ ಮತ್ತೊಬ್ಬನಿಲ್ಲ!~.

ಈ ಮಾತು ಗಿಂಡೆಯವರ ಮುಖದಲ್ಲಿ ಮುಗುಳ್ನಗೆಯನ್ನು ತರಿಸಿತು. ಮತ್ತೆ ಅವರು ಹಾಡುಕೇಳುತ್ತ, ಆನಂದಿಸತೊಡಗಿದರು.

ರಿಷಭವಿಲ್ಲದೆ ಕಲ್ಯಾಣ ಹಾಡುವುದು ಇಂದಿಗೂ ಸವಾಲು. ಇಂತಹ ಅಪ್ರತಿಮ ಪ್ರಯೋಗವನ್ನು ಮೆಹಫಿಲ್‌ಗಳಲ್ಲಿ ಮಾಡುವ ಎದೆಗಾರಿಕೆ ಕುಮಾರರಂಥ ಗಾಯಕರಿಗಷ್ಟೇ ಇರಲು ಸಾಧ್ಯ. ಈ ಹಿಂದೆ ಅವರು ಭೂಪ್‌ರಾಗದಲ್ಲಿ ವರ್ಜಿತವಿರುವ ಮಧ್ಯಮ ಸ್ವರವನ್ನು ಪ್ರಯೋಗಿಸುವ ಮೂಲಕ ಸಂಗೀತಲೋಕದಲ್ಲಿ ಸಂಚಲನ ಉಂಟುಮಾಡಿದ್ದರು.
 
ಆಗಲೂ ಅವರು ಟೀಕೆಗಳನ್ನು ಎದುರಿಸಿ, ತಕ್ಕ ಉತ್ತರವನ್ನು ವಿದ್ವಾಂಸರಿಗೆ ಕೊಟ್ಟಿದ್ದರು. ತಾವು ಹಾಡಿದ್ದು `ಚೌತಿ ಭೂಪ್~ ಎಂದಿದ್ದರು. ಚೌತಿ ಎಂದರೆ ಸಪ್ತಸ್ವರಗಳಲ್ಲಿ ನಾಲ್ಕನೆಯ ಸ್ವರ(ಮಧ್ಯಮ)ಯುಕ್ತ ಭೂಪರಾಗವನ್ನು ತಾವು ಹಾಡಿರುವುದಾಗಿ ಸಾರಿದ್ದರು.

ಹಾಡುಗಾರಿಕೆಯ ಕುರಿತು ಕುಮಾರರು ಎಂದೂ ಕಳೆದುಕೊಳ್ಳದ ಆತ್ಮವಿಶ್ವಾಸ ಜ್ಞಾನಮೂಲದಿಂದ ಬಂದುದಾಗಿತ್ತು. ತಾವು ಮಾಡುತ್ತಿರುವ ಪ್ರಯೋಗಗಳ ಬಗ್ಗೆ ಅವರಿಗೆ ನಿಖರತೆಯಿತ್ತು. ಅರೆ ಮನಸ್ಸಿನ ಕಛೇರಿ ಅವರ ಜೀವನದಲ್ಲಿಯೇ ಎಂದಿಗೂ ಘಟಿಸಲಿಲ್ಲ. ಹೀಗಾಗಿ ಅವರ ಒಂದೂ ಕಾರ್ಯಕ್ರಮ ವಿಫಲವಾಗಲಿಲ್ಲ.

ಕುಮಾರರ ನಂತರ ಜ್ಞಾನದ ಬಲದಿಂದ ಸಂಗೀತದಲ್ಲಿ ಪ್ರಯೋಗ ಮಾಡುವವರ ಪರಂಪರೆಯೇ ನಿಂತು ಹೋದಂತಾಗಿದೆ. ಪ್ರಯೋಗದ ಹೆಸರಿನಲ್ಲಿ ಕಸರತ್ತು ಮಾಡುವವರ ಸಂಖ್ಯೆ ಬೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT