ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ ಆಪ್ತರ ಬೇಟೆ ಚುರುಕು

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು/ಬಳ್ಳಾರಿ/ಚಿತ್ರದುರ್ಗ/ದಾವಣಗೆರೆ: ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಮತ್ತು ರಾಜೇಂದ್ರ ಜೈನ್ ಒಡೆತನದ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ (ಡಿಎಂಎಸ್) ವಿರುದ್ಧ ಪ್ರತ್ಯೇಕ ಮೊಕದ್ದಮೆಗಳನ್ನು ದಾಖಲಿಸಿರುವ ಸಿಬಿಐ, ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ನೇರವಾಗಿ ತನಿಖೆ ಆರಂಭಿಸಿದೆ.
 
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಸೋಮವಾರ ಏಕಕಾಲಕ್ಕೆ ರಾಜ್ಯದ ವಿವಿಧೆಡೆ 15ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಎಎಂಸಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ 20 ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ. ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ, ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ, ಶಾಸಕ ವಿ.ಮುನಿಯಪ್ಪ, ಬಳ್ಳಾರಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಐಎಫ್‌ಎಸ್ ಅಧಿಕಾರಿ ಎಸ್.ಮುತ್ತಯ್ಯ, ಗಣಿ ಇಲಾಖೆಯ ಹಿಂದಿನ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಎಂ.ಈ.ಶಿವಲಿಂಗಮೂರ್ತಿ ಮತ್ತಿತರರನ್ನು ಈ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು (ಎನ್‌ಎಂಡಿಸಿ) ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಹೊಂದಿದ್ದ ಗಣಿ ಗುತ್ತಿಗೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಮಾಲೀಕ ರಾಜೇಂದ್ರ ಜೈನ್ ಸೇರಿದಂತೆ ಮೂವರ ವಿರುದ್ಧ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಸುಪ್ರೀಂಕೋರ್ಟ್‌ನಿಂದ ನೇಮಕಗೊಂಡಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸಲ್ಲಿಸಿದ್ದ ವರದಿ ಆಧರಿಸಿ ಎರಡೂ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಸೆಪ್ಟೆಂಬರ್ 23ರಂದು ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಪ್ರಾಥಮಿಕ ಹಂತದ ಸಾಕ್ಷ್ಯ ಕಲೆಹಾಕಿದ್ದ ಸಿಬಿಐ ಅಧಿಕಾರಿಗಳು, ಸೋಮವಾರ ಬೆಳಿಗ್ಗೆ 2ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದರು.

ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಭಾರತೀಯ ದಂಡ ಸಂಹಿತೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಭಾರತೀಯ ಅರಣ್ಯ ಕಾಯ್ದೆ, ಗಣಿ ಮತ್ತು ಖನಿಜ ಕಾಯ್ದೆ (ಅಭಿವೃದ್ಧಿ ಮತ್ತು ನಿಯಂತ್ರಣ) ಅಡಿಯಲ್ಲಿ ಈ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆಸಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಈವರೆಗೆ ನೆರೆಯ ರಾಜ್ಯದ ಪ್ರಕರಣಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಸಾಕ್ಷ್ಯ ಕಲೆಹಾಕಿತ್ತು. ಆದರೆ, ಸುಪ್ರೀಂಕೋರ್ಟ್ ತೀರ್ಪಿನಂತೆ ಸೋಮವಾರ ಮೊಕದ್ದಮೆಗಳನ್ನು ದಾಖಲಿಸುವುದರೊಂದಿಗೆ ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ನೇರವಾಗಿ ತನಿಖೆ ಆರಂಭಿಸಿದೆ.

ಎರಡೂ ಪ್ರಕರಣಗಳ ಜೊತೆ ಸಂಬಂಧ ಹೊಂದಿರುವವರ ಬಗ್ಗೆ ಮಾಹಿತಿ ಕಲೆಹಾಕಿದ್ದ ಸಿಬಿಐ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿದರು. ಬಳ್ಳಾರಿ, ಬೆಂಗಳೂರು, ಧಾರವಾಡ, ದಾವಣಗೆರೆ ಮತ್ತು ಚಿತ್ರದುರ್ಗದ 15ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆದಿದೆ.

ಬೆಂಗಳೂರಿನಲ್ಲಿ ಮಾಜಿ ಸಚಿವ ವಿ.ಮುನಿಯಪ್ಪ ನಿವಾಸ, ಡಾಲರ್ಸ್ ಕಾಲೋನಿಯಲ್ಲಿರುವ ರಾಜೇಂದ್ರ ಜೈನ್ ಮನೆ, ಮಾಧವ ನಗರದಲ್ಲಿರುವ ಡಿಎಂಸ್ ಕಚೇರಿಗಳ ಮೇಲೆ ದಾಳಿ ನಡೆದಿದೆ. ಶಿವಲಿಂಗಮೂರ್ತಿ ಅವರ ಮನೆಯ ಮೇಲೂ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬಳ್ಳಾರಿಯೇ ಕೇಂದ್ರ: ಸೋಮವಾರ ನಡೆದ ಸಿಬಿಐ ದಾಳಿಯ ಕೇಂದ್ರ ಬಳ್ಳಾರಿಯಾಗಿತ್ತು. ಜನಾರ್ದನ ರೆಡ್ಡಿ ಆಪ್ತ, ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಅವರ ನಿವಾಸ ಹಾಗೂ ಕಚೇರಿಗಳು ಒಳಗೊಂಡಂತೆ ಒಟ್ಟು ಏಳು ಕಡೆ ಸೋಮವಾರ ದಾಳಿ ನಡೆದಿದೆ.

ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲ್ಯೂ ಉಕ್ಕಿನ ಕಾರ್ಖಾನೆ, ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ, ಡೆಕ್ಕನ್ ಮೈನಿಂಗ್ ಸಿಂಡಿಕೇಟ್, ಶ್ರೀಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ ಕಂಪೆನಿಗಳ ಕಚೇರಿಗಳು, ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮಿ ಅರುಣಾ ಅವರಿಗೆ ಇತ್ತೀಚೆಗಷ್ಟೇ ಎಎಂಸಿಯನ್ನು ಪರಭಾರೆ ಮಾಡಿರುವ ಎಎಂಸಿಯ ಹಿಂದಿನ ಮಾಲೀಕರಾದ ಕೆ.ಎಂ. ಪಾರ್ವತಮ್ಮ ಅವರ ನಿವಾಸಗಳನ್ನು ಸಿಬಿಐ ಎಸ್‌ಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅವರ ನೇತೃತ್ವದ ಒಟ್ಟು ಏಳು ತಂಡಗಳು ಬೆಳಿಗ್ಗೆಯಿಂದಲೇ ಜಾಲಾಡಿದವು.

ಸಂಜೆವರೆಗೂ ಪರಿಶೀಲನೆ: ಬಳ್ಳಾರಿಯ ನೆಹರೂ ನಗರದಲ್ಲಿರುವ ನಾಗೇಂದ್ರ ಅವರ ನಿವಾಸ ಮತ್ತು ಪಕ್ಕದಲ್ಲಿರುವ ಕಚೇರಿಯಲ್ಲಿ ಬೆಳಿಗ್ಗೆ 7.30ರಿಂದ 11ರವರೆಗೆ ಸಿಬಿಐ ಅಧಿಕಾರಿಗಳು ತಪಾಸಣೆ ನಡೆಸಿದರು. ನಂತರ ತಾಳೂರು ರಸ್ತೆಯಲ್ಲಿರುವ ಕೊರ್ಲಗುಂದಿಯ ಗೋವರ್ಧನ ಶೆಟ್ಟಿ ಅವರಿಗೆ ಸೇರಿದ ಕಟ್ಟಡದಲ್ಲಿರುವ ನಾಗೇಂದ್ರ ಅವರ ಕಚೇರಿಯಲ್ಲಿ ಸಂಜೆಯವರೆಗೂ ತಪಾಸಣೆ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದರು.

ಎಎಂಸಿಯಿಂದ ಅಕ್ರಮವಾಗಿ ಅದಿರು ಖರೀದಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲ್ಯೂ (ಜಿಂದಾಲ್) ಉಕ್ಕು ಕಾರ್ಖಾನೆಯ ಕಚೇರಿಗೆ ತೆರಳಿದ ಸಿಬಿಐ ಸಿಬ್ಬಂದಿ, ಅದಿರು ಖರೀದಿ ದಾಖಲೆಗಳು ಹಾಗೂ ವಹಿವಾಟಿನ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಶಾಸಕ ನಾಗೇಂದ್ರ ಸೇರಿದಂತೆ ದಾಳಿಯ ವೇಳೆ ಆಯಾ ಕಂಪೆನಿಗಳಿಗೆ ಸಂಬಂಧಿಸಿದ ಪ್ರಮುಖರು ಲಭ್ಯರಾಗಿಲ್ಲ. ಕೆಲವೆಡೆ ಸ್ಥಳದಲ್ಲಿದ್ದ ಸಿಬ್ಬಂದಿಯೇ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಮುತ್ತಯ್ಯ ಆಪ್ತನ ವಿಚಾರಣೆ: ಧಾರವಾಡದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಮುತ್ತಯ್ಯ ಅವರ ಕಚೇರಿ ಮೇಲೆ ದಾಳಿ ನಡೆಸಿದ ಸಿಬಿಐ ತಂಡ, ಕೆಲ ದಾಖಲೆಗಳನ್ನು ಪರಿಶೀಲಿಸಿತು. ಮುತ್ತಯ್ಯ ಅವರು ತರಬೇತಿಗಾಗಿ ಅಮೆರಿಕಕ್ಕೆ ತೆರಳಿದ್ದರಿಂದ, ಕಚೇರಿಯ ಶೀಘ್ರಲಿಪಿಕಾರ ಅಸ್ಲಂ ಕಲಬುರ್ಗಿ ಅವರನ್ನು ಪ್ರಶ್ನಿಸಿದ ಸಿಬಿಐನ ನಾಲ್ವರು ಅಧಿಕಾರಿಗಳ ತಂಡ ಕೆಲ ಮಾಹಿತಿ ಪಡೆಯಿತು.

ಚಿತ್ರದುರ್ಗ ಜಿಲ್ಲೆಯಲ್ಲಿರುವ ಮುತ್ತಯ್ಯ ಅವರ ಸ್ವಗ್ರಾಮ ನೇರಲಕುಂಟೆಯಲ್ಲೂ ಸಿಬಿಐ ದಾಳಿ ನಡೆದಿದೆ. ಅಲ್ಲಿನ ನಿವಾಸದ ಮೇಲೆ ಬೆಳಿಗ್ಗೆ 6 ಗಂಟೆಗೆ ದಾಳಿ ನಡೆಸಿದ ನಾಲ್ವರು ಅಧಿಕಾರಿಗಳು, ಮಧ್ಯಾಹ್ನ 1.15ರವರೆಗೆ ಸುದೀರ್ಘ ತಪಾಸಣೆ ನಡೆಸಿ ಕೆಲ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನೇರಲಗುಂಟೆ ಮನೆಯಲ್ಲಿದ್ದ ಮುತ್ತಯ್ಯ ಅವರ ಸಹೋದರ ಬಿಜೆಪಿ ಮುಖಂಡ ಎಸ್. ತಿಪ್ಪೇಸ್ವಾಮಿ, ಚಂದ್ರಣ್ಣ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಎಸ್. ದೊಡ್ಡಯ್ಯ ಅವರನ್ನೂ ವಿಚಾರಣೆಗೆ ಒಳಪಡಿಸಿದರು.

ದಾವಣಗೆರೆಯಲ್ಲೂ ದಾಳಿ: ದಾವಣಗೆರೆ ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಮುತ್ತಯ್ಯ ಮನೆಯ ಮೇಲೆ ದಾಳಿ ನಡೆಸಿದ ಆರು ಮಂದಿ ಸಿಬಿಐ ಅಧಿಕಾರಿಗಳ ತಂಡ ಆರು ಗಂಟೆಗೂ ಹೆಚ್ಚುಕಾಲ ತಪಾಸಣೆ ನಡೆಸಿತು. ನಂತರ ಎಸ್‌ಬಿಎಂ, ಎಸ್‌ಬಿಐ ಸೇರಿದಂತೆ ಕೆಲ ಬ್ಯಾಂಕ್‌ಗಳಿಗೆ ತೆರಳಿ, ಖಾತೆಗಳನ್ನು ಪರಿಶೀಲಿಸಿತು.

ಪರಿಶೀಲನೆಯ ಸಂದರ್ಭದಲ್ಲಿ ಮನೆಯಲ್ಲಿ ಮುತ್ತಯ್ಯ ಅವರ ಪತ್ನಿ ಮಾತ್ರ ಇದ್ದ ಕಾರಣ ಇಬ್ಬರು ಸ್ಥಳೀಯ ಮಹಿಳಾ ಪೊಲೀಸರ ಸಹಕಾರ ಪಡೆದಿದ್ದರು. ಈ ಸಂದರ್ಭ ಮನೆಯ ಮುಂದೆ ಬಹಳಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ನಂತರ ಜಗಳೂರು ತಾಲ್ಲೂಕು ಬಿದರಕೆರೆಯ ಅವರ ಬಾವಮೈದುನ ರಾಜೇಶ್ ಅವರ ಮನೆಯ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದರು.

ಬಂಧನ ಸಾಧ್ಯತೆ?: ಸೋಮವಾರ ದಾಖಲಿಸಿರುವ ಎರಡೂ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬೆಂಗಳೂರು ನಗರ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವೆಂಕಟ ಸುದರ್ಶನ ಅವರಿಗೆ ಮಂಗಳವಾರ ಪ್ರಾಥಮಿಕ ವರದಿ ಸಲ್ಲಿಸುವ ಸಾಧ್ಯತೆ ಇದೆ. ಸೋಮವಾರದ ದಾಳಿಯ ಪೂರ್ಣ ವಿವರವನ್ನು ಕೋರ್ಟ್‌ಗೆ ಸಲ್ಲಿಸಿ, ಆಂಧ್ರಪ್ರದೇಶದ ಚಂಚಲಗುಡ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಅವರನ್ನು ವಶಕ್ಕೆ ಪಡೆಯಲು ಬಾಡಿ ವಾರೆಂಟ್ ನೀಡುವಂತೆ ಮನವಿ ಮಾಡುವ ಸಂಭವವಿದೆ ಎಂದು ಗೊತ್ತಾಗಿದೆ.

ರೆಡ್ಡಿ ನ್ಯಾಯಾಂಗ ಬಂಧನ ವಿಸ್ತರಣೆ
ಹೈದರಾಬಾದ್ (ಐಎಎನ್‌ಎಸ್):
ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಸಿಬಿಐ ಬಂಧಿಸಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಬಂಧು ಬಿ.ವಿ.ಶ್ರೀನಿವಾಸ ರೆಡ್ಡಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಅ.17ರ ವರೆಗೆ ವಿಸ್ತರಿಸಿದೆ.

ಭದ್ರತಾ ಕಾರಣಗಳಿಗಾಗಿ ಆರೋಪಿಗಳನ್ನು ನಾಂಪಲ್ಲಿಯಲ್ಲಿರುವ ನ್ಯಾಯಾಲಯಕ್ಕೆ ಕರೆತರಲಾಗಲಿಲ್ಲ. ಹಾಗಾಗಿ ನ್ಯಾಯಾಧೀಶರು, ಚಂಚಲಗುಡ ಕೇಂದ್ರ ಕಾರಾಗೃಹದಿಂದ ವಿಡಿಯೊ ಸಂವಾದದ ಮೂಲಕ ವಿಚಾರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT