ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ ಚಿನ್ನಾಭರಣ ಗುಡ್ಡೆ ಹಾಕಿ ಲೆಕ್ಕ...!

Last Updated 14 ಸೆಪ್ಟೆಂಬರ್ 2011, 19:05 IST
ಅಕ್ಷರ ಗಾತ್ರ

ಬಳ್ಳಾರಿ: ಸಿಬಿಐ ವಶದಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಸಿಬ್ಬಂದಿ ಒಂದಿಡೀ ಕೊಠಡಿಯಲ್ಲಿ ಅವೆಲ್ಲವನ್ನೂ ಗುಡ್ಡೆಹಾಕಿ ಲೆಕ್ಕಕ್ಕೆ ತೆಗೆದುಕೊಂಡಿದ್ದು, ಚಿನ್ನದ ಬಿಂದಿಗೆಗಳು, ತರಹೇವಾರಿ ಬಳೆಗಳು, ಕಣ್ಣು ಕುಕ್ಕಿಸುವ ನೆಕ್ಲೇಸ್‌ಗಳು ಅದರಲ್ಲಿ ಸೇರಿವೆ.

ಸಿಬಿಐ ವಶಪಡಿಸಿಕೊಂಡಿರುವ ಚಿನ್ನ, ವಜ್ರ ಮತ್ತು ಪ್ಲಾಟಿನಂನಿಂದ ಸಿದ್ಧಪಡಿಸಲಾದ ಆಭರಣಗಳ ಕೆಲ ಚಿತ್ರಗಳು `ಪ್ರಜಾವಾಣಿ~ಗೆ ಲಭ್ಯವಾಗಿವೆ.

ಇಂದ್ರಲೋಕವನ್ನೇ ನಾಚಿಸುವಂತಹ ವೈಭವದಿಂದ ಕೂಡಿರುವ ಮನೆಯ ಹಾಲ್‌ನಲ್ಲಿನ ಟೇಬಲ್ ಮತ್ತು ನೆಲದ ಮೇಲೆಯೇ ಹರಡಿ ಒಂದೊಂದಾಗಿ ಲೆಕ್ಕ ಮಾಡಿದ ಸಿಬಿಐ ಸಿಬ್ಬಂದಿ ನಂತರ ಬಿಳಿ ಬಣ್ಣದ ಹೊಸ ಬಟ್ಟೆಯಲ್ಲಿ ಅವೆಲ್ಲವನ್ನೂ ಕಟ್ಟಿಕೊಂಡು ತೆಗೆದುಕೊಂಡು ಹೋಗಿದ್ದಾರೆ.

ಹತ್ತಾರು ಚಿನ್ನದ ತಂಬಿಗೆಗಳು, ಚಿನ್ನದ ಆರತಿ, ಗಂಟೆ, ಕುಸುರಿ ಕಲೆಯಿಂದ ಕೂಡಿರುವ ಚಿನ್ನದ ಬಿಂದಿಗೆ, ನೂರಾರು ವಜ್ರಖಚಿತ ಬಳೆಗಳು, ನೆಕ್ಲೇಸ್‌ಗಳು, ಭಾರಿ ಬೆಲೆಬಾಳುವ ಹರಳುಗಳನ್ನು ಒಳಗೊಂಡ ಲೆಕ್ಕವಿಲ್ಲದಷ್ಟು ಉಂಗುರಗಳು, ಬ್ರಾಸ್‌ಲೆಟ್‌ಗಳು, ಚಿನ್ನದ ಸರಗಳು ಸೇರಿದಂತೆ ಅಪಾರ ಪ್ರಮಾಣದ ಚಿನ್ನ, ವಜ್ರಾಭರಣ ಸಿಬಿಐ ಕೈಸೇರಿದ ವಸ್ತುಗಳಲ್ಲಿವೆ.

ಐಷಾರಾಮಿ ನಿವಾಸ: ಗಾಜಿನಿಂದಲೇ ತಯಾರಿಸಲಾದ ಮೆಟ್ಟಿಲುಗಳು ಜನಾರ್ದನರೆಡ್ಡಿ ರೆಡ್ಡಿ ನಿವಾಸದೊಳಗೆ ಪ್ರವೇಶಿಸುವವರನ್ನು ಸ್ವಾಗತಿಸುತ್ತದೆ. ಅದರ ಒಳಗಿನ ಬಹುತೇಕ ಕೊಠಡಿಗಳಲ್ಲಿ ಬೆಲೆಬಾಳುವ ಕಟ್ಟಿಗೆಯಲ್ಲಿ ಕೆತ್ತಲಾದ ಚಿತ್ತಾಕರ್ಷಕ ಗೊಂಬೆಗಳು, ಚಿತ್ರಗಳು, ಮೇಲ್ಮಹಡಿಗೆ ತೆರಳಲೂ ಅಪರೂಪದ ವಿನ್ಯಾಸದ ಗಾಜಿನ ಮೆಟ್ಟಿಲುಗಳು ಇರುವುದು ಆ ಮನೆಯ ವಿಶೇಷ.

ಹವಾನಿಯಂತ್ರಿತ ವ್ಯವಸ್ಥೆಯಲ್ಲೇ ಇರುವ ಒಳಾಂಗಣ ಈಜುಕೊಳ, ಸಕಲ ಸೌಕರ್ಯ, ಮನೆಯ ಆವರಣದೊಳಗೇ ಹವಾನಿಯಂತ್ರಿತ ಚಿತ್ರಮಂದಿರ, ಕೆಲವೇ ಕೆಲವರಿಗೆ ಕುಳಿತುಕೊಳ್ಳಲು ಅವಕಾಶವಿರುವ ಅಲ್ಲಿ, ಮೆತ್ತನೆಯ ದುಬಾರಿ  ಕುರ್ಚಿಗಳು, ಪಕ್ಕದಲ್ಲೇ ದೇಶ-ವಿದೇಶಗಳ ಮದ್ಯದ ಬಾಟಲುಗಳು.

ಪೌರಾಣಿಕ ಸಿನಿಮಾಗಳನ್ನು ನೆನಪಿಸುವ ಅರಮನೆಯ ಮಾದರಿಯ ಮನೆ. ಅಲ್ಲೆಲ್ಲ ಬೆಲೆಬಾಳುವ ಅಲಂಕಾರಿಕ ಸಲಕರಣೆಗಳು, ಬೆತ್ತ, ಬಿದಿರು, ಸಾಗುವಾನಿ ಕಟ್ಟಿಗೆಯಿಂದ ತಯಾರಿಸಲಾದ, ಕುಷನ್ ಕೆಲಸದಿಂದ ಕೂಡಿದ ಪೀಠೋಪಕರಣಗಳು, ವೈಭವಯುತವಾದ ಸ್ನಾನಗೃಹ, ದೇವರ ಕೋಣೆ, ಅಲಂಕಾರ ಮಾಡಿಕೊಳ್ಳಲು ಕುಳಿತುಕೊಳ್ಳುವಲ್ಲಿನ ನಿಲುವುಗನ್ನಡಿ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ.

ಅಲ್ಲದೆ, ರೋಲ್ಸ್‌ರಾಯ್ಸ, ಬಿಎಂಡಬ್ಲ್ಯೂ, ಲ್ಯಾಂಡ್ ಕ್ರೂಸರ್‌ನಂತರ ಕೋಟ್ಯಂತರ ರೂಪಾಯಿ ಮೌಲ್ಯದ ಕಾರುಗಳು, ಐದು ಕೋಟಿ ಬೆಲೆಯ ಅತ್ಯಾಧುನಿಕ ಮಾದರಿಯ ಬಸ್ ಮತ್ತಿತರ ವಸ್ತುಗಳನ್ನು ಒಳಗೊಂಡಿರುವ ರೆಡ್ಡಿ ಆಸ್ತಿಯನ್ನೂ, ವೈಭವವನ್ನೂ ಕಂಡು ದಂಗಾಗಿದ್ದ ಸಿಬಿಐ ಸಿಬ್ಬಂದಿ, ಅವೆಲ್ಲವುಗಳನ್ನೂ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಅವುಗಳ ಮೌಲ್ಯ ಮತ್ತಿತರ ವಿವರಗಳ ಬಗ್ಗೆಯೂ ಮಾಹಿತಿ ಪಡೆಯಲು ಇದೀಗ ಜನಾರ್ದನರೆಡ್ಡಿ ಹಾಗೂ ಸಂಬಂಧಿಗಳ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT